ನಿರ್ವಹಣೆ ಇಲ್ಲದೆ ಸೊರಗುತ್ತಿದೆ ದುಗ್ಗಪ್ಪನಕಟ್ಟೆ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ

ಚಿಕ್ಕಮಗಳೂರು: ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಆರಂಭಿಸಿರುವ ಕಳಸ ಪಟ್ಟಣಕ್ಕೆ ಹೊಂದಿಕೊಂಡಿರುವ ದುಗ್ಗಪ್ಪನಕಟ್ಟೆ ಸಸ್ಯೋದ್ಯಾನ ಗ್ರಾಮ ಅರಣ್ಯ ಸಮಿತಿಯ ದಿವ್ಯ ನಿರ್ಲಕ್ಷ್ಯದಿಂದಾಗಿ ಪಾಳುಬಿದ್ದ ಕೊಂಪೆಯಂತಾಗಿದೆ. ಈ ಪ್ರವಾಸಿ ಕೇಂದ್ರ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದರೂ ಸಂಬಂಧಿಸಿದ ಇಲಾಖೆಗಳು, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು, ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿರುವ ನಾಡಿನ ಪ್ರಮುಖ ಪ್ರವಾಸಿ ಕೇಂದ್ರವಾಗಿದ್ದು, ಜಿಲ್ಲೆಯ ಅಪ್ಪಟ ಮಲೆನಾಡು ಭಾಗವಾಗಿರುವ ಕಳಸ ತಾಲೂಕು ರಮಣೀಯ ಗಿರಿಶ್ರೇಣಿಗಳು, ಅಪರೂಪದ ಜೀವವೈವಿಧ್ಯತೆಯ ಬೀಡಾಗಿದೆ. ಕಳಸ ಪಟ್ಟಣಕ್ಕೆ ಹೊಂದಿಕೊಂಡಂತಿರುವ ದುಗ್ಗಪ್ಪನಕಟ್ಟೆ ಹೆಸರಿನ ಹಚ್ಚ ಹಸಿರಿನ ಬೆಟ್ಟ ಕಳಸ ಪಟ್ಟಣದ ಆಕರ್ಷಣೆಯಾಗಿದೆ.
ಇಂತಹ ರಮಣೀಯ ಸೊಬಗಿನ ದುಗ್ಗಪ್ಪನಕಟ್ಟೆ ಸದ್ಯ ಗ್ರಾಮ ಅರಣ್ಯ ಸಮಿತಿಯ ದಿವ್ಯ ನಿರ್ಲಕ್ಷ್ಯದಿಂದಾಗಿ ಪಾಳು ಬಿದ್ದ ಕೊಂಪೆಯಾಗಿದ್ದು, ಕುಡುಕರು, ಇಸ್ಪೀಟ್ ಜೂಜುಕೋರರ ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ವಿಪರ್ಯಾಸ ಸಂಗತಿ ಎಂದರೆ, ಗ್ರಾಮ ಅರಣ್ಯ ಸಮಿತಿಯಿಂದ ದುಗ್ಗಪ್ಪನ ಕಟ್ಟೆ ಬೆಟ್ಟದ ಸಂಪರ್ಕ ರಸ್ತೆಯ ಆರಂಭದಲ್ಲಿ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಸಸ್ಯೋದ್ಯಾನವೊಂದನ್ನು ಲಕ್ಷಾಂತರ ರೂ. ಅನುದಾನ ವ್ಯಯಿಸಿ ನಿರ್ಮಿಸಿದೆ. ಅಲ್ಲದೇ ಉದ್ಯಾನದ ಆವರಣದಲ್ಲೇ ಅಂಗನವಾಡಿ ಕೇಂದ್ರವೊಂದನ್ನೂ ಆರಂಭಿಸಲಾಗಿದೆ, ಆದರೆ ನಿರ್ವಹಣೆ ಕೊರತೆ ಹಾಗೂ ಸ್ಥಳೀಯ ಆಡಳಿತದ ಬೇಜವಾಬ್ದಾರಿಯಿಂದಾಗಿ ಸಾಲು ಮರದ ತಿಮ್ಮಕ್ಕನ ಹೆಸರಿನ ಸಸ್ಯೋದ್ಯಾನ ಕೂಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಪರಿಸರ ಪ್ರಿಯರು ಆರೋಪಿಸುತ್ತಿದ್ದಾರೆ.
ಹೆಸರಿಗೆ ಸಸ್ಯೋದ್ಯಾನವಾಗಿದ್ದರೂ ನಿರ್ವಹಣೆ ಇಲ್ಲದೆ ಸೊರಗಿರುವ ಈ ಪ್ರವಾಸಿ ಕೇಂದ್ರ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. ಸಸ್ಯೋದ್ಯಾನ ಹಾಗೂ ಇಡೀ ಬೆಟ್ಟದ ತುಂಬೆಲ್ಲ ಇಸ್ಪೀಟ್ ಕಾರ್ಡ್ಗಳು, ಬಿಯರ್ ಹಾಗೂ ಮದ್ಯದ ಬಾಟಲಿಗಳು ಎಲ್ಲೆಂದರಲ್ಲಿ ಹರಡಿಕೊಂಡು ಬಿದ್ದಿವೆ. ಬೆಟ್ಟದ ಸೊಬಗು ಸವಿಯಲು ಬೆಟ್ಟ ಏರುವವರಿಗೆ ಹೆಜ್ಜೆಹೆಜ್ಜೆಗೂ ಮದ್ಯದ ಬಾಟಲಿಗಳ ರಾಶಿ ಕಾಣುತ್ತಿವೆ. ಬೆಟ್ಟದ ಅಲ್ಲಲ್ಲಿ ವಿಹಾರಕ್ಕೆ ಬರುವವರ ವಿಶ್ರಾಂತಿಗಾಗಿ ಹಾಕಿರುವ ಸಿಮೆಂಟ್ ಆಸನಗಳು ನಿರ್ವಹಣೆ ಇಲ್ಲದೆ ಪೊದೆಗಳು, ಗಿಡಗಂಟಿಗಳಿಂದ ಆವರಿಸಿಕೊಂಡಿದ್ದು, ಹಾವು, ಚೇಳುಗಳ ಆಶ್ರಯ ತಾಣದಂತಾಗಿವೆ. ಮಳೆ, ಗಾಳಿ ಬಿಸಿಲಿಗೆ ಸಿಲುಕಿ ಆಸನಗಳು ಮುರಿದು ಬಿದ್ದಿದ್ದರೂ ದುರಸ್ತಿ ಮರೀಚಿಕೆಯಾಗಿದೆ.
ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದ ಆವರಣದಲ್ಲಿ ಅಂಗನವಾಡಿ ಕೇಂದ್ರವಿದ್ದು, ಇದಕ್ಕೆ ಹೊಂದಿಕೊಂಡಂತೆ ಮಕ್ಕಳ ವಿವಿಧ ಆಟಿಕೆಗಳಿವೆ, ಆದರೆ ಸೂಕ್ತ ನಿರ್ವಹಣೆ ಇಲ್ಲದೇ ಈ ಆಟಿಕೆಗಳೂ ಶಿಥಿಲಾವಸ್ಥೆಯ ಹಂತಕ್ಕೆ ತಲುಪಿವೆ. ಆವರಣದಲ್ಲಿರುವ ಶೌಚಾಲಯವೂ ದುಸ್ಥಿತಿಯಲ್ಲಿದ್ದು, ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.
ದುಗ್ಗಪ್ಪನಕಟ್ಟೆ ಬೆಟ್ಟದ ಆವರಣದಲ್ಲಿ ಕಳಸ ಪಟ್ಟಣಕ್ಕೆ ಹೊನ್ನೇಕಾಡು ನೀರು ಪೂರೈಕೆ ಮಾಡುವ ನೀರು ಸಂಸ್ಕರಣ ಘಟಕವನ್ನು ಕೋಟ್ಯಂತರ ರೂ. ಅನುದಾನ ಬಳಸಿ ನಿರ್ಮಿಸಲಾಗಿದೆ. ಆದರೆ ಇದುವರೆಗೂ ಈ ನೀರಿನ ಘಟಕಕ್ಕೆ ಹೊನ್ನೇಕಾಡು ನೀರು ಇನ್ನೂ ಬಾರದ ಪರಿಣಾಮ ನೀರು ಸಂಸ್ಕರಣ ಘಟಕವೂ ಪಾಳುಬಿದ್ದಿದೆ. ಈ ಯೋಜನೆಗಾಗಿ ವ್ಯಯಿಸಿದ ಕೋಟ್ಯಂತರ ರೂ. ಅನುದಾನ ಮಣ್ಣುಪಾಲಾದಂತಾಗಿದೆ. ಸಸ್ಯೋದ್ಯಾನದಿಂದ ದುಗ್ಗಪ್ಪನಕಟ್ಟೆ ಬೆಟ್ಟದ ತುದಿಯವರೆಗೆ ಹೋಗಲು ರಸ್ತೆ ಇದೆಯಾದರೂ ರಸ್ತೆಯನ್ನೂ ನಿರ್ವಹಣೆ ಮಾಡದಿರುವ ಪರಿಣಾಮ ರಸ್ತೆ ಪೊದೆಗಳ ನಡುವೆ ಕಳೆದು ಹೋಗಿದೆ. ಸುಂದರ ಪರಿಸರದ ಆವರಣ ಹೀಗೆ ಅವ್ಯವಸ್ಥೆಯ ಆಗರವಾಗಿರುವುದರಿಂದ ಮಹಿಳೆಯರು, ಮಕ್ಕಳೂ ಸೇರಿದಂತೆ ಪರಿಸರ ಪ್ರಿಯರು ಈ ಬೆಟ್ಟದತ್ತ ಮುಖ ಮಾಡಲು ಹಿಂಜರಿಯುವಂತಾಗಿದೆ. ಇನ್ನಾದರೂ ದುಗ್ಗಪ್ಪನಕಟ್ಟೆ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದ ಸೂಕ್ತ ನಿರ್ವಹಣೆ, ಸಂರಕ್ಷಣೆಗೆ ಕ್ರಮವಹಿಸಬೇಕೆಂದು ಸ್ಥಳೀಯ ನಾಗರಿಕರು ಆಗ್ರಹಿಸುತ್ತಿದ್ದಾರೆ.
ದುಗ್ಗಪ್ಪನ ಕಟ್ಟೆ ಐತಿಹಾಸಿಕವಾದ ಪ್ರವಾಸಿ ತಾಣವಾಗಿದೆ. ಆದರೆ ಸ್ಥಳೀಯ ಗ್ರಾಮ ಅರಣ್ಯ ಸಮಿತಿ, ಸ್ಥಳೀಯ ಆಡಳಿತ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಇದರ ನಿರ್ವಹಣೆಗೆ ನಿರ್ಲಕ್ಷ್ಯ ವಹಿಸಿರುವುದರಿಂದ ದುಗ್ಗಪ್ಪನ ಕಟ್ಟೆ ಬೆಟ್ಟ ಸದ್ಯ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿನ ಆವರಣದಲ್ಲಿ ಸಾಲು ಮರದ ತಿಮ್ಮಕ್ಕನ ಹೆಸರನ್ನಿಟ್ಟು ಸಸ್ಯೋದ್ಯಾನ ನಿರ್ಮಿಸಲಾಗಿದೆ, ಆದರೆ ಸಂಬಂಧಿಸಿದವರ ನಿರ್ಲಕ್ಷ್ಯದಿಂದಾಗಿ ಸಸ್ಯೋದ್ಯಾನ ಪಾಳುಬಿದ್ದ ಕೊಂಪೆ ಯಂತಾಗಿದೆ. ಇದು ಸಾಲು ಮರದ ತಿಮ್ಮಕ್ಕನ ಹೆಸರಿಗೆ ಮಾಡುವ ಅಪಮಾನವಾಗಿದೆ. ಸಂಬಂಧಿಸಿದ ಇಲಾಖೆಗಳು ದುಗ್ಗಪ್ಪನಕಟ್ಟೆ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದ ಸಂರಕ್ಷಣೆ ಹಾಗೂ ಸೂಕ್ತ ನಿರ್ವಹಣೆಗೆ ಕ್ರಮವಹಿಸಬೇಕು.
ಜಗದೀಶ್ ಭಟ್, ಸ್ಥಳೀಯ ದೇವಾಲಯ ಅರ್ಚಕ