‘ಬೆಂಗಾಲ್ ಫೈಲ್ಸ್’: ನಡೆಯದ ದ್ವೇಷ ಬಿತ್ತುವ ಆಟ!

ನರೇಂದ್ರ ಮೋದಿಯವರ ಕಳೆದ 11 ವರ್ಷಗಳ ಆಡಳಿತದಲ್ಲಿ ಪ್ರಭುತ್ವ ಪೋಷಿತ ಸಿನೆಮಾಗಳೂ ಬರುತ್ತಲೇ ಇವೆ. ಕೇರಳ ಸ್ಟೋರಿ, ಕಾಶ್ಮೀರ ಫೈಲ್ಸ್, ತಾಷ್ಕೆಂಟ್ ಫೈಲ್ಸ್ ಹೀಗೆ ಸರಣಿಯಲ್ಲಿ ಈಗ ಬಂದಿರುವುದು ‘ದಿ ಬೆಂಗಾಲ್ ಫೈಲ್ಸ್’.
ಭಾರತದ ಬಹುತೇಕರು ಈಗ ಇಂಥ ವಿಷಕಾರಿ ಸಿನೆಮಾಗಳನ್ನು ತಿರಸ್ಕರಿಸುತ್ತಿದ್ದಾರೆ ಎಂಬುದು ಬೇರೆ ವಿಷಯ. ಆದರೆ, ಭಾರತೀಯರಿಗೆ ನಿರಂತರವಾಗಿ ದ್ವೇಷಿಸಲು ಕಲಿಸಲಾಗುತ್ತಿದೆ ಎಂಬುದನ್ನು ಮಾತ್ರ ನಿರಾಕರಿಸಲು ಸಾಧ್ಯವಿಲ್ಲ.
ಸರಳವಾಗಿ ಹೇಳುವುದಾದರೆ, ಹಿಂದೂಗಳಿಗೆ ಮುಸ್ಲಿಮರನ್ನು ದ್ವೇಷಿಸಲು ಕಲಿಸಲಾಗುತ್ತಿದೆ.
ಮುಸ್ಲಿಮರು ತುಂಬಾ ಕೆಟ್ಟ ಜನ, ಅವರನ್ನು ದ್ವೇಷಿಸಬೇಕು, ಅವರ ವಿರುದ್ಧ ಹಿಂಸೆಯ ಅಸ್ತ್ರ ಬಳಸಬೇಕು ಎಂದು ಹೇಳಿಕೊಡುತ್ತ ಬರಲಾಗಿದೆ.ಅದಕ್ಕಾಗಿ ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚಿ, ಅದಕ್ಕೆ ಸಾಕಷ್ಟು ಸುಳ್ಳು ಹಾಗೂ ದ್ವೇಷದ ಮಸಾಲೆ ಹಾಕಿ ಸಿನೆಮಾಗಳನ್ನು ಮಾಡಲಾಗುತ್ತಿದೆ. ಅದಕ್ಕೆ ನೈಜ ಇತಿಹಾಸ, ದೇಶಭಕ್ತಿಯ ಸಿನೆಮಾ ಎಂಬ ಅಬ್ಬರದ ಪ್ರಚಾರ ನೀಡಲಾಗುತ್ತಿದೆ.
ಇಂಥದೇ ಪ್ರವಚನದ ಭಾವದಂತಿದ್ದ ‘ಬೆಂಗಾಲ್ ಫೈಲ್ಸ್’ ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿದೆ.
