ಚಿಕ್ಕಮಗಳೂರು: ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆ

ಚಿಕ್ಕಮಗಳೂರು: ಜಿಲ್ಲೆಯ ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ ದಾಸರಹಳ್ಳಿ ಗ್ರಾಮದ ಸ್ಮಶಾನದ ಹಳ್ಳದಲ್ಲಿ ಸ್ನೇಹಿತನನ್ನು ರಕ್ಷಣೆ ಮಾಡಲು ಹೋಗಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಶುಕ್ರವಾರ ಪತ್ತೆಯಾಗಿದೆ.
ಕಳೆದ ಬುಧವಾರ ಸಂಜೆ ದಾಸರಹಳ್ಳಿ ಗ್ರಾಮದ ಯತೀಶ್ (25) ತನ್ನ ಸ್ನೇಹಿತನೊಂದಿಗೆ ಬೈಕ್‍ನಲ್ಲಿ ರಸ್ತೆ ಮೇಲೆ ತುಂಬಿ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಹೋಗುತ್ತಿದ್ದ ವೇಳೆ ಬೈಕ್ ಸವಾರ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದ. ಈ ವೇಳೆ ಜೊತೆಯಲ್ಲಿದ್ದ ಯತೀಶ್ ಸ್ನೇಹಿತನನ್ನು ರಕ್ಷಣೆ ಮಾಡಲು ಹೋಗಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಯತೀಶ್ ಸ್ನೇಹಿತ ಪ್ರಾಣಾಪಾಯದಿಂದ ಪಾರಾಗಿದ್ದ.
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯತೀಶ್ ಕಳೆದ ಬುಧವಾರದಿಂದ ನಾಪತ್ತೆಯಾಗಿದ್ದು, ಯತೀಶ್‍ಗಾಗಿ ಸ್ಥಳೀಯರೂ ಸೇರಿದಂತೆ ಸಖರಾಯಪಟ್ಟಣ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಮಿತಿಯ ಫಿಶ್ ಮೋನು ಹಾಗೂ ಸಮಿತಿ ಸದಸ್ಯರು ಕಳೆದ ಎರಡು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸಿದ್ದರು. ಶುಕ್ರವಾರ ಮಧ್ಯಾಹ್ನ ಯತೀಶ್ ಮೃತದೇಹ ಹಳ್ಳದಲ್ಲಿ ಪತ್ತೆಯಾಗಿದೆ.