ಕೊಳ್ಳೆಕೋರರಿಂದ ಕಿತ್ತುಕೊಳ್ಳುವ ತನಕ ಪ್ರಭುತ್ವ ನಮ್ಮದಾಗದು

ಭಾಗ- 2
ಆತ್ಮಹತ್ಯೆಗಳು
ಆತ್ಮಹತ್ಯೆಗಳು ಜಗತ್ತಿನಲ್ಲಿ ಎಲ್ಲ ಕಡೆಯೂ ನಡೆಯುತ್ತವೆ. ಆದರೆ ಜಗತ್ತಿನ ಬೇರಾವುದೇ ದೇಶಕ್ಕಿಂತ ಹೆಚ್ಚು ಆತ್ಮಹತ್ಯೆಗಳು ನಡೆಯುವ ದೇಶವೆಂದರೆ ನಮ್ಮದು. ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋ (ಎನ್‌ಸಿಆರ್‌ಬಿ)ದವರ ಕಳೆದ ವರ್ಷದ ವರದಿಯ ಪ್ರಕಾರ 2022ರಲ್ಲಿ ಭಾರತದಲ್ಲಿ 1.71 ಲಕ್ಷ ಮಂದಿ (ಪ್ರತೀ ಗಂಟೆಗೆ ಸುಮಾರು 20 ಮಂದಿ) ಆತ್ಮಹತ್ಯೆಗೆ ಶರಣಾಗಿದ್ದರು. ಅಧಿಕೃತ ಮಾಹಿತಿಗಳ ವಿಶ್ಲೇಷಣೆ ನಡೆಸಿದರೆ, ದೇಶದಲ್ಲಿ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಕಳವಳಕಾರಿ ಅಂಶವೂ ಗಮನಕ್ಕೆ ಬರುತ್ತದೆ. 2021ಕ್ಕೆ ಹೋಲಿಸಿದರೆ 2022ರಲ್ಲಿ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಶೇ. 4.2 ಹೆಚ್ಚಳವಾಗಿತ್ತು. 2018ಕ್ಕೆ ಹೋಲಿಸಿದರಂತೂ ಈ ಸಂಖ್ಯೆಯಲ್ಲಿ ಶೇ. 27ರಷ್ಟು ವೃದ್ಧಿಯಾಗಿತ್ತು. ಯಾವುದಾದರೂ ಸಮಾಜದಲ್ಲಿ ಪ್ರತಿವರ್ಷ ಒಂದು ಲಕ್ಷ ಮಂದಿಯ ಪೈಕಿ 12.4 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂಬುದು, ಅದು ಸುಖೀ ಸಮಾಜವಾಗಿದೆ ಎಂಬುದಕ್ಕಂತೂ ಖಂಡಿತ ಪುರಾವೆಯಲ್ಲ.
ಈ ದಾರುಣ ಪರಿಸ್ಥಿತಿಗೆ ದೇಶದಲ್ಲಿ ಸಂಪತ್ತಿನ ತೀವ್ರ ಕೊರತೆ ಇರುವುದು ಕಾರಣವೇ? ಅಥವಾ ಲಭ್ಯವಿರುವ ಧಾರಾಳ ಸಂಪತ್ತಿನ ನಿರ್ವಹಣೆ ಮತ್ತು ವಿತರಣೆಯ ವ್ಯವಸ್ಥೆಯಲ್ಲಿರುವ, ಜನಹಿತವನ್ನು ಬಲಿಕೊಟ್ಟು ಕೇವಲ ಕೆಲವು ಆಯ್ದ ಮಂದಿಯ ಏಕಸ್ವಾಮ್ಯವನ್ನು ಸ್ಥಾಪಿಸುವ ಜನವಿರೋಧಿ ಧೋರಣೆಗಳು ಕಾರಣವೇ?
