Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಚರ್ಚಾರ್ಹ
  5. ಕೊಳ್ಳೆಕೋರರಿಂದ ಕಿತ್ತುಕೊಳ್ಳುವ ತನಕ...

ಕೊಳ್ಳೆಕೋರರಿಂದ ಕಿತ್ತುಕೊಳ್ಳುವ ತನಕ ಪ್ರಭುತ್ವ ನಮ್ಮದಾಗದು

ಶಂಬೂಕಶಂಬೂಕ4 Jun 2025 12:59 PM IST
share
ಕೊಳ್ಳೆಕೋರರಿಂದ ಕಿತ್ತುಕೊಳ್ಳುವ ತನಕ ಪ್ರಭುತ್ವ ನಮ್ಮದಾಗದು
ಬಡತನವನ್ನು ಅಳಿಸಬೇಕಾಗಿದ್ದ ನಮ್ಮ ಆಡಳಿತಗಾರರು ಬಡವರನ್ನು, ಅವರ ಹಕ್ಕುಗಳನ್ನು, ಅವರ ಧ್ವನಿಯನ್ನು, ಅವರ ಆಶಾವಾದವನ್ನು, ಬಡತನದಿಂದ ಹೊರಬರಲು ಅವರಿಗಿರುವ ಅವಕಾಶಗಳನ್ನು ಮತ್ತು ಬಡತನದ ಕುರಿತಾದ ಮಾಹಿತಿಗಳನ್ನು ಹತ್ತಿಕ್ಕುವುದರಲ್ಲಿ ನಿರತರಾಗಿದ್ದಾರೆ. ನಾವೇಕೆ ಬಡವರು ಎಂದು ಪ್ರಶ್ನಿಸುವ ಬಡವರ ಅಧಿಕಾರವನ್ನು ಹಾಗೂ ಬಡತನಕ್ಕೆ ಕಾರಣಗಳೇನು ಮತ್ತು ಅದಕ್ಕೆ ಹೊಣೆಗಾರರು ಯಾರು ಎಂಬ ಚರ್ಚೆಯನ್ನು ಅಳಿಸುವುದರಲ್ಲಿ ಮಗ್ನರಾಗಿದ್ದಾರೆ. ಯೋಜಿತ ಹಾಗೂ ಸಂಘಟಿತವಾಗಿ ದೇಶದ ಬಹುಜನರ ಮೇಲೆ ಹೇರಿದವರು, ಬಡತನದ ಕುರಿತಾದ ಯುವುದೇ ಚರ್ಚೆಯನ್ನು ತಡೆಯುವುದಕ್ಕಾಗಿ, ಜನರಿಗೆ ಅಪ್ರಸ್ತುತ ಹಾಗೂ ನಕಲಿ ಚರ್ಚಾ ವಿಷಯಗಳ ಒಂದು ದೀರ್ಘ ಪಟ್ಟಿಯನ್ನೇ ನೀಡುತ್ತಿರುತ್ತಾರೆ. ಸಾಲದ್ದಕ್ಕೆ ಅವರು ಬಡತನದ ಅಸ್ತಿತ್ವವನ್ನೇ ಮರೆಮಾಚುತ್ತಿದ್ದಾರೆ.

ಭಾಗ- 1

ಇಂದು ಭಾರತದಲ್ಲಿ ‘ಇಲ್ಲಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ - ಆದ್ದರಿಂದ ಪ್ರಜೆಗಳಾದ ನಾವೇ ವ್ಯವಸ್ಥೆಯ ಪ್ರಭುಗಳು’ ಎಂದು ನಂಬಿರುವ ಕೋಟ್ಯಂತರ ಬಡಪಾಯಿ, ಮುಗ್ಧ ಜನಸಾಮಾನ್ಯರು ಯಾವ ಮಟ್ಟಿಗೆ ಪ್ರಭುಗಳಾಗಿದ್ದಾರೆ?

‘‘...ಸಮಸ್ತ ನಾಗರಿಕರಿಗೆ: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ: ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು...’’ ಇತ್ಯಾದಿಯಾಗಿ ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲೇ ವಿಜೃಂಭಿಸುವ ಈ ಭಾರವಾದ, ಚಂದದ ಪದಗಳು ಇಂದಿನ ನಮ್ಮ ಸಮಾಜ ಮತ್ತು ನಮ್ಮ ಜನಸಾಮಾನ್ಯರ ಬದುಕಿನ ಮೇಲೆ ಬೀರಿರುವ ಪರಿಣಾಮ ಎಷ್ಟು? ವ್ಯವಸ್ಥೆಯ ಔಪಚಾರಿಕ ಪ್ರಭುವಿಗೆ ನ್ಯಾಯ ಮತ್ತು ಸಮಾನತೆ ಯನ್ನು ಕೊಡಿಸುವಲ್ಲಿ ಈ ಪದಗಳು ಯಾವ ಮಟ್ಟಿಗೆ ಯಶಸ್ವಿಯಾಗಿವೆ? ಇವು, ದೇಶವೆಲ್ಲಾ ತುರ್ತಾಗಿ ಚರ್ಚಿಸಬೇಕಾದ ಮತ್ತು ಪ್ರಭುತ್ವವು ನ್ಯಾಯೋಚಿತವಾಗಿ ಯಾರಿಗೆ ಸೇರಬೇಕಿತ್ತೋ ಅವರಿಗೆ ಸೇರುವ ತನಕವೂ ಚರ್ಚಿಸುತ್ತಲೇ ಇರಬೇಕಾದ ಪ್ರಶ್ನೆಗಳು.