ಅದರ ಹೊರತಾಗಿಯೂ, ಆ ಸಿನೆಮಾವನ್ನು ಯಶಸ್ವಿಗೊಳಿಸಲು ತೊಡಗಿಸಿಕೊಂಡಿರುವ ಪ್ರಭಾವಿಗಳ ದಂಡೇ ಇದೆ. ಅದನ್ನು ನೋಡಲು ಥಿಯೇಟರ್‌ಗೆ ಹೋಗದಿದ್ದರೂ, ಅದರ ತುಣುಕುಗಳು ವಾಟ್ಸ್‌ಆ್ಯಪ್‌ನಲ್ಲಿ ಬಂದೂ ಬಂದೂ ಬೀಳುತ್ತಿವೆ. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್‌ಗೆ ಹೋದರೆ, ಅಲ್ಲಿಯೂ ಅದು ಅಸಹ್ಯವಾಗಿ ಇಣುಕುತ್ತದೆ. ಈ ರೀತಿ ಅದನ್ನು ಜನರ ಮೇಲೆ ನಿರಂತರವಾಗಿ ಹೇರುವ ಯತ್ನ ನಡೆದೇ ಇದೆ.
ಇದೆಲ್ಲ ಒಂದು ಬಗೆಯಲ್ಲಿ, ಕೋಮುವಾದದ ಬೂಸ್ಟರ್ ಡೋಸ್. ಬಂಗಾಳದಲ್ಲಿ ಅಂತಹ ಬೂಸ್ಟರ್ ಡೋಸ್ ಅನ್ನು ‘ಬೆಂಗಾಲ್ ಫೈಲ್ಸ್’ ಮೂಲಕ ನೀಡಲಾಗುತ್ತಿದೆ.
ಬಂಗಾಳ ಚುನಾವಣೆಗೆ ಮೊದಲು, ಟಿಎಂಸಿ ಅಥವಾ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಹೋರಾಡಬೇಕಿರುವುದು ತಮ್ಮ ಎದುರಾಳಿ ಪಕ್ಷದೊಡನೆ ಮಾತ್ರವಲ್ಲ. ಅವು ಚುನಾವಣಾ ಆಯೋಗ, ಮಾಧ್ಯಮ, ನ್ಯಾಯಾಂಗದೊಂದಿಗೆ ಮಾತ್ರವಲ್ಲದೆ, ಇಂಥ ಸಿನೆಮಾಗಳ ವಿರುದ್ಧವೂ ಹೋರಾಡಬೇಕಾಗುತ್ತದೆ.
ಬಂಗಾಳದಲ್ಲಿ ಈ ಸಿನೆಮಾವನ್ನು ಬ್ಯಾನ್ ಮಾಡಲಾಗಿದೆ. ಆದರೆ ವಿಷವನ್ನು ಜನರಿಗೆ ಉಣಿಸಲೇಬೇಕೆಂದವರಿಗೆ ಈ ದುರಿತ ಕಾಲದಲ್ಲಿ ಹಲವು ದಾರಿಗಳಿವೆ.
ಮುಸ್ಲಿಮರನ್ನು, ಅದರಲ್ಲೂ ಬಂಗಾಳಿ ಗುರುತುಳ್ಳ ಮುಸ್ಲಿಮರನ್ನು ಹೇಗೆ ಹೆಚ್ಚು ಹೆಚ್ಚು ಕಿರುಕುಳಕ್ಕೆ ಒಳಪಡಿಸಲಾಗುತ್ತಿದೆ ಎಂಬುದು ಗೊತ್ತೇ ಇದೆ.
ಒಬ್ಬ ಬಂಗಾಳಿ ಮುಸಲ್ಮಾನನನ್ನು ಥಳಿಸಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬಲವಂತ ಮಾಡಲಾಯಿತು ಎಂಬ ಸುದ್ದಿ ಇದಕ್ಕೊಂದು ತಾಜಾ ಉದಾಹರಣೆ.
ಅಸ್ಸಾಮಿನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರಿಗೆ ಕಿರುಕುಳ ನೀಡಲು ಹೇಗೆ ಅಲ್ಲಿನ ಸರಕಾರವೇ ಆಟವಾಡುತ್ತಿದೆ ಎಂಬುದನ್ನು ನೋಡುತ್ತಿದ್ದೇವೆ.
