ರಜನಿಕಾಂತ್ ‘ಕೂಲಿ’ ಎಡವಿದ್ದೆಲ್ಲಿ?

ಚಿತ್ರ: ಕೂಲಿ
ನಿರ್ದೇಶನ: ಲೋಕೇಶ್ ಕನಕರಾಜ್
ನಿರ್ಮಾಣ: ಸನ್ ಪಿಕ್ಚರ್ಸ್
ತಾರಾಗಣ: ರಜನಿಕಾಂತ್, ಶ್ರುತಿ ಹಾಸನ್, ನಾಗಾರ್ಜುನ ಮೊದಲಾದವರು
ಚಿತ್ರದ ಹೆಸರು ‘ಕೂಲಿ’ ಎಂದೇ ಇದ್ದರೂ ಕಥೆಯ ನಾಯಕ ಕಾಣಿಸಿಕೊಳ್ಳುವುದು ಒಂದು ವಸತಿ ಸಮುಚ್ಚಯ ನಡೆಸುವ ವ್ಯಕ್ತಿಯಾಗಿ. ದೇವ ಆತನ ಹೆಸರು. ಆತನ ಭವನದಲ್ಲಿ ಕಾಲೇಜ್ ಹಾಸ್ಟೆಲನ್ನು ಕೂಡ ಮೀರಿಸುವ ನಿಯಮಗಳಿವೆ. ಕೆಲವೊಂದು ನಿಗೂಢತೆಗಳು ಕೂಡ ಇವೆ. ಆದರೆ ಸ್ನೇಹಿತನೋರ್ವನ ಸಾವಿನೊಂದಿಗೆ ಎಲ್ಲ ನಿಗೂಢತೆಗಳು ಸುರುಳಿ ಒಂದೊಂದಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.
ಚಿತ್ರದಲ್ಲಿ ದೇವ ಪಾತ್ರವನ್ನು ಸೂಪರ್ ಸ್ಟಾರ್ ರಜನಿಕಾಂತ್ ನಿರ್ವಹಿಸಿದ್ದಾರೆ. ರಜನಿ ಈ ಹಿಂದೆ ದೇವ ಹೆಸರಿನ ಪಾತ್ರವನ್ನು ಮಣಿರತ್ನಂ ನಿರ್ದೇಶನದ ‘ದಳಪತಿ’ ಚಿತ್ರದಲ್ಲಿ ಮಾಡಿ ಹೆಸರಾಗಿದ್ದರು. ಅಲ್ಲಿ ಮೊದಲು ಅನಾಥ ಕೂಲಿಯಾಗಿ ಬಳಿಕ ರೌಡಿಯಾಗಿ ಬೆಳೆಯುವ ಪಾತ್ರ ನಿರ್ವಹಿಸಿದ್ದರು. ಅದರೊಂದಿಗೆ ನೇರ ಸಂಬಂಧ ಇರದಿದ್ದರೂ ಇಲ್ಲಿಯೂ ದೇವ ಅನಾಥನೇ. ಆದರೆ ಈತನ ಸಂಬಂಧದ ಪರದೆ ಅನಾವರಣಗೊಳ್ಳಲು ಚಿತ್ರದ ಕೊನೆಯವರೆಗೂ ಕಾಯಬೇಕಾಗುತ್ತದೆ.
ಮೂವತ್ತು ವರ್ಷಗಳ ಹಿಂದೆ ಇದ್ದಂಥ ದೇವ ಇದೀಗ ತುಂಬಾನೇ ಬದಲಾಗಿದ್ದಾನೆ. ಅದು ಯಾಕೆ ಎನ್ನುವುದೇ ಚಿತ್ರದಲ್ಲಿರುವ ಏಕೈಕ ಕುತೂಹಲದ ಅಂಶ. ಆದರೆ ಇದನ್ನು ಹೇಳಲು ಚಿತ್ರವನ್ನು ಎರಡೆರಡು ಟ್ರ್ಯಾಕ್‌ನಲ್ಲಿ ಎಳೆದಾಡಿದ್ದಾರೆ ನಿರ್ದೇಶಕ ಲೋಕೇಶ್ ಕನಕರಾಜ್. ಮೂವತ್ತೇ ನಿಮಿಷದಲ್ಲಿ ಹೇಳಬಹುದಾದ ಮೂವತ್ತು ವರ್ಷಗಳ ರಹಸ್ಯವನ್ನು ಮೂರು ಗಂಟೆಗಳ ಕಾಲ ಎಳೆದು ಕೊನೆಗೆ ಮೂರೇ ನಿಮಿಷದಲ್ಲಿ ಹೇಳಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಫ್ಲ್ಯಾಶ್ ಬ್ಯಾಕ್ ಸ್ಟೋರಿ ಯಾವ ಮ್ಯಾಜಿಕ್ ಮಾಡದೆ ಹೋಗಿರುವುದೇ ಕೂಲಿಯ ಪ್ರಮುಖ ಋಣಾತ್ಮಕ ಅಂಶ. ಉಳಿದಂತೆ ರಜನಿ ಅಭಿಮಾನಿಗಳ ಮನಸೆಳೆಯುವಲ್ಲಿ ಯಾವ ಸಂದೇಹವೂ ಇಲ್ಲ.