‘‘ದೇಶದ ಆರ್ಥಿಕತೆ ಕ್ಷಿಪ್ರವಾಗಿ ಬೆಳೆಯುತ್ತಿದೆ. ’’ ‘‘ಜಗತ್ತಿನಲ್ಲೇ ಅತ್ಯಧಿಕ ವೇಗದಿಂದ ಬೆಳೆಯುತ್ತಿರುವ ಆರ್ಥಿಕತೆ ನಮ್ಮದು.’’ ‘‘ಜಗತ್ತಿನ ತೃತೀಯ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆಯುತ್ತಿದೆ.’’ ‘‘ಕಳೆದ ಒಂದು ದಶಕದಲ್ಲಿ ಭಾರತದ ಆರ್ಥಿಕತೆ ಶೇ. 66 ಬೆಳವಣಿಗೆ ಸಾಧಿಸಿದೆ.’’ ‘‘ಶೀಘ್ರವೇ ನಮ್ಮ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಮಟ್ಟವನ್ನು ತಲುಪಲಿದೆ.’’ ಇವೇ ಮುಂತಾದ, ಪದೇ ಪದೇ ಮೊಳಗುತ್ತಲಿರುವ ಪುಢಾರಿಗಳ ಘೋಷಣೆಗಳೆಲ್ಲ, ದೇಶದ ದಾರಿದ್ರ್ಯ ಪೀಡಿತ, ನ್ಯಾಯವಂಚಿತ ಜನಸಾಮಾನ್ಯರ ಪಾಲಿಗೆ ಯಾವುದೇ ಅರ್ಥವಿಲ್ಲದ ಕೇವಲ ಟೊಳ್ಳು ಶಬ್ದಗಳಾಗಿಬಿಟ್ಟಿವೆ. ಅವರೆಷ್ಟು ಕಣ್ಣಗಲಿಸಿ ನೋಡಿದರೂ ಅವರಿಗೆ ತಮ್ಮ ಅಕ್ಕಪಕ್ಕ ಮತ್ತು ಸುತ್ತಮುತ್ತ ಕಾಣಿಸು ವುದು, ನಿತ್ಯವೂ ಹೆಚ್ಚುತ್ತಲೇ ಇರುವ ತಮ್ಮ ದಾರಿದ್ರ್ಯ, ಸಂಕಷ್ಟ, ಅಸಹಾಯಕತೆ ಮತ್ತು ಹತಾಶೆ ಮಾತ್ರ.

