ಧಾರವಾಡ ಜಿಲ್ಲೆಯಲ್ಲಿ 97,612 ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಹಾನಿ: ಸಚಿವ ಸಂತೋಷ್ ಲಾಡ್

ಧಾರವಾಡ, ಆ:23: ಧಾರವಾಡ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಬೆಳೆ ಹಾನಿ ಅಂದಾಜಿಸಿ 93,547 ಹೆಕ್ಟೆರ್ ಕೃಷಿ ಬೆಳೆಗಳು ಹಾಗೂ 4,065 ಹೆಕ್ಟೆರ್ ತೋಟಗಾರಿಕಾ ಬೆಳೆಗಳು ಸೇರಿ ಒಟ್ಟು 97,612 ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತಕ್ಕೆ ಪ್ರಾಥಮಿಕ ಸಮೀಕ್ಷಾ ವರದಿಯನ್ನು ಸಲ್ಲಿಸಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಶನಿವಾರ ನವಲಗುಂದ ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಆಗಿರುವ ಮನೆ ಹಾನಿ, ಬೆಳೆಹಾನಿ, ತಡಹಾಳ ಸೇತುವೆ ಹಾನಿ ಪರಿಶೀಲಿಸಿ ಮಾತನಾಡಿದ ಅವರು, ಶೀಘ್ರದಲ್ಲಿ ಸರಕಾರಕ್ಕೆ ಈ ವರದಿ ಸಲ್ಲಿಸಿ, ಪರಿಹಾರ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸುವುದು. ನವಲಗುಂದ, ಧಾರವಾಡ, ಅಣ್ಣಿಗೇರಿ, ಹುಬ್ಬಳ್ಳಿ, ಕುಂದಗೋಳ, ಕಲಘಟಗಿ ತಾಲೂಕುಗಳ ವ್ಯಾಪ್ತಿಯಲ್ಲಿ ಹೆಸರು, ಉದ್ದು, ಮೆಕ್ಕೆಜೋಳ, ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆಗಳ ಹಾನಿಯಾಗಿದೆ ಎಂದರು.
ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಉಪವಿಭಾಗಾಧಿಕಾರಿ, ತಹಶೀಲ್ದಾರರು, ಕೃಷಿ ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಕಳೆದ 4 ದಿನಗಳಿಂದ ತಂಡಗಳನ್ನು ರಚಿಸಿಕೊಂಡು ತಾಲೂಕುವಾರು ಬೆಳೆ ಹಾನಿ ಸಮೀಕ್ಷೆಯನ್ನು ನಡೆಸಿದ್ದಾರೆ. ಬೆಳೆ ಹಾನಿ ಕುರಿತು ರೈತರಿಗೆ ಪರಿಹಾರಧನ ಬಿಡುಗಡೆ ಮಾಡಲು ಕೃಷಿ ಸಚಿವರಿಗೆ ವರದಿಯನ್ನು ಸಲ್ಲಿಸಿದ್ದೇವೆ. ಮತ್ತು ಬೆಳೆ ಹಾನಿಯ ವರದಿಯನ್ನು ಈಗಾಗಲೆ ಸರ್ಕಾರಕ್ಕೆ ತಲುಪಿಸಲಾಗಿದೆ ಎಂದು ಅವರು ಹೇಳಿದರು.
ಬೆಳೆ ವಿಮೆ ಎನ್ನುವುದು ರೈತರಿಗೆ ಒಂದು ಸುರಕ್ಷಾ ಕವಚವಿದ್ದಂತೆ. ಅನಿರೀಕ್ಷಿತ ಮಳೆಯಿಂದಾಗಿ ವೈಪರೀತ್ಯಗಳಿಂದಾಗುವ ನಷ್ಟವನ್ನು ಇದು ಸರಿದೂಗಿಸುತ್ತದೆ. ಇನ್ನೂ ಹೆಚ್ಚಿನ ರೈತರು ಈ ಯೋಜನೆಯಡಿ ನೋಂದಾಯಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂತೋಷ್ ಲಾಡ್ ಹೇಳಿದರು.
