ಕೊಳ್ಳೆಕೋರರಿಂದ ಕಿತ್ತುಕೊಳ್ಳುವ ತನಕ ಪ್ರಭುತ್ವ ನಮ್ಮದಾಗದು

ಭಾಗ- 3
ಬಡವರು ಮತ್ತು ಶ್ರೀಮಂತರು ಎಂಬ ಅತಿ ಸರಳೀಕೃತ ನಿರೂಪಣೆಯನ್ನು ಬದಿಗಿಟ್ಟು ತುಸು ಆಳಕ್ಕೆ ಹೋಗಿ ಇಣುಕಿದರೆ, ಸಂಪತ್ತನ್ನು ಕೆಲವೇ ಕೈಗಳಲ್ಲಿ ಕೇಂದ್ರೀಕರಿಸುವ ಹಾಗೂ ಸಮತೋಲನವನ್ನು ನಾಶಮಾಡಿ, ಏಕಸ್ವಾಮ್ಯವನ್ನು ಹೇರುವ ಪ್ರಕ್ರಿಯೆಯ ಮತ್ತಷ್ಟು ಆಘಾತಕಾರಿ ಆಯಾಮಗಳು ಕಾಣಿಸತೊಡಗುತ್ತವೆ.
ಫೋರ್ಬ್ಸ್ ವರದಿಯಂತೆ, ಬಿಲಿಯನೇರ್ ಗಳು (ಶತಕೋಟಿ ಡಾಲರ್ ಗಿಂತ ಅಧಿಕ ಸಂಪತ್ತಿರುವವರು) ಅತ್ಯಧಿಕ ಸಂಖ್ಯೆಯಲ್ಲಿರುವ ದೇಶಗಳ ಪಟ್ಟಿಯಲ್ಲಿ ಯುಎಸ್ ಮತ್ತು ಚೀನಾದ ಬಳಿಕ ಭಾರತವೇ ಪ್ರಥಮ ಸ್ಥಾನದಲ್ಲಿದೆ. 1990 ರಲ್ಲಿ ಭಾರತದಲ್ಲಿ ಒಬ್ಬ ಬಿಲಿಯನೇರ್ ಮಾತ್ರ ಇದ್ದರು. 2022 ರಲ್ಲಿ ಅವರ ಸಂಖ್ಯೆ 162 ಕ್ಕೆ ತಲುಪಿತು. 2024 ರಲ್ಲಿ ಈ ಸಂಖ್ಯೆ 185 ಕ್ಕೇರಿತು. 2025 ಮಾರ್ಚ್ ನಲ್ಲಿ ಈ ಸಂಖ್ಯೆ 284 ಕ್ಕೇರಿದೆ. 2015 ಕ್ಕೆ ಹೋಲಿಸಿದರೆ ಈ ಬಿಲಿಯನೇರ್‌ಗಳ ಸಂಖ್ಯೆಯಲ್ಲಿ 123 ಶೇ. ಹೆಚ್ಚಳವಾಗಿದೆ. ಕುಬೇರರ ಸಂಖ್ಯೆ ಇದೇ ಗತಿಯಲ್ಲಿ ಹೆಚ್ಚುತ್ತಲಿದ್ದರೆ ಒಂದು ದಿನ ನಾವು ಕೂಡಾ ಆ ವಲಯಕ್ಕೆ ಭಡ್ತಿ ಪಡೆಯಲಿದ್ದೇವೆ ಎಂದು ಜನಸಾಮಾನ್ಯರು ಯಾರೂ ಕನವರಿಸಬೇಕಾಗಿಲ್ಲ.
ಏಕೆಂದರೆ ನಮ್ಮ ವ್ಯವಸ್ಥೆಯು ಶ್ರೀಮಂತರ ಶ್ರೀಮಂತಿಕೆಯನ್ನು ಹೆಚ್ಚಿಸುವುದಕ್ಕಾಗಿ ರೂಪಿತವಾಗಿದೆಯೇ ಹೊರತು ಬಡವರನ್ನು ಶ್ರೀಮಂತರಾಗಿಸುವುದಕ್ಕಾಗಿ ರೂಪಿತವಾಗಿಲ್ಲ. ಬಡವರ ಪಾಲಿಗೆ ಇನ್ನಷ್ಟು ಆಕ್ರೋಶದಾಯಕ ಮಾಹಿತಿಯೇನೆಂದರೆ, ಪ್ರಚಲಿತ ವ್ಯವಸ್ಥೆಯು, ಬಡವರನ್ನು ಅವರ ಪಾಡಿಗೆ ಬಿಡುವುದಕ್ಕೂ ತಯಾರಿಲ್ಲ. ಅದು, ಬಡವರನ್ನು ಮತ್ತಷ್ಟು ಬಡವರಾಗಿಸಿ ಶ್ರೀಮಂತರ ಬೊಕ್ಕಸವನ್ನು ಹಿಗ್ಗಿಸುವುದಕ್ಕಾಗಿಯೇ ನಿರ್ಮಿತವಾಗಿದೆ.
ನಮ್ಮ ಪ್ರತಿನಿಧಿಗಳೆಂಬಂತೆ ನಟಿಸುವ ನಮ್ಮ ಆಡಳಿತಗಾರರು ಶ್ರೀಮಂತರ ವಿಷಯದಲ್ಲಿ ಎಷ್ಟೊಂದು ಅಪಾರ ಪ್ರೀತಿ, ಅಕ್ಕರೆ, ಕರುಣೆ, ವಾತ್ಸಲ್ಯ ಇತ್ಯಾದಿಗಳನ್ನು ತೋರುತ್ತಾರೆನ್ನುವುದನ್ನು ಗಮನಿಸಿದರೆ ಅವರು ಯಾರ ನಿಷ್ಠಾವಂತ ಏಜಂಟರೆಂಬುದು ಸ್ಪಷ್ಟವಾಗಿ ಬಿಡುತ್ತದೆ. ನರೇಂದ್ರ ಮೋದಿಯವರು 2014ರಲ್ಲಿ ಕುಬೇರರ ಪ್ರತಿನಿಧಿಯಾಗಿ ಅಧಿಕಾರ ವಹಿಸಿದ ಬಳಿಕ, ಒಂದೇ ದಶಕದಲ್ಲಿ, ಭಾರತದ ಅತಿ ಶ್ರೀಮಂತರ ರೂ. 14.5 ಲಕ್ಷ ಕೋಟಿಯಷ್ಟು ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡಲಾಗಿದೆ!
ಕೇವಲ ಆರ್ಥಿಕ ವರ್ಷ 2023 ರಲ್ಲೇ ಸರಕಾರವು ಅತಿಶ್ರೀಮಂತರ ರೂ. 2.09 ಲಕ್ಷ ಕೋಟಿಯಷ್ಟು ಸಾಲ ಮನ್ನಾಮಾಡಿದೆ. 2021 ರಲ್ಲಿ ಸೌರಭ್ ಪಂಡಾರೆ ಎಂಬವರು ಆರ್‌ಟಿಐ ಮೂಲಕ ರಿಸರ್ವ್ ಬ್ಯಾಂಕ್ ನಿಂದ ಪಡೆದ ಮಾಹಿತಿಯ ಪ್ರಕಾರ, ಆ ವರ್ಷ ಮಾರ್ಚ್ ತನಕ, ದೇಶದ 90 ಬ್ಯಾಂಕ್‌ಗಳು ಮತ್ತು ಆರ್ಥಿಕ ಸಂಸ್ಥೆಗಳು, 45,613 ರಷ್ಟು ವಿವಿಧ ಬಗೆಯ ವಂಚನೆ ಹಗರಣಗಳಲ್ಲಿ ರೂ. 4.92 ಲಕ್ಷ ಕೋಟಿಯನ್ನು ಕಳೆದು ಕೊಂಡಿದ್ದವು. ಈ ವರ್ಷ ಮಾರ್ಚ್ 17 ರಂದು ಸಂಸತ್ತಿನಲ್ಲಿ ತಿಳಿಸಲಾದ ಪ್ರಕಾರ ಕಳೆದ 10 ಆರ್ಥಿಕ ವರ್ಷಗಳ ಅವಧಿಯಲ್ಲಿ ಬ್ಯಾಂಕ್‌ಗಳು ‘ಕೆಟ್ಟ ಸಾಲ’ ಅಥವಾ ಮರುಪಾವತಿಯ ಸಾಧ್ಯತೆ ಇಲ್ಲದ ಸಾಲಗಳೆಂದು ಪರಿಗಣಿಸಿ ಮನ್ನಾಮಾಡಿದ ಸಾಲಗಳ ಮೊತ್ತ ರೂ. 16.35 ಲಕ್ಷ ಕೋಟಿ.
ಇವೆಲ್ಲಾ ಪ್ರಸ್ತುತ ಬ್ಯಾಂಕುಗಳು ತಮ್ಮದೇ ಇಚ್ಛೆಯಿಂದ ಅಥವಾ ತೀರಾ ಅನಿವಾರ್ಯ ಸನ್ನಿವೇಶದಲ್ಲಿ ಅಥವಾ ಸಾಲಗಾರರ ಪರಿಸ್ಥಿತಿಯನ್ನು ಪರಿಗಣಿಸಿ ಮಾನವೀಯ ದೃಷ್ಟಿಯಿಂದ ಕೈಗೊಂಡ ಏಕಪಕ್ಷೀಯ ನಿರ್ಧಾರಗಳಾಗಿರಲಿಲ್ಲ. ರಿಸರ್ವ್ ಬ್ಯಾಂಕ್ ಮತ್ತು ಸರಕಾರದ ಸಮ್ಮತಿ, ಸಹಭಾಗಿತ್ವ ಮತ್ತು ಒತ್ತಡ ಇಲ್ಲದೆ ಇದು ಸಾಧ್ಯವಿರಲಿಲ್ಲ. ಈ ಪೈಕಿ ಹೆಚ್ಚಿನ ದೊಡ್ಡ ಹಗರಣಗಳಲ್ಲಿ ಕಾರ್ಪೊರೇಟ್ ಧಣಿಗಳ ಪಾತ್ರವಿರುತ್ತದೆ ಮತ್ತು ಹೆಚ್ಚಿನ ಪ್ರಕರಣಗಳಲ್ಲಿ ಅವರೇ ಈ ಮನ್ನಾ ನೀತಿಯ ಫಲಾನುಭವಿಗಳಾಗಿರುತ್ತಾರೆ. ಈ ಔದಾರ್ಯವು ಬಡ ಅಥವಾ ಮಧ್ಯಮ ವರ್ಗದ ಸಾಲಗಾರರ ಹತ್ತಿರವೂ ಸುಳಿಯುವುದಿಲ್ಲ. ತೀರಾ ಅನಿವಾರ್ಯ ಸನ್ನಿವೇಶಗಳಲ್ಲಿ, ಅಸ್ತಿತ್ವ ಉಳಿಸಿಕೊಳ್ಳಲಿಕ್ಕಾಗಿ ಬ್ಯಾಂಕುಗಳಿಂದ ಕೆಲವು ಸಾವಿರ ಅಥವಾ ಕೆಲವು ಲಕ್ಷ ರೂಪಾಯಿ ಸಾಲ ಪಡೆದು ಪಾವತಿಸಲಾಗದ ಬಡ ಮತ್ತು ಮಧ್ಯಮವರ್ಗದ ರೈತ ಅಥವಾ ಉದ್ಯಮಿ ಸಾಲಗಾರರು, ಬ್ಯಾಂಕುಗಳ ಮತ್ತು ವಸೂಲಿ ಪುಂಡರ ಕಿರುಕುಳ ತಾಳಲಾಗದೆ, ಆಸ್ತಿ ಜಪ್ತಿ ಇತ್ಯಾದಿ ಹಿಂಸೆಗಳನ್ನು ಎದುರಿಸಿ, ಕೊನೆಗೆ ನಿತ್ಯ ನೂರಾರು ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುವ ಭಾರತೀಯ ನಾಗರಿಕರು, ರೈತರು ಅಥವಾ ಕಾರ್ಮಿಕರು ಫಲಾನುಭವಿಗಳಾಗಿರುವುದಿಲ್ಲ.
