ಧರ್ಮದ ಅಮಲಿನ ಜೊತೆ ಸ್ಪರ್ಧೆಗೆ ಇಳಿಸಲಾಗಿದೆಯೇ ಮದ್ಯದ ಅಮಲನ್ನು?

ನಮ್ಮ ಮಾನ್ಯ ಪ್ರಧಾನ ಮಂತ್ರಿ ಮೋದಿಯವರು ಸಂಸತ್ತಿನ ಮಳೆಗಾಲದ ಅಧಿವೇಶನವನ್ನು ತಪ್ಪಿಸಿಕೊಂಡು ವಿದೇಶ ಯಾತ್ರೆಗೆ ಹೋಗಿದ್ದಾರೆಂದು ಕಳೆದ ವಾರ ಪ್ರತಿಪಕ್ಷಗಳು ಭಾರೀ ಕೋಲಾಹಲ ಎಬ್ಬಿಸಿದ್ದವು. ಆದರೆ ನಮ್ಮ ಮೋದೀಜಿ ಈ ತಮ್ಮ ಇಳಿವಯಸ್ಸಿನಲ್ಲಿ ಅಷ್ಟೆಲ್ಲಾ ಖರ್ಚು, ಮೇಕಪ್ ಎಲ್ಲ ಮಾಡಿಕೊಂಡು, ಕಷ್ಟಪಟ್ಟು ವಿದೇಶಕ್ಕೆ ಹೋಗಿದ್ದು ಮತ್ತು ಅಷ್ಟೆಲ್ಲಾ ಪ್ರಯಾಸಪಟ್ಟು ಇಂಗ್ಲಿಷ್‌ಮಾತನಾಡಿದ್ದು ದೇಶ ಸೇವೆಗಾಗಿಯೇ ಹೊರತು ಮೋಜು ಮಾಡುವುದಕ್ಕಲ್ಲ. ಸುಮ್ಮ ಸುಮ್ಮನೆ ಮಾನ್ಯ ಪ್ರಧಾನಿಯನ್ನು ದೂಷಿಸುವವರು ಯಾರೂ ಅವರು ವಿದೇಶಕ್ಕೆ ಹೋಗಿ ಅಲ್ಲಿ ಮಾಡಿರುವ, ನಮ್ಮ ದೇಶವನ್ನು ಉದ್ಧಾರ ಮಾಡುವಂತಹ ವ್ಯವಹಾರಗಳ ಕಡೆಗೆ ಯಾಕೆ ಚರ್ಚಿಸುತ್ತಿಲ್ಲ? ಉದಾ: ಕಳೆದವಾರ ಇಂಗ್ಲೆಂಡಿಗೆ ಹೋಗಿದ್ದ ನಮ್ಮ ಪ್ರಧಾನ ಮಂತ್ರಿಯವರು, ಭಾರತೀಯ ನಾಗರಿಕರು ಇಂಗ್ಲೆಂಡ್‌ನಿಂದ ಆಮದು ಮಾಡುತ್ತಿದ್ದ ಜನತೆಯ ತುರ್ತು ಅಗತ್ಯದ ಕೆಲವು ವಸ್ತುಗಳ ಬೆಲೆಯನ್ನು ಕಡಿಮೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೃದ್ಧಾಪ್ಯದಲ್ಲೂ ತಮ್ಮ ಚೌಕಾಶಿ ಪ್ರತಿಭೆಯನ್ನು ಕಳೆದುಕೊಂಡಿಲ್ಲದ ನಮ್ಮ ಪ್ರಧಾನಿಯವರು ಇಂಗ್ಲೆಂಡ್ ಪ್ರಧಾನಿಯ ಜೊತೆ ಭಾರೀ ಪರಿಣಾಮಕಾರಿ ಚೌಕಾಶಿ ನಡೆಸಿದ್ದಾರೆ.
