ಪ್ರತಿಷ್ಠಿತ ಸಿಲ್ವರ್ ಲಯನ್ ಪ್ರಶಸ್ತಿ ಪಡೆದ ಗಾಝಾದ ಬಾಲಕಿಯ ಕಥೆಯಾಧಾರಿತ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಸಾಕ್ಷ್ಯಚಿತ್ರ

Photo credit: theguardian.com
ವೆನಿಸ್ : ಗಾಝಾದಲ್ಲಿ ಇಸ್ರೇಲ್ ಹತ್ಯಾಕಾಂಡದ ವೇಳೆ ನಡೆದ ಐದು ವರ್ಷದ ಫೆಲೆಸ್ತೀನ್ ಬಾಲಕಿ ಹಿಂದ್ ರಜಬ್ ಹತ್ಯೆಯನ್ನು ಚಿತ್ರಿಸುವ ಸಾಕ್ಷ್ಯಚಿತ್ರವು ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಸಿಲ್ವರ್ ಲಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
'ದಿ ವಾಯ್ಸ್ ಆಫ್ ಹಿಂದ್ ರಜಬ್' ಗಾಝಾದ ಐದು ವರ್ಷದ ಮಗುವಿನ ಕೊನೆಯ ಕ್ಷಣಗಳನ್ನು ಆಧರಿಸಿ ನಿರ್ಮಿಸಿದ ಚಿತ್ರವಾಗಿದೆ. ಚಲನಚಿತ್ರ ಮೇಳದಲ್ಲಿ ಈ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದವರ ಕಣ್ಣು ನೆನೆದಿತ್ತು.
ಫ್ರೆಂಚ್-ಟುನೀಷಿಯನ್ ನಿರ್ದೇಶಕಿ ಕೌಥರ್ ಬೆನ್ ಹನಿಯಾ ನಿರ್ದೇಶನದ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಶನಿವಾರ ನಡೆದ ವಿಶ್ವ ದರ್ಜೆಯ 82ನೇ ಚಲನಚಿತ್ರೋತ್ಸವದಲ್ಲಿ ರನ್ನರ್ ಅಪ್ ಸ್ಥಾನ ಪಡೆದು ʼಸಿಲ್ವರ್ ಲಯನ್ ಗ್ರ್ಯಾಂಡ್ ಜ್ಯೂರಿʼ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈ ಚಿತ್ರವು 2024ರ ಜನವರಿ 29ರಂದು ನಡೆದ ದುರಂತವನ್ನು ವಿವರಿಸುತ್ತದೆ. ಯುದ್ಧಪೀಡಿತ ಗಾಝಾದಿಂದ ತನ್ನ ಕುಟುಂಬಸ್ಥರೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾಗ ಇಸ್ರೇಲ್ ಪಡೆಗಳು ಕಾರಿನ ಮೇಲೆ ದಾಳಿ ನಡೆಸಿತ್ತು. ಇಸ್ರೇಲ್ ಯೋಧರ ಗುಂಡಿನ ದಾಳಿಗೆ ಹಿಂದ್ ಹೊರತುಪಡಿಸಿ ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು. ಈ ವೇಳೆ ಬಾಲಕಿ ಗಾಝಾದ ಫೆಲೆಸ್ತೀನ್ ರೆಡ್ ಕ್ರೆಸೆಂಟ್ ಸೊಸೈಟಿಗೆ ಅಳುತ್ತಾ ಕರೆ ಮಾಡಿ ಸಹಾಯಕ್ಕಾಗಿ ಬೇಡಿಕೊಂಡರು. ತನಗೆ ಸಹಾಯ ಮಾಡುವಂತೆ ಆ ಮಗು ಆಡಿದ ಮಾತು ಜಗತ್ತನ್ನೇ ದಿಗ್ಭ್ರಮಗೊಳಿಸಿತ್ತು. ಗಾಝಾದ ರೆಡ್ ಕ್ರೆಸೆಂಟ್ ಸೊಸೈಟಿಯ ಆಂಬುಲೆನ್ಸ್ ನ ಸಿಬ್ಬಂದಿ ಬಾಲಕಿಯನ್ನು ಕಾರಿನಿಂದ ಸುರಕ್ಷಿತವಾಗಿ ಹೊರಗೆ ತಂದಿದ್ದರು. ಆದರೆ ಈ ಆಂಬುಲೆನ್ಸ್ ನ ಮೇಲೆಯೂ ಇಸ್ರೇಲ್ ಪಡೆ ಗುಂಡಿನ ದಾಳಿ ನಡೆಸಿತ್ತು. ಇದರಲ್ಲಿ ಹಿಂದ್ ಮತ್ತು ಸ್ವಯಂಸೇವಕರು ಮೃತಪಟ್ಟಿದ್ದರು.