2022ರ ‘ಗ್ಲೋಬಲ್ ಮಲ್ಟಿ ಡೈಮೆನ್ಶನಲ್ ಪವರ್ಟಿ ಇಂಡೆಕ್ಸ್’ ಪ್ರಕಾರ 2020ರಲ್ಲಿ ಜಗತ್ತಿನ ಬೇರಾವುದೇ ದೇಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಇದ್ದದ್ದು ಭಾರತದಲ್ಲಿ. ಇಂದು ನಮ್ಮ ಭಾರತವನ್ನು ಜಗತ್ತಿನಲ್ಲೇ ಅತ್ಯಧಿಕವಾಗಿ ಅಸಮಾನತೆಯು ಮೆರೆಯುತ್ತಿರುವ ದೇಶಗಳ ಸಾಲಲ್ಲಿ ಗಣಿಸಲಾಗುತ್ತದೆ. ಇಲ್ಲಿ ದಿನಗಳೆದಂತೆ ಬಡ ಬಹುಸಂಖ್ಯಾತರ ಬಡತನ ಕ್ಷಿಪ್ರವಾಗಿ ಬೆಳೆಯುತ್ತಿದೆ ಮತ್ತು ಅದೇ ವೇಳೆ ಶ್ರೀಮಂತರ ಶ್ರೀಮಂತಿಕೆಯೂ ತ್ವರಿತವಾಗಿ ಪ್ರಗತಿ ಸಾಧಿಸುತ್ತಿದೆ. ‘ವಿಶ್ವ ಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ’ (ಯುಎನ್‌ಡಿಪಿ) ವತಿಯಿಂದ 2023 ನವೆಂಬರ್‌ನಲ್ಲಿ ಬಿಡುಗಡೆಗೊಳಿಸಲಾದ ವರದಿಯ ಪ್ರಕಾರ, ಭಾರತವು ಆದಾಯ ಮತ್ತು ಸಂಪತ್ತಿನ ದೃಷ್ಟಿಯಿಂದ, ಜನರ ಮಧ್ಯೆ ಅತಿಹೆಚ್ಚು ಅಂತರವಿರುವ ದೇಶಗಳ ಸಾಲಲ್ಲಿದೆ. ಇಲ್ಲಿ 18.5 ಕೋಟಿ ಜನರ ನಿತ್ಯ ಆದಾಯ ಕೇವಲ ರೂ. 180 (ಮಾಸಿಕ ರೂ. 5,400, ವಾರ್ಷಿಕ ರೂ. 64,800.) ಕ್ಕಿಂತ ಕಡಿಮೆ ಇದ್ದು ಅವರು ದಟ್ಟ ದಾರಿದ್ರ್ಯದಲ್ಲಿ ನರಳುತ್ತಿದ್ದಾರೆ. ಆಕ್ಸ್ ಫಾಮ್ ಇಂಟರ್ ನ್ಯಾಶನಲ್‌ನಂತಹ ಹಲವು ಸಂಸ್ಥೆಗಳ ಅಧ್ಯಯನ ಮತ್ತು ಸಮೀಕ್ಷೆಗಳಿಂದ ಸ್ಪಷ್ಟವಾಗಿರುವಂತೆ, ಭಾರತದ ಒಟ್ಟು ಸಂಪತ್ತಿನ ಶೇ. 40 ಪಾಲು ಕೇವಲ ಶೇ. 1 ಜನರ ಮಾಲಕತ್ವದಲ್ಲಿದೆ! ಇದಕ್ಕೆ ಹೋಲಿಸಿದರೆ, ತಳಮಟ್ಟದಲ್ಲಿರುವ ಶೇ. 50 ಭಾರತೀಯರ ಮಾಲಕತ್ವದಲ್ಲಿರುವುದು ದೇಶದ ಒಟ್ಟು ಸಂಪತ್ತಿನ ಕೇವಲ ಶೇ. 3 ಪಾಲು ಮಾತ್ರ.
