Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಚರ್ಚಾರ್ಹ
  5. ಸಂಪನ್ನ ಭಾರತದ ಹಸಿದ, ಅಸ್ವಸ್ಥ, ಕಂಗಾಲು...

ಸಂಪನ್ನ ಭಾರತದ ಹಸಿದ, ಅಸ್ವಸ್ಥ, ಕಂಗಾಲು ಭಾರತೀಯರು

ಶಂಬೂಕಶಂಬೂಕ12 Sept 2025 10:33 AM IST
share
ಸಂಪನ್ನ ಭಾರತದ ಹಸಿದ, ಅಸ್ವಸ್ಥ, ಕಂಗಾಲು ಭಾರತೀಯರು

ಶೇ. 90 ಜನರ ಮಾಸಿಕ ಆದಾಯವು ರೂ. 24,000ಕ್ಕಿಂತ ಕಡಿಮೆ ಇರುವ ಹಾಗೂ ಶೇ. 50 ಜನರ ಮಾಸಿಕ ಆದಾಯವು ರೂ. 15,000ಕ್ಕಿಂತ ಕಡಿಮೆ ಇರುವ ದೇಶ ನಮ್ಮದು. ಇಂತಹ ದೇಶದಲ್ಲಿ ಸರಕಾರವು ನಿಜಕ್ಕೂ ಜನರದ್ದಾಗಿದ್ದರೆ ಅಥವಾ ಜನಪರವಾಗಿದ್ದರೆ, ದಟ್ಟ ದಾರಿದ್ರ್ಯದಲ್ಲಿ ನರಳುತ್ತಿರುವ ದೇಶದ ಕನಿಷ್ಠ ಶೇ. 50 ಬಡ ನಾಗರಿಕರ ವೈದ್ಯಕೀಯ ಅಗತ್ಯಗಳೆಲ್ಲಾ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಮೂಲಕ, ಅಂದರೆ ಸರಕಾರೀ ಸವಲತ್ತುಗಳ ಮೂಲಕವೇ ಈಡೇರುವಂತೆ ನೋಡಿಕೊಳ್ಳಬೇಕಾದುದು ಸರಕಾರದ ಕರ್ತವ್ಯವಾಗಿತ್ತು. ಆದರೆ ಸರಕಾರವು ಆರೋಗ್ಯ ಕ್ಷೇತ್ರದಲ್ಲಿ ಸದ್ಯ ತೀರಾ ಸೀಮಿತವಾಗಿರುವ ಸರಕಾರೀ ಸವಲತ್ತುಗಳನ್ನು ಸುಧಾರಿಸುವ ಮತ್ತು ವಿಸ್ತರಿಸುವ ಬದಲು ದಿನಗಳೆದಂತೆ ಆ ಸಂಪೂರ್ಣ ಕ್ಷೇತ್ರವನ್ನು ದುರ್ಬಲಗೊಳಿಸಿ, ಸಂಕುಚಿತಗೊಳಿಸಿ, ಕ್ರಮೇಣ ಅದರ ಕತ್ತು ಹಿಚುಕಿ ಅದನ್ನು ಖಾಸಗಿ ಕ್ಷೇತ್ರದವರ ಏಕಸ್ವಾಮ್ಯಕ್ಕೆ ಒಪ್ಪಿಸುವ ಜನದ್ರೋಹಿ ಧೋರಣೆಯನ್ನು ಅನುಸರಿಸುತ್ತಿದೆ.

ಭಾಗ- 1

ಇಂದೋರ್‌ನ ಮಹಾರಾಜಾ ಯಶವಂತ ರಾವ್ ಸರಕಾರೀ ಆಸ್ಪತ್ರೆಯಲ್ಲಿ ಆಗಸ್ಟ್ 31ರಂದು ಒಂದು ನವಜಾತ ಶಿಶುವಿನ ಮರಣವಾಯಿತು. ಮರುದಿನ ಇನ್ನೊಂದು ನವಜಾತ ಶಿಶುವಿನ ಮರಣವಾಯಿತು. ಆಸ್ಪತ್ರೆಯ ವೈದ್ಯರು ಎರಡೂ ಮರಣಗಳಿಗೆ ಕಾರಣವನ್ನು ವಿವರಿಸುವ, ಸಾಮಾನ್ಯ ತಜ್ಞರಿಗೂ ಅರ್ಥವಾಗದ, ಸಂಕೀರ್ಣ ಪದಗಳಿರುವ ವರದಿಗಳನ್ನು ನೀಡಿದರು. ಮಕ್ಕಳ ಮರಣ ಎಂಬುದು, ಇಬ್ಬರದಿರಲಿ, ಇನ್ನೂರು ಮಕ್ಕಳದ್ದಿರಲಿ, ಆಸ್ಪತ್ರೆಯವರಿಗೆ ಅದು ಅವರ ರಿಜಿಸ್ಟರ್ ನಲ್ಲಿ ದಾಖಲಾಗಬೇಕಾದ ಒಂದು ಔಪಚಾರಿಕ ಘಟನೆ. ಜೀವ ಕಳೆದುಕೊಂಡ ಆದಿವಾಸಿ ಮಕ್ಕಳ ಹೆತ್ತವರಿಗೆ ಅದು ಎಲ್ಲವನ್ನೂ ಕಳೆದುಕೊಂಡ ಅನುಭವ. ಅವರ ಪ್ರಕಾರ, ಮಕ್ಕಳನ್ನು ಆಸ್ಪತ್ರೆಯ ವಿಶೇಷ ನಿಗಾ ವಿಭಾಗ (ICU)ದಲ್ಲಿ ಇಡಲಾಗಿತ್ತು. ಅಲ್ಲಿ ಆ ಮಕ್ಕಳನ್ನು ನೋಡಿಕೊಳ್ಳಲು ಮನೆಯವರು ಒಳಹೋಗುವಂತಿರಲಿಲ್ಲ. ಅವರ ಆರೈಕೆಯ ಸಂಪೂರ್ಣ ಹೊಣೆಗಾರಿಕೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯದ್ದಾಗಿತ್ತು. ಮಕ್ಕಳು ಸತ್ತ ಬಳಿಕ ಅವರ ದೇಹಗಳನ್ನು ಹೆತ್ತವರಿಗೆ ಒಪ್ಪಿಸಲಾಗಿತ್ತು. ಹೆತ್ತವರು ಆ ಮಕ್ಕಳ ಶರೀರಗಳನ್ನು ಪರಿಶೀಲಿಸಿದಾಗ, ಇಲಿಗಳು ಕಚ್ಚಿದ್ದೇ ಆ ಮಕ್ಕಳ ಸಾವಿಗೆ ಕಾರಣ ಎಂಬುದು ಅವರಿಗೆ ಮನವರಿಕೆಯಾಯಿತು. ಮಕ್ಕಳ ಮೃತ ದೇಹದಲ್ಲಿ ಇಲಿಗಳು ಪರಚಿದ ಮತ್ತು ಕಚ್ಚಿದ ಗಾಯಗಳಿದ್ದವು. ಆ ಪೈಕಿ ಒಂದು ಮಗುವಿನ ನಾಲ್ಕು ಬೆರಳುಗಳನ್ನು ಇಲಿಗಳು ತಿಂದಿದ್ದವು. ಇದೀಗ ಆದಿವಾಸಿಗಳ ಒಂದು ಸ್ವಯಂ ಸೇವಾ ಸಂಸ್ಥೆಯ ಮೂಲಕ ಪ್ರಕರಣದ ಕುರಿತು ಮಾನವಹಕ್ಕು ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಆಯೋಗವು ಆಸ್ಪತ್ರೆಯವರಿಗೆ ನೋಟಿಸ್ ಹೊರಡಿಸಿದೆ.

*****

ನಮ್ಮ ದೇಶದ ಕೆಲವು ಪ್ರಾಚೀನ ಧರ್ಮಗ್ರಂಥಗಳಲ್ಲಿ ನರಕದ ಭಾರೀ ಭಯಾನಕ ದೃಶ್ಯಾವಳಿಗಳಿವೆ. ಆದರೆ ಈ ರೀತಿ ನವಜಾತ ಶಿಶುಗಳನ್ನು ಇಲಿಗಳು ತಿಂದು ಸಾಯಿಸುವ ದೃಶ್ಯ ಅಲ್ಲೆಲ್ಲೂ ಇಲ್ಲ. ಕಸಾಯಿಖಾನೆಗಳಲ್ಲಿ ಕೂಡಾ ಪ್ರಾಣಿಗಳನ್ನು ಕೊಲ್ಲುವ ವಿಷಯದಲ್ಲಿ, ಕನಿಷ್ಠ ನೋವುಂಟಾಗುವಂತಹ ವಿಧಾನದಿಂದ ಕೊಲ್ಲಬೇಕು ಎಂಬ ನಿಯಮವಿರುತ್ತದೆ. ಆ ನಿಯಮವನ್ನು ಕೂಡಾ ಉಲ್ಲಂಘಿಸಿ, ಪರಮಾವಧಿ ಕ್ರೂರ ವಿಧಾನದಿಂದ ಕೆಲವು ಸರಕಾರೀ ಆಸ್ಪತ್ರೆಗಳು ಮಕ್ಕಳನ್ನು ಕೊಲ್ಲುತ್ತಿವೆ. ಈ ಆಸ್ಪತ್ರೆಗಳು ಇರುವುದು, ಸರಕಾರದ ಎಟುಕಿನಿಂದ ದೂರ, ಎಲ್ಲೋ ಪಾತಾಳ ಲೋಕದಲ್ಲಿ ಅಲ್ಲ. ಸರಕಾರ ಮನಸ್ಸು ಮಾಡಿದರೆ ಅವುಗಳನ್ನು ದಕ್ಷವಾಗಿ ಸುಸ್ಥಿತಿಯಲ್ಲಿಡಲು ಖಂಡಿತ ಸಾಧ್ಯವಿದೆ. ಆ ಮೂಲಕ ಕೋಟ್ಯಂತರ ಭಾರತೀಯರ ಆರೋಗ್ಯ ಕಾಪಾಡುವುದಕ್ಕೆ ಸಾಧ್ಯವಿದೆ. ಆದರೆ ಸರಕಾರಕ್ಕೆ ಅದರಲ್ಲಿ ಯಾವ ಆಸಕ್ತಿಯೂ ಇಲ್ಲ. ಏಕೆಂದರೆ ಸಮರ್ಥ ಸರಕಾರೀ ಆಸ್ಪತ್ರೆಗಳ ಅಸ್ತಿತ್ವವು, ನಮ್ಮನ್ನಾಳುವವರಿಗೆ ಆಪ್ತರಾಗಿರುವ ಖಾಸಗಿ ಕ್ಷೇತ್ರದ ಕುಬೇರರ ಹಿತಾಸಕ್ತಿಗಳಿಗೆ ವಿರುದ್ಧವಾಗಿವೆ.

ಇಂದು ನಮ್ಮ ಸರಕಾರವು ನಮಗಾಗಿಯೇ ಇರುವ ಸರಕಾರೀ ಆಸ್ಪತ್ರೆಗಳನ್ನು ಯಾವ ಸ್ಥಿತಿಯಲ್ಲಿಟ್ಟಿದೆಯೆಂದರೆ, ಅಲ್ಲಿ ‘‘ನಿಮ್ಮ ಮತ್ತು ನಿಮ್ಮ ಮಕ್ಕಳು, ಹೆತ್ತವರು ಮತ್ತಿತರ ಬಂಧುಗಳ ಪ್ರಾಣವು ನಿಮಗೆ ಪ್ರಿಯವಾಗಿದ್ದರೆ ಸರಕಾರೀ ಆಸ್ಪತ್ರೆಯಿಂದ ಎಷ್ಟು ಸಾಧ್ಯವೋ ಅಷ್ಟು ದೂರವಿರಿ’’ ಎಂದು ಬರೆದಿರುವ ಫಲಕ ಕಾಣಲು ಸಿಗುವುದಿಲ್ಲ. ಆದರೂ ಅಲ್ಲಿ ಸಿಗುವ ಸ್ಪಷ್ಟ ಸಂದೇಶ ಅದೇ ಆಗಿರುತ್ತದೆ. ಏನಾದರೂ ತುರ್ತು ಅಗತ್ಯಕ್ಕಾಗಿ, ಅಪ್ಪಿತಪ್ಪಿ ಜನಸಾಮಾನ್ಯನೊಬ್ಬ ಒಂದು ಸರಕಾರಿ ಆಸ್ಪತ್ರೆಗೆ ಹೋದರೆ ಹೆಚ್ಚಿನೆಡೆಗಳಲ್ಲಿ ಅವನು ಶುಚಿತ್ವದ ಕೊರತೆ, ತಜ್ಞ ವೈದ್ಯರ ಕೊರತೆ, ಅತ್ಯಾವಶ್ಯಕ ಔಷಧಿ ಹಾಗೂ ಉಪಕರಣಗಳ ಕೊರತೆ, ದಕ್ಷ ಸಿಬ್ಬಂದಿಯ ಕೊರತೆ, ಅವಶ್ಯಕ ವೈದ್ಯಕೀಯ ಪರೀಕ್ಷೆಗಳಿಗೆ ಬೇಕಾದ ಸವಲತ್ತುಗಳ ಕೊರತೆ, ಆಧುನಿಕ ತಂತ್ರಜ್ಞಾನದ ಕೊರತೆ, ಫ್ರಿಡ್ಜ್, ಫ್ರೀಝರ್, ಜನರೇಟರ್ ಮುಂತಾದವುಗಳ ಕೊರತೆ - ಹೀಗೆ ಕೊರತೆಗಳ ಸರಮಾಲೆಯನ್ನು ಮೊದಲ ದಿನವೇ ಎದುರಿಸಬೇಕಾಗುತ್ತದೆ. ಜೊತೆಗೆ ಅಲ್ಲಿರುವ ಎಲ್ಲವೂ ಅವನೊಡನೆ ‘‘ನೀನು ಇಲ್ಲಿಗೇಕೆ ಬಂದೆ?’’ ಎಂದು ಪ್ರಶ್ನಿಸಿ, ಅವನನ್ನು ಅಣಕಿಸುತ್ತಿರುತ್ತವೆ. ಹೀಗೆ ನಿರಾಶನಾಗಿ ತನ್ನ ಪ್ರಾಣ ಉಳಿಸಿಕೊಳ್ಳೋಣ ಎಂದುಕೊಂಡು ಅವನು ಯಾವುದಾದರೂ ಖಾಸಗಿ ಆಸ್ಪತ್ರೆಗೆ ಹೋಗಿಬಿಟ್ಟರೆ, ಅಲ್ಲಿ ಬೇರೆಲ್ಲವೂ ಸರಿಯಾಗಿರುತ್ತದೆ. ಆದರೆ ಅಲ್ಲಿ ಸಿಗುವ ಬಿಲ್ ನೋಡಿ, ಅವನಿಗೆ ಆ ವರೆಗೆ ಇಲ್ಲದಿದ್ದ ಬಿಪಿ, ಹೃದ್ರೋಗ, ಮನೋರೋಗ ಇತ್ಯಾದಿ ಹಲವು ಸಮಸ್ಯೆಗಳು ಅಲ್ಲಿ ಹೊಸದಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಲವರಲ್ಲಿ ಸಮಾಜ ವಿರೋಧಿ ಭಾವನೆಗಳು ಜಾಗೃತವಾಗಿ ಬಿಡುತ್ತವೆ. ಕೆಲವರಲ್ಲಂತೂ ಜೀವನದಲ್ಲಿ ಜಿಗುಪ್ಸೆ ತಲೆದೋರುವುದೂ ಇದೆ. ಏಕೆಂದರೆ, ಸರಕಾರೀ ಆಸ್ಪತ್ರೆಗಳಿಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳಲ್ಲಿ ತೆರಬೇಕಾಗುವ ಶುಲ್ಕವು ಕನಿಷ್ಠವೆಂದರೂ 15ರಿಂದ 20 ಪಟ್ಟು ಅಧಿಕವಿರುತ್ತದೆ. ಮಾತ್ರವಲ್ಲ, ಬೇರಾವುದೇ ಕ್ಷೇತ್ರಕ್ಕೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳ ಶುಲ್ಕವು ಪ್ರತಿವರ್ಷ ಅತ್ಯಧಿಕ ದರದಲ್ಲಿ ಹೆಚ್ಚುತ್ತಿದೆ. ‘ಂಅಏಔ ಇಂಡಿಯಾ ಹೆಲ್ತ್ ಇನ್ಶೂರೆನ್ಸ್ ಇಂಡೆಕ್ಸ್’ ಪ್ರಕಾರ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಜನರು ಮಾಡಬೇಕಾಗುವ ವೆಚ್ಚದಲ್ಲಿ ಪ್ರತಿವರ್ಷ ಶೇ. 14 ಹೆಚ್ಚಳವಾಗುತ್ತಿದೆ.