ಈ ಸಾಕ್ಷ್ಯಚಿತ್ರದಲ್ಲಿ ಹಿಂದ್ ತುರ್ತು ಫೋನ್ ಕರೆಯ ಧ್ವನಿಮುದ್ರಣವನ್ನು ಬಳಸಲಾಗಿದೆ. ಗುಂಡು ತಗುಲಿದ ಕಾರಿನೊಳಗೆ ಸಿಕ್ಕಿಬಿದ್ದಿದ್ದ ಬಾಲಕಿ ತನ್ನ ಅತ್ತೆ, ಮಾವ ಮತ್ತು ಮೂವರು ಸಂಬಂಧಿಕರ ಮೃತದೇಹಗಳ ನಡುವೆ ಬಿದ್ದಿರುವಾಗ ರೆಡ್ ಕ್ರೆಸೆಂಟ್ ಸಿಬ್ಬಂದಿ ಆಕೆಗೆ ಧೈರ್ಯ ಹೇಳಲು ಪ್ರಯತ್ನಿಸುತ್ತಿರುವುದು ಧ್ವನಿಯಲ್ಲಿ ದಾಖಲಾಗಿದೆ.
ಇಟಲಿಯ ವೆನಿಸ್ ನಗರದಲ್ಲಿ ನಡೆದ ಚಲನಚಿತ್ರ ಮೇಳದಲ್ಲಿ ದಿ ವಾಯ್ಸ್ ಆಫ್ ಹಿಂದ್ ರಜಬ್ ಎಂಬ ಚಿತ್ರಕ್ಕೆ ಪ್ರೇಕ್ಷಕರು ಎದ್ದುನಿಂತು 23 ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ನಿರ್ದೇಶಕಿ ಬೆನ್ ಹಾನಿಯಾ, ಪ್ರಶಸ್ತಿಯನ್ನು ಫೆಲೆಸ್ತೀನ್ನ ರೆಡ್ ಕ್ರೆಸೆಂಟ್ಗೆ ಸಮರ್ಪಿಸಿದರು. ರಜಬ್ ಅವರ ಕಥೆ ಕೇವಲ ಆ ಬಾಲಕಿಯ ಕಥೆಯಲ್ಲ, ಬದಲಾಗಿ ದುರಂತವೆಂದರೆ ಹತ್ಯಾಕಾಂಡವನ್ನು ಸಹಿಸಿಕೊಂಡ ಇಡೀ ಜನರ ಕಥೆ ಎಂದು ಹೇಳಿದರು.
"ಸಿನಿಮಾ ಮೂಲಕ ಹಿಂದ್ಳನ್ನು ಮರಳಿ ತರಲು ಸಾಧ್ಯವಿಲ್ಲ ಅಥವಾ ಆಕೆಯ ಮೇಲೆ ನಡೆದ ದೌರ್ಜನ್ಯವನ್ನು ಅಳಿಸಲು ಸಾಧ್ಯವಿಲ್ಲ. ಆದರೆ, ಸಿನೆಮಾ ಮೂಲಕ ಆಕೆಯ ಧ್ವನಿಯನ್ನು ಸಂರಕ್ಷಿಸಬಹುದು, ಗಡಿಗಳನ್ನು ಮೀರಿ ಪ್ರತಿಧ್ವನಿಸುವಂತೆ ಮಾಡಬಹುದು" ಎಂದು ನಿರ್ದೇಶಕಿ ಬೆನ್ ಹಾನಿಯಾ ಹೇಳಿದರು.