ಇನ್ನಷ್ಟು ಆಘಾತಕಾರಿ ಸಂಗತಿಯೇನೆಂದರೆ, ಬಡತನವನ್ನು ಅಳಿಸಬೇಕಾಗಿದ್ದ ನಮ್ಮ ಆಡಳಿತಗಾರರು ಬಡವರನ್ನು, ಅವರ ಹಕ್ಕುಗಳನ್ನು, ಅವರ ಧ್ವನಿಯನ್ನು, ಅವರ ಆಶಾವಾದವನ್ನು, ಬಡತನದಿಂದ ಹೊರಬರಲು ಅವರಿಗಿರುವ ಅವಕಾಶಗಳನ್ನು ಮತ್ತು ಬಡತನದ ಕುರಿತಾದ ಮಾಹಿತಿಗಳನ್ನು ಹತ್ತಿಕ್ಕುವುದರಲ್ಲಿ ನಿರತರಾಗಿದ್ದಾರೆ. ನಾವೇಕೆ ಬಡವರು ಎಂದು ಪ್ರಶ್ನಿಸುವ ಬಡವರ ಅಧಿಕಾರವನ್ನು ಹಾಗೂ ಬಡತನಕ್ಕೆ ಕಾರಣಗಳೇನು ಮತ್ತು ಅದಕ್ಕೆ ಹೊಣೆಗಾರರು ಯಾರು ಎಂಬ ಚರ್ಚೆಯನ್ನು ಅಳಿಸುವುದರಲ್ಲಿ ಮಗ್ನರಾಗಿದ್ದಾರೆ. ಯೋಜಿತ ಹಾಗೂ ಸಂಘಟಿತವಾಗಿ ದೇಶದ ಬಹುಜನರ ಮೇಲೆ ಹೇರಿದವರು, ಬಡತನದ ಕುರಿತಾದ ಯುವುದೇ ಚರ್ಚೆಯನ್ನು ತಡೆಯುವುದಕ್ಕಾಗಿ, ಜನರಿಗೆ ಅಪ್ರಸ್ತುತ ಹಾಗೂ ನಕಲಿ ಚರ್ಚಾ ವಿಷಯಗಳ ಒಂದು ದೀರ್ಘ ಪಟ್ಟಿಯನ್ನೇ ನೀಡುತ್ತಿರುತ್ತಾರೆ. ಸಾಲದ್ದಕ್ಕೆ ಅವರು ಬಡತನದ ಅಸ್ತಿತ್ವವನ್ನೇ ಮರೆಮಾಚುತ್ತಿದ್ದಾರೆ. ಬಡತನ, ಹಸಿವು, ನಿರುದ್ಯೋಗ, ನಿರಾಶ್ರಯ ಇತ್ಯಾದಿ ಎಲ್ಲ ಸಮಸ್ಯೆಗಳ ಕುರಿತಾದ ಮಾಹಿತಿ, ಅಂಕೆ-ಸಂಖ್ಯೆ ಮತ್ತು ದತ್ತಾಂಶಗಳನ್ನು ಅಳಿಸಿಹಾಕುವ ಮತ್ತು ಅವುಗಳ ಜಾಗದಲ್ಲಿ ತೀರಾ ಕಾಲ್ಪನಿಕವಾದ, ಅಮಲು ಬರಿಸುವ, ಅಪ್ಪಟ ಸುಳ್ಳು ಮಾಹಿತಿಗಳನ್ನು ರಾಶಿರಾಶಿಯಾಗಿ ಸೃಷ್ಟಿಸಿ ಜನರನ್ನು ಭ್ರಮಾಲೋಕಕ್ಕೆ ತಳ್ಳುವ ಅಪರಾಧ ಕೃತ್ಯಕ್ಕೆ ಇಳಿದುಬಿಟ್ಟಿದ್ದಾರೆ. 2011 ರ ಬಳಿಕ ಜನಗಣತಿ ನಡೆಸಲು ನಿರಾಕರಿಸುವ ಮೂಲಕ ಸರಕಾರವು ಮಾಹಿತಿ ಮರೆಮಾಚುವ ಧೋರಣೆಯನ್ನು ಅಧಿಕೃತಗೊಳಿಸಿಬಿಟ್ಟಿದೆ.

ಎಷ್ಟು ಮರೆಮಾಚಿದರೂ ಅಡಗಿಸಿಡಲಾಗದ, ಇಂದಿನ ನಮ್ಮ ಜನಸಾಮಾನ್ಯನ ನೈಜ ಸ್ಥಿತಿಯನ್ನು ಪ್ರತಿಬಿಂಬಿಸುವ ಕೆಲವು ಪ್ರಾತಿನಿಧಿಕ ದೃಶ್ಯಗಳು ಇಲ್ಲಿವೆ:

ಅಸ್ವಸ್ಥ ಮಕ್ಕಳು

ರಕ್ತದ ಗುಣಮಟ್ಟ ಹೇಗಿದೆ ಎಂಬುದು, ಸಾಮಾನ್ಯವಾಗಿ ಜನರ ಆರೋಗ್ಯ ಹೇಗಿದೆ ಎಂಬುದನ್ನು ಅಳೆಯುವುದಕ್ಕೆ ಬಳಸಲಾಗುವ ಒಂದು ಸರಳ, ಪ್ರಾಥಮಿಕ ಮಾಪಕ. ತನ್ನ ರಕ್ತನಾಳದಲ್ಲಿ ಹರಿಯುತ್ತಿರುವುದು ಬಿಸಿ ಸಿಂಧೂರವೇ ಹೊರತು ರಕ್ತವಲ್ಲ ಎಂದು ಜಗತ್ತಿನ ಮುಂದೆ ಸ್ಪಷ್ಟವಾಗಿ, ಏರಿದ ಧ್ವನಿಯಲ್ಲಿ ಘೋಷಿಸಿರುವ ನಮ್ಮ ದೇಶದ ಪ್ರಧಾನಿ, ಬಾಲ್ಯದಲ್ಲೇ ಮೊಸಳೆಗಳನ್ನು ಹಿಡಿದು ಮನೆಗೆ ತರುತ್ತಿದ್ದ ‘ನಾನ್ ಬಯಾಲಾಜಿಕಲ್’ ಮಹಾಮಾನವನಾದ್ದರಿಂದ ಅವರದ್ದು ವಿಶೇಷ ಕೇಸು. ಆದರೆ ಉಳಿದ ಭಾರತೀಯರ ಸ್ಥಿತಿ ಏನು? ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್-5) ವರದಿಯನುಸಾರ 2019-21ರ ಸಾಲಲ್ಲಿ 15ರಿಂದ 49 ವರ್ಷ ವಯಸ್ಸಿನ ಭಾರತೀಯ ಪುರುಷರ ಪೈಕಿ ಶೇ. 25 ಮಂದಿ ರಕ್ತಹೀನತೆ(anemia)ಯಿಂದ ಬಳಲುತ್ತಿದ್ದಾರೆ. ಮಹಿಳೆಯರಲ್ಲಂತೂ ಈ ಪ್ರಮಾಣ ದುಪ್ಪಟ್ಟಿಗಿಂತಲೂ ಅಧಿಕವಿದೆ. ಅದೇ ವಯೋಮಾನದ ಭಾರತೀಯ ಮಹಿಳೆಯರ ಪೈಕಿ ಶೇ. 57 ಮಂದಿ ರಕ್ತಹೀನತೆಯಿಂದ ಬಾಧಿತರಾಗಿದ್ದಾರೆ. ಇದೇ ವಯೋಮಿತಿಯ ಗರ್ಭಿಣಿಯರ ಪೈಕಿ ಅರ್ಧಕ್ಕಿಂತಲೂ ಹೆಚ್ಚಿನವರು (ಶೇ. 52.2) ರಕ್ತಹೀನತೆಗೆ ತುತ್ತಾಗಿದ್ದಾರೆ. ಗರ್ಭಿಣಿಯರು ಅನಾರೋಗ್ಯ ಪೀಡಿತರಾಗಿದ್ದರೆ, ಸಹಜವಾಗಿಯೇ ಅವರ ಗರ್ಭದಿಂದ ಜನಿಸುವ ಮಕ್ಕಳ ಆರೋಗ್ಯ ಕೂಡಾ ಬಾಧಿತವಾಗುತ್ತದೆ. 6ರಿಂದ 59 ತಿಂಗಳು ವಯೋಮಿತಿಯ ಪುಟ್ಟ ಭಾರತೀಯ ಮಕ್ಕಳ ಪೈಕಿ ಶೇ. 67.1 ಮಕ್ಕಳು ರಕ್ತಹೀನತೆಯಿಂದ ನರಳುತ್ತಿದ್ದಾರೆ. ಈ ರೀತಿ ಒಂದು ದೇಶದ ಮುಕ್ಕಾಲಂಶ ಶಿಶುಗಳು ಅನೀಮಿಯಾ ಪೀಡಿತರಾಗಿದ್ದರೆ, ಆ ದೇಶದ ಭವಿಷ್ಯ ಹೇಗಿದ್ದೀತು? ಒಲಿಂಪಿಕ್ಸ್‌ನಲ್ಲಿ ಅದರ ಸಾಧನೆ ಹೇಗಿದ್ದೀತು?

ಇದು, 2018ರಲ್ಲಿ ಕೇಂದ್ರ ಸರಕಾರವು ‘ಅನೀಮಿಯಾ ಮುಕ್ತ್ ಭಾರತ್’ ಅಭಿಯಾನ ಆರಂಭಿಸಿದ ಬಳಿಕದ ಸ್ಥಿತಿ. ನಿಜವಾಗಿ ಅನೀಮಿಯಾ, ದಾರಿದ್ರ್ಯದ ನೇರ ಪರಿಣಾಮವಾಗಿದೆ. ಜನಸಾಮಾನ್ಯನ ಆದಾಯವು, ಪ್ರತಿದಿನ ಆರೋಗ್ಯಕರ ಹಾಗೂ ಪೋಷಕಾಂಶ ಸಂಪನ್ನ ಆಹಾರವನ್ನು ಖರೀದಿಸಬಲ್ಲಷ್ಟು ಹೆಚ್ಚುವ ತನಕ ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ವಿಶ್ವ ಸಂಸ್ಥೆಯ ಆಹಾರ ಮತ್ತು ವ್ಯವಸಾಯ ಸಂಘಟನೆ (ಎಫ್‌ಎಒ)ಯವರ 2023ರ ವರದಿಯನುಸಾರ ಭಾರತದಲ್ಲಿ ಶೇ. 74 ನಾಗರಿಕರು ಆರೋಗ್ಯಕರ ಆಹಾರ ಖರೀದಿಸಲು ಕೂಡಾ ಅಶಕ್ತರಾಗಿದ್ದಾರೆ. ಇಂತಹ ದಟ್ಟ ದಾರಿದ್ರ್ಯದಿಂದ ಮುಕ್ತವಾಗುವ ತನಕ ನಮ್ಮ ಸಮಾಜವು ‘ಅನೀಮಿಯಾ ಮುಕ್ತ’ವಾಗಲು ಸಾಧ್ಯವಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ದೇಶವು ಅನೀಮಿಯಾ ಪೀಡಿತವಾಗಿರುವುದು, ಇಲ್ಲಿ ದಾರಿದ್ರ್ಯವನ್ನು ಎಷ್ಟೊಂದು ದೈತ್ಯ ಗಾತ್ರದಲ್ಲಿ ಹೇರಲಾಗಿದೆ ಎಂಬುದಕ್ಕಿರುವ ಹಲವಾರು ಸೂಚಿಗಳ ಪೈಕಿ ಕೇವಲ ಒಂದು ಸೂಚಿ ಮಾತ್ರ. ಇತರ ಕೆಲವು ಸೂಚಿಗಳನ್ನೂ ಗಮನಿಸೋಣ:

* ದೇಶದಲ್ಲಿರುವ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪೈಕಿ ಶೇ. 35.5 ಮಕ್ಕಳ ದೈಹಿಕ ಬೆಳವಣಿಗೆಯು ಬಾಧಿತವಾಗಿದೆ. ಅಂದರೆ ಅವರು ತಮ್ಮ ವಯೋ ಸಹಜ ಎತ್ತರಕ್ಕೆ ಬೆಳೆದಿಲ್ಲ. ಈ ರೀತಿ ಅವರ ಬೆಳವಣಿಗೆ ಬಾಧಿತವಾಗಿರುವುದಕ್ಕೆ, ಜನಿಸುವಾಗಲೇ ಅವರ ಭಾರ ಸರಾಸರಿಗಿಂತ ಕಡಿಮೆ ಇರುವುದು ಮತ್ತು ಆ ಬಳಿಕ ಶೈಶವದಲ್ಲಿ ಸಾಕಷ್ಟು ಪೋಷಕಾಂಶ ಲಭ್ಯವಾಗದೆ ಇರುವುದು ಕಾರಣವಾಗಿದೆ.

* ಭಾರತದ ಶೇ. 19.3 ಮಕ್ಕಳು ತಮ್ಮ ಎತ್ತರಕ್ಕೆ ಹೋಲಿಸಿದರೆ ತೀರಾ ಕಡಿಮೆ ಭಾರದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತಿನ್ನಲು ಸಾಕಷ್ಟು ಆಹಾರ ಲಭ್ಯವಿಲ್ಲದಾಗ ಅಥವಾ ಯಾವುದಾದರೂ ಸೋಂಕು ರೋಗದಿಂದ ಬಾಧಿತರಾದಾಗ ಈ ಸಮಸ್ಯೆ ತಲೆದೋರುತ್ತದೆ.

* ದೇಶದ ಶೇ. 32.1 ಮಕ್ಕಳು ತಮ್ಮ ವಯಸ್ಸಿಗೆ ಹೋಲಿಸಿದರೆ, ಕಡಿಮೆ ಭಾರದ ಸಮಸ್ಯೆಯಿಂದ ನರಳುತ್ತಿದ್ದಾರೆ. ಇದಕ್ಕೂ ಪೌಷ್ಟಿಕ ಆಹಾರದ ಕೊರತೆ ಮುಖ್ಯ ಕಾರಣವಾಗಿದೆ.

(ಪ್ರಸ್ತುತ ಎಲ್ಲ ಮಾಹಿತಿಗಳಿಗೆ ಆಧಾರ - ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಎನ್‌ಎಫ್‌ಎಚ್‌ಎಸ್-5)

ಪೌಷ್ಟಿಕಾಂಶದ ಕೊರತೆಯು ಮಕ್ಕಳ ಭಾರ ಮತ್ತು ಎತ್ತರವನ್ನು ಮಾತ್ರವಲ್ಲದೆ ಅವರ ಒಟ್ಟು ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆ ಮತ್ತು ಸಾಮರ್ಥ್ಯವನ್ನು ಕೂಡಾ ಬಾಧಿಸುತ್ತದೆ. ಹಾಗೆಯೇ ಅದು ಅವರ ಪ್ರತಿರೋಧ ಶಕ್ತಿಯನ್ನು ಕುಂದಿಸಿ ಅನೇಕ ಬಗೆಯ ಅನಾರೋಗ್ಯಗಳಿಗೆ ತುತ್ತಾಗುವುದಕ್ಕೂ ಕಾರಣವಾಗುತ್ತದೆ.

ಇಲ್ಲಿ ಇನ್ನೊಂದು ಸಂಗತಿ ಗಮನಾರ್ಹವಾಗಿದೆ. ಜನರು ಎಷ್ಟು ಆರೋಗ್ಯವಂತರಾಗಿರುತ್ತಾರೆ ಎಂಬುದು ಕೇವಲ ಅವರ ಆದಾಯವನ್ನು ಮಾತ್ರ ಅವಲಂಬಿಸಿರುವುದಿಲ್ಲ. ಅದೆಷ್ಟೋ ಮಂದಿ ಆರೋಗ್ಯಕರ ಆಹಾರ, ಪೋಷಕಾಂಶ, ಸಕಾಲದಲ್ಲಿ ಮೇಲ್ವಿಚಾರಣೆ, ಚಿಕಿತ್ಸೆ, ಆರೈಕೆ ಇತ್ಯಾದಿಗಳಿಂದ ವಂಚಿತರಾಗಿರುವುದಕ್ಕೆ ಅವರ ಆರ್ಥಿಕ ಸ್ಥಿತಿಯೊಂದೇ ಕಾರಣವಾಗಿರುವುದಿಲ್ಲ. ಬುಡಕಟ್ಟು ಜನಾಂಗದವರು, ಕೆಳಜಾತಿಯವರು, ಗ್ರಾಮವಾಸಿಗಳು, ಹೆಣ್ಣುಮಕ್ಕಳು ಎಂಬಿತ್ಯಾದಿ ಹಿನ್ನೆಲೆಗಳೂ ಈ ವಿಷಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

