"ತಪ್ಪು ಯಾರದ್ದು ಎಂದು ನಿರ್ಧರಿಸುವುದು ಕರ್ನಾಟಕದ ಪ್ರಜ್ಞಾವಂತ ಜನರಿಗೆ ಬಿಟ್ಟಿದ್ದೇನೆ": ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಂಡ ಬೆನ್ನಲ್ಲೇ ಸೋನು ನಿಗಮ್ ಪ್ರತಿಕ್ರಿಯೆ
ನನ್ನ ಮಗನ ವಯಸ್ಸಿನವರು ನನ್ನನ್ನು ಬೆದರಿಸಿದಾಗ ನನಗೆ ಕೋಪಗೊಳ್ಳುವ ಹಕ್ಕಿದೆ ಎಂದ ಗಾಯಕ

ಸೋನು ನಿಗಮ್ (Photo: PTI)
ಹೊಸದಿಲ್ಲಿ: ಕನ್ನಡಿಗರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾರಣಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಂಡಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿದ ಸೋನು ನಿಗಮ್ ನಿಮ್ಮ ತೀರ್ಪನ್ನು ನಾನು ಸೌಜನ್ಯದಿಂದ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
ಈ ಕುರಿತು ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿದ ಸೋನು ನಿಗಮ್, ನಾನು ಕರ್ನಾಟಕದಲ್ಲಿದ್ದಾಗ ಮಾತ್ರವಲ್ಲದೆ ಜಗತ್ತಿನ ಬೇರೆಡೆ ಇದ್ದಾಗಲೂ ಭಾಷೆ, ಸಂಸ್ಕೃತಿ, ಸಂಗೀತ, ಸಂಗೀತಗಾರರು, ರಾಜ್ಯ ಮತ್ತು ಜನರಿಗೆ ಅಭೂತಪೂರ್ವ ಪ್ರೀತಿಯನ್ನು ನೀಡಿದ್ದೇನೆ. ವಾಸ್ತವವಾಗಿ ಹಿಂದಿ ಸೇರಿದಂತೆ ಇತರ ಭಾಷೆಗಳ ಹಾಡುಗಳಿಗಿಂತ ನನ್ನ ಕನ್ನಡ ಹಾಡುಗಳನ್ನು ನಾನು ಹೆಚ್ಚು ಮೆಚ್ಚಿಕೊಳ್ಳುತ್ತೇನೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ 100ಕ್ಕೂ ಅಧಿಕ ವೀಡಿಯೊಗಳಿವೆ ಎಂದು ಹೇಳಿದ್ದಾರೆ.
ನಾನು ಯಾರಿಂದಲೂ ಅವಮಾನವನ್ನು ಸಹಿಸಿಕೊಳ್ಳುವಷ್ಟು ಎಳೆ ಹುಡಗನಲ್ಲ. ನನಗೆ 51 ವರ್ಷ, ನಾನು ನನ್ನ ಜೀವನದ ದ್ವಿತೀಯಾರ್ಧದಲ್ಲಿದ್ದೇನೆ. ನನ್ನ ಮಗನ ವಯಸ್ಸಿನವರು ಸಾವಿರಾರು ಜನರ ಮುಂದೆ ನೇರವಾಗಿ ನನ್ನನ್ನು ಬೆದರಿಸಿದಾಗ ನನಗೆ ಕೋಪಗೊಳ್ಳುವ ಹಕ್ಕಿದೆ. ನಾನು ಅವರಿಗೆ ತುಂಬಾ ವಿನಮ್ರವಾಗಿ ಮತ್ತು ಪ್ರೀತಿಯಿಂದ ಕಾರ್ಯಕ್ರಮ ಇದೀಗ ಪ್ರಾರಂಭವಾಗಿದೆ. ಇದು ನನ್ನ ಮೊದಲ ಹಾಡು ಮತ್ತು ನಾನು ಅವರನ್ನು ನಿರಾಸೆಗೊಳಿಸುವುದಿಲ್ಲ ಎಂದು ಹೇಳಿದೆ. ಆದರೆ ನಾನು ಯೋಜಿಸಿದ ರೀತಿಯಲ್ಲಿ ಅವರು ಸಂಗೀತ ಕಚೇರಿಯನ್ನು ಮುಂದುವರಿಸಲು ನನಗೆ ಅವಕಾಶ ನೀಡಬೇಕು. ಪ್ರತಿಯೊಬ್ಬ ಕಲಾವಿದರು ಹಾಡಿನ ಪಟ್ಟಿಯನ್ನು ಸಿದ್ಧಪಡಿಸಿರುತ್ತಾರೆ. ಆದಕ್ಕೆ ಸಂಗೀತಗಾರರು ಮತ್ತು ತಂತ್ರಜ್ಞರು ಹೊಂದಿಕೊಂಡಿರುತ್ತಾರೆ. ಆದರೆ ಅವರು ಗದ್ದಲ ಸೃಷ್ಟಿಸಲು ಮತ್ತು ನನ್ನನ್ನು ಹುಚ್ಚುಚ್ಚಾಗಿ ಬೆದರಿಸಲು ಹಠ ಹಿಡಿದಿದ್ದರು. ತಪ್ಪು ಯಾರದು ಎಂದು ಹೇಳಿ ಎಂದು ಪ್ರತಿಕ್ರಿಯಿಸಿದ್ದಾರೆ.