1922ರಲ್ಲಿ ಬ್ರಿಟಿಷರ ಪ್ರಭುತ್ವವಿದ್ದಾಗ, ದೇಶದ ಒಟ್ಟು ಆದಾಯದ ಶೇ. 13 ಪಾಲು, ಅಂದಿನ ಅತ್ಯಂತ ಶ್ರೀಮಂತರಾಗಿದ್ದ ಕೇವಲ ಶೇ. 1 ಮಂದಿಯ ಕೈಯಲ್ಲಿತ್ತು. ಈ ರೀತಿ ಕೇವಲ ಶೇ. 1 ಮಂದಿ, ರಾಷ್ಟ್ರೀಯ ಆದಾಯದ ಶೇ. 13 ಪಾಲನ್ನು ನುಂಗುತ್ತಿರುವ ಸ್ಥಿತಿಯನ್ನು ಗಮನಿಸಿದ ಪ್ರಜ್ಞಾವಂತರೆಲ್ಲಾ ಇದನ್ನು ಘೋರ ಅನ್ಯಾಯ ಹಾಗೂ ಅಸಮತೋಲನ ಎಂದು ಕರೆದು, ಇದಕ್ಕೆಲ್ಲಾ ಬ್ರಿಟಿಷರ ಅಕ್ರಮ ಸರಕಾರ ಮತ್ತು ಅವರ ಅಸಮಂಜಸ ಧೋರಣೆಗಳೇ ಕಾರಣ ಎಂದು ದೂರಿದ್ದರು. ದೇಶದಲ್ಲಿ ಒಂದು ಸ್ವತಂತ್ರ, ಸಾರ್ವಭೌಮ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸುವುದೇ ಇದಕ್ಕೆ ಪರಿಹಾರ ಎಂದು ಘೋಷಿಸಿದ್ದರು. ಆ ಬಳಿಕ ನಾವು ಪರದೇಶಿಗಳನ್ನು ಓಡಿಸಿ, ನಾವೇ ನಮ್ಮ ವ್ಯವಸ್ಥೆಯ ಪ್ರಭುಗಳೆಂದು ಘೋಷಿಸಿದ್ದೂ ಆಯಿತು. ನಾವೇ ಪ್ರಭುಗಳಾಗಿ 75 ವರ್ಷಗಳ ಬಳಿಕ, 2022ರಲ್ಲಿ ನಮ್ಮ ಸ್ಥಿತಿ ಸುಧಾರಿಸಿದೆಯೇ? ಸುಧಾರಿಸಿದ್ದರೆ, ಭಾರತದಲ್ಲಿ ನ್ಯಾಯ, ಸಮಾನತೆಗಳೆಲ್ಲಾ ಸ್ಥಾಪಿತವಾಗಿ ಅತ್ಯುನ್ನತ ಶ್ರೇಣಿಯಲ್ಲಿರುವ ಶೇ. 1 ಮಂದಿಯ ಕೈಯಲ್ಲಿ ಹೆಚ್ಚೆಂದರೆ ಒಟ್ಟು ರಾಷ್ಟ್ರೀಯ ಆದಾಯದ ಕೇವಲ ಶೇ. 1ರಿಂದ ಶೇ. 2 ಪಾಲು ಮಾತ್ರ ಇರಬೇಕಿತ್ತು. ಆದರೆ ಆಧುನಿಕ ಭಾರತದ ತಳಮಟ್ಟದ ಸತ್ಯವು ಆಶಾವಾದಿಗಳಾಗಿದ್ದವರಿಗೆಲ್ಲಾ ಹೃದಯಾಘಾತ ಉಂಟು ಮಾಡುವಂತಿದೆ. 2022ರಲ್ಲಿ ದೇಶದ ಶೇ.1 ಮಂದಿ ಅತಿಶ್ರೀಮಂತರು, ದೇಶದ ಒಟ್ಟು ಆದಾಯದ ಶೇ. 22.6 ಪಾಲಿನ ಮಾಲಕರಾಗಿ ಬಿಟ್ಟಿದ್ದರು. ಅಂದರೆ ‘ಸಂಪತ್ತಿನ ಕೇಂದ್ರೀಕರಣ’ ಎಂಬ ಘೋರ, ಸಂಘಟಿತ, ಸಾಂಸ್ಥಿಕ, ಸಾಮೂಹಿಕ ಅನ್ಯಾಯವು ಬ್ರಿಟಿಷರ ಪ್ರಭುತ್ವವಿದ್ದ ಕಾಲಕ್ಕೆ ಹೋಲಿಸಿದರೆ ನಮ್ಮದೇ ಪ್ರಭುತ್ವದ ಕಾಲದಲ್ಲಿ, ಸುಮಾರು ಶೇ. 75ರಷ್ಟು ಅಧಿಕವಾಗಿಬಿಟ್ಟಿದೆ. 50ರ ಹಾಗೂ 80ರ ದಶಕಗಳಲ್ಲಿ ನಿಧಾನವಾಗಿದ್ದ, ಕೇಂದ್ರೀಕರಣದ ಈ ಹೊಲಸು ಪ್ರಕ್ರಿಯೆಯು ಮುಂದಿನ ದಶಕಗಳಲ್ಲಿ ಉದಾರೀಕರಣ, ಖಾಸಗೀಕರಣ ಇತ್ಯಾದಿ ಏಣಿಗಳನ್ನು ಬಳಸಿ ತುಂಬಾ ವೇಗವಾಗಿ ಬೆಳೆದು ಮೋದಿ ಆಡಳಿತದಲ್ಲಿ ಉತ್ತುಂಗವನ್ನು ತಲುಪಿತು.
ಸಂಪತ್ತು ಮತ್ತು ಸಂಪನ್ಮೂಲಗಳನ್ನು ಸಮಾಜದ ಬಹುಜನರಿಂದ ಕಿತ್ತುಕೊಂಡು, ಕೇವಲ ಕೆಲವೇ ಮಂದಿಯ ಏಕಸ್ವಾಮ್ಯಕ್ಕೆ ಒಪ್ಪಿಸಿಬಿಡುವ ಈ ಪ್ರಕ್ರಿಯೆ ಕಾಲಕ್ರಮೇಣ ಯಾವ ಮಟ್ಟಕ್ಕೆ ವಿಸ್ತರಿಸುತ್ತಾ ಹೋಗಿದೆ ಎಂಬುದು ಗಮನಾರ್ಹ.
1982ರಲ್ಲಿ ದೇಶದ ಒಟ್ಟು ಆದಾಯದ ಶೇ. 30 ಪಾಲು, ಕೇವಲ ಶೇ. 10 ಜನರ ಸ್ವಾಮ್ಯದಲ್ಲಿತ್ತು. 40 ವರ್ಷಗಳ ಬಳಿಕ 2022 ರಲ್ಲಿ, ಒಟ್ಟು ರಾಷ್ಟ್ರೀಯ ಆದಾಯದಲ್ಲಿ, ಇದೇ ಶೇ. 10 ಮಂದಿಯ ಪಾಲು ಶೇ. 60ಕ್ಕೆ ತಲುಪಿತ್ತು. ಸದ್ಯ ಭಾರತದಲ್ಲಿ ಕಂಡು ಬರುವ, ಆದಾಯದ ವಿವಿಧ ದರ್ಜೆಗಳು ನಿಜಕ್ಕೂ ವೀಕ್ಷಣೀಯ:
‘ವರ್ಲ್ಡ್ ಇನಿಕ್ವಾಲಿಟಿ ಲ್ಯಾಬ್’ ಸಂಸ್ಥೆಯ ವರದಿಯನುಸಾರ, 2022-23 ಸಾಲಿನ ದತ್ತಾಂಶಗಳ ಪ್ರಕಾರ, ಆದಾಯದ ಆಧಾರದಲ್ಲಿ ಭಾರತೀಯರು ಈ ಕೆಳಗಿನ ಅನೇಕ ವಿಭಿನ್ನ ಶ್ರೇಣಿಗಳಲ್ಲಿ ಗಣಿಸಲ್ಪಡುತ್ತಾರೆ.