ನಿರಂತರ ಮಳೆಯಿಂದಾಗಿ ನವಲಗುಂದ ಪಟ್ಟಣದ ಭೋವಿ ಓಣಿಯಲ್ಲಿರುವ ದ್ಯಾಮವ್ವ ಬಣ್ಣೆನವರ ಮನೆಯ ಒಂದು ಬದಿಯ ಗೊಡೆ ಸಂಪೂರ್ಣವಾಗಿ ಕುಸಿದಿದೆ. ಮತ್ತು ಅಲ್ಲೆ ಪಕ್ಕದಲ್ಲಿರುವ ಬೇರೊಬ್ಬರ ಜಾಗದಲ್ಲಿ ಸಣ್ಣದೊಂದು ಶೆಡ್ ನಿರ್ಮಿಸಿಕೊಂಡು ಇಬ್ಬರು ಗಂಡು ಮಕ್ಕಳು ಸೊಸೆಯಂದಿರು ಹಾಗೂ ನಾಲ್ಕು ಜನ ಮೊಮ್ಮಕ್ಕಳು ವಾಸಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ತಕ್ಷಣ ಮನೆ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಬಿಡುಗಡೆ ಮಾಡಲಾಗುತ್ತದೆ ಮತ್ತು ಅಲ್ಲಿಯವರೆಗೆ ಖರ್ಚಿಗಾಗಿ ವೈಯಕ್ತಿಕವಾಗಿ 25 ಸಾವಿರ ರೂ. ಧನ ಸಹಾಯ ಮಾಡಿದ ಅವರು, ಸರ್ಕಾರದ ಮೂಲಕ 1.20 ಲಕ್ಷ ರೂ. ನೀಡುವ ಭರವಸೆಯನ್ನು ನೀಡಿದರು.
ಮಳೆಗಾಲ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಈ ಮನೆಯಲ್ಲಿ ವಾಸ ಮಾಡಬಾರದು. ಕುಟುಂಬದವರು ಸುರಕ್ಷಿತ ಸ್ಥಳದಲ್ಲಿ ತಾತ್ಕಾಲಿಕವಾಗಿ ವಾಸಿಸಬೇಕು ಎಂದು ಕುಟುಂಬಕ್ಕೆ ತಿಳಿಸಿದ ಸಂತೋಷ್ ಲಾಡ್, ಭೋವಿ ಓಣಿಯಲ್ಲಿ ಇರುವ ಜನರ ಯೋಗಕ್ಷೇಮ ವಿಚಾರಿಸಿದರು.
ನಂತರ ನಾಯಕನೂರು ಗ್ರಾಮದಲ್ಲಿನ ಬಸವನಗೌಡ ಅಕ್ಕಿ ಅವರ ಜಮೀನಿಗೆ ಭೇಟಿ ನೀಡಿ, ಆರು ಎಕರೆ ಭೂಮಿಯಲ್ಲಿ ಬೆಳೆದಿದ್ದ ಉಳ್ಳಾಗಡ್ಡಿ ಬೆಳೆ ಎಲ್ಲವೂ ಮಳೆಯಿಂದ ಕೊಳೆತು ಹೋಗಿರುವುದನ್ನು ವೀಕ್ಷಿಸಿದರು. ಮತ್ತು ಅಲ್ಲೇ ಪಕ್ಕದಲ್ಲಿ ಇರುವ ಶಶಿಕಾಂತ ಜಾವೂರ ಅವರ ಜಮೀನುಗಳಿಗೆ ಭೇಟಿ ನೀಡಿ, ಮೂರು ಎಕರೆ ಹದಿಮೂರು ಗುಂಟೆಯಲ್ಲಿ ಹೆಸರು ಮತ್ತು ಗೋವಿಜೋಳ ಬೆಳೆಯನ್ನು ವೀಕ್ಷಿಸಿದರು.
ಗದಗ-ನರಗುಂದ ರಸ್ತೆಯ ತಡಹಾಳ ಗ್ರಾಮದ ಹತ್ತಿರ ಇರುವ ಬೆಣ್ಣೆ ಹಳ್ಳಕ್ಕೆ ಕೊಚ್ಚಿಹೋದ ತಡಹಾಳ ಸೇತುವೆ ವೀಕ್ಷಣೆ ಮಾಡಿದರು. ತಡಹಾಳ ಸೇತುವೆ ಹಳೆಯದಾಗಿದ್ದು, ಮರು ನಿರ್ಮಾಣದ ಅಗತ್ಯವಿದೆ. ಈ ಕುರಿತು ಲೋಕೋಪಯೋಗಿ ಇಲಾಖೆ ಸಚಿವರಿಗೆ ಕ್ರೀಯಾ ಯೋಜನೆ ಸಲ್ಲಿಸಿ, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲಿಯ ವರೆಗೆ ಸಂಚಾರಕ್ಕೆ ಅನುಕೂಲವಾಗುವಂತೆ ಸೇತುವೆ ದುರಸ್ಥಿಗೆ ಕ್ರಮಕೈಗೊಳ್ಳಲಾಗುವುದು ಎಂದು ಸಂತೋಷ್ ಲಾಡ್ ಹೇಳಿದರು.
ಶಾಸಕ ಎನ್.ಎಚ್.ಕೋನರೆಡ್ಡಿ ಮಾತನಾಡಿ, ಮುಂಗಾರು ಮಳೆ ಅತಿ ಹೆಚ್ಚು ಆಗಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ ಸ್ಥಳ ಪರಿಶೀಲಿಸುತ್ತಿದ್ದಾರೆ. ಬೆಳೆ ಹಾನಿ ಆಗಿರುವುದಕ್ಕೆ ವಿಮಾ ಕಂಪನಿಯಿಂದ ಹೆಚ್ಚು ಪರಿಹಾರ ಕೊಡಿಸುವುದಕ್ಕೆ ಹಾಗೂ ಬೆಳೆ ಪರಿಹಾರಕ್ಕೆ ಸರಕಾರಕ್ಕೆ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ನವಲಗುಂದ ತಾಲೂಕಿನಲ್ಲಿ ಹೆಸರು 23,150 ಹೆಕ್ಟೇರ್, ಉದ್ದು 320 ಹೆಕ್ಟೇರ್, ಮೆಕ್ಕೆಜೋಳ 50 ಹೆಕ್ಟೇರ್, ಕೆಂಪು ಮೆಣಸಿನಕಾಯಿ 350 ಹೆಕ್ಟೇರ್, ಈರುಳ್ಳಿ 2050 ಹೆಕ್ಟೇರ್ ಒಟ್ಟು 25,920 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತಕ್ಕೆ ಪ್ರಾಥಮಿಕ ವರದಿ ಸಲ್ಲಿಕೆಯಾಗಿದೆ. ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿಯೆ ಅತಿ ಹೆಚ್ಚು ಹಾನಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಬಂಧಪಟ್ಟ ಸಚಿವರಿಗೆ ಪರಿಹಾರಕ್ಕಾಗಿ ಮನವಿಯನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.
ನವಲಗುಂದ ಮತ್ತು ನರಗುಂದ ನಡುವೆ ಇರುವ ಸೇತುವೆಯನ್ನು ಎರಡರಿಂದ ಮೂರು ಬಾರಿ ದುರಸ್ತಿ ಮಾಡಿಸಿದ್ದೇವೆ ಆದರೂ ಅದು ನೀರಿನ ಮಟ್ಟ ಹೆಚ್ಚಾಗಿದೆ. ಅದರಿಂದ ಹೊಸ ಸೇತುವೆ ನಿರ್ಮಾಣಕ್ಕೆ ಅಂದಾಜು 70 ಕೋಟಿ ರೂ. ಬೇಕಾಗುತ್ತದೆ ಹೊಸ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಮಾಡಬೇಕೆಂದುಕೊಂಡಿದ್ದೇವೆ ಎಂದು ಕೋನರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪ ವಿಭಾಗಾಧಿಕಾರಿ ಶಾ ಆಲಮ್ ಹುಸೇನ್, ಜಿ.ಪಂ.ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತಹಶೀಲ್ದಾರ್‍ಗಳು, ತಾ.ಪಂ.ಅಧಿಕಾರಿಗಳು, ಪುರಸಭೆಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.