ಕೆಲ ವರ್ಷಗಳ ಹಿಂದೆ ‘ಕಾಶ್ಮೀರ ಫೈಲ್ಸ್’ ಬಿಡುಗಡೆಯಾದಾಗ, ಅದು ಕೋಟಿಗಟ್ಟಲೆ ದುಡ್ಡು ಬಾಚಿತ್ತು. ಅದರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಿಕ್ಕಾಪಟ್ಟೆ ಮನ್ನಣೆ ಗಳಿಸಿಬಿಟ್ಟರು. ಆದರೆ ಈಗ ಅವರೇ ‘ಬೆಂಗಾಲ್ ಫೈಲ್ಸ್’ ಮಾಡಿದಾಗ, ಜನರು ತಿರಸ್ಕರಿಸಿ ಬಿಸಾಕಿದ್ದಾರೆ.
ಎಲ್ಲ ಕಾಲದಲ್ಲೂ ದ್ವೇಷವನ್ನೇ ಮಾರಿಕೊಂಡು ರಾಜಕೀಯ ಮಾಡಬಹುದು ಎಂಬುದು ಈ ಮೂಲಕ ಸುಳ್ಳಾಗಿದೆ. 2024ರ ಚುನಾವಣೆಯ ನಂತರ ದ್ವೇಷದ ಮಾರುಕಟ್ಟೆ ಬಹುಶಃ ಬಿದ್ದಂತೆ ಕಾಣುತ್ತಿದೆ. ‘ಬೆಂಗಾಲ್ ಫೈಲ್ಸ್’ ಸಿನೆಮಾದ ಈ ವೈಫಲ್ಯ, ಭಾರತದ ಪ್ರಜಾಪ್ರಭುತ್ವದಲ್ಲಿ ಒಂದು ಭರವಸೆಯ ಹಾಗೆ ಕಾಣುತ್ತಿದೆ.
ಆ ಚಿತ್ರದ 3 ನಿಮಿಷಗಳ ಟ್ರೇಲರ್ ಅನ್ನು ನೋಡುವುದು ಕೂಡ ಜಾತ್ಯತೀತ ಮನಸ್ಸುಗಳಿಗೆ ಸಾಧ್ಯವಾಗದ ಸಂಗತಿಯಾಗಿತ್ತು. ಚಿತ್ರದಲ್ಲಿ ಅಷ್ಟೊಂದು ಹಿಂಸೆಯನ್ನು ತೋರಿಸಲಾಗಿತ್ತು. ಅಂತಹ ಸಿನೆಮಾವನ್ನು ಸೆನ್ಸರ್ ಮಂಡಳಿ ಹೇಗೆ ಒಪ್ಪಿ ಮುಂದೆ ಕಳಿಸುತ್ತದೆ ಎಂಬುದೇ ಪ್ರಶ್ನೆ.
‘ಕೇರಳ ಸ್ಟೋರಿ’ ಕೂಡ ಅದೇ ಥರದ್ದಾಗಿತ್ತು. ಹಿಂದೂ-ಮುಸ್ಲಿಮ್ ದ್ವೇಷವನ್ನು ಹರಡುವ ಅನೇಕ ಸಿನೆಮಾಗಳು ಒಂದರ ಹಿಂದೊಂದರಂತೆ ಬರುತ್ತಿವೆ.
ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಅಂಥವರೇ ಈ ಸಿನೆಮಾಗಳ ಪ್ರಮೋಷನ್‌ಗೆ ನಿಂತುಬಿಡುತ್ತಾರೆ. ಹೀಗಿರುವಾಗ, ಬಡಪಾಯಿ ಸೆನ್ಸರ್ ಮಂಡಳಿ ಏನು ಮಾಡೀತು? ಅಷ್ಟಕ್ಕೂ ಅಲ್ಲಿಯೂ ಇರುವವರು ಇವರದೇ ಜನರಲ್ಲವೆ?