* ಎಲ್ಲ ಭಾರತೀಯರ ಒಟ್ಟು ವಾರ್ಷಿಕ ಆದಾಯವನ್ನು ಸೇರಿಸಿ ನೋಡಿದರೆ, ಒಬ್ಬ ಸರಾಸರಿ ಭಾರತೀಯ ಪ್ರಜೆಯ ವಾರ್ಷಿಕ ಆದಾಯ ಸುಮಾರು ರೂ. 2.3 ಲಕ್ಷ ರೂಪಾಯಿ.
* ಬಡತನದ ಕನಿಷ್ಠ ರೇಖೆಗಿಂತ ಕೆಳಗಿರುವ, ಕೆಲವು ಕೋಟಿ ‘ಕಡುಬಡವ’ ಭಾರತೀಯರ ಸರಾಸರಿ ಆದಾಯ ರೂ. 64,800.
* ‘ಬಡವರು’ ಎಂದು ಗುರುತಿಸಲಾಗುವ, ಭಾರತದ ಕೆಳಸ್ತರದ ಶೇ. 50 ಜನಸಂಖ್ಯೆಯ ಸರಾಸರಿ ವಾರ್ಷಿಕ ಆದಾಯ ರೂ. 71,000.
* ‘ಮಧ್ಯಮವರ್ಗ’ ಎಂದು ಗುರುತಿಸಲಾಗುವ ಶೇ. 40 ಭಾರತೀಯರ ಸರಾಸರಿ ವಾರ್ಷಿಕ ಆದಾಯ ರೂ. 1.65 ಲಕ್ಷ.
* ಆರ್ಥಿಕವಾಗಿ ಅತ್ಯಧಿಕ ಸಂಪನ್ನರಾಗಿರುವ ಮೇಲ್‌ಸ್ತರದ ಶೇ. 10 ಶ್ರೀಮಂತರ ಸರಾಸರಿ ವಾರ್ಷಿಕ ಆದಾಯ ರೂ. 13.53 ಲಕ್ಷ.
* ಶ್ರೀಮಂತಿಕೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿರುವ ಶೇ. 1 ಭಾರತೀಯರ ಸರಾಸರಿ ವಾರ್ಷಿಕ ಆದಾಯ ರೂ. 53 ಲಕ್ಷ.
* ದೇಶದಲ್ಲಿ ‘ಅತ್ಯಂತ ಶ್ರೀಮಂತ’ರಾಗಿರುವ 10,000 ಮಂದಿಯ ಸರಾಸರಿ ವಾರ್ಷಿಕ ಆದಾಯ ರೂ. 48 ಕೋಟಿ.
* ‘ಅತ್ಯಂತ ಶ್ರೀಮಂತ’ರಾಗಿರುವ 1,000 ಮಂದಿಯ ಸರಾಸರಿ ವಾರ್ಷಿಕ ಆದಾಯ ರೂ. 70 ಕೋಟಿ.
* ‘ಅತ್ಯಂತ ಶ್ರೀಮಂತ’ರಾಗಿರುವ 100 ಮಂದಿಯ ಸರಾಸರಿ ವಾರ್ಷಿಕ ಆದಾಯ ರೂ. 6,400 ಕೋಟಿ.
* ‘ಅತ್ಯಂತ ಶ್ರೀಮಂತ’ರಾಗಿರುವ 10 ಮಂದಿಯ ಸರಾಸರಿ ವಾರ್ಷಿಕ ಆದಾಯ ರೂ. 19,600 ಕೋಟಿ.
