ಜಾತಿಗಳ ನಡುವೆ-ಧರ್ಮಗಳ ನಡುವೆ ದ್ವೇಷದ ಬೆಂಕಿ ಹಚ್ಚಿ ಬಿಜೆಪಿ ತನ್ನ ವೈಫಲ್ಯ ಮುಚ್ಚಿಕೊಳ್ಳುತ್ತಿದೆ : ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ : ನಿರಂತರ ಬೆಲೆ ಏರಿಕೆ ಮೂಲಕ ಬಡವರ, ಮಧ್ಯಮ ವರ್ಗದ ದ್ವೇಷಿ ಆಗಿರುವ ಮೋದಿ ಸರ್ಕಾರ, ಜಾತಿಗಳ ನಡುವೆ-ಧರ್ಮಗಳ ನಡುವೆ ದ್ವೇಷದ ಬೆಂಕಿ ಹಚ್ಚಿ ತನ್ನ ವೈಫಲ್ಯ ಮುಚ್ಚಿಕೊಳ್ಳುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ದೇಶ ವಿರೋಧಿ ವರ್ತನೆ, ಜನ ವಿರೋಧಿ ಆಡಳಿತ ಮತ್ತು ಬೆಲೆ ಏರಿಕೆಯ ಜನದ್ರೋಹವನ್ನು ಖಂಡಿಸಿ ನಡೆದ ಜನತಾ ಸಮಾವೇಶದಲ್ಲಿ ಮಾತನಾಡಿದರು.
ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಅಕ್ಕಿಯಿಂದ ಚಿನ್ನದವರೆಗೂ ಎಲ್ಲದರ ಬೆಲೆ ಆಕಾಶಕ್ಕೆ ಏರಿದೆ. ದೇಶದ, ರಾಜ್ಯದ ಜನರಿಗೆ ಬಿಜೆಪಿ ಪರಿವಾರದ ಈ ಜನದ್ರೋಹ ಅರ್ಥವಾಗಿದೆ. ಇದನ್ನು ಮರೆ ಮಾಚಲು ತಮ್ಮ ಜನದ್ರೋಹವನ್ನು ಮುಚ್ಚಿಕೊಳ್ಳಲು ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದರು.
ಉಪ್ಪು, ಸಕ್ಕರೆ, ಟೀ, ಕಾಫಿ, ಅಕ್ಕಿ, ಬೇಳೆ, ಎಣ್ಣೆ, ಕಾಳು, ಚಿನ್ನ, ಬೆಳ್ಳಿ, ರಸಗೊಬ್ಬರ, ಔಷಧ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಸೇರಿ ಎಲ್ಲದರ ಬೆಲೆ ಆಕಾಶಕ್ಕೆ ಏರಿಸಿರುವ ಮೋದಿಯವರೇ ನೀವು ಯಾವುದನ್ನು ತಾನೆ ಬಿಟ್ಟಿದ್ದೀರಿ ಎಂದರು.
ಡಾಲರ್ ಬೆಲೆ 2014 ರಲ್ಲಿ 59 ರೂಪಾಯಿ ಇತ್ತು. ಇವತ್ತು 86 ರೂಪಾಯಿ ಆಗಿದೆ. ಇದಕ್ಕೆ ಯಾರು ಕಾರಣರು ಮೋದಿಯವರೇ ? ಇದೇನಾ ನಿಮ್ಮ ಅಚ್ಛೆ ದಿನ್ ಎಂದು ವ್ಯಂಗ್ಯವಾಡಿದರು.
50 ಕೆಜಿ ಸಿಮೆಂಟ್ ಬೆಲೆ 2014 ರಲ್ಲಿ 200 ಇದ್ದದ್ದು ಈಗ 450 ರೂ ಆಗಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 425 ಇದ್ದದ್ದು ಇಂದು 850 ದಾಟಿದೆ. ಶೇ100 ರಷ್ಟು ಬೆಲೆ ಏರಿಕೆ ಮಾಡಿದ್ದೀರಿ. ಜನದ್ರೋಹದ ಪರಮಾವಧಿ ಮುಂದುವರೆಸಿ ಸಿಲಿಂಡರ್ ಸಬ್ಸಿಡಿ ತೆಗೆದು ಹಾಕಿ ಬಡವರ ಮತ್ತು ಮಧ್ಯಮ ವರ್ಗದವರ ವಿರೋಧಿ ಆಗಿರುವ ಮೋದಿಯವರೇ ನಿಮ್ಮ ವಂಚನೆಗೆ ಕೊನೆಯೇ ಇಲ್ಲವೇ ಎಂದು ಪ್ರಶ್ನಿಸಿದರು.
