ಚಿತ್ರದುರ್ಗ| ದಲಿತ ವಿದ್ಯಾರ್ಥಿನಿಯ ಕೊಲೆ ಪ್ರಕರಣ: ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ
ಚಿತ್ರದುರ್ಗ: ಇಲ್ಲಿನ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಆ.18ರಂದು ಸುಟ್ಟ ಸ್ಥಿತಿಯಲ್ಲಿ ಸಿಕ್ಕಿದ ಯುವತಿಯ ಮೃತದೇಹದ ಗುರುತು ಪತ್ತೆ ಮಾಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಬುಧವಾರ ಓರ್ವ ಆರೋಪಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಹಿರಿಯೂರು ತಾಲೂಕಿನ ಕೊವೇರಹಟ್ಟಿ ಗ್ರಾಮದ ದಲಿತ ಕುಟುಂಬದ ವರ್ಷಿತಾ (19) ಮೃತಪಟ್ಟ ಯುವತಿ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಯನ್ನು ಚಿತ್ರದುರ್ಗದ ಕೆಳಗೋಟೆಯ ಚೇತನ್ ಎಂದು ಗುರುತಿಸಲಾಗಿದೆ.
ವರ್ಷಿತಾ ಚಿತ್ರದುರ್ಗದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಆ.18ರಂದು ರಾಷ್ಟ್ರೀಯ ಹೆದ್ದಾರಿ 48ರ ಗೋನೂರು ಗ್ರಾಮದ ಸಮೀಪ ಆಕೆಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತನಿಖೆ ತೀವ್ರಗೊಳಿಸಿದ ಗ್ರಾಮಾಂತರ ಪೊಲೀಸರು, ಆರೋಪಿ ಚೇತನ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು ಎಂದು ತಿಳಿದು ಬಂದಿದೆ.
ವರ್ಷಿತಾ ಮತ್ತು ಚೇತನ್ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕ್ಯಾನ್ಸರ್ ಕಾಯಿಲೆಗೆ ತುತ್ತಾದ ಹಿನ್ನೆಲೆಯಲ್ಲಿ ತನ್ನನ್ನು ಕೈಬಿಟ್ಟು ಬೇರೊಬ್ಬ ಯುವಕನ ಜೊತೆ ಸಂಪರ್ಕ ಬೆಳೆಸಿಕೊಂಡಿದ್ದಳೆಂದು ಕೋಪಗೊಂಡಿದ್ದ ಚೇತನ್, ವರ್ಷಿತಾಳನ್ನು ಗೋನೂರು ಗ್ರಾಮದ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಾಕಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆ
ಹಿರಿಯೂರು ತಾಲೂಕಿನ ಕೊವೇರಹಟ್ಟಿ ಗ್ರಾಮದ ದಲಿತ ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಚಿತ್ರದುರ್ಗ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಿಂದ ಜಿಲ್ಲಾ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಚಿತ್ರದುರ್ಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಖಂಡನೀಯ. ಆರೋಪಿಯನ್ನು ಗಲ್ಲಿಗೇರಿಸಬೇಕು. ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕೆ.ರಾಮಚಂದ್ರ, ಬೆಂಗಳೂರು ವಿಭಾಗ ವಿಭಾಗೀಯ ಅಧ್ಯಕ್ಷ ನರಸಿಂಹಸ್ವಾಮಿ, ದಲಿತ ಹಿರಿಯ ಮುಖಂಡರಾದ ಘಾಟ್ ರವಿ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಆರ್.ಶಿವರಾಜ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಕೆಂಚಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಜಿಲ್ಲಾ ಯುವ ಘಟಕ ಉಪಾಧ್ಯಕ್ಷ ನಿರಂಜನ್, ಹಿರಿಯೂರು ತಾಲೂಕು ಗೌರವಾಧ್ಯಕ್ಷ ದೇವರಾಜ್, ತಾಲೂಕು ಕಾರ್ಯದರ್ಶಿ ತಿಪ್ಪೇಸ್ವಾಮಿ, ದಲಿತ ಮುಖಂಡರಾದ ಗಜ ಹಾಗೂ ಇತರರಿದ್ದರು