‘3 ಈಡಿಯಟ್ಸ್’ ಖ್ಯಾತಿಯ ಹಿರಿಯ ನಟ ಅಚ್ಯುತ್ ಪೋತ್ದಾರ್ ನಿಧನ

ನಟ ಅಚ್ಯುತ್ ಪೋತ್ದಾರ್ (Photo credit: NDTV)
ಹೊಸದಿಲ್ಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಮರಾಠಿಯ ಜನಪ್ರಿಯ ಹಿರಿಯ ನಟ ಅಚ್ಯುತ್ ಪೋತ್ದಾರ್ ಸೋಮವಾರ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದ ಸಮಸ್ಯೆಯಿಂದ ಥಾಣೆಯ ಜೂಪಿಟರ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಕೊನೆಯುಸಿರೆಳೆದರು. ಆದರೆ, ಸಾವಿಗೆ ಕಾರಣವೇನು ಎಂಬ ವಿಷಯ ಇನ್ನೂ ಬಹಿರಂಗವಾಗಿಲ್ಲ.
ಇಂದು (ಮಂಗಳವಾರ) ಥಾಣೆಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಖಾಸಗಿ ಸುದ್ದಿ ವಾಹಿನಿಯೊಂದರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅವರ ನಿಧನಕ್ಕೆ ಸಂತಾಪದ ಪೋಸ್ಟ್ ಹಂಚಿಕೆಯಾದ ನಂತರ, ಅವರ ಸಾವಿನ ಸುದ್ದಿ ಬೆಳಕಿಗೆ ಬಂದಿದೆ.
ತಮ್ಮ ನಾಲ್ಕು ದಶಕಗಳ ವೃತ್ತಿ ಜೀವನದಲ್ಲಿ 125ಕ್ಕೂ ಹೆಚ್ಚು ಮರಾಠಿ ಹಾಗೂ ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಅಚ್ಯುತ್ ಪೋತ್ದಾರ್, ವಾಣಿಜ್ಯ ಚಲನಚಿತ್ರಗಳು ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದ ಚಿತ್ರಗಳೆರಡರ ನಡುವೆಯೂ ಸಮತೋಲನ ಕಾಯ್ದುಕೊಂಡಿದ್ದರು.
ಆಕ್ರೋಶ್, ಆಲ್ಬರ್ಟ್ ಪಿಂಟೊ ಕೊ ಗುಸ್ಸಾ ಕ್ಯೂಂ ಆತಾ ಹೈ, ಅರ್ಧ್ ಸತ್ಯ, ತೇಝಾಬ್, ಪರಿಂದಾ, ರಾಜು ಬನ್ ಗಯಾ ಜೆಂಟಲ್ ಮನ್, ದಿಲ್ವಾಲೆ, ರಂಗೀಲಾ, ವಾಸ್ತವ್, ಹಮ್ ಸಾಥ್ ಸಾಥ್ ಹೈಂ, ಪರಿಣೀತ, ಲಗೆ ರಹೊ ಮುನ್ನಾ ಭಾಯಿ, ದಬಾಂಗ್ 2 ಹಾಗೂ ವೆಂಟಿಲೇಟರ್ ನಂತರ ಚಿತ್ರಗಳಲ್ಲಿನ ತಮ್ಮ ಅಭಿನಯದಿಂದ ಅವರು ಮನೆ ಮಾತಾಗಿದ್ದರು.
ಆಮಿರ್ ಖಾನ್ ನಾಯಕತ್ವದ ‘3 ಈಡಿಯಟ್ಸ್’ ಚಿತ್ರದಲ್ಲಿ ಪ್ರೊಫೆಸರ್ ಪಾತ್ರ ನಿರ್ವಹಿಸಿದ್ದ ಅಚ್ಯುತ್ ಪೋತ್ದಾರ್, ‘ಕೆಹ್ನ ಕ್ಯಾ ಚಾಹ್ತೆ ಹೋ” ಸಂಭಾಷಣೆಯಿಂದ ಭಾರಿ ಜನಪ್ರಿಯರಾಗಿದ್ದರು.
ಟಿವಿ ಧಾರಾವಾಹಿಗಳಲ್ಲೂ ನಟಿಸಿದ್ದ ಅಚ್ಯುತ್ ಪೋತ್ದಾರ್, ‘ಭಾರತ್ ಏಕ್ ಖೋಜ್, ಆಲ್ ದಿ ಬೆಸ್ಟ್ (ದೂರದರ್ಶನ), ಪ್ರಧಾನ್ ಮಂತ್ರಿ (ಝೀ ಟಿವಿ), ಅಗ್ಲೆ ಜನಂ ಮೊಹೆ ಬಿತಿಯ ಹಿ ಕಿಜೊ (ಝೀ ಟಿವಿ), ಆಹತ್ ಸೀಸನ್ 1 (1995-2001) (ಸೋನಿ ಟಿವಿ), ವಾಗ್ಲೆ ಕಿ ದುನಿಯಾ, ಮಝಾ ಹೋಶಿಲ್ ನಾ (ಝೀ ಮರಾಠಿ) ಧಾರಾವಾಹಿಗಳಲ್ಲಿ ತಮ್ಮದೇ ಆದ ನಟನೆಯಿಂದ ಛಾಪು ಮೂಡಿಸಿದ್ದರು.