17 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ : ಸಚಿವ ಮಧು ಬಂಗಾರಪ್ಪ

ಎಸ್.ಮಧು ಬಂಗಾರಪ್ಪ
ಚಿತ್ರದುರ್ಗ, ಆ.16: ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾದ ತಕ್ಷಣವೇ ಶಾಲಾ ಶಿಕ್ಷಣ ಇಲಾಖೆಗೆ 17 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಲಾಗುವುದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದ್ದಾರೆ.
ಹಿರಿಯೂರು ತಾಲೂಕಿನ ತಾಳವಟ್ಟಿ ಗ್ರಾಮದಲ್ಲಿ ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಹಾಗೂ ನೂತನ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 17 ಸಾವಿರ ಶಿಕ್ಷಕ ನೇಮಕಕ್ಕೆ ಸಂಬಂಧಿಸಿದಂತೆ ಸರಕಾರ ಈಗಾಗಲೇ ಅನುಮೋದನೆ ನೀಡಿದ್ದು, ಈ ಬಾರಿಯ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಹೆಚ್ಚಿನ ಕಾಲಾವಧಿಯನ್ನು ತೆಗೆದುಕೊಳ್ಳದೆ ಕೇವಲ 3ರಿಂದ 4 ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ನಡೆಸಿ, ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಕರಡು ವರದಿ ಸಲ್ಲಿಸಲಾಗಿದ್ದು, ಅದರಲ್ಲಿರುವ ನ್ಯೂನತೆಗಳನ್ನು ಪರಿಶೀಲಿಸಲು ಉಪ ಸಮಿತಿ ರಚನೆ ಮಾಡಿ, ನಂತರ ಅಂತಿಮವಾಗಿ ಅನುಷ್ಠಾನ ಮಾಡಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ನಕಲು ತಡೆಗಟ್ಟುವ ನಿಟ್ಟಿನಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದು, ಮಕ್ಕಳು ಸ್ವಂತ ಶಕ್ತಿ, ಸಾಮಾರ್ಥ್ಯದ ಮೇಲೆ ಉತ್ತೀರ್ಣರಾಗುವ ವ್ಯವಸ್ಥೆಗಾಗಿ ಪರೀಕ್ಷೆ-1, ಪರೀಕ್ಷೆ-2, ಪರೀಕ್ಷೆ-3 ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಸರಕಾರಿ ಶಾಲೆಗಳ ಅಭಿವೃದ್ಧಿ ಕೇವಲ ಸರಕಾರದ ಕರ್ತವ್ಯ ಮಾತ್ರವಲ್ಲದೆ, ಸಾರ್ವಜನಿಕರು, ಗ್ರಾಮಸ್ಥರು, ಶಾಲೆಯಲ್ಲಿ ಓದಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವೈಯಕ್ತಿಕ ಕರ್ತವ್ಯವೂ ಹೌದು. ಶಿಕ್ಷಣಕ್ಕೆ ಒತ್ತು ನೀಡುವುದು ಸಾರ್ವಜನಿಕರ ಸಾಮಾಜಿಕ ಜವಾಬ್ದಾರಿಯಾಗಿದೆ. ಶತಮಾನ ಪೂರೈಸಿರುವ ತಾಳವಟ್ಟಿ ಸರಕಾರಿ ಶಾಲೆಗೆ ಹಳೆಯ ವಿದ್ಯಾರ್ಥಿಗಳ ನೆರವು ಹಾಗೂ ದಾನಿಗಳ ಸಹಾಯದಿಂದ ಉತ್ತಮ ಕಾಯಕಲ್ಪ ನೀಡಿದ್ದು, ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿರುವುದು ಶ್ಲಾಘನೀಯ ಎಂದು ಮಧು ಬಂಗಾರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ತಾಳವಟ್ಟಿ ಗ್ರಾಮದಲ್ಲಿ ವಿಶೇಷವಾದ ಸಂಭ್ರಮ. ಗ್ರಾಮದ ಹಿರಿಯರು ಸೇರಿ ಸುಮಾರು 1 ಕೋಟಿ ರೂ. ಹಾಗೂ ಸರಕಾರದಿಂದ 25 ಲಕ್ಷ ರೂ. ವೆಚ್ಚ ಮಾಡಿ ಶತಮಾನೋತ್ಸವ ಶಾಲಾ ಕಟ್ಟಡವನ್ನು ಉದ್ಘಾಟನೆ ಮಾಡಲಾಗಿದೆ. ಸರಕಾರಿ ಶಾಲೆಗಳಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾದ ಪ್ರತಿಭಾವಂತ ಶಿಕ್ಷಕರಿದ್ದು, ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ, ಸಮವಸ್ತ್ರ, ಶೂ ಸೇರಿದಂತೆ ಹಲವಾರು ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಹಿರಿಯೂರು ವಿಧಾನ ಕ್ಷೇತ್ರದಲ್ಲಿ ಸುಮಾರು 250 ಶಾಲಾ ತರಗತಿ ಕೊಠಡಿಗಳು, 100ಕ್ಕೂ ಹೆಚ್ಚು ಶೌಚಾಲಯ ಹಾಗೂ ಕಾಂಪೌಂಡ್ಗಳ ನಿರ್ಮಾಣಕ್ಕಾಗಿ 30 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಲಾಗಿದೆ. ಶೀಘ್ರದಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಂದಲೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ ಸುಧಾಕರ್, ಸಾರ್ವಜನಿಕ ಪಾಲುಗಾರಿಕೆಯಿಂದ ಶಾಲೆಗಳ ಅಭಿವೃದ್ಧಿಯಾಗಲಿದೆ. ಗ್ರಾಮಸ್ಥರ ಮನವಿಯಂತೆ ಐಮಂಗಲ ಹೋಬಳಿಯ ವ್ಯಾಪ್ತಿಯಲ್ಲಿ ಸುಮಾರು 4 ಎಕರೆ ವಿಸ್ತೀರ್ಣದಲ್ಲಿ ಕ್ರೀಡಾಂಗಣ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ತಾಳವಟ್ಟಿ ಶಾಲೆ ಅನೇಕ ಹಿರಿಯರಿಗೆ ಶಿಕ್ಷಣ ಕೊಡುವುದರಲ್ಲಿ 100 ವರ್ಷಗಳ ದೊಡ್ಡ ಯಶಸ್ಸು ಕಂಡಿದೆ. ಈ ಶಾಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ಹಾಗೂ ಅಗತ್ಯ ಅನುದಾನವನ್ನೂ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಶಾಲಾ ಶಿಕ್ಷಣ ಉಪನಿರ್ದೇಶಕರಾದ ಎಂ.ಆರ್.ಮಂಜುನಾಥ್, ನಾಸಿರುದ್ದೀನ್, ತಹಶೀಲ್ದಾರ್ ಸಿದ್ದೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಶಾಲಾ ಪುನಃಶ್ಚೇತನ ಮತ್ತು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ. ವಿ.ವೀರಭದ್ರಯ್ಯ, ಗೌರವಾಧ್ಯಕ್ಷ ಎ.ಚಂದ್ರಾರೆಡ್ಡಿ, ಕಾರ್ಯಾಧ್ಯಕ್ಷ ಜಲೀಲ್ ಸಾಬ್, ವಿಶ್ವ ಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ನೀಲಕಂಠದೇವ, ಸಮಿತಿಯ ಲಕ್ಷ್ಮೀಕಾಂತ್ ಹಾಗೂ ಇತರರು ಉಪಸ್ಥಿತರಿದ್ದರು.