2018ರಲ್ಲಿ ಬಂದ ನಾಲ್ಕನೇ ಎನ್‌ಎಫ್‌ಎಚ್‌ಎಸ್ ವರದಿಯನುಸಾರ ಒಟ್ಟು ದೇಶದಲ್ಲಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳ ಪೈಕಿ ಶೇ. 38 ಮಕ್ಕಳು ತಮ್ಮ ವಯಸ್ಸಿಗೆ ತಕ್ಕ ಎತ್ತರ ಇಲ್ಲದೆ, ಶೇ. 21 ಮಕ್ಕಳು ತಮ್ಮ ಎತ್ತರಕ್ಕೆ ತಕ್ಕ ಭಾರವಿಲ್ಲದೆ ಮತ್ತು ಶೇ. 36 ಮಕ್ಕಳು ತಮ್ಮ ವಯಸ್ಸಿಗೆ ತಕ್ಕ ಭಾರ ಇಲ್ಲದೆ ನರಳುತ್ತಿದ್ದರು. ಇದು ಸಾಮಾನ್ಯ ಬಡ ಮಕ್ಕಳ ಸ್ಥಿತಿಯಾದರೆ, ಪರಿಶಿಷ್ಟ ವರ್ಗ (ಎಸ್ಟಿ) ಮತ್ತು ಪರಿಶಿಷ್ಟ ಜಾತಿ (ಎಸ್ಸಿ)ಗಳಿಗೆ ಸೇರಿದ ಮಕ್ಕಳಲ್ಲಿ ಪ್ರಸ್ತುತ ಸಮಸ್ಯೆಗಳು ಗಣನೀಯ ಪ್ರಮಾಣದಲ್ಲಿ ಅಧಿಕವಾಗಿದ್ದವು. ಎಸ್ಟಿಗೆ ಸೇರಿದ ಶೇ. 43.8 ಮಕ್ಕಳು ಮತ್ತು ಎಸ್ಸಿಗೆ ಸೇರಿದ ಶೇ. 42.8 ಮಕ್ಕಳು ತಮ್ಮ ವಯಸ್ಸಿಗೆ ತಕ್ಕ ಎತ್ತರಕ್ಕೆ ಬೆಳೆಯದೆ ನರಳುತ್ತಿದ್ದರು. ಎಸ್ಟಿಗೆ ಸೇರಿದ ಶೇ. 27.4 ಮಕ್ಕಳು ಮತ್ತು ಎಸ್ಸಿಗೆ ಸೇರಿದ ಶೇ. 21.2 ಮಕ್ಕಳು ತಮ್ಮ ಎತ್ತರಕ್ಕೆ ತಕ್ಕ ಭಾರ ಇಲ್ಲದೆ ನರಳುತ್ತಿದ್ದರು. ಶೇ. 45.3 ಎಸ್ಟಿ ಮಕ್ಕಳು ಹಾಗೂ ಶೇ. 39.1 ಎಸ್ಸಿ ಮಕ್ಕಳು ತಮ್ಮ ವಯಸ್ಸಿಗೆ ತಕ್ಕ ಭಾರ ಪಡೆಯದೇ ನರಳುತ್ತಿದ್ದರು. ಒಟ್ಟು ದೇಶದಲ್ಲಿ 5 ವರ್ಷಕ್ಕಿಂತ ಕೆಳಗಿನ ಶೇ. 58 ಮಕ್ಕಳು ರಕ್ತಹೀನತೆಯಿಂದ ನರಳುತ್ತಿದ್ದರೆ, ಈ ಪ್ರಮಾಣ ಎಸ್ಟಿ ಮಕ್ಕಳಲ್ಲಿ ಶೇ. 63.1, ಎಸ್ಸಿ ಮಕ್ಕಳಲ್ಲಿ ಶೇ. 60.5, ಒಬಿಸಿ ಮಕ್ಕಳಲ್ಲಿ ಶೇ. 58.6 ಮತ್ತು ಜನರಲ್ ಕೆಟಗರಿಯ ಮಕ್ಕಳಲ್ಲಿ ಶೇ. 53.9ರಷ್ಟಿತ್ತು.