ಪ್ರಹ್ಲಾದ್ ಜೋಶಿಯವರೇ ನೀವು ಮತ್ತು ಮೋದಿಯವರು ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಲೇ ಇದ್ದೀರಿ. ಆದರೆ, ನಿಮ್ಮ ಚಾಳಿಯನ್ನು ನಮ್ಮ ಮೇಲೆ ಹೊರಿಸಲು ಯತ್ನಿಸುತ್ತಿದ್ದೀರಿ. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಹಾಲಿನ ದರ 4ರೂ ಹೆಚ್ಚಿಸಿ ಇಷ್ಟೂ ಹಣವನ್ನೂ ರೈತರಿಗೆ ವರ್ಗಾಯಿಸಿದ್ದೀವಿ. ಇದರಲ್ಲಿ ಹತ್ತು ಪೈಸೆ ಕೂಡ ಸರ್ಕಾರಕ್ಕೆ ಬರುವುದಿಲ್ಲ. ಆದರೆ, ನೀವು ಹೆಚ್ಚಿಸಿದ ಬೆಲೆ ಏರಿಕೆ ಯಾವ ಭಾರತೀಯರಿಗೆ ಸಿಗುತ್ತಿದೆ ಹೇಳಿ ಎಂದರು.
ಆದ್ದರಿಂದ ನಾವು ನಮ್ಮ ಪ್ರಣಾಳಿಕೆಯಲ್ಲಿ ಆರ್ಥಿಕ, ಸಾಮಾಜಿಕ, ಜಾತಿ ಗಣತಿ ಬಗ್ಗೆ ಭರವಸೆ ಕೊಟ್ಟಿದ್ದೆವು. ನಾವು ಮಾಡಿದ ಘೋಷಣೆಯಂತೆ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ರಾಹುಲ್ ಗಾಂಧಿಯವರು ಪಾರ್ಲಿಮೆಂಟಿನಲ್ಲಿ ನಿರಂತರ ಧ್ವನಿ ಎತ್ತಿ ಹೋರಾಟ ನಡೆಸಿದ್ದರು. ಇದರ ಪರಿಣಾಮ ಈಗ ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದಿದೆ. ಇದು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಸೈದ್ಧಾಂತಿಕ ಬದ್ಧತೆಗೆ ಸಿಕ್ಕ ಗೆಲುವು ಎಂದರು.
ಈಡಿ, ಸಿಬಿಐ ತೋರಿಸಿ ಧಮ್ಕಿ ಹಾಕಲಾಗುತ್ತಿದೆ : ಮಲ್ಲಿಕಾರ್ಜುನ ಖರ್ಗೆ
ನಾನು ಮೋದಿಗೆ ಹೆದರಲ್ಲ, ಅಮಿತ್ ಶಾಗೂ ಹೆದರಲ್ಲ, ಯಾರಿಗೂ ಹೆದರಲ್ಲ. ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಸಂವಿಧಾನ ಇದೆ, ಅದಕ್ಕಾಗಿ ನಮಗೆಲ್ಲರಿಗೂ ಸ್ವತಂತ್ರವಾಗಿ ಮಾತನಾಡುವ ಶಕ್ತಿ ಇದೆ. ಕಾಂಗ್ರೆಸ್ ಅನ್ನು ಬೆಂಬಲಿಸುವವರ ಮೇಲೆ ಈಡಿ, ಸಿಬಿಐ ತೋರಿಸಿ ಧಮ್ಕಿ ಹಾಕಲಾಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸಂವಿಧಾನ ಬಲಪಡಿಸುವ ಕೆಲಸ ಮಾಡಬೇಕಿದ್ದು, ಕೆಲವರು ಹೀಯಾಳಿಸಿ ಮಾತನಾಡುತ್ತಾರೆ. ಎಲ್ಲದಕ್ಕೂ ಟೀಕೆ ಮಾಡುತ್ತಾರೆ. ಜಾತಿಜನಗಣತಿ ಮಾಡಬಹುದು ಅಂತ ಕೇಂದ್ರ ನಿರ್ಣಯ ಕೈಗೊಂಡಿದೆ. ಇದಕ್ಕಾಗಿ ನಾವು ಸಾಕಷ್ಟು ಪ್ರಯತ್ನ ಮಾಡಿದ್ದೆವು. ನಾವು ಹೇಳಿದಾಗ ಅವರು ಕೇಳಲಿಲ್ಲ. ಜನರ ಒತ್ತಡ ಹೆಚ್ಚಾದ ಮೇಲೆ ಸರ್ಕಾರ ಬಗ್ಗಿದೆ. ಜಾತಿ ಜನಗಣತಿ ಮಾಡುತ್ತೇವೆ ಹೇಳಿದ್ದಾರೆ ಎಂದರು.
ಜಾತಿ ಜನಗಣತಿ ವಿಚಾರದಲ್ಲಿ ಕೇಂದ್ರದ ಮಂತ್ರಿಯೊಬ್ಬರು ರಾಹುಲ್ ಗಾಂಧಿ ನಿಲುವು ಸರಿಯಿಲ್ಲ ಅಂತ ಹೇಳಿದರು. ಬಾಯಿಗೆ ಬಂದಂತೆ ಮಾತನಾಡಿದರು. ಜಾತಿ ಜಾತಿಗೆ ಜಗಳ ಹಚ್ಚುತ್ತಿದ್ದಾರೆ. ದೇಶದ ತುಂಡಾಗುತ್ತೆ ಅಂತ ಹೇಳಿದರು ಈಗ ಅವರದೇ ಸರ್ಕಾರ ಜಾತಿ ಜನಗಣತಿ ಮಾಡುತ್ತಿದೆ. ಟೀಕೆ ಮಾಡಿದರೆ ನೀವೇ ಅದರ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಹೇಳಿದರು.