ಕಲುಷಿತ ಆಹಾರ ಸೇವನೆಯಿಂದ ವಿದ್ಯಾರ್ಥಿನಿಯರು ಅಸ್ವಸ್ಥರಾಗಿಲ್ಲ : ಸಮಾಜ ಕಲ್ಯಾಣ ಇಲಾಖೆ ಡಿಡಿ ಸ್ಪಷ್ಟನೆ

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಆ.10: ನಗರದಲ್ಲಿರುವ ಆಲ್ದೂರು ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ಶನಿವಾರ ಅಸ್ಪಸ್ಥರಾಗಿದ್ದ ಎಲ್ಲ ವಿದ್ಯಾರ್ಥಿನಿಯರು ಗುಣಮುಖರಾಗಿದ್ದು, ಅಂದು ಸಂಜೆ ಇಬ್ಬರು ವಿದ್ಯಾರ್ಥಿನಿಯರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಓರ್ವ ವಿದ್ಯಾರ್ಥಿನಿ ರವಿವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲಿನಿ ವಾರ್ತಾಭಾರತಿಗೆ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಬೆಳಗ್ಗೆ ಹಾಸ್ಟೆಲ್ನ 221 ಮಕ್ಕಳು ಪುಳಿಯೊಗರೆ ಸೇವಿಸಿದ್ದು, ಮೂವರು ಮಕ್ಕಳು ಮಾತ್ರ ವಾಂತಿ ಮಾಡಿಕೊಂಡಿದ್ದಾರೆ. ಕೂಡಲೇ ವಿದ್ಯಾರ್ಥಿನಿಯರನ್ನು ಜಿಲ್ಲಾಸ್ಪತ್ರೆಗೆ ಕರೆ ತಂದು ಸಿಬ್ಬಂದಿ ಚಿಕಿತ್ಸೆ ಕೊಡಿಸಿದ್ದಾರೆ. ಓರ್ವ ವಿದ್ಯಾರ್ಥಿನಿಗೆ ಕೈ ಬೆರಳು ಹಿಡಿದುಕೊಂಡಿದ್ದು, ಇದಕ್ಕೆ ಕಾಲ್ಸಿಯಂ ಕೊರತೆಯಾಗಿರುವ ಕಾರಣವನ್ನು ವೈದ್ಯರು ನೀಡಿದ್ದಾರೆ. ಚಿಕಿತ್ಸೆ ಬಳಿಕ ಎಲ್ಲ ವಿದ್ಯಾರ್ಥಿನಿಯರು ಗುಣಮುಖರಾಗಿದ್ದು, ಇಬ್ಬರು ಶನಿವಾರ ರಾತ್ರಿಯೇ ಪೋಷಕರೊಂದಿಗೆ ತೆರಳಿದ್ದರೆ, ಓರ್ವ ವಿದ್ಯಾರ್ಥಿನಿ ರವಿವಾರ ಬೆಳಗ್ಗೆ ಪೋಷಕರೊಂದಿಗೆ ತೆರಳಿದ್ದಾಳೆ ಎಂದು ತಿಳಿಸಿದ್ದಾರೆ.
ವಸತಿ ನಿಲಯದಲ್ಲಿ ಪುಳಿಯೊಗರೆ ಸೇವಿಸಿದ್ದ ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ. 25 ಮಕ್ಕಳು ಅಸ್ವಸ್ಥ, ನಾಲ್ವರ ಸ್ಥಿತಿ ಗಂಭೀರ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇದು ಸತ್ಯಕ್ಕೆ ದೂರವಾದ ಸುದ್ದಿಯಾಗಿದೆ. ವಸತಿ ನಿಲಯದ ಎಲ್ಲ ವಿದ್ಯಾರ್ಥಿನಿಯರು ಆರೋಗ್ಯವಾಗಿದ್ದಾರೆ. ಕಲುಷಿತ ಆಹಾರ ಸೇವನೆಯಿಂದ ವಿದ್ಯಾರ್ಥಿನಿಯರು ಅಸ್ಪಸ್ಥರಾಗಿಲ್ಲ. ಹಾಸ್ಟೆಲ್ನಲ್ಲಿ ಉತ್ತಮ ಆಹಾರ ನೀಡಲಾಗುತ್ತಿದೆ ಎಂದು ತಿಳಿಸಿರುವ ಅವರು, ನಗರದಲ್ಲಿ ಸದ್ಯ ಇರುವ ವಸತಿ ನಿಲಯದಲ್ಲಿ ಕೆಲ ಸಮಸ್ಯೆಗಳಿದ್ದು, ಈ ಕಾರಣದಿಂದಾಗಿ ವಸತಿ ನಿಲಯವನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಈಗಾಗಲೇ ಕ್ರಮವಹಿಸಲಾಗಿದೆ ಎಂದು ಅವರು ವಾರ್ತಾಭಾರತಿಗೆ ತಿಳಿಸಿದ್ದಾರೆ.