ಖಾಸಗಿ ಕ್ಷೇತ್ರದವರಿಗೆ ಬೇಕಾಗಿರುವುದು ಆರೋಗ್ಯ ಕ್ಷೇತ್ರದ ಖಾಸಗೀಕರಣ. ಅವರ ದೃಷ್ಟಿಯಲ್ಲಿ ಅದು ಅವರಿಗೆ ಅಪಾರ ಲಾಭ ಸಂಪಾದಿಸಿಕೊಡುವ ಕಾಮಧೇನು. ಅತ್ತ ನಮ್ಮನ್ನಾಳುವ ಸರಕಾರದ ಪ್ರಥಮ ಪ್ರಾಶಸ್ತ್ಯ ಕೂಡಾ ಖಾಸಗಿ ಕ್ಷೇತ್ರದವರ ಹಿತಾಸಕ್ತಿಗಳ ಸಂರಕ್ಷಣೆ. ಆದ್ದರಿಂದಲೇ ಸರಕಾರ ತನ್ನ ಸಂಪೂರ್ಣ ಬಲವನ್ನು ಪ್ರಯೋಗಿಸಿ ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಖಾಸಗಿಯವರ ಮಡಿಲಿಗೆ ತಳ್ಳುತ್ತಿದೆ. ಎಲ್ಲ ಮಾನವೀಯ ಸಂವೇದನೆಗಳಿಂದ ತನ್ನನ್ನು ಸಂಪೂರ್ಣ ಮುಕ್ತವಾಗಿಟ್ಟು ಆರೋಗ್ಯ ಕ್ಷೇತ್ರವನ್ನು ಕೇವಲ ಹಣ ಸಂಪಾದನೆಯ ಮಾರ್ಗವಾಗಿ ಕಾಣುವ ಖಾಸಗಿ ಕಂಪೆನಿಗಳು, ಆ ಕ್ಷೇತ್ರದಲ್ಲಿ ಎಷ್ಟು ಹಣ ಹೂಡುವುದಕ್ಕೂ ತಯಾರಿವೆ. ಆದರೂ ಸರಕಾರವು ತಾನೇ ಅಮಿತೋತ್ಸಾಹ ತೋರಿ ಖಾಸಗಿಯವರ ನೆರವಿಗೆ ನಿಂತಿದೆ. ಸಾರ್ವಜನಿಕ ಬೊಕ್ಕಸದಲ್ಲಿರುವ ಸಂಪತ್ತನ್ನು ಸಾರ್ವಜನಿಕರ ಹಿತಾಸಕ್ತಿಗಾಗಿ ಖರ್ಚು ಮಾಡಬೇಕಾಗಿದ್ದ ಸರಕಾರವು ಅದನ್ನೆಲ್ಲಾ ಖಾಸಗೀಕರಣದ ಹೆಸರಲ್ಲಿ ಖಾಸಗಿಯವರ ಹಿತಕ್ಕಾಗಿ ಬಳಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಸರಕಾರವು ಸಾರ್ವಜನಿಕರ, ವಿಶೇಷವಾಗಿ ದೇಶದ ಬಡ ಬಹುಜನರ ಹಿತಾಸಕ್ತಿಯನ್ನು ನಿಷ್ಕರುಣವಾಗಿ ಬಲಿಯರ್ಪಿಸುತ್ತಿದೆ.

2017ರ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ಸರಕಾರವು ತನ್ನ ವಾರ್ಷಿಕ ಜಿಡಿಪಿಯ ಕನಿಷ್ಠ ಶೇ. 2.5ನ್ನು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಬೇಕೆಂದು ಶಿಫಾರಸು ಮಾಡಲಾಗಿತ್ತು. ಆದರೆ ಕೊರೋನ ಸಮಯದಲ್ಲಿ ಈ ಕ್ಷೇತ್ರಕ್ಕೆ ತನ್ನ ಅನುದಾನವನ್ನು ಸ್ವಲ್ಪ ಹೆಚ್ಚಿಸಿದ್ದ ಸರಕಾರವು, ಇದೀಗ ಹಾಲಿ ವಿತ್ತವರ್ಷದ ಬಜೆಟ್‌ನಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸರಕಾರ ತನ್ನ ಕೊಡುಗೆಯನ್ನು ಶೇ. 2ಕ್ಕಿಂತಲೂ ಕಡಿಮೆಗೊಳಿಸಿದೆ.

ಶೇ. 90 ಜನರ ಮಾಸಿಕ ಆದಾಯವು ರೂ. 24,000ಕ್ಕಿಂತ ಕಡಿಮೆ ಇರುವ ಹಾಗೂ ಶೇ. 50 ಜನರ ಮಾಸಿಕ ಆದಾಯವು ರೂ. 15,000ಕ್ಕಿಂತ ಕಡಿಮೆ ಇರುವ ದೇಶ ನಮ್ಮದು. ಇಂತಹ ದೇಶದಲ್ಲಿ ಸರಕಾರವು ನಿಜಕ್ಕೂ ಜನರದ್ದಾಗಿದ್ದರೆ ಅಥವಾ ಜನಪರವಾಗಿದ್ದರೆ, ದಟ್ಟ ದಾರಿದ್ರ್ಯದಲ್ಲಿ ನರಳುತ್ತಿರುವ ದೇಶದ ಕನಿಷ್ಠ ಶೇ. 50 ಬಡ ನಾಗರಿಕರ ವೈದ್ಯಕೀಯ ಅಗತ್ಯಗಳೆಲ್ಲಾ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಮೂಲಕ, ಅಂದರೆ ಸರಕಾರೀ ಸವಲತ್ತುಗಳ ಮೂಲಕವೇ ಈಡೇರುವಂತೆ ನೋಡಿಕೊಳ್ಳಬೇಕಾದುದು ಸರಕಾರದ ಕರ್ತವ್ಯವಾಗಿತ್ತು. ಆದರೆ ಸರಕಾರವು ಆರೋಗ್ಯ ಕ್ಷೇತ್ರದಲ್ಲಿ ಸದ್ಯ ತೀರಾ ಸೀಮಿತವಾಗಿರುವ ಸರಕಾರೀ ಸವಲತ್ತುಗಳನ್ನು ಸುಧಾರಿಸುವ ಮತ್ತು ವಿಸ್ತರಿಸುವ ಬದಲು ದಿನಗಳೆದಂತೆ ಆ ಸಂಪೂರ್ಣ ಕ್ಷೇತ್ರವನ್ನು ದುರ್ಬಲಗೊಳಿಸಿ, ಸಂಕುಚಿತಗೊಳಿಸಿ, ಕ್ರಮೇಣ ಅದರ ಕತ್ತು ಹಿಚುಕಿ ಅದನ್ನು ಖಾಸಗಿ ಕ್ಷೇತ್ರದವರ ಏಕಸ್ವಾಮ್ಯಕ್ಕೆ ಒಪ್ಪಿಸುವ ಜನದ್ರೋಹಿ ಧೋರಣೆಯನ್ನು ಅನುಸರಿಸುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಖಾಸಗಿಯವರ ಸಹಕಾರ ಮತ್ತು ಸಹಭಾಗಿತ್ವ ಹೆಚ್ಚಿಸುವ ಚಂದದ ಹೆಸರಲ್ಲಿ ಅಕ್ರಮ ವಿಧಾನಗಳಿಂದ ಖಾಸಗಿಯವರನ್ನು ಪೋಷಿಸುತ್ತಿದೆ.ಉದಾ:

► ಸರಕಾರವು ಆರೋಗ್ಯ ಕ್ಷೇತ್ರದಲ್ಲಿ ಸರಕಾರೀ ಸೇವೆಗಳನ್ನು ಕ್ರಮೇಣ ರದ್ದುಗೊಳಿಸುವುದಕ್ಕೆ ಬದ್ಧವಾಗಿದೆ ಎಂಬುದಕ್ಕೆ ಅದರ ಹಲವು ಧೋರಣೆಗಳು ಮತ್ತು ನಿರ್ಧಾರಗಳು ಪುರಾವೆಯಾಗಿವೆ.

► ಸರಕಾರವು ಸರಕಾರೀ ಆಸ್ಪತ್ರೆಗಳಿಗೆ ನೀಡುವ ಧನಸಹಾಯದ ಪ್ರಮಾಣವನ್ನು ಕ್ರಮೇಣ ಕಡಿಮೆಗೊಳಿಸುತ್ತಿದೆ.

► ಆಯುಷ್ಮಾನ್ ಭಾರತ್ ಎಂಬ ಯೋಜನೆಯಡಿಯಲ್ಲಿ ಸರಕಾರವು ಖಾಸಗಿ ಆರೋಗ್ಯ ಕ್ಷೇತ್ರದವರಿಗೆ ಧಾರಾಳ ತೆರಿಗೆ ವಿನಾಯಿತಿ ಒದಗಿಸುತ್ತಿದೆ ಮತ್ತು ಅವರಿಗೆ ರಿಯಾಯಿತಿ ದರದಲ್ಲಿ ಜಮೀನು ನೀಡುತ್ತಿದೆ.