ತುಲನಾತ್ಮಕವಾಗಿ ನೋಡಿದರೆ ಪರಿಸ್ಥಿತಿ ಹೀಗಿದೆ
* ‘ಸರಾಸರಿ ಭಾರತೀಯ’ ಎಂಬ ಕಾಲ್ಪನಿಕ ವ್ಯಕ್ತಿಯ ಸರಾಸರಿ ವಾರ್ಷಿಕ ಆದಾಯ, ಕಡುಬಡ ವರ್ಗದವರಿಗಿಂತ 3.5 ಪಟ್ಟು ಅಧಿಕ !
* ‘ಮಧ್ಯಮವರ್ಗ’ದ ಶೇ. 40 ಭಾರತೀಯರ ಸರಾಸರಿ ವಾರ್ಷಿಕ ಆದಾಯ, ಕಡುಬಡ ಭಾರತೀಯರ ಆದಾಯಕ್ಕಿಂತ ಕೇವಲ 2.5 ಪಟ್ಟು ಅಧಿಕ.
* ಮೇಲ್‌ಸ್ತರದ ಶೇ. 10 ಶ್ರೀಮಂತರ ಸರಾಸರಿ ವಾರ್ಷಿಕ ಆದಾಯ, ಕೆಳಸ್ತರದ ಶೇ. 50 ಜನಸಂಖ್ಯೆಯ ಆದಾಯಕ್ಕಿಂತ 19 ಪಟ್ಟು ಅಧಿಕ.
* ಅತ್ಯಧಿಕ ಶ್ರೀಮಂತರಾದ ಶೇ. 1 ಭಾರತೀಯರ ಸರಾಸರಿ ವಾರ್ಷಿಕ ಆದಾಯ, ಶೇ. 50 ಬಡ ಭಾರತೀಯರ ಆದಾಯಕ್ಕಿಂತ 75 ಪಟ್ಟು ಅಧಿಕ.
* 10,000 ಮಂದಿ ‘ಅತ್ಯಂತ ಶ್ರೀಮಂತ’ರ ವಾರ್ಷಿಕ ಆದಾಯ, ಶೇ. 50 ಜನಸಂಖ್ಯೆಯ ಸರಾಸರಿ ವಾರ್ಷಿಕ ಆದಾಯಕ್ಕಿಂತ 6,760 ಪಟ್ಟು ಅಧಿಕ.
* 1,000 ಮಂದಿ ‘ಅತ್ಯಂತ ಶ್ರೀಮಂತ’ರ ವಾರ್ಷಿಕ ಆದಾಯ, ಶೇ. 50 ಜನಸಂಖ್ಯೆಯ ಸರಾಸರಿ ವಾರ್ಷಿಕ ಆದಾಯಕ್ಕಿಂತ 9,860 ಪಟ್ಟು ಅಧಿಕ.
* 100 ಮಂದಿ ‘ಅತ್ಯಂತ ಶ್ರೀಮಂತ’ರ ವಾರ್ಷಿಕ ಆದಾಯ, ಶೇ. 50 ಜನಸಂಖ್ಯೆಯ ಸರಾಸರಿ ವಾರ್ಷಿಕ ಆದಾಯಕ್ಕಿಂತ 9 ಲಕ್ಷ ಪಟ್ಟು ಅಧಿಕ.
* 10 ಮಂದಿ ‘ಅತ್ಯಂತ ಶ್ರೀಮಂತ’ರ ವಾರ್ಷಿಕ ಆದಾಯ, ಶೇ. 50 ಜನಸಂಖ್ಯೆಯ ಸರಾಸರಿ ವಾರ್ಷಿಕ ಆದಾಯಕ್ಕಿಂತ 27.6 ಲಕ್ಷ ಪಟ್ಟು ಅಧಿಕ.
PEW ಸಂಶೋಧನಾ ಕೇಂದ್ರದ 2021ರ ವರದಿ ಪ್ರಕಾರ ಭಾರತದ ಜನಸಂಖ್ಯೆಯಲ್ಲಿ ವಿವಿಧ ಶ್ರೇಣಿಗಳು ಹೀಗಿವೆ
* ಕಡಿಮೆ ಆದಾಯದವರು - 120 ಕೋಟಿ ಮಂದಿ.
