ದಾವಣಗೆರೆ | ಖೋಟಾ ನೋಟು ಚಲಾವಣೆ; ನಾಲ್ವರು ಆರೋಪಿಗಳ ಬಂಧನ

ದಾವಣಗೆರೆ : ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ ಪೊಲೀಸರು, 3.75 ಲಕ್ಷ ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೂವಿನ ಹಡಗಲಿ ತಾಲೂಕಿನ ನಡುವಿನ ತಾಂಡದ ಸಂತೋಷಕುಮಾರ (32), ಕೊಟ್ಟೂರು ತಾಲೂಕಿನ ಬೇವೂರು ಗ್ರಾಮದರಾದ ವೀರೇಶ(37), ಹನುಮಂತಪ್ಪ (75) ಹಾಗೂ ದಾವಣಗೆರೆ ತಾಲೂಕಿನ ಕುಕ್ಕವಾಡ ಗ್ರಾಮದ ಕುಬೇರಪ್ಪ (60) ಬಂಧಿತ ಆರೋಪಿಗಳು.
ಚಿರಡೋಣಿ ಗ್ರಾಮದ ಸಪ್ತಗಿರಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಎದುರಿನ ರಸ್ತೆಯಲ್ಲಿ ಇಬ್ಬರು ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಮಂಜುನಾಥ, ಸಹಾಯಕ ಪೊಲೀಸ್ ಅಧೀಕ್ಷಕ ಚನ್ನಗಿರಿ ಉಪ ವಿಭಾಗದ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಸಂತೆಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಬಸವಾಪಟ್ಟಣ ಪೊಲೀಸ್ ಠಾಣೆಯ ಪಿಎಸ್ಸೆ ಇಮ್ತಿಯಾಝ್ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ಚಿರಡೋಣಿ ಗ್ರಾಮದ ಚಿರ ಶಾಂತಿವನದ ಸ್ಮಶಾನ ಹತ್ತಿರ ದೊಡ್ಡಘಟ್ಟ ರಸ್ತೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ 4 ಜನ ಆರೋಪಿಗಳಿಂದ 500 ರೂ. ಹಾಗೂ 200 ರೂ. ಮುಖ ಬೆಲೆಯ ಒಟ್ಟು 3,75,400 ರೂ. ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕುಕ್ಕವಾಡ ಗ್ರಾಮದ ಕುಬೇರಪ್ಪನ ವಿರುದ್ಧ ಈಗಾಗಲೇ ಹರಿಹರ ನಗರದಲ್ಲಿ 1 ಪ್ರಕರಣ, ವಿಜಯನಗರ ಜಿಲ್ಲೆಯ ಹೊಸಪೇಟೆ ನಗರ ಠಾಣೆಯಲ್ಲಿ 1 ಪ್ರಕರಣ, ಮೈಸೂರು ಜಿಲ್ಲೆಯಲ್ಲಿ 1 ಪ್ರಕರಣ ಒಟ್ಟು 3 ಖೋಟಾ ನೋಟು ಪ್ರಕರಣಗಳು ದಾಖಲಾಗಿವೆ.