2014ರಲ್ಲಿ ಭಾರತೀಯ ರೈತರ ಒಟ್ಟು ಸಾಲ ಮೊತ್ತ ರೂ. 9.64 ಲಕ್ಷ ಕೋಟಿಯಷ್ಟಿತ್ತು. 2021-22 ರ ಹೊತ್ತಿಗೆ ಈ ಸಾಲದ ಮೊತ್ತ ರೂ. 23.44 ಲಕ್ಷ ಕೋಟಿಗೆ ತಲುಪಿತ್ತು. ಸರಕಾರ ಮನಸ್ಸುಮಾಡಿದ್ದರೆ ಪ್ರಸ್ತುತ ಸಾಲದ ಹೊರೆಯಡಿಯಲ್ಲಿ ನರಳುತ್ತಿರುವ ರೈತರಿಗೆ ಒಂದಿಷ್ಟು ನೆಮ್ಮದಿ ಒದಗಿಸಲು, ಅದರ ಮುಂದೆ ಹಲವು ದಾರಿಗಳಿದ್ದವು. ಆದರೆ ಸರಕಾರದ ಮೇಲೆ ನಿಯಂತ್ರಣ ಇರುವುದು ಕಾರ್ಪೊರೇಟ್‌ಗಳಿಗೇ ಹೊರತು ರೈತರಿಗೆ ಅಥವಾ ಕಾರ್ಮಿಕರಿಗಲ್ಲ. ಈ ವರ್ಷ ಫೆಬ್ರವರಿ ತಿಂಗಳಲ್ಲಿ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ತಿಳಿಸಿದ ಪ್ರಕಾರ ಪಂಜಾಬ್, ಹರ್ಯಾಣ, ಚಂಡಿಗಡ, ಮತ್ತು ಹಿಮಾಚಲ ಪ್ರದೇಶ ಎಂಬ ನಾಲ್ಕು ವ್ಯವಸಾಯ ಪ್ರಧಾನ ರಾಜ್ಯಗಳಲ್ಲಿನ 85 ಲಕ್ಷ ರೈತರು ವಿವಿಧ ಬ್ಯಾಂಕು, ಸಹಕಾರಿ ಬ್ಯಾಂಕು ಇತ್ಯಾದಿಗಳಿಗೆ ಪಾವತಿಸಲು ಬಾಕಿ ಇರುವ ಸಾಲದ ಒಟ್ಟು ಮೊತ್ತ ರೂ. 2.2 ಲಕ್ಷ ಕೋಟಿ. ಈ ಮೊತ್ತವನ್ನು, 2023 ಎಂಬ ಒಂದೇ ವರ್ಷದಲ್ಲಿ ಮನ್ನಾ ಮಾಡಲಾದ ಅತಿಶ್ರೀಮಂತರ 2.09 ಲಕ್ಷ ಕೋಟಿ ರೂಪಾಯಿ ಸಾಲದ ಹಿನ್ನೆಲೆಯಲ್ಲಿ ನೋಡಿದರೆ ವ್ಯವಸ್ಥೆಯ ವೈಪರೀತ್ಯ ಬಯಲಾಗುತ್ತದೆ.
ಬಡ ಭಾರತೀಯರಿಗೆ ಯಾವುದೇ ಪಾತ್ರವಿಲ್ಲದ, ಶ್ರೀಮಂತರ ಜಗತ್ತಿನಲ್ಲೇ ಸಂಚರಿಸುವ ಇನ್ನೊಂದು ಧನಸಾಗರವಿದೆ. ಕಪ್ಪುಹಣ ಎಂದು ಕರೆಯಲಾಗುವ ಈ ಸಂಪತ್ತಿನ ಪ್ರಮಾಣ, ಒಂದು ಅಂದಾಜಿನ ಪ್ರಕಾರ ರೂ. 900 ಲಕ್ಷ ಕೋಟಿ!
ತೆರಿಗೆ, ಸುಂಕ, ಲೆಕ್ಕಪರಿಶೋಧನೆ, ಪಾರದರ್ಶಕತೆ ಇತ್ಯಾದಿ ಎಲ್ಲ ನಿಯಮ, ನಿರ್ಬಂಧಗಳಿಂದ ಮುಕ್ತವಾದ ಧನಸಾಗರ ಇದು. ಕೆಲವು ವರ್ಷಗಳ ಹಿಂದೆ, ಅದಾನಿ, ಅಂಬಾನಿಗಳ ಪರವಾಗಿ ಮೋದಿಯವರು ನಡೆಸುವ ಸರಕಾರವು ‘ನೋಟು ನಿಷೇಧ’ ಘೋಷಿಸಿದಾಗ, ಈ ನೋಟು ನಿಷೇಧದ ಮೂಲಕ ಕಪ್ಪುಹಣವೆಲ್ಲಾ ಅಪಮೌಲ್ಯಗೊಂಡು ಭಾರತಕ್ಕೆ ಕಪ್ಪುಹಣದ ಶಾಪದಿಂದ ಮುಕ್ತಿ ಸಿಗಲಿದೆ ಎಂಬ ಅದ್ದೂರಿಯ ಶುಭವಾರ್ತೆ ನೀಡಲಾಗಿತ್ತು. ಆದರೆ 98ಶೇ. ನಿಷೇಧಿತ ನೋಟುಗಳು ನಿರ್ದಿಷ್ಟ ಅವಧಿಯೊಳಗೆ ರಿಸರ್ವ್ ಬ್ಯಾಂಕ್ ಗೆ ಮರಳುವ ಮೂಲಕ ಪ್ರಸ್ತುತ ಶುಭವಾರ್ತೆ 98ಶೇ. ಸುಳ್ಳಾಗಿ ಬಿಟ್ಟಿತು. ಜನಸಾಮಾನ್ಯನ ಬದುಕು ಮಾತ್ರ ಹಲವು ದಿನಗಳ ಮಟ್ಟಿಗೆ ನರಕ ಸದೃಶವಾಗಿ ಬಿಟ್ಟಿತು. ದೇಶದ ಆರ್ಥಿಕತೆಯ ನರನಾಡಿಗಳಲ್ಲಿ ವಿಷವಾಗಿ ಚಲಿಸುತ್ತಿರುವ ಈ ‘ಸ್ವದೇಶಿ’ ಕಪ್ಪು ಹಣ ಒಂದೆಡೆಯಾದರೆ, ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಸಂಗ್ರಹಿಸಿಟ್ಟಿರುವ ಅಕ್ರಮಧನ ಬೇರೆಯೇ ಇದೆ. ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ದಲ್ಲಾಳಿಗಳು ಮತ್ತು ತೆರಿಗೆಕಳ್ಳ ಉದ್ಯಮಿಗಳು ವಿದೇಶಿ ಬ್ಯಾಂಕುಗಳಲ್ಲಿ ಸಂಗ್ರಹಿಸಿಟ್ಟಿರುವ ಈ ಅಕ್ರಮ ಸಂಪತ್ತಿನ ಪ್ರಮಾಣ ಸುಮಾರು ರೂ. 120 ಲಕ್ಷ ಕೋಟಿಯಿಂದ ರೂ. 300 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಮೋದಿ ಮಹಾಶಯರು ಒಂದು ಕಾಲದಲ್ಲಿ ಈಕುರಿತು ಮಾತನಾಡಿದ್ದರು. ವಿವಿಧ ವಿದೇಶಿ ಬ್ಯಾಂಕುಗಳಲ್ಲಿ ಸಂಗ್ರಹಿಸಲಾಗಿರುವ ಭಾರತೀಯ ಮೂಲದ ಕಪ್ಪುಹಣದ ರಾಶಿಯನ್ನು ಅಲ್ಲಿಂದ ಕಿತ್ತು ತಂದು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಯಲ್ಲಿ ರೂ. 15 ಲಕ್ಷವನ್ನು ಜಮೆ ಮಾಡುತ್ತೇನೆಂದು ಅವರು ನೀಡಿದ್ದ ಆಶ್ವಾಸನೆ ಭಾರತದಲ್ಲಿ ಈಗಾಗಲೇ ದಂತಕಥೆಯಾಗಿ ಬಿಟ್ಟಿದೆ.
ಬಡ ಭಾರತೀಯರು ಆದಾಯವಿಲ್ಲದ ಕಾರಣ ಪಡುತ್ತಿರುವ ಹಲವು ಬಗೆಯ ಪಾಡುಗಳನ್ನು ಈಗಾಗಲೇ ಪ್ರಸ್ತಾಪಿಸಿರುವಾಗ, ಕುಬೇರ ಭಾರತೀಯರು ತಮ್ಮ ವಿಪರೀತ ಆದಾಯವನ್ನು ವೆಚ್ಚಮಾಡಲು ಪಡುವ ಪಾಡನ್ನೂ ಪ್ರಸ್ತಾಪಿಸದೆ ಇದ್ದರೆ ಅನ್ಯಾಯವಾದೀತು. ಅಧಿಕೃತ ಮಾಹಿತಿಯ ಪ್ರಕಾರ 2018 ರಲ್ಲಿ ನಡೆದ ಮುಕೇಶ್ ಅಂಬಾನಿಯ ಮಗಳ ಮದುವೆಗೆ ರೂ. 855 ಕೋಟಿ ಖರ್ಚಾಗಿತ್ತು. ಕಳೆದ ವರ್ಷ ನಡೆದ ಅವರ ಮಗ ಅನಂತ್ ಅಂಬಾನಿಯ ವಿವಾಹಪೂರ್ವ ಸಮಾರಂಭಕ್ಕೆ ಸುಮಾರು ರೂ. 1,200 ಕೋಟಿ ಮತ್ತು ಸಾಕ್ಷಾತ್ ವಿವಾಹಕ್ಕೆ ಸುಮಾರು ರೂ. 5,000 ಕೋಟಿ ಖರ್ಚಾಗಿತ್ತು. ಅವರು ಮತ್ತವರ ಕುಟುಂಬ ಶ್ರೀಮಂತರಿಗೆಲ್ಲಾ ಮಾದರಿಯಾದ್ದರಿಂದ ಇತರ ಶ್ರೀಮಂತರು, ಅವರನ್ನು ಮೀರಿ ಹೋಗುವುದಕ್ಕೆ ಸರ್ವ ಶ್ರಮಪಡುತ್ತಿದ್ದಾರೆ. ಭಾರತದಲ್ಲಿಂದು ಕನಿಷ್ಠ 150 ಮಂದಿ
ಶ್ರೀಮಂತರ ಬಳಿ ಅವರದೇ ಆದ ಖಾಸಗಿ ವಿಮಾನಗಳಿವೆ. ಈ ಪೈಕಿ ಒಂದೊಂದು ವಿಮಾನದ ಬೆಲೆ ರೂ. 16 ಕೋಟಿಯಿಂದ ರೂ. 550 ಕೋಟಿಯವರೆಗಿದೆ.
ಇಷ್ಟೊಂದು ಸುಖ ಸಂಪನ್ನ ಸಂಪದ್ಭರಿತ ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯದ ಸವಲತ್ತುಗಳು ಎಷ್ಟೊಂದು ಉನ್ನತ ಮಟ್ಟದಲ್ಲಿರಬೇಕಿತ್ತು?