‘ಬೆಂಗಾಲ್ ಫೈಲ್ಸ್’ ದೇಶ ವಿಭಜನೆಯ ಸಮಯದ ಕಥೆ. ಇದರಲ್ಲಿ, ಮಹಾತ್ಮಾ ಗಾಂಧಿಯನ್ನು ಸಹ ಅತಿ ಕೆಟ್ಟದಾಗಿ ತೋರಿಸಲಾಗಿದೆ.
ಹಿಂದೂ ಮತ್ತು ಮುಸ್ಲಿಮ್ ಮುಂತಾದ ಪದಗಳನ್ನು ಇದರ ಟ್ರೇಲರ್‌ನಲ್ಲಿಯೇ ಸಾಕಷ್ಟು ಬಳಸಲಾಗಿದೆ. ತುಂಬಾ ಹಿಂಸಾತ್ಮಕ ಮತ್ತು ದ್ವೇಷಪೂರಿತ ಪಾತ್ರಗಳನ್ನು ರಚಿಸಲಾಗಿದೆ. ಇದರಲ್ಲಿ ಜನರಿಗೆ, ಈ ಕಾಲದ ಮುಸ್ಲಿಮರನ್ನು ದ್ವೇಷಿಸಲು ಕಲಿಸಲಾಗುತ್ತಿದೆ.
ಆದ್ದರಿಂದ ಇದು ಆ ಕಾಲದ ಮುಸ್ಲಿಮರ ಮೇಲಿನ ದಾಳಿಯಲ್ಲ. ಆದರೆ, ಸ್ಪಷ್ಟವಾಗಿ ಈ ಕಾಲದ ಬಂಗಾಳಿ ಮುಸ್ಲಿಮರ ಮೇಲಿನ ದಾಳಿಯಾಗಿದೆ.
ಈ ಥರದ ಪ್ರಚಾರ ಬಹಳ ಸಮಯದಿಂದ ನಡೆಯುತ್ತಿದೆ.
ಮೋದಿ ಸರಕಾರ ಬಂದಾಗಿನಿಂದ, 10-12 ವರ್ಷಗಳಿಂದ ಇದು ವ್ಯಾಪಕವಾಗಿ ನಡೆಯುತ್ತಿದೆ. ಇದೆಲ್ಲವೂ ಆರೆಸ್ಸೆಸ್‌ನ ಚಿಂತನೆಯನ್ನೇ ಪ್ರತಿಬಿಂಬಿಸುತ್ತದೆ.
ಕಳೆದ ಕೆಲ ವರ್ಷಗಳಲ್ಲಿ ಸಾವರ್ಕರ್ ಅವರ ಇಮೇಜ್ ಅನ್ನು ಹೆಚ್ಚಿಸುವ ಯತ್ನಗಳು ನಡೆದಿರುವುದನ್ನು ನೋಡಿದ್ದೇವೆ. ಗಾಂಧೀಜಿಯ ಕೊಲೆಗಾರ ಗೋಡ್ಸೆಯನ್ನು ಗೋಡ್ಸೇಜಿ ಎಂದೂ ಕರೆಯಲಾಗುತ್ತಿದೆ.
ಇತಿಹಾಸವನ್ನು ತಿರುಚುವ ಯತ್ನ ನಡೆದೇ ಇದೆ. ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಇತಿಹಾಸವನ್ನು ಒಂದು ಸಾಧನವಾಗಿ ಬಳಸಲಾಗುತ್ತಿದೆ.
ಮತ್ತವರು ಯಾವುದನ್ನೇ ಆದರೂ, ತಮಗೆ ಬೇಕಾದಂತೆ ಇಡೀ ವಿಷಯದಿಂದ ಕತ್ತರಿಸಿ, ಒಂದು ತುಣುಕನ್ನು ಮಾತ್ರ ತೋರಿಸುತ್ತ ಸುಳ್ಳನ್ನು, ದ್ವೇಷವನ್ನು ಹರಡುತ್ತಾರೆ.