ಲೋಕೇಶ್ ಕನಕರಾಜ್ ಕಥೆ ಬರೆದು ನಿರ್ದೇಶಿಸಿದಂಥ ಚಿತ್ರ. ರಜನಿಯ ವೃತ್ತಿ ಬದುಕಿನ ಐವತ್ತು ವರ್ಷಗಳ ಸಂದರ್ಭದಲ್ಲಿ ತೆರೆಗೆ ಬಂದಿರುವಂಥ ಚಿತ್ರ. ಕನ್ನಡದ ಉಪೇಂದ್ರರಿಂದ ಬಾಲಿವುಡ್ ಆಮಿರ್ ಖಾನ್ ತನಕ ತಾರೆಯರು. ನಿರ್ದೇಶಕನ ಈ ಹಿಂದಿನ ಸಿನೆಮಾಗಳು ಮತ್ತು ತಾರೆಯರು ನೆರೆ ನಿಂತ ರೀತಿಯೇ ಕೂಲಿ ಬಗ್ಗೆ ಭರಪೂರ ನಿರೀಕ್ಷೆಗೆ ಕಾರಣವಾಗಿತ್ತು. ಲೋಕೇಶ್ ಕನಕರಾಜ್ ಯೂನಿವರ್ಸ್ ಇಲ್ಲಿರಬಹುದು ಎಂದುಕೊಳ್ಳಲಾಗಿತ್ತು. ಆದರೆ ಇವೆಲ್ಲವೂ ಸುಳ್ಳಾಗಿದೆ.
ಟಾಲಿವುಡ್ ಸ್ಟಾರ್ ನಾಗಾರ್ಜುನ ಮೊದಲ ಬಾರಿಗೆ ಖಳನಾಗಿದ್ದಾರೆ. ವಿಶಾಖಪಟ್ಟಣದ ಬಂದರನ್ನು ಕೇಂದ್ರೀಕರಿಸಿ ದಂಧೆ ನಡೆಸುವ ಸೈಮನ್ ಎನ್ನುವ ಪಾತ್ರ ಮಾಡಿದ್ದಾರೆ. ಸೈಮನ್ ಕೈಗಡಿಯಾರಗಳ ಸಾಗಾಟದ ಮುಖವಾಡ ಹೊತ್ತು ಮನುಷ್ಯನ ಅಂಗಾಂಗ ಕಳ್ಳಸಾಗಣೆ ನಡೆಸುತ್ತಾನೆ. ನಾಗಾರ್ಜುನ ನಟನೆಯ ಬಗ್ಗೆ ಎರಡು ಮಾತಿಲ್ಲ. ಈ ಕೃತ್ಯವನ್ನು ಗುಪ್ತವಾಗಿ ನಡೆಸುವ ಜವಾಬ್ದಾರಿ ದಯಾಳ್ ಎನ್ನುವಾತನದ್ದಾಗಿರುತ್ತದೆ. ದಯಾಳ್‌ನ ಕ್ರೂರತೆಯನ್ನು ಮಲಯಾಳಂ ನಟ ಸೌಬಿನ್ ಶಾಹಿರ್ ತನ್ನ ಅಭಿನಯ ವೈಭವದಲ್ಲಿ ಮೆರೆಸಿದ್ದಾರೆ. ಪೂಜಾ ಹೆಗ್ಡೆ ಜೊತೆ ಒಂದು ಹಾಡಿನಲ್ಲೂ ಕುಣಿದು ಪ್ರೇಕ್ಷಕರ ಮನಗೆಲ್ಲುತ್ತಾರೆ.
