ಕೊಪ್ಪ | ʼನೋ ಪಾರ್ಕಿಂಗ್ʼ ಸ್ಥಳದಲ್ಲಿ ವಾಹನ ನಿಲುಗಡೆ : ಪೊಲೀಸ್ ಇಲಾಖೆ ವಾಹನಕ್ಕೆ ಪೊಲೀಸರಿಂದಲೇ ದಂಡ

ಚಿಕ್ಕಮಗಳೂರು, ಆ.28 : ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಒಂದು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತೊಂದು ತಾಲೂಕಿನ ಪೊಲೀಸ್ ಠಾಣೆಯ ವಾಹನಕ್ಕೆ ದಂಡ ವಿದಿಸಿದ ಸ್ವಾರಸ್ಯಕಾರಿ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಗುರುವಾರ ವರದಿಯಾಗಿದೆ.
ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಪೊಲೀಸ್ ಠಾಣೆಯ ಪೊಲೀಸ್ ಜೀಪ್‍ಗೆ ನೆರೆಯ ಕೊಪ್ಪ ತಾಲೂಕಿನ ಪೊಲೀಸರು ದಂಡ ವಿಧಿಸಿದ್ದು, ಕೊಪ್ಪ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಜಿಲ್ಲೆಯ ನರಸಿಂಹರಾಜಪುರ ಪೊಲೀಸ್ ಠಾಣೆಯ ಪೊಲೀಸ್ ಜೀಪ್ ಗುರುವಾರ ಕಾರ್ಯನಿಮಿತ್ತ ಕೊಪ್ಪ ಪಟ್ಟಣಕ್ಕೆ ಬಂದಿದ್ದು, ಪೊಲೀಸ್ ಇಲಾಖೆ ಸಿಬ್ಬಂದಿ ಪೊಲೀಸ್ ಇಲಾಖೆ ವಾಹನವನ್ನು ಕೊಪ್ಪ ಪಟ್ಟಣದ ಬಸ್ ನಿಲ್ದಾಣ ಸಮೀಪದ ʼನೋ ಪಾರ್ಕಿಂಗ್ʼ ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದರು. ಇದನ್ನು ಕಂಡ ಕೊಪ್ಪ ಪೊಲೀಸ್ ಸಿಬ್ಬಂದಿ ಮೊದಲಿಗೆ ನರಸಿಂಹರಾಜಪುರ ಪೊಲೀಸ್ ಠಾಣೆಯ ವಾಹನದ ಚಕ್ರಗಳನ್ನು ಲಾಕ್ ಮಾಡಿದ್ದರು. ನಂತರ ಠಾಣಾಧಿಕಾರಿ ಬಸವರಾಜು ಅವರು ʼನೋ ಪಾರ್ಕಿಂಗ್ʼ ಸ್ಥಳದಲ್ಲಿ ವಾಹನ ನಿಲ್ಲಿಸಿ ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ 500 ರೂ. ದಂಡ ವಿಧಿಸಿದ್ದಾರೆ.
ಪೊಲೀಸ್ ಜೀಪ್‍ಗೆ ಪೊಲೀಸರೇ ದಂಡ ವಿಧಿಸಿದ ದಂಡದ ಶುಲ್ಕದ ರಶೀದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.