‘ಬೆಂಗಾಲ್ ಫೈಲ್ಸ್’ ಚಿತ್ರದಲ್ಲಿ ಅವರ ಗುರಿ ಮುಸ್ಲಿಮ್ ಲೀಗ್ ಅಲ್ಲ. ಅವರ ಉದ್ದೇಶ ಹಿಂದೂಗಳ ದುಃಸ್ಥಿತಿಯನ್ನು ಅಥವಾ ಅವರೊಂದಿಗೆ ನಡೆದ ದೌರ್ಜನ್ಯಗಳನ್ನು ತೋರಿಸುವುದಲ್ಲ. ಇಂದಿನ ಭಾರತದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಒಂದು ಕಂದಕವನ್ನು ಸೃಷ್ಟಿಸುವುದು ಮತ್ತು ಮುಸ್ಲಿಮರನ್ನು ಕೆಟ್ಟವರೆಂದು ಬಿಂಬಿಸುವುದು ಅವರ ಅಸಲೀ ಹುನ್ನಾರ.
ಒಂದು ರೀತಿಯಲ್ಲಿ ಇದನ್ನು ಸೃಜನಶೀಲ ಸ್ವಾತಂತ್ರ್ಯ ಎಂಬಂತೆ ತೋರಿಸಲಾಗುತ್ತಿದೆ.
‘ಕಾಶ್ಮೀರ ಫೈಲ್ಸ್’ ಬಗ್ಗೆ ಜನ ಉನ್ಮಾದಿತರಾಗಿದ್ದರು. ಚಿತ್ರಮಂದಿರಗಳಲ್ಲಿ ‘ವಂದೇ ಮಾತರಂ’ ಹಾಡಲಾಗುತ್ತಿತ್ತು. ಮುಸ್ಲಿಮರ ವಿರುದ್ಧ ಘೋಷಣೆ ಕೂಗಲಾಗುತ್ತಿತ್ತು.
ಕೆಲ ತಿಂಗಳುಗಳ ಹಿಂದೆ ‘ಛಾವಾ’ ಚಿತ್ರದ ಬಗ್ಗೆಯೂ ಜನ ಹೀಗೆಯೇ ಹುಚ್ಚುತನ ತೋರಿಸಿದ್ದರು.ಚಿತ್ರಮಂದಿರಗಳಲ್ಲಿ ‘ಹರ್ ಹರ್ ಮಹಾದೇವ್’ ಜೊತೆಗೆ ಮುಸ್ಲಿಮರ ವಿರುದ್ಧ ಘೋಷಣೆ ಕೂಗಲಾಗುತ್ತಿತ್ತು. ಆದರೆ ಅದೇ ಜನರು ಈಗ ‘ಬೆಂಗಾಲ್ ಫೈಲ್ಸ್’ ಬಗ್ಗೆ ತಿರಸ್ಕಾರ ತೋರಿಸಿದ್ದಾರೆ.
ಆದರೆ, ಇಲ್ಲಿ ಒಂದು ಸಂಗತಿಯನ್ನು ಎಚ್ಚರದಿಂದ ಗಮನಿಸಬೇಕು.
‘ಬೆಂಗಾಲ್ ಫೈಲ್ಸ್’ ಸಿನೆಮಾ ಥಿಯೇಟರುಗಳಲ್ಲಿ ಓಡಲಿಲ್ಲ ಎಂಬುದು ನಿಜ. ಆದರೆ ಅದನ್ನು ಜನರ ಮೇಲೆ ಹೇರುವ ಕೆಲಸ ಮಾತ್ರ ಸತತವಾಗಿ ನಡೆದಿದೆ.
ಆರೆಸ್ಸೆಸ್ ಈ ಸಿನೆಮಾವನ್ನು ಹೊಗಳುತ್ತಿದೆ ಮತ್ತು ಅದರ ಸಣ್ಣ ದೃಶ್ಯಗಳನ್ನು ಹರಡಲಾಗುತ್ತಿದೆ.
ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ, ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಅದನ್ನು ಪರೋಕ್ಷವಾಗಿ ಜನರಿಗೆ ತಲುಪಿಸಲಾಗುತ್ತಿದೆ. ಚಿತ್ರವನ್ನು ನೋಡಲು ಉತ್ತೇಜಿಸಲಾಗುತ್ತಿದೆ.
ಜನರು ದ್ವೇಷಿಸುತ್ತಲೇ ಇರುವಂತೆ ಮಾಡುವುದು ಇಂಥ ಯತ್ನಗಳ ಮೂಲಕ ನಡೆಯುತ್ತದೆ.
ದ್ವೇಷಿಸಿ ಮತ್ತು ಬಿಜೆಪಿಯನ್ನು ಚುನಾವಣೆಯಲ್ಲಿ ಗೆಲ್ಲಿಸುತ್ತಲೇ ಇರಿ ಎಂಬುದು ಇಲ್ಲಿನ ತತ್ವ. ಹಾಗಾಗಿಯೇ, ಬಂಗಾಳದಂಥ ರಾಜ್ಯದಲ್ಲಿ ಟಿಎಂಸಿಯಂಥ ಪಕ್ಷ ಬರೀ ಎದುರಾಳಿ ಪಕ್ಷದೊಂದಿಗೆ ಮಾತ್ರವಲ್ಲ, ಈ ದ್ವೇಷಪೂರಿತ ಪ್ರಚಾರದ ವಿರುದ್ಧವೂ ಹೋರಾಡಬೇಕಾಗುತ್ತದೆ. ಇಂಥ ಸಿನೆಮಾಗಳನ್ನು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ನಿರ್ಮಿಸಲಾಗುತ್ತದೆ.
ಆದರೆ ಇಷ್ಟಾದ ಮೇಲೆಯೂ ಬಿಜೆಪಿ ಸೋಲುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಒಂದರ ನಂತರ ಒಂದರಂತೆ ಚುನಾವಣೆಗಳನ್ನು ಸೋಲುತ್ತಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಆರೆಸ್ಸೆಸ್‌ನ ಬೆಳವಣಿಗೆ ಕಡಿಮೆಯಾಗುತ್ತಿಲ್ಲ.
ಅಲ್ಲಿ ಆರೆಸ್ಸೆಸ್ ಹಲವು ಪಟ್ಟು ಬೆಳೆದಿದೆ. ಪ್ರತೀ ಜಿಲ್ಲೆಯಲ್ಲೂ ಆರೆಸ್ಸೆಸ್ ಶಾಖೆಗಳು, ಶಾಲೆಗಳನ್ನು ಕಾಣಬಹುದು.
ತಳಮಟ್ಟದಲ್ಲಿ ಬಿಜೆಪಿ ಸಂಘಟನೆಯೂ ಬಲವಾಗುತ್ತಲೇ ಹೋಗುತ್ತಿದೆ. ಆದ್ದರಿಂದ, ಇದೊಂದು ದೊಡ್ಡ, ವ್ಯವಸ್ಥಿತ ಯೋಜನೆಯಾಗಿದೆ.
ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂಧು ಅಧಿಕಾರಿಯನ್ನು ನೋಡಿದರೆ, ಅವರು ಹಿಂದೆ ಟಿಎಂಸಿಯವರಾಗಿದ್ದು, ಬಿಜೆಪಿಗೆ ಬಂದವರು.
ಅವರಿಗೆ ಈಗ ಹಿಂದೂ-ಮುಸ್ಲಿಮ್ ಎಂಬುದು ಬಿಟ್ಟರೆ, ಬೇರೆ ಯಾವುದೇ ಸಮಸ್ಯೆಗಳು ಕಾಣಿಸುವುದಿಲ್ಲ.