* ಮಧ್ಯಮ ಆದಾಯದವರು - 6.6 ಕೋಟಿ ಮಂದಿ.
* ಮೇಲ್ಮಧ್ಯಮ ಆದಾಯದವರು - 1.6 ಕೋಟಿ ಮಂದಿ.
* ಅಧಿಕ ಆದಾಯದವರು - 20 ಲಕ್ಷ ಮಂದಿ.
2021ರ ವರ್ಲ್ಡ್ ಬ್ಯಾಂಕ್‌ನವರ ಲೆಕ್ಕಾಚಾರ ಹೀಗಿದೆ
* ಶೇ. 93 ಭಾರತೀಯರ ಸರಾಸರಿ ದೈನಿಕ ಆದಾಯ 10 ಡಾಲರ್ (ರೂ. 860)ಗಿಂತ ಕಡಿಮೆ.
* ಶೇ. 99 ಭಾರತೀಯರ ಸರಾಸರಿ ದೈನಿಕ ಆದಾಯ 20 ಡಾಲರ್ (ರೂ. 1,729)ಗಿಂತ ಕಡಿಮೆ.
ಈ ಪಟ್ಟಿಯಲ್ಲಿ ಬಿಟ್ಟುಹೋದ ಶೇ. 1 ಅನುಕೂಲಸ್ಥ ಭಾರತೀಯರ ಸರಾಸರಿ ವಾರ್ಷಿಕ ಆದಾಯ ರೂ. 53 ಲಕ್ಷ. ಅಧಿಕೃತ ಮಾಹಿತಿ ಪ್ರಕಾರ, ಭಾರತದ 10 ಮಂದಿ ಅತ್ಯಧಿಕ ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಉದಯ್ ಕೋಟಕ್ ಬಳಿ 1,500 ಕೋಟಿ ಡಾಲರ್ ಮೊತ್ತದ ಸಂಪತ್ತಿದ್ದರೆ ಈ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿರುವ ಮುಕೇಶ್ ಅಂಬಾನಿಯ ಬಳಿ 10,700 ಕೋಟಿ ಡಾಲರ್ ಮೊತ್ತದ ಸಂಪತ್ತಿದೆ.
ಹೇಗಿದೆ, ನಾವೇ ಪ್ರಭುಗಳೆಂದು ನಮ್ಮನ್ನು ನಂಬಿಸಲಾಗಿರುವ ವ್ಯವಸ್ಥೆಯಲ್ಲಿ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ನ್ಯಾಯದ ಅವಸ್ಥೆ? ಈ ವಿಪರೀತ ಅಸಮತೋಲನಕ್ಕೆ, ನಮ್ಮನ್ನು ಆಳುವವರು ಅನುಷ್ಠಾನಿಸುತ್ತಾ ಬಂದ ಜನವಿರೋಧಿ ಆರ್ಥಿಕ ನೀತಿಗಳ ಜೊತೆ ಮಾತ್ರವಲ್ಲ, ನಮ್ಮ ಸಮಾಜಕ್ಕೆ ತಗಲಿದ ಜಾತಿವ್ಯವಸ್ಥೆ ಎಂಬ ಹಳೆಯ ರೋಗದ ಜೊತೆಗೂ ಒಂದು ನಿಗೂಢ ಸಂಬಂಧವಿದೆ. ಭಾರತದ ಬಿಲಿಯನೇರ್ (ಶತಕೋಟ್ಯಧಿಪತಿ)ಗಳ ಬಳಿ ಇರುವ ಸಂಪತ್ತಿನಲ್ಲಿ ಶೇ. 85ಕ್ಕಿಂತ ಹೆಚ್ಚಿನ ಪಾಲು ಮೇಲ್ಜಾತಿ ಯವರ ಕೈಯಲ್ಲಿದೆ. ಆ ಸಂಪತ್ತಿನಲ್ಲಿ ಹಿಂದುಳಿದ ಜಾತಿಗಳಿಗೆ ಸೇರಿದವರ ಕೈಯಲ್ಲಿರುವ ಪಾಲು ಶೇ. 9, ಪರಿಶಿಷ್ಟ ಜಾತಿಯವರಿಗೆ ಸೇರಿದ ಪಾಲು ಶೇ. 2.6 ಮತ್ತು ಪರಿಶಿಷ್ಟ ವರ್ಗಗಳ ಪಾಲು ಶೇ. 0.0 ಮಾತ್ರ.