ಇತ್ತೀಚೆಗೆ ಪ್ರಧಾನ ಸೇವಕರ ವಿಶೇಷ ಕೃಪೆಗೆ ಪಾತ್ರವಾಗಿರುವ ಬಿಹಾರದಲ್ಲಿ ಕಳೆದ ವಾರ ನಡೆದ ಸಾಂಸ್ಥಿಕ ಹತ್ಯೆ ಒಂದು ಘಟನೆಯಲ್ಲಿ ಬಹಳಷ್ಟನ್ನು ಬಹಿರಂಗಪಡಿಸಿತು. ಮುಝಪ್ಫರ್ ಪುರದಲ್ಲಿ ಹತ್ತರ ಹರೆಯದ ದಲಿತ ಬಾಲಕಿಯೊಬ್ಬಳು ಆಟವಾಡುತ್ತಿದ್ದ ಸ್ಥಳದಿಂದ ಕಣ್ಮರೆಯಾದಳು. ಮರುದಿನ, ಆಕೆ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾದಳು. ಆಕೆಯ ಮೇಲೆ ಅತ್ಯಾಚಾರವೆಸಗಲಾಗಿತ್ತು ಮತ್ತು ಶರೀರದಲ್ಲಿ ಹಲವೆಡೆ ಚೂರಿಯಿಂದ ಇರಿದ ಗಂಭೀರ ಗಾಯಗಳಿದ್ದವು. ಅಂದು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವಶ್ಯಕ ಸವಲತ್ತುಗಳು ಇಲ್ಲದ್ದರಿಂದ ಅವಳನ್ನು ಮುಝಪ್ಫರ್ ಪುರದ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಒಂದೆರಡು ದಿನ ಆಕೆಗೆ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ 85 ಕಿ.ಮೀ. ದೂರ ಪಾಟ್ನಾದಲ್ಲಿರುವ Pಒಅಊ ಆಸ್ಪತ್ರೆಗೆ ಕಳಿಸಿದರು. ಮೊದಲ ಹಂತದಲ್ಲಿ ಅಲ್ಲಿ ಆಕೆಗೆ ಪ್ರವೇಶವೇ ಸಿಗಲಿಲ್ಲ. ಕೊನೆಗೆ ಕೆಲವು ಸ್ಥಳೀಯ ರಾಜಕಾರಣಿಗಳ ಹಸ್ತಕ್ಷೇಪದ ಬಳಿಕ ಪ್ರವೇಶವೇನೋ ಸಿಕ್ಕಿತು. ಆದರೆ ಆಸ್ಪತ್ರೆಯ ಯಾವ ವಿಭಾಗದವರು ಆಕೆಗೆ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಗೊಂದಲವಿತ್ತು. ಪ್ರತಿಯೊಂದು ವಿಭಾಗದವರು ಹೆತ್ತವರೊಡನೆ, ಆಕೆಯನ್ನು ಇನ್ನೊಂದು ವಿಭಾಗಕ್ಕೆ ಕೊಂಡೊಯ್ಯಲು ಹೇಳುತ್ತಿದ್ದರು. ಹೀಗೆ ವಿಭಾಗದಿಂದ ವಿಭಾಗಕ್ಕೆ ಅಲೆದಾಡಿದ ಬಳಿಕ ಅವರು ಬಾಲಕಿಯ ಬಳಿಗೆ ಮರಳಿ ಬಂದಾಗ, ಬಾಲಕಿ ಮೃತಪಟ್ಟಿದ್ದಳು.
ಸರಕಾರೀ ಆಸ್ಪತ್ರೆಗಳನ್ನು ಅವಲಂಬಿಸಿರುವವರ ಲೋಕದಲ್ಲಿ ಇಂತಹ ಅನುಭವಗಳು ತೀರಾ ಅಪರೂಪವೇನಲ್ಲ. ನಮ್ಮಲ್ಲಿ ಹಲವರು ಸರಕಾರೀ ಆಸ್ಪತ್ರೆಗಳನ್ನು ಕಟುಕರ ಕೇಂದ್ರಗಳೆಂದು ಟೀಕಿಸುವುದಕ್ಕೆ ಇಂತಹ ಅಮಾನುಷ ಅನುಭವಗಳೇ ಕಾರಣ.
ಸ್ವಲ್ಪವಾದರೂ ಅನುಕೂಲ ಇರುವವರು ಸರಕಾರೀ ಶಾಲೆ ಅಥವಾ ಆಸ್ಪತ್ರೆಯ ಹತ್ತಿರವೂ ಸುಳಿಯುವುದಿಲ್ಲ. ಈ ಪರಿಸ್ಥಿತಿಗೆ ಸರಕಾರದ ಧೋರಣೆಗಳೊಂದಿಗೆ ನೇರ ಸಂಬಂಧವಿದೆ. ದೇಶದಲ್ಲಿ ಜನತೆಯ, ಅದರಲ್ಲೂ ಮಕ್ಕಳು ಮತ್ತು ಮಹಿಳೆಯರ ಅರೋಗ್ಯ ಸ್ಥಿತಿ ಕಳವಳಕಾರಿಯಾಗಿರುವಾಗ, ಸಂವೇದನಾಶೀಲವಾಗಿರುವ ಯಾವುದೇ ಜನಪರ ಸರಕಾರವು, ನಾಗರಿಕರ ಸ್ವಸ್ಥ ವರ್ತಮಾನ ಮತ್ತು ಸ್ವಸ್ಥ ಭವಿಷ್ಯವನ್ನು ಖಾತರಿ ಪಡಿಸಿಕೊಳ್ಳುವುದಕ್ಕಾಗಿ ನೇರವಾಗಿ ಆ ಕ್ಷೇತ್ರದ ಅಭಿವೃದ್ಧಿಗೆ ಅಸಾಮಾನ್ಯ ಪ್ರಾಶಸ್ತ್ಯ ನೀಡಬೇಕಿತ್ತು. ಆ ಪ್ರಾಶಸ್ತ್ಯವು ಅದರ ಬಜೆಟ್‌ನಲ್ಲಿ ಮತ್ತು ವಿವಿಧ ಯೋಜನೆ ಹಾಗೂ ಕಾರ್ಯಕ್ರಮಗಳಲ್ಲಿ ಎದ್ದು ಕಾಣಬೇಕಿತ್ತು. ಉದಾ: ಯುಎಸ್ ನಲ್ಲಿ ಅಲ್ಲಿಯ ಸರಕಾರವು ತನ್ನ ಜಿಡಿಪಿಯ 14.3 ಶೇ. ಪಾಲನ್ನು ಸಾರ್ವಜನಿಕ ಆರೋಗ್ಯಕ್ಕಾಗಿ ಮೀಸಲಿಟ್ಟಿದೆ. ಇತ್ತೀಚೆಗಷ್ಟೇ ನಾವು ಆರ್ಥಿಕತೆಯ ಗಾತ್ರದಲ್ಲಿ ನಮಗಿಂತ ಕೀಳಾಗಿಸಿಬಿಟ್ಟಿದ್ದ ಜಪಾನ್ ದೇಶವು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕಾಗಿ ತನ್ನ ಜಿಡಿಪಿಯ 9.2ಶೇ. ಪಾಲನ್ನು ವ್ಯಯಿಸುತ್ತದೆ. ಅವರ ಈ ಕ್ರಮಗಳು ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಅವರ ಕಾಳಜಿ ಎಷ್ಟು ನೈಜ ಹಾಗೂ ಎಷ್ಟು ಗಂಭೀರ ಎಂಬುದನ್ನು ಸೂಚಿಸುತ್ತದೆ. ಜಾಗತಿಕ ಮಟ್ಟದಲ್ಲಿ, ವಿವಿಧ ದೇಶಗಳು ಈ ಕ್ಷೇತ್ರಕ್ಕೆ ತಮ್ಮ ಜಿಡಿಪಿಯ ಸರಾಸರಿ 6.5ಶೇ. ಪಾಲನ್ನು ಮೀಸಲಾಗಿಡುತ್ತವೆ. ಇದಕ್ಕೆ ಹೋಲಿಸಿದರೆ, ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕಾಗಿ ಭಾರತ ಸರಕಾರ ವ್ಯಯಿಸುವುದು ತನ್ನ ಜಿಡಿಪಿಯ ಕೇವಲ 1.9ಶೇ. ಪಾಲು ಮಾತ್ರ! BRICS ದೇಶಗಳ ಸಾಲಲ್ಲಿ, ಅಷ್ಟೇನೂ ಶ್ರೀಮಂತವಲ್ಲದ ಬ್ರೆಝಿಲ್, ತನ್ನ ಸರಾಸರಿ ನಾಗರಿಕರ ಆರೋಗ್ಯಕ್ಕಾಗಿ ಪ್ರತಿವರ್ಷ 947 ಡಾಲರ್ ಖರ್ಚು ಮಾಡುತ್ತದೆ. ಅದಕ್ಕೆ ಹೋಲಿಸಿದರೆ ಈ ರಂಗದಲ್ಲಿ ಭಾರತ ಮಾಡುವ ಖರ್ಚು ಜುಜುಬಿ 75 ಡಾಲರ್ ಮಾತ್ರ. ಅಂದರೆ ಬ್ರೆಝಿಲ್‌ಗೆ ಹೋಲಿಸಿದರೆ ಕೇವಲ 8ಶೇ. ಮಾತ್ರ. ಎರಡು ವರ್ಷಗಳ ಹಿಂದೆ, ರಾಷ್ಟ್ರೀಯ ಮಾನವಹಕ್ಕು ಆಯೋಗವು ದೇಶದ 46 ಪ್ರಮುಖ ಮಾನಸಿಕ ಚಿಕಿತ್ಸಾ ಕೇಂದ್ರಗಳ ಕುರಿತು ತಾನು ನಡೆಸಿದ ಅಧ್ಯಯನದ ಆಧಾರದಲ್ಲಿ, ಪ್ರಸ್ತುತ ಎಲ್ಲ ಚಿಕಿತ್ಸಾ ಕೇಂದ್ರಗಳ ಸ್ಥಿತಿ ತೀರಾ ಕಳವಳಕಾರಿಯಾಗಿದೆ ಎಂದು ತಿಳಿಸಿತ್ತು. ಇಂತಹ ಹೃದಯವಿದ್ರಾವಕ ಮಾಹಿತಿಗಳ ದೊಡ್ಡ ರಾಶಿಯೇ ನಮ್ಮ ಮುಂದಿದೆ. ಆದರೆ ಸುಧಾರಣೆಯ ಲಕ್ಷಣಗಳು ಎಲ್ಲೂ ಕಾಣಿಸುತ್ತಿಲ್ಲ.
ಈ ವರ್ಷ ಎಪ್ರಿಲ್‌ನಲ್ಲಿ ಸರ್ವೋಚ್ಚ ನ್ಯಾಯಾಲಯವು, ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದರ ಕುರಿತು ಚರ್ಚಿಸುತ್ತಾ, ಶಿಕ್ಷಣ, ಶುಚಿತ್ವ ಮತ್ತು ಆರೋಗ್ಯ ರಂಗದಲ್ಲಿ ದೇಶವು ಎದುರಿಸುತ್ತಿರುವ ತೀವ್ರ ಬಿಕ್ಕಟ್ಟಿನ ಸ್ಥಿತಿಯ ಬಗ್ಗೆ ಕಳವಳ ಪ್ರಕಟಿಸಿತು. ನಾವು ಈ ಕುರಿತು ಸರಕಾರಕ್ಕೆ ಆದೇಶಗಳನ್ನು ನೀಡುವಂತಿಲ್ಲ, ಆದರೆ ಪ್ರತಿಯೊಂದು ರಾಜ್ಯ ಸರಕಾರವು ತನ್ನ ವಾರ್ಷಿಕ ಬಜೆಟ್‌ನ ಕನಿಷ್ಠ 25ಶೇ. ಭಾಗವನ್ನು ಈ ರಂಗಗಳಲ್ಲಿ ಆಯಕಟ್ಟಿನ ಸುಧಾರಣೆ ತರುವುದಕ್ಕೆ ಮೀಸಲಿಡಬೇಕು. ಅನ್ಯಥಾ ನಮ್ಮ ದೇಶ ಎಂದೂ ಪ್ರಗತಿ ಸಾಧಿಸುವ ಸಾಧ್ಯತೆ ಇಲ್ಲ.
