ಇಡೀ ವಂಶವೃಕ್ಷದಲ್ಲಿ ಕಥೆಯ ಅಂಶವೇ ಸ್ಪಷ್ಟವಿಲ್ಲ!

ಚಿತ್ರ: ಜಸ್ಟ್ ಮ್ಯಾರೀಡ್
ನಿರ್ದೇಶನ: ಸಿ.ಆರ್. ಬಾಬಿ
ನಿರ್ಮಾಣ: ಅಜನೀಶ್ ಲೋಕನಾಥ್ ಮತ್ತು ಸಿ.ಆರ್. ಬಾಬಿ
ತಾರಾಗಣ: ಶೈನ್ ಶೆಟ್ಟಿ, ಅಂಕಿತಾ ಅಮರ್, ಶ್ರುತಿಕೃಷ್ಣ ಮೊದಲಾದವರು.
ಅದೊಂದು ತುಂಬು ಕುಟುಂಬ. ನ್ಯಾಯಾಧೀಶರಾಗಿ ನಿವೃತ್ತರಾಗಿರುವ ಹಿರಿಯಜ್ಜನೇ ಈ ಕುಟುಂಬದ ಯಜಮಾನ. ಸಂಬಂಧ ಮಾತ್ರವಲ್ಲ ಸಂಪತ್ತಿನಲ್ಲೂ ತುಂಬಿ ನಿಂತ ಸಿರಿವಂತಿಕೆ. ಈ ‘ವಂಶವೃಕ್ಷ’ ಕುಟುಂಬದ ಏಕೈಕ ವಾರಸುದಾರ ಸೂರ್ಯ. ಆ್ಯಡ್ ಫಿಲ್ಮ್ ನಿರ್ದೇಶಕನಾದ ಈತನಿಗೆ ಗೆಳತಿಯರ ಸಹವಾಸ ಹೆಚ್ಚು. ಆದರೆ ಅದನ್ನು ಮೀರಿಸುವಂತೆ ಕಾಡಿರುವುದು ಭ್ರಮೆ ಎನ್ನುವ ಹುಚ್ಚು. ನಡೆಯದಿರುವುದೆಲ್ಲ ನಡೆದಂತೆ ಕಾಣುವ ಕಾರಣ ಅದಕ್ಕೆಂದೇ ಚಿಕಿತ್ಸೆ ಪಡೆಯುತ್ತಿರುತ್ತಾನೆ. ಇದೇ ಸಂದರ್ಭದಲ್ಲಿ ಸೂರ್ಯ ಮದುವೆಗೆಂದು ಹುಡುಗಿ ನೋಡಲು ಕುಟುಂಬ ಸಮೇತ ಹೋಗುತ್ತಾನೆ. ಸೂರ್ಯನ ಜತೆ ಮಾತನಾಡಬಯಸುವ ಹುಡುಗಿ ತನಗೆ ಸೂರ್ಯನ ಬಗ್ಗೆ ತಿಳಿದಿರುವ ಸತ್ಯಗಳನ್ನು ಹೊರಗೆ ಬಿಡಿಸಿಡುತ್ತಾಳೆ. ಸೂರ್ಯನ ಫ್ಲರ್ಟ್ ಕ್ಯಾರೆಕ್ಟರ್ ಬಗ್ಗೆ ಗೊತ್ತಿದ್ದೂ ಆತನನ್ನೇ ವಿವಾಹವಾಗಲು ಬಯಸುವುದಾಗಿ ಹೇಳುತ್ತಾಳೆ. ಇದಕ್ಕೆ ಕಾರಣವೇನು? ಹುಡುಗಿ ಮತ್ತು ಹುಡುಗನ ಮಧ್ಯೆ ನಡೆಯುವ ಒಪ್ಪಂದವೇನು ಎನ್ನುವಲ್ಲಿಂದ ಚಿತ್ರದ ಕಥೆ ಶುರುವಾಗುತ್ತದೆ.