ಶಿಕ್ಷಣ ಮತ್ತು ಸಾಕ್ಷರತೆ

2011ರ ಜನಗಣತಿ ಪ್ರಕಾರ ಶೇ. 74 ಭಾರತೀಯರು ಮಾತ್ರ ಸಾಕ್ಷರರಾಗಿದ್ದರು. ಆ ಬಳಿಕ ಶೇ. 100 ಸಾಕ್ಷರತೆ ಸಾಧಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಸ್ವಯಂಸೇವಕ ಸಂಸ್ಥೆಗಳು ನಡೆಸಿದ ಹಲವು ಅಭಿಯಾನಗಳ ಹೊರತಾಗಿಯೂ ಈ ವರೆಗೆ ಆ ಗುರಿಯನ್ನು ಸಾಧಿಸಲು ನಮಗೆ ಸಾಧ್ಯವಾಗಿಲ್ಲ. ತಜ್ಞರ ಅಂದಾಜಿನಂತೆ 2025ರಲ್ಲಿ ಹೆಚ್ಚೆಂದರೆ ಶೇ.80 ರಿಂದ 85 ಮಂದಿ (ಅದರಲ್ಲೂ ಮಹಿಳೆಯರಲ್ಲಿ ಕೇವಲ ಸುಮಾರು ಶೇ. 70 ಮಂದಿ) ಸಾಕ್ಷರರಾಗಿರುವ ಸಾಧ್ಯತೆ ಇದೆ. ಅಂದರೆ ಕನಿಷ್ಠ ಶೇ. 15 ಭಾರತೀಯರು ಈಗಲೂ ನಿರಕ್ಷರಿಗಳಾಗಿದ್ದಾರೆ. ಜಪಾನ್‌ನಂತಹ ದೇಶದಲ್ಲಿ ಜನಸಂಖ್ಯೆಯ ಶೇ. 15 ಅಂದರೆ ಸುಮಾರು 1.84 ಕೋಟಿ ಜನರು. ಆದರೆ ಭಾರತದಲ್ಲಿ ಶೇ. 15 ಜನರೆಂದರೆ ಅವರ ಸಂಖ್ಯೆ 21 ಕೋಟಿಗಿಂತ ಅಧಿಕವಾಗುತ್ತದೆ. ಉನ್ನತ ಶಿಕ್ಷಣದ ರಂಗದಲ್ಲೂ ನಮ್ಮ ಸಾಧನೆ ಅಭಿಮಾನಕ್ಕಿಂತ ಹೆಚ್ಚು ಮುಜುಗರ ಪಡುವ ಮಟ್ಟದಲ್ಲಿದೆ. ಇದು ಜನಸಾಮಾನ್ಯನ ಶಿಕ್ಷಣದ ವಿಷಯದಲ್ಲಿ ವ್ಯವಸ್ಥೆಯು ತಾಳಿರುವ ನಿರಾಸಕ್ತಿಗೆ ಸಾಕ್ಷಿಯಾಗಿದೆ. ಪ್ರಧಾನಮಂತ್ರಿಯವರ ವಿದ್ಯಾರ್ಹತೆಯ ಬಗ್ಗೆಯೇ ದಟ್ಟ ಸಂಶಯ ಇರುವ ನಮ್ಮ ದೇಶದಲ್ಲಿ, ಈ ಕುರಿತು ವಿಶೇಷ ಚರ್ಚೆಯೇನೂ ನಡೆಯುತ್ತಿಲ್ಲ ಎಂಬುದರಲ್ಲಿ ಅಚ್ಚರಿ ಪಡುವುದಕ್ಕೇನೂ ಇಲ್ಲ.

ಬಾಲಕಾರ್ಮಿಕರು

ಶಾಲೆಗಳಲ್ಲಿರಬೇಕಾಗಿದ್ದ 5ರಿಂದ 14 ವರ್ಷ ವಯಸ್ಸಿನ ಲಕ್ಷಾಂತರ ಭಾರತೀಯ ಮಕ್ಕಳು ಹೊಟ್ಟೆ ತುಂಬಲಿಕ್ಕಾಗಿ ಬಾಲಕಾರ್ಮಿಕರಾಗಿ ಹೊಲಗಳಲ್ಲಿ ಅಥವಾ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಲು ನಿರ್ಬಂಧಿತರಾಗಿದ್ದಾರೆ. 2011ರ ಜನಗಣತಿ ವರದಿಯ ಪ್ರಕಾರ ದೇಶದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಸುಮಾರು ಒಂದು ಕೋಟಿಯಷ್ಟಿತ್ತು. ಕೆಲವು ತಜ್ಞರ ಇತ್ತೀಚಿನ ಅಂದಾಜು ಪ್ರಕಾರ ಈಗಲೂ ದೇಶದಲ್ಲಿ ಸುಮಾರು 1.3 ಕೋಟಿಯಷ್ಟು ಬಾಲ ಕಾರ್ಮಿಕರಿದ್ದಾರೆ.

ವೇಶ್ಯಾವಾಟಿಕೆ

ಒಂದು ಅಂದಾಜಿನಂತೆ ಇಂದು ನಮ್ಮ ದೇಶದಲ್ಲಿ ದಾರಿದ್ರ್ಯದ ಕಾರಣದಿಂದ ವೇಶ್ಯಾವಾಟಿಕೆಗೆ ಶರಣಾದ ಅಥವಾ ಆ ವೃತ್ತಿಗೆ ಬಲವಂತವಾಗಿ ತಳ್ಳಲ್ಪಟ್ಟ ಹೆಣ್ಣುಮಕ್ಕಳ ಸಂಖ್ಯೆ ಸುಮಾರು 30 ಲಕ್ಷದಷ್ಟಿದೆ. ಅವರಲ್ಲಿ ಹೆಚ್ಚಿನವರು 15ರಿಂದ 35ರ ಹರೆಯದವರು.