ಬಡವರು ತಮ್ಮ ಕಯ್ಯಾರೆ ಕಟ್ಟಿ ಬೆಳೆಸಿದ ಸರಕಾರಗಳು, ಕಣ್ಣು ತೆರೆದೊಡನೆ ಬಡವರನ್ನು ಮರೆತು ಕುಬೇರರ ಮಡಿಲಲ್ಲಿ ಕುಳಿತುಬಿಡುತ್ತವೆ. ಕುಬೇರರನ್ನು ಮೆಚ್ಚಿಸುವುದಕ್ಕೆ ಈ ಮಡಿಲ ಸರಕಾರಗಳು ತೋರುವ ಅಮಿತೋತ್ಸಾಹ ಮತ್ತು ಕುಬೇರರ ಬೊಕ್ಕಸ ತುಂಬುವುದಕ್ಕೆ ಅವರು ಕೈಗೊಳ್ಳುವ ಕ್ರಮಗಳು ಎಷ್ಟು ವಿಪರೀತ ಸ್ವರೂಪದ್ದಾಗಿರುತ್ತವೆಂದರೆ, ಎಷ್ಟೋ ಮಂದಿ ಸಾಕ್ಷಾತ್ ಕುಬೇರರೇ ಇದರಿಂದ ಮುಜುಗರ ಪಡುತ್ತಾರೆ. ಕಳೆದ ವರ್ಷ ದಾವೋಸ್ ನಲ್ಲಿ ನಡೆದ ವರ್ಲ್ಡ್ ಇಕೊನಾಮಿಕ್ ಫೋರಂ (WEF) ಸಮ್ಮೇಳನದಲ್ಲಿ ಇದು ಪ್ರಕಟವಾಯಿತು. ಜಗತ್ತಿನ 250 ಮಂದಿ ಅತ್ಯಂತ ಶ್ರೀಮಂತ ಉದ್ಯಮಿಗಳು, WEFನಲ್ಲಿ ಭಾಗವಹಿಸುತ್ತಿದ್ದ ಜಗತ್ತಿನ ವಿವಿಧ ದೇಶಗಳ ನಾಯಕರನ್ನುದ್ದೇಶಿಸಿ ಒಂದು ಪತ್ರ ಬರೆದು, ಬಡಜನರ ಜೀವನ ಮಟ್ಟವನ್ನು ಸುಧಾರಿಸುವುದಕ್ಕಾಗಿ ನಮ್ಮ ಮೇಲೆ ಹೆಚ್ಚಿನ ಸಂಪತ್ ತೆರಿಗೆಯನ್ನು ಹೊರಿಸುವುದಾದರೆ ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದರು. ನಿಜವಾಗಿ ಕಳೆದ ವರ್ಷ ಇಂಗ್ಲೆಂಡ್‌ನ ಖಾಸಗಿ ಸಂಸ್ಥೆಯೊಂದು, G20 ದೇಶಗಳಲ್ಲಿರುವ, 7.8 ಲಕ್ಷ ಪೌಂಡ್ ಗಿಂತ ಅಧಿಕ ಬಂಡವಾಳ ಹೂಡಬಲ್ಲಷ್ಟು ಸೊತ್ತುಗಳಿರುವ 2,300 ವ್ಯಕ್ತಿಗಳನ್ನು ಒಳಗೊಂಡ ಒಂದು ಸಮೀಕ್ಷೆಯನ್ನು ನಡೆಸಿತು. ಅವರಲ್ಲಿ 75ಶೇ. ಮಂದಿ ತಮ್ಮ ಮೇಲೆ 2ಶೇ. ಹೆಚ್ಚುವರಿ ಸಂಪತ್ ತೆರಿಗೆ ಹಾಕುವುದನ್ನು ಸ್ವಾಗತಿಸಿದರು. 70ಶೇ. ಮಂದಿ, ಸಮಾಜದ ಬಡವರ ಉದ್ಧಾರಕ್ಕಾಗಿ ಶ್ರೀಮಂತರ ಮೇಲೆ ತೆರಿಗೆ ಹೇರುವುದು ಸ್ವಾಗತಾರ್ಹ ಎಂಬ ಅನಿಸಿಕೆ ಪ್ರಕಟಿಸಿದರು.
ಭಾರತವೆಂಬ ನಮ್ಮ ಕುಬೇರಪ್ರಭುತ್ವದಲ್ಲಿ ಆಗುತ್ತಿರುವುದು ಇದಕ್ಕೆ ತೀರಾ ತದ್ವಿರುದ್ಧ. 2019 ರಲ್ಲಿ ಭಾರತ ಸರಕಾರವು, 30ಶೇ. ದಷ್ಟಿದ್ದ ಮೂಲ ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿ 22ಶೇ. ಕ್ಕೆ ಇಳಿಸಿಬಿಟ್ಟಿತು. ಹೊಸ ಉತ್ಪಾದನಾ ಘಟಕಗಳಿಗೆ ತೆರಿಗೆ ಮಿತಿಯನ್ನು 25ಶೇ. ದಿಂದ 15ಶೇ. ಕ್ಕೆ ಇಳಿಸಿಬಿಟ್ಟಿತು. ಶ್ರೀಮಂತರಿಗೆ ನೀಡಿದ ಈ ರಿಯಾಯಿತಿಯಿಂದಾಗಿ, ನೇರ ತೆರಿಗೆಯ ಮೂಲಕ ಸರಕಾರಕ್ಕೆ ಬರುತ್ತಿದ್ದ ಆದಾಯದಲ್ಲಿ ರೂ. 1.45 ಲಕ್ಷ ಕೋಟಿ ನಷ್ಟವಾಗಿದೆ ಎಂದು ಸ್ವಯಂ ಅರ್ಥಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದರು. ಫ್ರಾನ್ಸ್, ಜರ್ಮನಿಯಂತಹ ಯುರೋಪಿನ ಹಲವು ಬಂಡವಾಳಶಾಹಿ ದೇಶಗಳಿಗೆ ಹೋಲಿಸಿದರೂ, ಕಂಪೆನಿಗಳಿಗೆ ತೆರಿಗೆ ರಿಯಾಯಿತಿ ಕೊಡುವ ವಿಷಯದಲ್ಲಿ, ನಮ್ಮ ಬಡ ಭಾರತ ದೇಶ ಅವುಗಳಿಗಿಂತ ಹಲವಾರು ಹೆಜ್ಜೆ ಮುಂದೆ ಇದೆ. ಅದೇವೇಳೆ, ಸರಕಾರ ತನ್ನ ಎಲ್ಲಾ ಪ್ರತಿಭೆ, ಸಾಮರ್ಥ್ಯ ಮತ್ತು ಸಂಪನ್ಮೂಲವನ್ನು, ಜಿಎಸ್‌ಟಿ ಹೆಸರಲ್ಲಿ ಬಡ ಮತ್ತು ಮಧ್ಯಮ ವರ್ಗದವರನ್ನು ದೋಚುವುದಕ್ಕೆ ಬಳಸಿಕೊಂಡಿದೆ. ಈ ರೀತಿ ಬಡವರನ್ನು ದೋಚಿ ಶ್ರೀಮಂತರನ್ನು ಉದ್ಧರಿಸುವ ಧೋರಣೆಯ ಕಾರಣವೇ ಅನೇಕರು GST ಯನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಕರೆದಿರುವುದು ಮತ್ತು ಒಟ್ಟು ತೆರಿಗೆ ವ್ಯವಸ್ಥೆಯನ್ನು ‘ಟ್ಯಾಕ್ಸ್ ಟೆರರಿಸಂ’ ಎಂದು ಕರೆದಿರುವುದು.