ನಾಯಕನ ಮದುವೆಯ ಬಳಿಕ ಕಥೆ ಶುರುವಾಗಬಹುದು ಎಂದು ಕಾದವರಿಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಹೊಸ ಪಾತ್ರಗಳು ಎಂಟ್ರಿಯಾಗುತ್ತಲೇ ಇರುತ್ತವೆ. ಆದರೆ ಯಾವ ಎಳೆಯನ್ನು ಪ್ರಮುಖವಾಗಿ ತೋರಿಸಬೇಕು ಎನ್ನುವಲ್ಲಿ ಮಾತ್ರ ನಿರ್ದೇಶಕರು ಸೋತಿದ್ದಾರೆ. ನಾಯಕನ ಪಾತ್ರದಿಂದಲೇ ಇದಕ್ಕೆ ಉದಾಹರಣೆ ಕೊಡುತ್ತಲೇ ಹೋಗಬಹುದು. ಯುವತ್ವ ತುಂಬಿದ ನಾಯಕನಾಗಿ ಶೈನ್ ಶೈನಿಂಗ್ ಸ್ಟಾರ್ ಆಗಿದ್ದಾರೆ. ತುಂಟ ದೃಶ್ಯಗಳಲ್ಲಿ ಅಲ್ಲು ಅರ್ಜುನ್‌ನನ್ನು ಗಂಭೀರ ಸನ್ನಿವೇಶದಲ್ಲಿ ಜ್ಯೂನಿಯರ್ ಎನ್‌ಟಿಆರ್‌ರನ್ನು ನೆನಪಿಸಿ ಇವರಿಬ್ಬರೂ ಸೇರಿದಂತೆ ಕಾಣಬಲ್ಲ ಕನ್ನಡದ ಪ್ರತಿಭೆ ತಾನೆಂದು ನೆನಪಿಸುತ್ತಾರೆ. ಆದರೆ ಇಂಥ ಹುಡುಗನ ಹೀರೋಯಿಸಮ್ ತೋರಿಸುವಂಥ ಸಮರ್ಥ ದೃಶ್ಯವೇ ಇಲ್ಲ. ಮಗುವೊಂದು ಈ ವಂಶವೃಕ್ಷದ ಮನೆ ಸೇರುವ ಸನ್ನಿವೇಶದ ಹೋಲಿಕೆ 1994ರಲ್ಲಿ ತೆರೆಕಂಡ ಮೋಹನ್ ಲಾಲ್ ಸಿನೆಮಾ ‘ಮಿನ್ನಾರಂ’ನಲ್ಲೂ ಇದೆ. ಆದರೆ ಅದನ್ನು ಕೂಡ ಭಾವನಾತ್ಮಕವಾಗಿಸುವಲ್ಲಿ ಚಿತ್ರ ಕತೆ ಸೋತಿದೆ. ಹೀಗಾಗಿ ಅನೂಪ್ ಭಂಡಾರಿ ಮತ್ತು ಶ್ರುತಿ ಹರಿಹರನ್ ಪಾತ್ರಗಳು ಪಡೆಯಬಹುದಾದ ಪ್ರಾಮುಖ್ಯತೆ ಪಡೆದುಕೊಂಡಿಲ್ಲ. ಇರುವುದರಲ್ಲಿ ಶ್ರೀಮನ್ ತಮ್ಮ ತಮಿಳು ಮಿಶ್ರಿತ ಕನ್ನಡದ ಮೂಲಕ ನಗಿಸುವ ಪ್ರಯತ್ನ ಮಾಡಿದ್ದಾರೆ!
ರವಿಶಂಕರ್ ಗೌಡ ಪಾತ್ರಕ್ಕೆ ಗಟ್ಟಿಯಾದ ಹಿನ್ನೆಲೆಯೇ ಇಲ್ಲ.