ನಾನು ದೇಶಭಕ್ತನಾಗಿರುವುದರಿಂದ, ವಿಶೇಷವಾಗಿ ಪಹಲ್ಗಾಮ್ನಲ್ಲಿ ನಡೆದ ಘಟನೆಯ ನಂತರ ಭಾಷೆ, ಜಾತಿ ಅಥವಾ ಧರ್ಮದ ಹೆಸರಿನಲ್ಲಿ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುವವರನ್ನು ನಾನು ದ್ವೇಷಿಸುತ್ತೇನೆ. ನಾನು ಅವರಿಗೆ ಶಿಕ್ಷಣ ನೀಡಬೇಕಾಯಿತು, ಮತ್ತು ನಾನು ಮಾಡಿದೆ ಮತ್ತು ಸಾವಿರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅದಕ್ಕಾಗಿ ನನ್ನನ್ನು ಹುರಿದುಂಬಿಸಿದರು. ವಿಷಯ ಮುಗಿದು ನಾನು ಒಂದು ಗಂಟೆಗೂ ಹೆಚ್ಚು ಕಾಲ ಕನ್ನಡ ಹಾಡು ಹಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಇವೆಲ್ಲವೂ ಇದೆ ಎಂದು ಹೇಳಿದರು.
ಇಲ್ಲಿ ತಪ್ಪು ಯಾರದು ಎಂದು ನಿರ್ಧರಿಸುವುದು ಕರ್ನಾಟಕದ ಪ್ರಜ್ಞಾವಂತ ಜನರಿಗೆ ಬಿಟ್ಟಿದ್ದೇನೆ. ನಿಮ್ಮ ತೀರ್ಪನ್ನು ನಾನು ಸೌಜನ್ಯದಿಂದ ಸ್ವೀಕರಿಸುತ್ತೇನೆ. ಕರ್ನಾಟಕದ ಕಾನೂನು ಸಂಸ್ಥೆಗಳು ಮತ್ತು ಪೊಲೀಸರನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ ಮತ್ತು ನಂಬುತ್ತೇನೆ ಮತ್ತು ಅವರಿಗೆ ಸಹಕರಿಸುತ್ತೇನೆ. ನನಗೆ ಕರ್ನಾಟಕದಿಂದ ಪ್ರೀತಿ ಸಿಕ್ಕಿದೆ ಮತ್ತು ನಿಮ್ಮ ತೀರ್ಪು ಏನೇ ಇರಲಿ ಯಾವುದೇ ದುರುದ್ದೇಶವಿಲ್ಲದೆ ಅದನ್ನು ಯಾವಾಗಲೂ ಪಾಲಿಸುತ್ತೇನೆ ಎಂದು ಹೇಳಿದರು.
ಬೆಂಗಳೂರಿನ ಕಾಲೇಜೊಂದರಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಹಾಡುವ ವೇಳೆ ಅಭಿಮಾನಿಯೋರ್ವ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಕೋಪಗೊಂಡ ಸೋನು ನಿಗಮ್ ಇದೇ ಕಾರಣಕ್ಕೆ ಪೆಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿಯಾಗಿದೆ ಎಂದು ಹೇಳಿದರು. ಈ ವಿಡಿಯೋ ವೈರಲ್ ಆಗಿ ಗಾಯಕನ ವಿರುದ್ಧ ಖಂಡನೆ ವ್ಯಕ್ತವಾಗಿದೆ.
ಬಳಿಕ ಮತ್ತೊಂದು ವಿಡಿಯೋದಲ್ಲಿ ಸ್ಪಷ್ಟನೆ ನೀಡಿರುವ ಸೋನು ನಿಗಮ್ ಅದರಲ್ಲೂ ಕನ್ನಡಿಗರನ್ನು ಕೆಣಕುವಂತೆ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.