ಮೋದಿಯವರ ಸಮರ್ಥ ಚೌಕಾಶಿಯ ಫಲವಾಗಿ ಇನ್ನು ಮುಂದೆ ಭಾರತದ ಮದ್ಯ ಮಾರುಕಟ್ಟೆಯಲ್ಲಿ, ಇಂಗ್ಲೆಂಡ್ ನಿಂದ ಆಮದು ಮಾಡುವ, ಮದ್ಯದ ದುಬಾರಿ ವರ್ಗಕ್ಕೆ ಸೇರಿದ ವಿಸ್ಕಿ ಮತ್ತು ಜಿನ್ ಎಂಬ ಪ್ರಜಾತಿಯ ಮದ್ಯದ ಬಾಟಲಿಗಳು ಅಗ್ಗವಾಗಲಿವೆ. ತಮ್ಮ ಚೌಕಾಶಿಯ ಭಾಗವಾಗಿ ನಮ್ಮ ಪ್ರಧಾನಿಯವರು, ಪ್ರಸ್ತುತ ಮದ್ಯದ ಬಾಟಲಿಗಳ ಆಮದಿನ ಮೇಲೆ ಭಾರತವು ಈಹಿಂದೆ ಹೇರಿದ್ದ 150ಶೇ. ತೆರಿಗೆಯಲ್ಲಿ ಶೇ.50 ಕಡಿತ ಮಾಡಿ ಬಿಟ್ಟಿದ್ದಾರೆ. ಇನ್ನು ಮುಂದೆ ಇಂಗ್ಲೆಂಡ್‌ನಿಂದ ಆಮದಾಗುವ ವಿಸ್ಕಿ ಮತ್ತು ಜಿನ್‌ಗಳ ಮೇಲೆ ಭಾರತವು ಕೇವಲ 75ಶೇ. ತೆರಿಗೆಯನ್ನು ಮಾತ್ರ ವಿಧಿಸಲಿದೆ. ಇದರಿಂದ ಭಾರತೀಯ ಕುಡುಕರು ಪ್ರಸ್ತುತ ಬಾಟಲಿಗಳನ್ನು ಖರೀದಿಸುವಾಗ ಹಿಂದಿಗಿಂತ ಸುಮಾರು 300 ರೂಪಾಯಿ ಕಡಿಮೆ ಪಾವತಿಸಬೇಕಾಗುವುದು. ಮೋದೀಜಿಯವರ ಈ ಸಾಧನೆಯನ್ನು ಮತ್ತು ದೇಶಕ್ಕೆ ಅವರು ಮಾಡಿರುವ ಈ ಉಪಕಾರವನ್ನು ವಿರೋಧಪಕ್ಷಗಳ ನಾಯಕರು ಪ್ರಶಂಸಿಸಿಲ್ಲವಾದರೂ ‘ಇಂಟರ್ ನ್ಯಾಷನಲ್ ಸ್ಪಿರಿಟ್ಸ್ ಆ್ಯಂಡ್ ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ (ISWAI) ಸಂಸ್ಥೆಯು ಈ ಒಪ್ಪಂದವನ್ನು ಭಾರತದ ಮದ್ಯ ಮಾರುಕಟ್ಟೆಯ ಪಾಲಿಗೆ ಒಂದು ಐತಿಹಾಸಿಕ ಕ್ಷಣ ಎಂದು ಹೊಗಳಿದೆ. ISWAI ಒಕ್ಕೂಟದ CEO ಸಂಜಿತ್ ಪಾಢಿಯವರು ಈ ಒಪ್ಪಂದವನ್ನು ಸ್ವಾಗತಿಸುತ್ತಾ, ಇದರಿಂದ ದೇಶದ ಮದ್ಯ ಮಾರುಕಟ್ಟೆಗೆ ಮಾತ್ರವಲ್ಲ, ಪ್ರವಾಸೋದ್ಯಮ, ಆತಿಥ್ಯ ಉದ್ಯಮ, ಮದ್ಯದ ಚಿಲ್ಲರೆ ವಿತರಕರು - ಹೀಗೆ ಇತರ ಹಲವು ಕ್ಷೇತ್ರಗಳ ಅಭಿವೃದ್ಧಿಗೂ ಬಲ ದೊರೆಯಲಿದೆ ಮತ್ತು ರಾಜ್ಯ ಸರಕಾರಗಳ ಆದಾಯವು ಹೆಚ್ಚಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ದೇಶದ ಯುವಜನರ ಪರಮ ಹಿತೈಷಿಯಾಗಿರುವ ಮೋದೀಜಿಯವರ ಸಾಧನೆ ಇಲ್ಲಿಗೇ ಮುಗಿದಿಲ್ಲ. ಚೌಕಾಶಿಯ ಪ್ರಸ್ತುತ ಪ್ರಕ್ರಿಯೆಯಲ್ಲಿ ಮೋದೀಜಿ ತಮ್ಮ ಅಪಾರ ದೂರದೃಷ್ಟಿಯನ್ನೂ ಬಳಸಿದ್ದಾರೆ. ಕೇವಲ ಇಂದಿನ ತಲೆಮಾರು ಮೋದೀಜಿಯವರ ಚೌಕಾಶಿಯ ಫಲಾನುಭವಿಯಾದರೆ ಸಾಕೇ? ವಿಸ್ಕಿ ಮತ್ತು ಜಿನ್‌ಗಳಂತಹ ಜೀವನಾವಶ್ಯಕ ವಸ್ತುಗಳನ್ನು ಕಡಿಮೆ ಬೆಲೆಗೆ ಪಡೆದು ಅಮಲೇರಿಸಿಕೊಳ್ಳುವ ಸೌಭಾಗ್ಯ ನಮ್ಮ ಮುಂದಿನ ತಲೆಮಾರಿಗೂ ಸಿಗಬೇಡವೇ? ಅದಕ್ಕಾಗಿ ನಮ್ಮ ಮೋದೀಜಿ, ಇಂದಿನಿಂದ ಸರಿಯಾಗಿ 10 ವರ್ಷಗಳ ಬಳಿಕ ಇಂಗ್ಲೆಂಡ್ ನಿಂದ ಭಾರತಕ್ಕೆ ಆಮದು ಮಾಡಲಾಗುವ ವಿಸ್ಕಿ ಮತ್ತು ಜಿನ್‌ಗಳ ಮೇಲಿನ ತೆರಿಗೆಯನ್ನು ಮತ್ತಷ್ಟು ಇಳಿಸಿ, ಕೇವಲ 40ಶೇ. ತೆರಿಗೆಯನ್ನು ಮಾತ್ರ ವಿಧಿಸಲಾಗುವುದು ಎಂಬ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಇದು ಮುಂದಿನ ತಲೆಮಾರನ್ನು ವಿಸ್ಕಿ, ಜಿನ್ ಗಳ ಕಡೆಗೆ ಆಕರ್ಷಿಸುವ ಅವರ ದೂರಗಾಮಿ ಯೋಜನೆಯ ಭಾಗವಾಗಿರುವ ಸಾಧ್ಯತೆ ಇದೆ. ಕ್ಷಿಪ್ರವಾಗಿ ಕುಸಿಯುತ್ತಿರುವ ತನ್ನ ಜನಪ್ರಿಯತೆಯ ಬಗ್ಗೆ ಮೋದೀಜಿ ತುಂಬಾ ಚಿಂತಿತರಾಗಿದ್ದಾರೆಂಬುದು ಎಲ್ಲರಿಗೆ ಗೊತ್ತು. ಈಹಿನ್ನೆಲೆಯಲ್ಲಿ ಅವರು, ಈ ಹಿಂದೆ ಅಧಿಕಾರ ಪಡೆಯಲಿಕ್ಕಾಗಿ ತಾನು ಮತ್ತು ತನ್ನ ಪರಿವಾರವು ದೇಶದ ಜನತೆಯ ತಲೆಯೊಳಗೆ ತುಂಬಿದ್ದ ಧರ್ಮದ ಅಮಲು ಇತ್ತೀಚೆಗೆ ಕ್ಷೀಣವಾಗುತ್ತಿದೆ ಎಂದು ಸಂಶಯಿಸಿ, ಈ ರೀತಿ ಮದ್ಯದ ಅಮಲನ್ನು ತುಂಬುವ ಹೊಸ ಪ್ರಯೋಗಕ್ಕೆ ಇಳಿದಿರುವ ಸಾಧ್ಯತೆ ಖಂಡಿತ ಇದೆ.
ಭಾರತ ಸರಕಾರದ 2025ರ ಬಜೆಟ್‌ನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಂಜೂರು ಮಾಡಿರುವ ಮೊತ್ತ 99,858.56 ಕೋಟಿ ರೂ. ಅಂದರೆ ಒಂದು ಲಕ್ಷ ಕೋಟಿಗೂ ಕಡಿಮೆ. ಆದರೆ ಭಾರತೀಯರು ಈ ವರ್ಷ ಬಳಸಿರುವ ವಿವಿಧ ಬಗೆಯ ಮದ್ಯದ ಒಟ್ಟು ಬೆಲೆ ಕನಿಷ್ಠವೆಂದರೂ 5 ಲಕ್ಷ ಕೋಟಿ ರೂ. ಅಂದರೆ, ನಮ್ಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಬಜೆಟ್‌ಗಿಂತ 5 ಪಟ್ಟು ಹೆಚ್ಚು. ನಮ್ಮ ಸರಕಾರ ಮತ್ತು ಸಮಾಜದ ಪ್ರಾಶಸ್ತ್ಯಗಳಿಗೆ ಹುಚ್ಚು ಹಿಡಿದಿದೆ ಅನ್ನುವುದಕ್ಕೆ ಬೇರೆ ಪುರಾವೆ ಬೇಕೇ?