ಇಡೀ ಕುಟುಂಬದ ಬೇರಾಗಿರುವ ಹಿರಿಯಜ್ಜ ಮಾಜಿ ನ್ಯಾಯಾಧೀಶ ದೇವರಾಜ್. ಈ ಪಾತ್ರಕ್ಕೇನೋ ಒಂದು ಹಿನ್ನೆಲೆ ಇದೆ. ಅದನ್ನು ಸೂಚಿಸುವಂತೆ ಹುಲಿಯಾ ದೇವರಾಜ್ ಮುಂದೆ ಹುಲಿಯುಗುರು ಧರಿಸಿದ ಶ್ರುತಿ ಎಂಟ್ರಿ ಗಂಭೀರವಾಗಿಯೇ ಇದೆ. ಪಾತ್ರಕ್ಕಾಗಿ ತಮ್ಮ ಧ್ವನಿಯಲ್ಲಿ ಬದಲಾವಣೆ ಮಾಡಿಕೊಂಡು ಮಾತಾಡಿರುವುದು ಪ್ರಶಂಸಾರ್ಹ. ಆದರೆ ಏನೋ ನಿರೀಕ್ಷೆ ಸೃಷ್ಟಿಸಿ ಸಪ್ಪೆಯಾಗಿ ಕರಗಿ ಹೋಗುವ ಇತರ ಪಾತ್ರಗಳ ಗತಿಯೇ ಇದಕ್ಕೂ ಸಂಭವಿಸಿದೆ. ಫ್ಲ್ಯಾಶ್ ಬ್ಯಾಕ್ ನಲ್ಲಿ ಬರುವ ಯುವ ದೇವರಾಜ್ ಪಾತ್ರವನ್ನು ನಿಭಾಯಿಸಿದ ವ್ಯಕ್ತಿ ಚೆನ್ನಾಗಿ ಹೊಂದಿಕೆಯಾಗಿದ್ದಾರೆ.
ಪಾತ್ರಧಾರಿಗಳ ವಿಚಾರಕ್ಕೆ ಬಂದರೆ ಉತ್ತಮ ಕಲಾವಿದರ ದಂಡೇ ಇದೆ. ಸೂರ್ಯನ ಜೋಡಿಯಾಗಿ ನಟಿಸಿದ ಅಂಕಿತಾ ನವನಟಿಯಾದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿಯ ತಂದೆಯಾಗಿ ಜಿಯೋಲಾಜಿಸ್ಟ್ ಪಾತ್ರದಲ್ಲಿ ರವಿಭಟ್ ನಟಿಸಿದ್ದಾರೆ. ಅನೂಪ್ ಭಂಡಾರಿ ಮೊದಲಬಾರಿ ಎನ್ನುವಂತೆ ತಮ್ಮ ನಿರ್ದೇಶನದಿಂದ ಹೊರತಾದ ಚಿತ್ರದಲ್ಲಿ ನಟಿಸಿ ಸೈ ಎನಿಸಿದ್ದಾರೆ. ರಾಜಕಾರಣಿಯಾಗಿ ನಟಿಸಿದ ಅಚ್ಯುತ್ ಕುಮಾರ್, ಒಂದೆರಡು ದೃಶ್ಯಗಳಲ್ಲಿ ಬಂದುಹೋಗುವ ಮಾಳವಿಕಾ ಅವಿನಾಶ್, ಮೊದಲ ಬಾರಿ ಬಣ್ಣ ಹಚ್ಚಿರುವ ಗಾಯಕಿ ವಾಣಿ ಹರಿಕೃಷ್ಣ..ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡುವುದರ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ವಿಪರ್ಯಾಸವೆಂದರೆ ತಮ್ಮ ನಿರ್ಮಾಣದ ಚಿತ್ರದಲ್ಲೇ ಸೂಪರ್ ಹಿಟ್ ಗೀತೆ ನೀಡಲು ಸಾಧ್ಯವಾಗಿಲ್ಲ. ಆದರೆ ಚಿತ್ರದ ಹಾಡುಗಳು ಮಾತ್ರ ಸಂಗೀತ ಮತ್ತು ಆಕರ್ಷಕ ಸಾಹಿತ್ಯದಿಂದ ಮೆಲುಕು ಹಾಕುವಂತಿದೆ. ಉಳಿದಂತೆ ಅಹಿತಕರ ಘಟನೆಗಳ ವಿವಾಹಿತರ ಸಿನೆಮಾ ಇದು.