ಕೂಲಿ ಚಿತ್ರದಲ್ಲಿ ಕನ್ನಡಿಗರಿಗೆ ಇದ್ದಂಥ ಪ್ರಮುಖ ಕುತೂಹಲ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಪಾತ್ರಗಳ ಬಗ್ಗೆಯೇ ಆಗಿತ್ತು. ಉಪೇಂದ್ರ ಕೊಠಡಿಯ ಬಾಗಿಲಿಗೆ ಕೊರಗಜ್ಜ ದೈವದ ಸಾಂಕೇತಿಕ ಚಿತ್ರ ಅಂಟಿಸಿ ತುಳುನಾಡ ಕರಾವಳಿ ಟಚ್ ನೀಡಲಾಗಿದೆ. ಆ ಕೋಣೆಯೊಳಗಿನಿಂದ ಭರ್ಜರಿ ಬಿಲ್ಡಪ್ ಮೂಲಕವೇ ಉಪೇಂದ್ರ ಹೊರಗೆ ಬರುತ್ತಾರೆ. ಹಾಗೆ ಹೊರಬಂದ ಬಳಿಕ ಮಾತ್ರ ನಿಂತಲ್ಲೇ ನಿಂತು ನಿರಾಶೆ ಮೂಡಿಸುತ್ತಾರೆ. ಉಪ್ಪಿಯ ವೇಗಕ್ಕೆ ಹೇಳಿದ ಪಾತ್ರ ಇಲ್ಲಿ ದೊರಕಿಲ್ಲ ಎನ್ನುವುದು ಒಪ್ಪಲೇ ಬೇಕಾದ ವಿಚಾರ.
ಆದರೆ ರಚಿತಾ ರಾಮ್ ಬಗ್ಗೆ ಮಾತ್ರ ಮೆಚ್ಚಲೇಬೇಕು. ಸೈಮನ್ ಪುತ್ರನ ಪ್ರೇಯಸಿಯಾಗಿ ಎಂಟ್ರಿ ಕೊಡುವ ರಚಿತಾ ರಾಮ್ ದೃಶ್ಯದಿಂದ ದೃಶ್ಯಕ್ಕೆ ತಮ್ಮ ಪಾತ್ರ ವ್ಯಾಪ್ತಿಯನ್ನು ಹಿಗ್ಗಿಸುತ್ತಾ ಸಾಗುತ್ತಾರೆ. ಸಿಂಪಲ್ ಆಗಿ ತೋರುವುದರಾಚೆ ತಮ್ಮಲ್ಲಿ ಅದೆಷ್ಟು ವೈವಿಧ್ಯಮಯ ಪಟ್ಟುಗಳಿವೆ ಎನ್ನುವ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ದೇವನ ಪ್ರತಿಕಾರದ ಹೋರಾಟಕ್ಕೆ ಕಾರಣವಾಗುವ ಸ್ನೇಹಿತ ರಾಜಶೇಖರನಾಗಿ ಸತ್ಯರಾಜ್ ಕಾಣಿಸಿದ್ದಾರೆ. ಈತನ ಪುತ್ರಿ ಪ್ರೀತಿಯಾಗಿ ಶ್ರುತಿ ಹಾಸನ್ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಿನೆಮಾದ ಎರಡು ಪ್ರಮುಖ ಮಹಿಳಾ ಪಾತ್ರಗಳನ್ನು ಚೆನ್ನಾಗಿ ತೋರಿಸಿರುವ ನಿರ್ದೇಶಕ ಅತಿಥಿ ಪಾತ್ರಗಳನ್ನೇ ಅನಗತ್ಯವಾಗಿ ಬಳಸಿದಂತಾಗಿದೆ. ಕೂಲಿಗೆ ಇಷ್ಟೊಂದು ಭಾಷೆಗಳ ಆಳುಕಾಳುಗಳ ಅಗತ್ಯ ಇತ್ತೇ ಅನಿಸದಿರದು. ಉದಾಹರಣೆಗೆ ವಿಶೇಷ ಪಾತ್ರವಾಗಿ ಆಗಮಿಸಿರುವ ಆಮಿರ್ ಖಾನ್ ಉಪ್ಪಿ ಜೊತೆ ಸೇರಿ ಬೀಡಿಗೆ ಜಾಹೀರಾತು ನೀಡಲು ಸೀಮಿತಗೊಂಡಿದ್ದಾರೆ.
ಅನಿರುದ್ಧ್ ಸಂಗೀತದಲ್ಲಿ ಒಂದು ಹಾಡು, ಹಿನ್ನೆಲೆ ಸಂಗೀತ ಮನ ಸೆಳೆಯುತ್ತದೆ. ಕಲಾನಿರ್ದೇಶನ ಕೂಡ ಮೆಚ್ಚುವಂತಿದೆ. ಡಿ ಏಜಿಂಗ್ ಮೂಲಕ ರಜನಿಯನ್ನು ತೋರಿಸಿರುವ ರೀತಿ ಆಕರ್ಷಕವಾಗಿದೆ. ಉಳಿದಂತೆ ಸಾಮಾನ್ಯ ‘ಆಳುಕಾಳು’ಗಳಿಗಿಂತ ‘ಕೂಲಿ’ಯಿಂದ ನಿರೀಕ್ಷೆ ಮಾಡುವಷ್ಟೇ ಪೂರ್ವಾಗ್ರಹ ಇಟ್ಟುಕೊಂಡು ಚಿತ್ರ ವೀಕ್ಷಿಸಲು ಹೋಗುವುದು ಉತ್ತಮ.