ಸರಕಾರಿ ಶಾಲೆಯಲ್ಲಿ ಒಂದೇ ಮಗು ಇದ್ದರೂ ಮುಚ್ಚುವುದಿಲ್ಲ : ಮಧು ಬಂಗಾರಪ್ಪ

ದಾವಣಗೆರೆ : ಒಂದೇ ಮಗು ಇದ್ದರೂ ಯಾವುದೇ ಸರಕಾರಿ ಶಾಲೆಯನ್ನು ಮುಚ್ಚದೇ ಇರಲು ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ನಗರದ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್ಸೆಸ್ಸೆಂ ಸಾಂಸ್ಕೃತಿಕ ಕೇಂದ್ರದಲ್ಲಿ ಶನಿವಾರ ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದಿಂದ(ಕುಪ್ಮಾ) ಹಮ್ಮಿಕೊಂಡಿದ್ದ ಎರಡನೇ ರಾಜ್ಯಮಟ್ಟದ ಪದವಿಪೂರ್ವ ಶಿಕ್ಷಣ ಸಮಾವೇಶದ ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದ 13 ಸಾವಿರ ಶಾಲೆಗಳಲ್ಲಿ ಮಕ್ಕಳ ಹಾಜರಾತಿ 25ಕ್ಕಿಂತಲೂ ಕಡಿಮೆ ಇದೆ. ಆದರೂ ಯಾವುದೇ ಶಾಲೆಯನ್ನು ಮುಚ್ಚದೇ ಇರಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಕಳೆದ ಸರಕಾರ ರಾಜ್ಯದಲ್ಲಿ 308 ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿತ್ತು.ಇದೀಗ ನಮ್ಮ ಸರಕಾರ 3,500 ಕೋಟಿ ರೂ. ಅನುದಾನದಲ್ಲಿ 800 ಕ್ಕೂ ಅಧಿಕ ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಸರಕಾರಿ ಶಾಲಾ-ಕಾಲೇಜುಗಳು ಪೈಪೋಟಿ ನೀಡುವ ರೀತಿಯಲ್ಲಿ ಶಿಕ್ಷಣ ಇಲಾಖೆಯಿಂದ ರಾಜ್ಯದ ಸುಮಾರು 25 ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಇಟಿ, ನೀಟ್ ಆನ್‌ಲೈನ್ತ ರಬೇತಿ ನೀಡಲಾಗುತ್ತಿದೆ ಎಂದರು.
ಸಿಇಟಿ, ನೀಟ್ ತರಬೇತಿ ನೀಡಲು ಖಾಸಗಿ ಶಿಕ್ಷಣ ಸಂಸ್ಥೆಗಳು 50 ಸಾವಿರ ರೂ.ಯಿಂದ 4 ಲಕ್ಷ ರೂ.ವರೆಗೆ ಪಡೆಯುತ್ತವೆ. ಆರ್ಥಿಕವಾಗಿ ಸಬಲರಾಗಿರುವ ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಗಳಲ್ಲಿ ಹಣ ಕಟ್ಟಿ ತರಬೇತಿ ಪಡೆಯುತ್ತಾರೆ. ಆದರೆ, ಬಡ ವಿದ್ಯಾರ್ಥಿಗಳಿಗೆ ಇದು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಸರಕಾರ 25 ಸಾವಿರ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೆಳಗ್ಗೆ 9ರಿಂದ 10ಗಂಟೆವರೆಗೆ ಮತ್ತು ಸಂಜೆ 3ರಿಂದ 4 ಗಂಟೆವರೆಗೆ ಆನ್‌ಲೈನ್ ಕೋಚಿಂಗ್ ನಡೆಸುತ್ತಿದೆ. ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಸರಕಾರ ಕೈಜೋಡಿಸುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ವಹಿಸಿದ್ದರು. ಕುಪ್ಮಾ ರಾಜ್ಯಾಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಎಂ.ಬಿ.ಪುರಾಣಿಕ್, ಕಾರ್ಯದರ್ಶಿ ನರೇಂದ್ರ ಎಲ್.ನಾಯಕ್, ಜಿಲ್ಲಾಧ್ಯಕ್ಷ ಎಸ್.ಜಿ.ಶ್ರೀಧರ್, ಕಾರ್ಯದರ್ಶಿ ಡಿ.ಎಸ್.ಜಯಂತ್ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕರ ನೇಮಕಕ್ಕೆ ಕ್ಷಣಗಣನೆ: ನಾಗಮೋಹನ್ ದಾಸ್ ವರದಿ ಬಂದಿದೆ, ಶಿಕ್ಷಕರ ನೇಮಕ ಮಾಡುತ್ತೇವೆ. ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿ ಪ್ರಕ್ರಿಯೆ ಆರಂಭ ಮಾಡುತ್ತೇವೆ. 13,500 ಶಿಕ್ಷಕರ ನೇಮಕಾತಿ, ಅನುದಾನಿತ ಶಾಲೆಯ 5,000 ಶಿಕ್ಷಕರು ಸೇರಿ ಒಟ್ಟು 18,500 ಶಿಕ್ಷಕರ ನೇಮಕ ಆಗಲಿದೆ ಎಂದಿದ್ದಾರೆ.