'ಆಕ್ಷೇಪಾರ್ಹವಾದುದು ಏನೂ ಇಲ್ಲ' : ಆದಿತ್ಯನಾಥ್ ಜೀವನ ಚರಿತ್ರೆ ಕುರಿತ ಚಲನಚಿತ್ರ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಸಮ್ಮತಿ

Photo credit: Facebook/Samrat Cinematics
ಲಕ್ನೋ : ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಹಿಂದಿ ಚಲನಚಿತ್ರವನ್ನು ಮರು ಸಂಪಾದನೆ (ಎಡಿಟ್) ನಡೆಸದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ ಎಂದು The Indian Express ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ನೀಲಾ ಕೆ ಗೋಖಲೆ ಅವರನ್ನೊಳಗೊಂಡ ಪೀಠವು, “ಅಜೇ: ದಿ ಅನ್ಟೋಲ್ಡ್ ಸ್ಟೋರಿ ಆಫ್ ಎ ಯೋಗಿ”( Ajey: The Untold Story of a Yogi) ಎಂಬ ಶೀರ್ಷಿಕೆಯ ಚಿತ್ರದಲ್ಲಿ ಆಕ್ಷೇಪಾರ್ಹವಾದದು ಏನೂ ಇಲ್ಲ ಎಂದು ಹೇಳಿದೆ.
ಈ ಚಲನಚಿತ್ರವು ಶಾಂತನು ಗುಪ್ತಾ ಅವರ "ದಿ ಮಾಂಕ್ ಹೂ ಬಿಕಮ್ ಚೀಫ್ ಮಿನಿಸ್ಟರ್: ದಿ ಡೆಫಿನಿಟಿವ್ ಬಯೋಗ್ರಫಿ ಆಫ್ ಯೋಗಿ ಆದಿತ್ಯನಾಥ್"( The Monk Who Became Chief Minister: The Definitive Biography of Yogi Adityanath ) ಪುಸ್ತಕವನ್ನು ಆಧರಿಸಿದೆ.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್ಸಿ)ಯು ಚಿತ್ರಕ್ಕೆ ಕತ್ತರಿ ಹಾಕುವಂತೆ ಮತ್ತು ಮರು ಸಂಪಾದನೆ ಮಾಡುವಂತೆ ಶಿಫಾರಸು ಮಾಡಿದ ನಂತರ ಚಿತ್ರದ ನಿರ್ಮಾಪಕರಾದ ಸಾಮ್ರಾಟ್ ಸಿನೆಮ್ಯಾಟಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ್ಯಾಯಾಲಯದ ಮೊರೆ ಹೋಗಿತ್ತು. ಇದೀಗ ಸಿಬಿಎಫ್ಸಿಯ ಆದೇಶಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ ಎಂದು Bar and Bench ವರದಿ ಮಾಡಿದೆ.
ಮೊದಲಿಗೆ ಸಿಬಿಎಫ್ಸಿ ಚಿತ್ರಕ್ಕೆ 29 ಕಡೆ ಕತ್ತರಿ ಹಾಕುವಂತೆ ಸೂಚಿಸಿತ್ತು. ಮೇಲ್ಮನವಿ ಸಲ್ಲಿಸಿದಾಗ ಪರಿಷ್ಕರಣಾ ಸಮಿತಿಯು ಎಂಟು ಆಕ್ಷೇಪಣೆಗಳನ್ನು ರದ್ದುಪಡಿಸಿದೆ. ಆದರೆ, ಚಿತ್ರಕ್ಕೆ ಪ್ರಮಾಣಪತ್ರವನ್ನು ನೀಡಿರಲಿಲ್ಲ.
ಇದರಿಂದಾಗಿ ಚಲನಚಿತ್ರ ನಿರ್ಮಾಪಕರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಧೀಶರು ಆಗಸ್ಟ್ 22ರಂದು ಚಿತ್ರವನ್ನು ವೀಕ್ಷಿಸಿದರು ಮತ್ತು ಚಿತ್ರದಲ್ಲಿ ಯಾವುದೇ ಬದಲಾವಣೆಗಳ ಅಗತ್ಯವಿಲ್ಲ ಎಂದು ಹೇಳಿದರು ಎಂದು Bar and Bench ವರದಿ ಮಾಡಿದೆ.