ಕೊಪ್ಪ ವಸತಿ ಶಾಲೆ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣ

ಚಿಕ್ಕಮಗಳೂರು, ಸೆ.11: ಜಿಲ್ಲೆಯ ಕೊಪ್ಪ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಳೆದ 4 ವರ್ಷಗಳಲ್ಲಿ ಸಂಭವಿಸಿರುವ ವಿದ್ಯಾರ್ಥಿನಿಯರ ಪ್ರತ್ಯೇಕ ಆತ್ಮಹತ್ಯೆ ಪ್ರಕರಣಗಳ ಸಂತ್ರಸ್ತರಿಗೆ ನ್ಯಾಯ ನೀಡುವಲ್ಲಿ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದೆ. ಈ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಬೇಕೆಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಒತ್ತಾಯಿಸಿದ್ದಾರೆ.
ಗುರುವಾರ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾದ ಹಾಸ್ಟೆಲ್ ವಿದ್ಯಾರ್ಥಿನಿಯರ ಸಾವಿಗೆ ಕಾರಣವಾದ ಭ್ರಷ್ಟ ವ್ಯವಸ್ಥೆಯ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಚಳವಳಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಾಲಕಿ ಅಮೂಲ್ಯ ಮತ್ತು ಶಮಿತಾ ಶೈಕ್ಷಣಿಕ ಸಾಧನೆಯ ಕನಸು ಹೊತ್ತು ಬಂದ ಮಕ್ಕಳಾಗಿದ್ದಾರೆ. ಹಾಸ್ಟೆಲ್ ಅವ್ಯವಸ್ಥೆ, ಭ್ರಷ್ಟ ಅಧಿಕಾರಿ, ಸಿಬ್ಬಂದಿಯಿಂದಾಗಿ ಬಡ ಕುಟುಂಬಗಳ ವಿದ್ಯಾರ್ಥಿನಿಯರು ಸಾವಿಗೀಡಾಗಿದ್ದಾರೆ. ಈ ಕುಟುಂಬಗಳಿಗೆ ನ್ಯಾಯ ನೀಡಬೇಕಿದ್ದ ಸರಕಾರ ಮತ್ತು ಪೊಲೀಸ್ ಇಲಾಖೆ ಇದುವರೆಗೂ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ನೀಡದೇ ಅನ್ಯಾಯ ಮಾಡಿದೆ ಎಂದು ದೂರಿದರು.
ಕೊಪ್ಪಪಟ್ಟಣದಲ್ಲಿನ ಹಾಸ್ಟೆಲ್ ವಿದ್ಯಾರ್ಥಿನಿಯ ಸಾವಾದಾಗ ಮುಂದಿನ ಒಂದೂವರೆ ತಿಂಗಳಲ್ಲಿ ನ್ಯಾಯ ಸಿಗದಿದ್ದರೆ ಹೋರಾಟ ರೂಪಿಸುವುದಾಗಿ ಭಾಷಣ ಮಾಡಿದವರು ಈಗ ನಾಪತ್ತೆಯಾಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಬಿ ರಿಪೋರ್ಟ್ ಹಾಕಿದ್ದು, ಈ ವರದಿಯನ್ನು ನಾವು ಒಪ್ಪುವುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಟಮುಂದುವರಿಯಲಿದೆ ಎಂದ ಅವರು, ಈ ಪ್ರಕರಣಗಳ ತನಿಖೆಗೆ ರಾಜ್ಯ ಸರಕಾರ ಕೂಡಲೇ ಎಸ್‌ಐಟಿ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಬಂದ್‌ಗೆ ಉತ್ತಮ ಪ್ರತಿಕ್ರಿಯೆ: ಬಾಲಕಿಯರ ಸಾವಿನ ತನಿಖೆಗೆ ಆಗ್ರಹಿಸಿ ಸಮಿತಿ ಗುರುವಾರ ಪಟ್ಟಣ ಬಂದ್‌ಗೆ ಕರೆ ನೀಡಿದ್ದು, ಈ ಕರೆಗೆ ಪಟ್ಟಣದ ವರ್ತಕರು ಮತ್ತು ಹೊಟೇಲ್ ಮಾಲಕರು ಸ್ವಯಂಪ್ರೇರಿತ ಬಂದ್‌ಗೆ ಸಹಕಾರ ನೀಡಿದ್ದರು. ಧರಣಿಗೂ ಮುನ್ನ ಧರಣಿ ನಿರತರು ಕೊಪ್ಪ ಪಟ್ಟಣದ ಪುರಭವನದಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದರು.
ಜಿಪಂ ಮಾಜಿ ಸದಸ್ಯ ರಾಮಸ್ವಾಮಿ, ಮುಖಂಡರಾದ ಅಜಿತ್ ಬಕ್ಕಿ, ರವೀಂದ್ರ, ಶೃಂಗೇಶ್ ಮತ್ತಿತರರು ಧರಣಿ ನೇತೃತ್ವ ವಹಿಸಿದ್ದರು.