► ‘ಪಬ್ಲಿಕ್-ಪ್ರೈವೇಟ್ ಪಾರ್ಟ್ನರ್ ಶಿಪ್’ (PPP) ಮತ್ತು ‘ಔಟ್ ಸೋರ್ಸಿಂಗ್’ ಹೆಸರಲ್ಲಿ, ಗುತ್ತಿಗೆ ಆಧಾರದಲ್ಲಿ ಸರಕಾರೀ ಆರೋಗ್ಯ ಸವಲತ್ತುಗಳನ್ನು ಖಾಸಗಿ ಕಂಪೆನಿಗಳ ಆಡಳಿತಕ್ಕೆ ಒಪ್ಪಿಸುತ್ತಿದೆ. ಈ ಮೂಲಕ ಸಾರ್ವಜನಿಕರ ಬದಲು ಖಾಸಗಿ ವ್ಯಕ್ತಿಗಳು ಮತ್ತು ಕಂಪೆನಿಗಳು ಸರಕಾರೀ ಸಂಪನ್ಮೂಲಗಳ ನೇರ ಫಲಾನುಭವಿಗಳಾಗುತ್ತಿದ್ದಾರೆ. ಇದರ ನೇರ ಪರಿಣಾಮವೇನೆಂದರೆ ಜನತೆಯ ಪಾಲಿಗೆ ಆರೋಗ್ಯ ಸಂಬಂಧಿ ಸೇವೆ ಹಾಗೂ ಸೌಲಭ್ಯಗಳು ಕೈಗೆ ಎಟುಕದಷ್ಟು ದುಬಾರಿಯಾಗಿ ಬಿಟ್ಟಿವೆ.

► ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನೆ (PM-JAY) ಹೆಸರಲ್ಲೂ ಸರಕಾರವು, ಸರಕಾರೀ ಸಂಪತ್ತನ್ನು ನೀಡಿ ಖಾಸಗಿ ಆರೋಗ್ಯ ಕ್ಷೇತ್ರವನ್ನು ಪೋಷಿಸುತ್ತಿದೆ.

ಭಾರತೀಯ ಸಮಾಜದ ಅದೆಷ್ಟೋ ದುರಂತಗಳಿಗೆ ಸರಕಾರಗಳು ಅನುಸರಿಸುವ ಜನವಿರೋಧಿ, ಗ್ರಾಮವಿರೋಧಿ ಹಾಗೂ ನಗರಪರ, ಕುಬೇರಪರ ಧೋರಣೆಗಳು ಮತ್ತು ಪ್ರಾಶಸ್ತ್ಯಗಳು ಕಾರಣವಾಗಿವೆ. ಈ ತಮ್ಮ ದಾರಿಗೆಟ್ಟ ಧೋರಣೆಗಳನ್ನು ಮತ್ತು ಪ್ರಾಶಸ್ತ್ಯಗಳನ್ನು ಮುಚ್ಚಿಡುವುದಕ್ಕೆ ಸರಕಾರಗಳು ಸುಳ್ಳುಗಳನ್ನು ಮತ್ತು ದಾರಿತಪ್ಪಿಸುವ ಅಂಕಿ ಅಂಶಗಳನ್ನು ಆಶ್ರಯಿಸುತ್ತವೆ. ಉದಾ:

