ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ : ರೇಣುಕಾಚಾರ್ಯ

ದಾವಣಗೆರೆ, ಆ.13 : ಕೋಟ್ಯಂತರ ಭಕ್ತರ ಕ್ಷೇತ್ರವಾದ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಬುಧವಾರ ಹೊನ್ನಾಳಿಯಲ್ಲಿ ಧರ್ಮಸ್ಥಳ ಭಕ್ತರ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾರೋ ಒಬ್ಬ ಅನಾಮಿಕ ದೂರು ನೀಡಿದ್ದಾನೆ ಎಂದು ಸರಕಾರ ಎಸ್‌ಐಟಿ ರಚನೆ ಮಾಡಿದ್ದು ಅನಗತ್ಯ. ದೂರು ನೀಡಿದ ದೂರುದಾರನ ಪೂರ್ವಪರ ವಿಚಾರಣೆ ಮಾಡಿ ಮುಂದಿನ ವಿಚಾರಣೆ ಮಾಡಬೇಕಿತ್ತು. ಆದರೆ, ಅನಾಮಿಕನ ದೂರು ಆಧರಿಸಿ ತನಿಖೆ ನಡೆಸುತ್ತಿರುವುದು ಸರಿಯಲ್ಲ. ಎಸ್ ಐಟಿ ತನಿಖೆ ನಡೆದರೂ ಏನೂ ಕಂಡುಬಂದಿಲ್ಲ. ಇದು ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿಯುವ ಹುನ್ನಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದರೂ, ಎಸ್‌ಐಟಿ ತನಿಖೆಯಲ್ಲಿ ಸತ್ಯಾಂಶ ಹೊರ ಬರಬೇಕು. ಅಪಪ್ರಚಾರ ಮಾಡಿದವರ ಕುರಿತು ತನಿಖೆ ಆಗಬೇಕು. ಅವರ ಹಿನ್ನೆಲೆ ಏನು ಎಂದು ತನಿಖೆ ಆಗಬೇಕು ಹಾಗೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಆಗಬೇಕು. ಅಪಪ್ರಚಾರ ಮಾಡುವವರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ರೇಣುಕಾಚಾರ್ಯ ಪುನರುಚ್ಛರಿಸಿದರು.