ದಾವಣಗೆರೆ | ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಸ್ಥಳದಲ್ಲಿ ಅಳವಡಿಸಿದ್ದ ಆಕ್ಷೇಪಾರ್ಹ ಫ್ಲೆಕ್ಸ್ ತೆರವು

ಆಕ್ಷೇಪಾರ್ಹ ಫ್ಲೆಕ್ಸ್ ತೆರವುಗಳಿಸಲಾಗಿದ್ದು, ಈ ಸ್ಥಳದಲ್ಲಿ ಶಿವಾಜಿಯ ಬೃಹತ್ ಚಿತ್ರವನ್ನು ಅಳವಡಿಸಲಾಗಿದೆ.
ದಾವಣಗೆರೆ : ನಗರದ ಮಟ್ಟಿಕಲ್ ಪ್ರದೇಶದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಸ್ಥಳದಲ್ಲಿ ಅಳವಡಿಸಲಾಗಿದ್ದ ಆಕ್ಷೇಪಾರ್ಹ ಫ್ಲೆಕ್ಸ್ ಅನ್ನು ಪೊಲೀಸರು ತೆರವುಗೊಳಿಸಿದ್ದಾರೆ. ನಿನ್ನೆ(ಆ.28) ರಾತ್ರಿ ಉದ್ಭವವಾದ ಬಿಗುವಿನ ವಾತಾವರಣ ಶುಕ್ರವಾರ ಬೆಳಿಗ್ಗೆ ತಿಳಿಯಾಗಿದೆ.
ಈ ಫ್ಲೆಕ್ಸ್ನಲ್ಲಿ ಶಿವಾಜಿ ಮಹಾರಾಜ್ ಮತ್ತು ಅಫ್ಜಲ್ ಖಾನ್ ನಡುವಿನ ಯುದ್ಧದ ದೃಶ್ಯವಿತ್ತು. ಈ ಚಿತ್ರವು ಕೋಮು ಭಾವನೆಗಳಿಗೆ ಧಕ್ಕೆಯಾಗಬಹುದು ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ, ಕೆಲವರು ಪೊಲೀಸರಿಗೆ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಆಕ್ಷೇಪಾರ್ಹ ಫ್ಲೆಕ್ಸ್ ತೆರವುಗಳಿಸಲಾಗಿದ್ದು, ಈ ಸ್ಥಳದಲ್ಲಿ ಶಿವಾಜಿಯ ಬೃಹತ್ ಚಿತ್ರವನ್ನು ಅಳವಡಿಸಲಾಗಿದೆ.
ನಗರದ ವೀರ ಸಾವರ್ಕರ್ ಯುವಕರ ಸಂಘ ಮಟ್ಟಿಕಲ್ನಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಯ ಪೆಂಡಾಲ್ ಬಳಿ ಬೃಹತ್ ಗಾತ್ರದ ಫ್ಲೆಕ್ಸ್ಗಳನ್ನು ಅಳವಡಿಸಲಾಗಿತ್ತು.
ರಾತ್ರಿ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆಕ್ಷೇಪಾರ್ಹ ಚಿತ್ರ ತೆರವುಗೊಳಿಸುವಂತೆ ಗಣೇಶ ಉತ್ಸವ ಸಮಿತಿಗೆ ಸೂಚಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನೂರಾರು ಯುವಕರು, ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು. ಪರಿಣಾಮವಾಗಿ ಮಧ್ಯರಾತ್ರಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಂಘಪರಿವಾರದ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ನಡೆದ ಚರ್ಚೆಯ ಬಳಿಕ ಪರಿಸ್ಥಿತಿ ತಣ್ಣಗಾಯಿತು.