ವಿಶ್ವ ಆರೋಗ್ಯ ಸಂಘಟನೆ (WHO)ಯ ಶಿಫಾರಸು ಪ್ರಕಾರ ಒಂದು ದೇಶದಲ್ಲಿ ಪ್ರತೀ 1,000 ನಾಗರಿಕರಿಗೆ ಕನಿಷ್ಠ ಒಬ್ಬ ವೈದ್ಯ ಲಭ್ಯನಿರಬೇಕು. ತಾನು ಈ ಗುರಿಯನ್ನು ಸಾಧಿಸಿರುವುದಾಗಿ ಹಾಗೂ ಆ ಗುರಿಯನ್ನೂ ಮೀರಿ ಭಾರತದಲ್ಲೀಗ ಪ್ರತಿ 834 ನಾಗರಿಕರ ಸೇವೆಗೆ ಸರಾಸರಿ ಒಬ್ಬ ವೈದ್ಯ ಲಭ್ಯವಿರುವುದಾಗಿ ಅದೆಷ್ಟೋ ವೇದಿಕೆಗಳಲ್ಲಿ ನಮ್ಮ ಸರಕಾರವು ಹೇಳಿಕೊಂಡಿದೆ. ಮೇಲ್ನೋಟಕ್ಕೆ ಇದೊಂದು ಗಣ್ಯ ಸಾಧನೆ ಎಂಬಂತೆ ಕಾಣಿಸುತ್ತದೆ. ಆದರೆ ತುಸು ಆಳಕ್ಕೆ ಇಣುಕಿ ನೋಡಿದರೆ, ಪರಿಸ್ಥಿತಿ ಆಘಾತಕಾರಿಯಾಗಿದೆ. ಪ್ರಸ್ತುತ ಲಭ್ಯ ವೈದ್ಯರಲ್ಲಿ ಹೆಚ್ಚಿನವರು ಲಭ್ಯವಿರುವುದು ನಗರಗಳಲ್ಲಿರುವ ಜನರಿಗೆ ಮಾತ್ರ. ದೇಶದ ಜನಸಂಖ್ಯೆಯ ಶೇ. 70 ಪಾಲು ಇರುವುದು ಗ್ರಾಮೀಣ ಪ್ರದೇಶಗಳಲ್ಲಿ. ಆದರೆ ಅಲ್ಲಿ ವೈದ್ಯರ ಲಭ್ಯತೆಯ ಪ್ರಮಾಣ ತೀರಾ ಕನಿಷ್ಠ. ಗ್ರಾಮೀಣ ಭಾರತದಲ್ಲಿ ಪ್ರತಿ 11,082 ನಾಗರಿಕರ ಸೇವೆಗೆ ಲಭ್ಯವಿರುವುದು ಕೇವಲ ಒಬ್ಬ ವೈದ್ಯ ಮಾತ್ರ! ಇದರ ನೇರ ಪರಿಣಾಮವೇನೆಂದರೆ ಹಲವು ಕಡೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟೋ ಮಂದಿ ಒಬ್ಬ ವೈದ್ಯರ ಮುಖ ನೋಡಲು ಗಂಟೆಗಟ್ಟಲೆ ಮಾತ್ರವಲ್ಲ ದಿನಗಟ್ಟಲೆ ಕಾಯುತ್ತಿರಬೇಕಾಗುತ್ತದೆ. ಈ ಅವಧಿಯಲ್ಲಿ ವ್ಯಾಧಿಗಳು ತಮ್ಮ ಉಲ್ಬಣಕ್ಕೆ ವಿರಾಮ ನೀಡುವುದಿಲ್ಲ.

ಒಂದು ಅಂದಾಜಿನಂತೆ ಇಂದು ಭಾರತದ ‘ಆರೋಗ್ಯ ಮಾರುಕಟ್ಟೆ’ಯ ಒಟ್ಟು ಮೌಲ್ಯ ಸುಮಾರು 45 ಲಕ್ಷ ಕೋಟಿ ರೂಪಾಯಿಯಷ್ಟು ಬೃಹತ್ತಾಗಿದೆ. ದೇಶದ ಆರೋಗ್ಯ ಸೇವೆಗಳ ಶೇ. 60ರಿಂದ ಶೇ. 70 ಪಾಲು, ಯಾವುದೇ ಮಾನವೀಯ ಸಂವೇದನೆ ಇಲ್ಲದ, ಮಾನವರ ಅನಾರೋಗ್ಯವನ್ನು ಲಾಭ ಸಂಪಾದಿಸುವ ಅವಕಾಶವಾಗಿ ಮಾತ್ರ ಕಾಣುವ ಖಾಸಗಿ ಕ್ಷೇತ್ರದ ನಿಯಂತ್ರಣದಲ್ಲಿದೆ. ವಿಶ್ವ ಆರೋಗ್ಯ ಸಂಘಟನೆ (WHO)ಯ ಶಿಫಾರಸು ಪ್ರಕಾರ ಯಾವುದೇ ದೇಶದಲ್ಲಿ, ಪ್ರತೀ 1,000 ಮಂದಿಗೆ ಕನಿಷ್ಠ 3.5 ಆಸ್ಪತ್ರೆ ಬೆಡ್‌ಗಳು ಲಭ್ಯವಿರಬೇಕು. ಸದ್ಯ ಭಾರತದಲ್ಲಿ 1,000 ಮಂದಿಗೆ ಲಭ್ಯವಿರುವ ಬೆಡ್‌ಗಳ ಪ್ರಮಾಣ 1.2 ಮಾತ್ರ - ಅಂದರೆ ಅಪೇಕ್ಷಿತ ಪ್ರಮಾಣಕ್ಕೆ ಹೋಲಿಸಿದರೆ ಅರ್ಧಕ್ಕಿಂತಲೂ ಕಡಿಮೆ. ಇಲ್ಲಿ ಸರಕಾರೀ ಸೌಲಭ್ಯಗಳ ಗುಣ ಮಟ್ಟ ಹೇಗಿದೆಯೆಂದರೆ ಶೇ. 44 ಒಳರೋಗಿಗಳು ಮತ್ತು ಶೇ. 18 ಹೊರರೋಗಿಗಳು ಮಾತ್ರ ಸರಕಾರೀ ಸವಲತ್ತುಗಳ ಫಲಾನುಭವಿಗಳಾಗಿದ್ದಾರೆ. ಎಷ್ಟೇ ದುಬಾರಿಯಾಗಿದ್ದರೂ, ತಮ್ಮ ಜೀವ ಉಳಿಸಿಕೊಳ್ಳಲಿಕ್ಕಾಗಿ ಜನರು ಖಾಸಗಿ ಕ್ಷೇತ್ರಕ್ಕೆ ಶರಣಾಗುತ್ತಾರೆ. ಎಮ್.ಆರ್.ಐ./ಸಿ.ಟಿ. ಸ್ಕ್ಯಾನ್ ಮುಂತಾದ ಸವಲತ್ತಿನ ಅಗತ್ಯ ಇರುವ ಶೇ. 80 ರೋಗಿಗಳು ಅನಿವಾರ್ಯವಾಗಿ ಖಾಸಗಿ ಕ್ಷೇತ್ರವನ್ನೇ ಅವಲಂಬಿಸಬೇಕಾಗುತ್ತದೆ. ದೊಡ್ಡ ಮಟ್ಟದ ಚಿಕಿತ್ಸೆಗಳಿಗಾಗಿ ಅಥವಾ ದೀರ್ಘಕಾಲೀನ ಚಿಕಿತ್ಸೆಗಾಗಿ ಖಾಸಗಿ ಸವಲತ್ತುಗಳನ್ನು ಅವಲಂಬಿಸುವವರು ತಮ್ಮ ಮನೆ ಇತ್ಯಾದಿಗಳನ್ನು ಮಾರುವುದಕ್ಕೆ ಮತ್ತು ಸಾಲದ ಅಸಾಧ್ಯ ಹೊರೆ ಹೊರುವುದಕ್ಕೆ ಸನ್ನದ್ಧರಾಗಿರಬೇಕಾಗುತ್ತದೆ. ಅದೆಷ್ಟೋ ಸಲ ಚಿಕಿತ್ಸೆ ಆರಂಭಿಸುವುದಕ್ಕೆ ಮುನ್ನ ಆಸ್ಪತ್ರೆಗಳು ಬಯಸುವ ವಿವಿಧ ಸಂಕೀರ್ಣ ಪರೀಕ್ಷೆಗಳಿಗೆ ಎಷ್ಟು ಬೃಹತ್ ಮಟ್ಟದ ಖರ್ಚಾಗುತ್ತದೆಂದರೆ ಆ ಬಳಿಕ ಚಿಕಿತ್ಸೆಗಾಗಿ ರೋಗಿಯ ಬಳಿ ಏನೂ ಉಳಿದಿರುವುದಿಲ್ಲ. ಬದುಕೇ ಬೇಡವಾದ ಮೇಲೆ ಚಿಕಿತ್ಸೆಯ ಆಸೆ ಎಲ್ಲಿ ಉಳಿಯುತ್ತದೆ?