ಕೊಳಚೆವಾಸಿಗಳು

ದೇಶದಲ್ಲಿ ಕೊಳಚೆವಾಸಿಗಳ ಒಂದು ಗಣ್ಯ ಸಂಖ್ಯೆ ಇದೆ. ಕೊಳಚೆ ಪ್ರದೇಶವೆಂಬುದು ಯಾರೂ ತಮ್ಮಿಚ್ಛೆಯಿಂದ ಆರಿಸಿಕೊಂಡು ವಾಸಹೂಡುವ ಪ್ರದೇಶವಲ್ಲ. ಬಡತನ ಹಾಗೂ ಸೀಮಿತ ಆದಾಯದ ಕಾರಣ ಮನೆಯನ್ನು ಖರೀದಿಸಲು ಅಥವಾ ಬಾಡಿಗೆಗೆ ಪಡೆಯಲು ಸಾಧ್ಯವಾಗದವರು, ತೀರಾ ಅನಿವಾರ್ಯವಾಗಿ ವಾಸಿಸಲು ನಿರ್ಬಂಧಿತರಾಗುವ ಸ್ಥಳ ಅದು. 2019ರಲ್ಲಿ ಭಾರತದ ಕೊಳಚೆ ಪ್ರದೇಶಗಳ ಜನಸಂಖ್ಯೆ 6.5 ಕೋಟಿಯಷ್ಟಿತ್ತು. ಗುಜರಾತ್ ಎಂಬ ಒಂದೇ ರಾಜ್ಯದಲ್ಲಿ 16 ಲಕ್ಷ ನಾಗರಿಕರು ಕೊಳಚೆವಾಸಿಗಳಾಗಿದ್ದರು.

ಕೊಳಚೆ ಪ್ರದೇಶವೆಂದರೆ ಎಲ್ಲವೂ ಅಸ್ಥಿರ, ಅಭದ್ರ ಮತ್ತು ಇಕ್ಕಟ್ಟಾಗಿರುವ ಪ್ರದೇಶ ಮಾತ್ರವಲ್ಲ, ಹೆಚ್ಚಿನವರಿಗೆ ಕುಡಿಯುವ ನೀರಾಗಲಿ, ಶೌಚಾಲಯವಾಗಲಿ, ಶಿಕ್ಷಣ ಮತ್ತು ಆರೋಗ್ಯದ ಸೌಲಭ್ಯವಾಗಲಿ ಲಭ್ಯವಿಲ್ಲದ ಪ್ರದೇಶವಾಗಿರುತ್ತದೆ. ಇಷ್ಟಾಗಿಯೂ, ಸೂರಿಲ್ಲದವರಿಗೆ ಸೂರು ಒದಗಿಸ ಬೇಕಾಗಿದ್ದ ಮತ್ತು ಮೂಲ ಸವಲತ್ತುಗಳಿಂದ ವಂಚಿತರಿಗೆ ಸವಲತ್ತುಗಳನ್ನು ಒದಗಿಸಬೇಕಾಗಿದ್ದ ಸರಕಾರವು, ತನಗೆ ಆಪ್ತರಾದ ಕುಬೇರರು, ಕಾರ್ಪೊರೇಟ್‌ಗಳು ಮತ್ತು ರಿಯಲ್ ಎಸ್ಟೇಟ್ ಮಾಫಿಯಾಗಳ ಹಿತಾಸಕ್ತಿಗಳನ್ನು ಕಾಪಾಡುವುದಕ್ಕೆ ಮಾತ್ರ ಬದ್ಧವಾಗಿದೆ. ಅದಕ್ಕಾಗಿ ವಿವಿಧ ಯೋಜನೆ, ವಿಸ್ತರಣೆ, ನಿರ್ಮಾಣ ಇತ್ಯಾದಿಗಳ ಹೆಸರಲ್ಲಿ, ಜನರು ನೆಲೆಯೂರಿದ್ದ ಸ್ಥಳಗಳಿಂದ ಅವರನ್ನು ಹೊರದಬ್ಬಿ, ಜನರಿಗೆ ಲಭ್ಯವಿದ್ದ ಸವಲತ್ತುಗಳನ್ನು ಅವರಿಂದ ಕಿತ್ತುಕೊಂಡು ನಿರಾಶ್ರಿತರ ಹಾಗೂ ಕೊಳಚೆ ಆಶ್ರಿತರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯಾಚರಣೆಗಳಲ್ಲಿ ತಲ್ಲೀನವಾಗಿದೆ.

share
ಶಂಬೂಕ
ಶಂಬೂಕ
Next Story
X