ಎಸ್ಪಿ ಕುರಿತು ಅವಹೇಳನಾಕಾರಿ ಹೇಳಿಕೆ | ಹರಿಹರ ಶಾಸಕರ ವಿರುದ್ಧ ಕ್ರಮಕ್ಕೆ ಮಹಿಳಾ ಆಯೋಗದ ಸೂಚನೆ

ದಾವಣಗೆರೆ, ಸೆ.6 : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ವಿರುದ್ಧ ಹರಿಹರ ಶಾಸಕ ಬಿ.ಪಿ.ಹರೀಶ್ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗವು ಪೊಲೀಸ್ ಪೂರ್ವ ವಲಯ ಐಜಿಪಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ನಾಯಿಯ ರೀತಿಯಲ್ಲಿ ಶಾಮನೂರು ಕುಟುಂಬದ ಮನೆ ಬಾಗಿಲು ಕಾಯುತ್ತಾರೆ ಎಂಬುದಾಗಿ ಹರಿಹರ ಶಾಸಕ ಬಿ.ಪಿ.ಹರೀಶ್ ಅವಹೇಳನಕಾರಿ ಹೇಳಿಕೆ ನೀಡಿರುವುದು ಗಂಭೀರ ಸಂಗತಿಯಾಗಿದೆ. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳಾ ಅಧಿಕಾರಿ ವಿರುದ್ಧ ಸಾರ್ವಜನಿಕವಾಗಿ ಅವಹೇಳನಾಕಾರಿ ಹೇಳಿಕೆ ನೀಡಿರುವುದನ್ನು ರಾಜ್ಯ ಮಹಿಳಾ ಆಯೋಗವು ಖಂಡಿಸುತ್ತದೆ. ಸದರಿ ಪ್ರಕರಣದ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಂಡು, ಆಯೋಗಕ್ಕೆ ಶೀಘ್ರವೇ ವರದಿ ಕಳಿಸಿಕೊಡುವಂತೆ ಆಯೋಗದ ಕಾರ್ಯದರ್ಶಿ ಪೂರ್ವ ವಲಯ ಐಜಿಪಿಗೆ ಪತ್ರ ಬರೆದಿದ್ದಾರೆ. ಪ್ರತಿಯನ್ನು ಕೆಟಿಜೆ ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ಗೂ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.