ಬೆಲೆಯೇರಿಕೆ, ನಿರುದ್ಯೋಗ ಇವೆಲ್ಲವೂ ಪಶ್ಚಿಮ ಬಂಗಾಳದಲ್ಲಿ ಬಹಳ ದೊಡ್ಡ ಸಮಸ್ಯೆಗಳು. ಆದರೆ ಬಿಜೆಪಿ ಮಂದಿಗೆ ಅದಾವುದರ ಚರ್ಚೆಯೂ ಬೇಕಿಲ್ಲ.
‘ಬೆಂಗಾಲ್ ಫೈಲ್ಸ್’ ಸಿನೆಮಾ ‘ಕಾಶ್ಮೀರ ಫೈಲ್ಸ್’ನಂತೆ ಯಶಸ್ವಿಯಾಗಿದ್ದರೆ, ಚುನಾವಣೆ ಮೇಲೆ ಪ್ರಭಾವ ಬಿರುವ ಸಾಧ್ಯತೆ ಇತ್ತು.
ಬಂಗಾಳಿಗಳು ಬುದ್ಧಿವಂತರು. ಅವರು 1946ರ ಗಾಯಗಳನ್ನು ಈಗ, 2025ರಲ್ಲಿ ಕೆದಕಲು ಆವಕಾಶ ಕೊಡುವುದಿಲ್ಲ. ಅದಕ್ಕಾಗಿಯೇ ಈ ಚಿತ್ರ ಕೆಲಸ ಮಾಡಲಿಲ್ಲ ಮತ್ತು ಬಂಗಾಳದಲ್ಲಿ ಬ್ಯಾನ್ ಆಗಿದೆ. ಹಾಗಾಗಿ, ಇದು ಚುನಾವಣೆ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇಲ್ಲ.
ಇಂಥ ಚಿತ್ರಗಳು ಪ್ರೊಪಗಂಡಾ ಚಿತ್ರಗಳು, ರಾಜಕೀಯ ಪಕ್ಷದ ಉದ್ದೇಶ ಪೂರೈಸಿಕೊಳ್ಳುವ ಚಿತ್ರಗಳು ಎಂಬುದನ್ನು ಜನರು ಮೊದಲು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಹಾಗೆ ಜನರು ನಿಜವಾಗಿಯೂ ಅರ್ಥ ಮಾಡಿಕೊಳ್ಳಬಲ್ಲವರಾದಾಗ, ಯಾರದೋ ಮಾತಿಗೆ, ಮುಲಾಜಿಗೆ ಚಪ್ಪಾಳೆ ಹೊಡೆಯದೇ ಇದ್ದಾಗ ‘ಬೆಂಗಾಲ್ ಫೈಲ್ಸ್’ ಥರದ ಆಟ ನಡೆಯುವುದಿಲ್ಲ.
ಆದರೆ ಅದರರ್ಥ ಕೋಮುವಾದ ಇಲ್ಲವಾಗಿದೆ ಅಥವಾ ಸಂಪೂರ್ಣ ಸೋತು ಹೋಗಿದೆ ಎಂದಲ್ಲ. ದ್ವೇಷ, ಸುಳ್ಳು ಹರಡುವ ಒಂದು ಅಸ್ತ್ರ ವಿಫಲವಾಗಿದೆ ಅಷ್ಟೇ.
ಆದರೆ ಅವರ ಬತ್ತಳಿಕೆಯಲ್ಲಿ ಇಂತಹ ನೂರು ಅಸ್ತ್ರಗಳಿವೆ. ಈ ವಿಫಲ ಅಸ್ತ್ರವನ್ನೂ ಅವರು ಹತ್ತಾರು ಬೇರೆ ದಾರಿಗಳಲ್ಲಿ ದೇಶದ ಜನರಿಗೆ ತಲುಪಿಸಬಲ್ಲರು.
ಹಾಗಾಗಿ ಜನತೆ ಮೈಮರೆಯದೆ ಜಾಗರೂಕರಾಗಿರುವುದು ಬಹಳ ಮುಖ್ಯ.