ಆರೋಗ್ಯ ಉದ್ಯಮವು ತುಂಬಾ ಲಾಭದಾಯಕ ಎಂಬುದು ಸಾಬೀತಾಗಿರುವುದರಿಂದ ಖಾಸಗಿ ಕ್ಷೇತ್ರದವರು ಈ ಉದ್ಯಮದಲ್ಲಿ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ ಮತ್ತು ಪ್ರತೀ ವರ್ಷ ಸುಮಾರು ಶೇ. 15ರಿಂದ ಶೇ. 20 ಪ್ರಗತಿಯನ್ನೂ ಸಾಧಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಲಾಭದ ಅವಕಾಶಗಳು ಜಾಸ್ತಿ ಇರುವುದರಿಂದ ಶೇ. 80 ಖಾಸಗಿ ಆಸ್ಪತ್ರೆಗಳು ಅಲ್ಲೇ ಇವೆ. ಅದರಲ್ಲೂ ಶೇ. 70 ದೊಡ್ಡ ಖಾಸಗಿ ಆಸ್ಪತ್ರೆಗಳು ದೇಶದ 10 ದೊಡ್ಡ ನಗರಗಳಲ್ಲಿವೆ. ಸರಕಾರ ಮನಸ್ಸು ಮಾಡಿದರೆ ಈ ಅಸಮತೋಲನವನ್ನು ನಿವಾರಿಸುವುದಕ್ಕೆ ಅದರ ಬಳಿ ಸಾವಿರ ದಾರಿಗಳಿವೆ. ಆದರೆ ಸರಕಾರ ತನ್ನೆಲ್ಲಾ ಜಾಣ್ಮೆಯನ್ನು, ಖಾಸಗಿಯವರಿಗಾಗಿ ಹೊಸಹೊಸ ದಾರಿಗಳನ್ನು ತೆರೆದು ಕೊಡುವುದಕ್ಕೆ ಮತ್ತು ಸಾರ್ವಜನಿಕರ ಮುಂದಿರುವ, ಬದುಕುವ ದಾರಿಗಳನ್ನು ಮುಚ್ಚುವುದಕ್ಕೆ ಬಳಸುತ್ತಿದೆ. ಜನತೆ ಈ ಅನ್ಯಾಯವನ್ನು ದೊಡ್ಡ ಪ್ರಮಾಣದಲ್ಲಿ ಚರ್ಚಿಸಲು, ಬೀದಿ ಬೀದಿಗಳಲ್ಲಿ ಪ್ರತಿಭಟಿಸಲು ಮತ್ತು ಹೆಜ್ಜೆಹೆಜ್ಜೆಗೆ ಪ್ರಶ್ನಿಸಲು ಆರಂಭಿಸುವ ತನಕ ಯಾವುದೇ ಸರಕಾರ ತನ್ನ ಧೋರಣೆಗಳನ್ನು ಮರುಪರಿಶೀಲಿಸುವ ಸಾಧ್ಯತೆ ಖಂಡಿತ ಇಲ್ಲ.

share
ಶಂಬೂಕ
ಶಂಬೂಕ
Next Story
X