ದಾವಣಗೆರೆ ಎಸ್.ಪಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ಆರೋಪ; ಶಾಸಕ ಬಿ.ಪಿ ಹರೀಶ್ ವಿರುದ್ಧ ಪ್ರಕರಣ ದಾಖಲು

ಶಾಸಕ ಬಿ.ಪಿ.ಹರೀಶ್
ದಾವಣಗೆರೆ : ದಾವಣಗೆರೆ ಎಸ್.ಪಿ ಉಮಾ ಪ್ರಶಾಂತ್ ಅವರನ್ನು ಅವಹೇಳನ ಮಾಡಿದ್ದ ಆರೋಪ ಸಂಬಂಧ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಹರಿಹರ ಶಾಸಕ ಬಿ.ಪಿ.ಹರೀಶ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಎಸ್ಪಿಯವರನ್ನು ಶ್ವಾನಕ್ಕೆ ಹೋಲಿಸಿ ಅವಹೇಳನಾಕಾರಿ ಹೇಳಿಕೆ ನೀಡಿದ್ದರು.
ಈ ಸಂಬಂಧ ಶಾಸಕರ ವಿರುದ್ದ ಸ್ವತಃ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಾಸಕ ಹರೀಶ್ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023 (U/s-132,351(2),(79) ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಹರಿಹರ ಶಾಸಕ ಬಿ.ಪಿ.ಹರೀಶ್ ಹೇಳಿದ್ದೇನು?
"ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಶಾಸಕರಿಗೆ ಬೆಲೆಯೇ ಕೊಡುವುದಿಲ್ಲ. ನಾವು ಇದ್ದರೆ ಮುಖ ತಿರುಗಿಸಿ ಕೂರುತ್ತಾರೆ. ಆದರೆ, ಶಾಮನೂರು ಕುಟುಂಬದವರ ಮನೆಕಾಯುವ ಪೊಮೆರಿಯನ್ ನಾಯಿಯಂತೆ ವರ್ತಿಸುತ್ತಾರೆ. ಗಂಟೆಗಟ್ಟಲೆ ಶಾಮನೂರು ಮನೆಯ ಬಾಗಿಲು ಕಾಯುತ್ತಾರೆ. ಇವರಿಗೆ ಅಧಿಕಾರದಲ್ಲಿರುವವರು ಮಾತ್ರ ಮುಖ್ಯವಾಗಿ ಕಾಣುತ್ತಾರೆ ಎನ್ನಿಸುತ್ತದೆ. ಅಧಿಕಾರ ತಾತ್ಕಾಲಿಕ ಅನ್ನುವುದನ್ನು ಎಸ್ಪಿ ಅರಿತುಕೊಳ್ಳಬೇಕು" ಎಂದು ಹೇಳಿಕೆ ನೀಡಿದ್ದರು.