ಹಾಸನ ಅಪಘಾತ : ಚಿಕ್ಕಮಗಳೂರು ಮೂಲದ ಇಂಜಿನಿಯರ್ ವಿದ್ಯಾರ್ಥಿ ಬಲಿ

ಚಿಕ್ಕಮಗಳೂರು, ಸೆ.13: ನೆರೆಯ ಹಾಸನ ಜಿಲ್ಲೆಯ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಣಪತಿ ವಿಸರ್ಜನೆ ವೇಳೆ ಸಂಭವಿಸಿದ ಅಪಘಾತದಲ್ಲಿ ಕಾಫಿನಾಡು ಮೂಲದ ಸುರೇಶ್(19) ಎಂಬ ಇಂಜಿನಿಯರ್ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಣೇನಗಳ್ಳಿ ಗ್ರಾಮದ ಲಕ್ಷ್ಮೀ ಹಾಗೂ ರಮೇಶ್ ದಂಪತಿಯ ಇಬ್ಬರು ಮಕ್ಕಳಲ್ಲಿ ಸುರೇಶ್ ಹಿರಿಯ ಮಗನಾಗಿದ್ದ. ಪೋಷಕರು ಮತ್ತು ಸಹೋದರನ ಕೂಲಿ ಹಣದಿಂದಲೇ ಇಂಜಿನಿಯರ್ ಓದುತ್ತಿದ್ದ ಸುರೇಶ್ ಹಾಸನ ನಗರದ ಹಾಸ್ಟೆಲೊಂದರಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದ.
ಶುಕ್ರವಾರ ರಾತ್ರಿ ಹಾಸ್ಟೆಲ್ ಸಮೀಪ ಗಣಪತಿ ಮೂರ್ತಿಯ ಮೆರವಣಿಗೆ ತೆರಳುತ್ತಿದ್ದ ವೇಳೆ ಅತೀ ವೇಗದಲ್ಲಿ ಬಂದ ಲಾರಿ ಢಿಕ್ಕಿಯಾಗಿ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದ. ಶುಕ್ರವಾರ ರಾತ್ರಿಯೇ ಸುರೇಶ್ ಮೃತದೇಹವನ್ನು ಸ್ವಗ್ರಾಮಕ್ಕೆ ತರಲಾಗಿದ್ದು, ಶನಿವಾರ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು
Next Story