ಅಝೀಮ್ ಪ್ರೇಮ್‌ಜಿ ವಿಶ್ವವಿದ್ಯಾನಿಲಯದವರು ಪ್ರಕಟಿಸಿದ ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ - 2023’ ವರದಿಯಲ್ಲಿ ಒಂದು ಟಿಪ್ಪಣಿ ಹೀಗಿದೆ:
‘‘ಭಾರತದಲ್ಲಿ ಎಲ್ಲ ಬಗೆಯ ಉದ್ದಿಮೆಗಳ ಮಾಲಕತ್ವದಲ್ಲಿ ‘ಜನರಲ್ ಕೆಟಗರಿ’ಯವರು ಅತಿಯಾದ ಪ್ರಾತಿನಿಧ್ಯ ಹೊಂದಿದ್ದಾರೆ. ಉದ್ದಿಮೆಯ ಗಾತ್ರವು ಹಿಗ್ಗುತ್ತಾ ಹೋದಂತೆ ಅವರ ‘ಅತಿಪ್ರಾತಿನಿಧ್ಯ’ ಕೂಡಾ ಹೆಚ್ಚುತ್ತಾ ಹೋಗುತ್ತದೆ.’’
ಉದ್ದಿಮೆಗಳ ಕಾರ್ಮಿಕ ವರ್ಗದಲ್ಲಿ ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯ ಶೇ. 19.3ರಷ್ಟಿದೆ. ಆದರೆ ಪರಿಶಿಷ್ಟ ಜಾತಿಗಳಿಗೆ ಸೇರಿದವರಲ್ಲಿ ಯಾವುದಾದರೂ ಉದ್ದಿಮೆಯ ಮಾಲಕರಾಗಿರುವವರು ಶೇ. 11.4 ಮಂದಿ ಮಾತ್ರ. ಕಾರ್ಮಿಕ ವರ್ಗದಲ್ಲಿ ಪರಿಶಿಷ್ಟ ಪಂಗಡಗಳಿಗೆ ಸೇರಿದವರ ಪ್ರಾತಿನಿಧ್ಯ ಶೇ. 10.1ರಷ್ಟಿದೆ. ಆದರೆ ಆ ಪಂಗಡಗಳಿಗೆ ಸೇರಿದ ಶೇ. 5.4 ಮಂದಿ ಮಾತ್ರ ಯಾವುದಾದರೂ ಉದ್ದಿಮೆಯ ಮಾಲಕರಾಗಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಾಲಕತ್ವವು ಹೆಚ್ಚಾಗಿ ತೀರಾ ಸಣ್ಣ ಉದ್ದಿಮೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
2019ರಲ್ಲಿ ಪ್ರಕಟವಾದ, ಬೆಂಗಳೂರು ಐಐಎಂ ಸಿಬ್ಬಂದಿ ನಡೆಸಿದ ಒಂದು ಅಧ್ಯಯನದಿಂದ ತಿಳಿದು ಬಂದಂತೆ ಭಾರತದ 1,000 ಅತ್ಯಂತ ಯಶಸ್ವಿ ಕಂಪೆನಿಗಳ ನಿರ್ದೇಶಕ ಮಂಡಳಿಗಳಲ್ಲಿ, ಅತ್ಯುನ್ನತ ಮಟ್ಟದ ಶೇ. 93 ಹುದ್ದೆಗಳು ಮೇಲ್ಜಾತಿಯವರ ಕೈಗಳಲ್ಲಿದ್ದವು.