ತುಸು ಸೂಕ್ಷ್ಮವಾಗಿ ನೋಡಿದರೆ, ನಮ್ಮ ಸರಕಾರವು ಕಾಲಕ್ರಮೇಣ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸರಕಾರದ ಪಾತ್ರವನ್ನು ಶೂನ್ಯಗೊಳಿಸಿ ಎಲ್ಲವನ್ನೂ ಖಾಸಗಿ ದರೋಡೆಕೋರರ ಏಕಸ್ವಾಮ್ಯಕ್ಕೆ ಒಪ್ಪಿಸುವುದಕ್ಕೆ ಸರ್ವ ಸಿದ್ಧತೆ ನಡೆಸಿದೆ.
ವ್ಯವಸ್ಥೆಯ ನಿಯಂತ್ರಕರು ತಮ್ಮ ಪ್ರಾಶಸ್ತ್ಯಗಳ ಪಟ್ಟಿಯಲ್ಲಿ ಆರೋಗ್ಯ, ಶಿಕ್ಷಣ, ಕೌಶಲ್ಯ, ಸಾರ್ವಜನಿಕ ಸವಲತ್ತು ಇತ್ಯಾದಿಗಳನ್ನು ಪಾತಾಳದಲ್ಲಿಟ್ಟು, ಬಡವರ ಪಾಲಿಗೆ ಘನತೆ ಮತ್ತು ಸ್ವಾವಲಂಬನೆಯ ಬಾಗಿಲುಗಳನ್ನು ಮುಚ್ಚಿ, ಅವರಿಗೆ ಉಚಿತ ಧಾನ್ಯ ನೀಡಿ ಅವರನ್ನು ದಾನಾವಲಂಬಿಗಳಾಗಿಸಿ, ನಾವು ದಾಸರು ಮತ್ತು ನಮಗೆ ದಾನನೀಡುವವರು ನಮ್ಮ ಪ್ರಭುಗಳು ಎಂಬ ದಾಸ್ಯಪ್ರಜ್ಞೆಯನ್ನು ಅವರಲ್ಲಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅವರು ದೇಶದ ಬಹುಜನರಲ್ಲಿ, ಸರಕಾರದ ಎಲ್ಲ ಜನವಿರೋಧಿ ಧೋರಣೆಗಳಿಗೆ ಮೌನ ಸಮ್ಮತಿ ನೀಡುವ ಪ್ರಶ್ನಾತೀತ ವಿಧೇಯತೆಯನ್ನು ಬೆಳೆಸುತ್ತಿದ್ದಾರೆ. ಸಮಾಜದ ಬಹುಜನರಲ್ಲಿ ಈ ಕುರಿತು ವ್ಯಾಪಕ ಜಾಗೃತಿ ಮೂಡಿ, ಅವರು ಸೆಟೆದು ನಿಂತು, ದೀರ್ಘಕಾಲೀನ ಹೋರಾಟ ನಡೆಸಿ, ವ್ಯವಸ್ಥೆಯನ್ನು ಸಂವಿಧಾನಕ್ಕೆ ವಿಧೇಯಗೊಳಿಸುವ ತನಕ ಅವರಿಗೆ ಸಾಮಾಜಿಕ ಸಮಾನತೆಯಾಗಲಿ ಆರ್ಥಿಕ ನ್ಯಾಯವಾಗಲಿ ಖಂಡಿತ ಸಿಗದು. ತನ್ನ ಧೋರಣೆ ಮತ್ತು ಪ್ರಾಶಸ್ತ್ಯಗಳಲ್ಲಿ ದೊಡ್ಡ ಪ್ರಮಾಣದ, ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡುವಂತೆ ಸರಕಾರವನ್ನು ನಿರ್ಬಂಧಿಸುವ ತನಕ, ಎಷ್ಟು ಶತಮಾನಗಳು ಕಳೆದರೂ ಬಲಿಷ್ಠ ಜಾತಿಯವರು ಹಾಗೂ ಬಹುಜನರ ನಡುವೆ ಇರುವ ಸಾಮಾಜಿಕ ಅಂತರ ಮತ್ತು ಕುಬೇರರು ಹಾಗೂ ಬಹುಜನರ ನಡುವಣ ಆರ್ಥಿಕ ಅಂತರ ಕಡಿಮೆಯಾಗುವ ಸಾಧ್ಯತೆ ಖಂಡಿತ ಇಲ್ಲ. ಆ ಅಂತರಗಳು ಹೆಚ್ಚುತ್ತಾ ಹೋಗುತ್ತದೆಂಬುದು ಮಾತ್ರ ಖಚಿತವಾಗಿದೆ.