ನಾವು ಸದಾ ‘ಲಾಲ್ ಆಂಖ್’ ನಿಂದ ನೋಡುವ ನಮ್ಮ ನೆರೆಯ ಪ್ರತಿ ಸ್ಪರ್ಧಿ ಚೀನಾ ದೇಶವು 2024 ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 40 ಚಿನ್ನದ ಪದಕಗಳ ಸಹಿತ ಒಟ್ಟು 91 ಪದಕಗಳನ್ನು ಗೆದ್ದು ಚೀಲ ತುಂಬಿಸಿಕೊಂಡಾಗ, ನಾವು ಒಂದೇ ಒಂದು ಚಿನ್ನದ ಪದಕವನ್ನೂ ಗೆಲ್ಲಲಾಗದೆ ಕೇವಲ 1 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಮಾತ್ರ ಕಿಸೆಯಲ್ಲಿಟ್ಟುಕೊಂಡು ಮರಳಿದ್ದೆವು ಎಂಬುದನ್ನು ನೆನಪಿಸಿಕೊಂಡು ನಾವೇನೂ ಮುಜುಗರ ಪಡಬೇಕಾಗಿಲ್ಲ. ಭಾರತೀಯರೆಂಬ ನೆಲೆಯಲ್ಲಿ ನಮ್ಮ ಬಳಿ, ನಾವು ಅಭಿಮಾನ ಪಡಬಹುದಾದ ಬೇರೆ ಅನೇಕ ಸಾಧನೆಗಳಿವೆ. ಉದಾ: ಭಾರತದ ಮದ್ಯ ಮಾರುಕಟ್ಟೆಯು, ಜಗತ್ತಿನಲ್ಲೇ ಅತ್ಯಧಿಕ ಕ್ಷಿಪ್ರವಾಗಿ ಬೆಳೆಯುತ್ತಿರುವ ದೊಡ್ಡ ಮಾರುಕಟ್ಟೆಗಳಲ್ಲಿ ಒಂದೆಂಬ ಪ್ರತಿಷ್ಠೆಗೆ ಪಾತ್ರವಾಗಿದೆ. ವಿಶೇಷವಾಗಿ ಮದ್ಯದ ಚಟವು ಇಲ್ಲಿನ ಯುವಜನರಲ್ಲಿ ದಿನೇದಿನೇ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ ಮತ್ತು ಅದೆಷ್ಟೋ ವಲಯಗಳಲ್ಲಿ ಮದ್ಯಪಾನದ ಕುರಿತಂತೆ ಈಹಿಂದೆ ಇದ್ದ ಅಪರಾಧ ಮನೋಭಾವವು ಕ್ರಮೇಣ ಕಣ್ಮರೆಯಾಗುತ್ತಿದೆ. ಘೋಷಿತವಾಗಿ ಕುಡಿಯುವ ಮತ್ತು ಮುಚ್ಚುಮರೆ ಇಲ್ಲದೆ ತಾವು ಮದ್ಯವ್ಯಸನಿಗಳೆಂದು ಬಹಿರಂಗವಾಗಿ ಕೊಚ್ಚಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. 2023 ರಲ್ಲಿ ನಮ್ಮ ಭಾರತೀಯರು 670 ಕೋಟಿ ಲೀಟರ್ ಮದ್ಯವನ್ನು ಕುಡಿದು ತೇಗಿದ್ದಾರೆ. ಒಂದು ಅಂದಾಜಿನಂತೆ ಕಳೆದ ಆರ್ಥಿಕ ವರ್ಷದಲ್ಲಿ ಭಾರತೀಯರು ಮದ್ಯಕ್ಕಾಗಿ ಸುಮಾರು 5.3 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS)ಸಂಸ್ಥೆಯ ವರದಿಯೊಂದರ ಪ್ರಕಾರ ಭಾರತದಲ್ಲಿ ಸರಾಸರಿ 22.4ಶೇ. ಮಂದಿ ಪುರುಷರು ಮತ್ತು 0.7ಶೇ. ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಗೋವಾ, ಅರುಣಾಚಲ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮದ್ಯಪಾನಿಗಳ ಪ್ರಮಾಣ 50 ರಿಂದ 59ಶೇ. ದಷ್ಟಿದೆ. ಜಾರ್ಖಂಡ್, ಒಡಿಶಾ, ಸಿಕ್ಕಿಂ, ಛತ್ತೀಸ್ ಗಡ, ತಮಿಳುನಾಡು, ಉತ್ತರಾಖಂಡ ಮತ್ತು ಆಂಧ್ರಪ್ರದೇಶಗಳಲ್ಲಿ 31 ರಿಂದ 40ಶೇ. ಮಂದಿ ಮದ್ಯಪಾನ ಮಾಡುತ್ತಾರೆ. ಜಾಗತಿಕ ಮಟ್ಟದಲ್ಲಿ ಕುಡುಕರ ಸಂಖ್ಯೆ ಕಡಿಮೆಯಾಗುತ್ತಿರುವಾಗ ನಮ್ಮ ಅಧ್ಯಾತ್ಮ ಪ್ರಧಾನ ದೇಶದಲ್ಲಿ ಕುಡುಕರ ಸಂಖ್ಯೆ ಹೆಚ್ಚುತ್ತಿದೆ. ಜಾಗತಿಕವಾಗಿ, 2013ರಲ್ಲಿ ಸರಾಸರಿ ವ್ಯಕ್ತಿಯ (per capita) ವಾರ್ಷಿಕ ಶುದ್ಧ ಆಲ್ಕೋಹಾಲ್ ಬಳಕೆಯ ಪ್ರಮಾಣವು 5 ಲೀಟರ್ ನಷ್ಟಿತ್ತು. 2023 ರಲ್ಲಿ ಈ ಪ್ರಮಾಣವು 3.9 ಲೀಟರ್‌ಗಳಿಗೆ ಇಳಿಯಿತು. ಆದರೆ ನಮ್ಮ ದೇಶದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಇಲ್ಲಿ 2005 ರಲ್ಲಿ ಸರಾಸರಿ ವ್ಯಕ್ತಿಯ ವಾರ್ಷಿಕ ಶುದ್ಧ ಆಲ್ಕೋಹಾಲ್ ಬಳಕೆಯ ಪ್ರಮಾಣವು 1.3 ಲೀಟರ್ ನಷ್ಟಿತ್ತು. 2022 ರ ಹೊತ್ತಿಗೆ ಅದು ಗಣನೀಯ ಪ್ರಗತಿ ಸಾಧಿಸಿ 3.1 ಲೀಟರ್ ಮಟ್ಟಕ್ಕೆ ಏರಿತ್ತು! ವಿಶ್ವ ಆರೋಗ್ಯ ಸಂಸ್ಥೆ (WHO) ಯವರ 2024ರ ವರದಿಯು ಮತ್ತಷ್ಟು ಪ್ರಗತಿಯನ್ನು ತೋರಿಸುತ್ತದೆ. ಅದರ ಪ್ರಕಾರ ಭಾರತದಲ್ಲಿ ಸರಾಸರಿ ವಾರ್ಷಿಕ ಶುದ್ಧ ಆಲ್ಕೋಹಾಲ್ ಬಳಕೆಯ ಪ್ರಮಾಣವು 4.9 ರಷ್ಟಿದೆ. ಕೇವಲ ಪುರುಷರ ಸರಾಸರಿ ವಾರ್ಷಿಕ ಮದ್ಯ ಬಳಕೆ ಪ್ರಮಾಣ ವನ್ನು ನೋಡಿದರೆ ಅದು 8.1 ಲೀಟರ್ ಗಳಷ್ಟಿದೆ. ಭಾರತದಲ್ಲಿ ಮದ್ಯೋದ್ಯಮವು ವೇಗವಾಗಿ ಬೆಳೆಯುತ್ತಿದ್ದು ಅದರ ವಾರ್ಷಿಕ ಬೆಳವಣಿಗೆ ದರವು 7.5ಶೇ. ದಷ್ಟಿದೆ. ಯಾವ ಗಣತಿ ಅಥವಾ ಗಣಿತಕ್ಕೂ ಸಿಗದ, ಅಕ್ರಮ ಮದ್ಯ ಮಾರಾಟದ ಪರ್ಯಾಯ ಲೋಕವೊಂದು ಬೇರೆಯೇ ಇದೆ.
ಅಂತರ್‌ರಾಷ್ಟ್ರೀಯ ಮಾನ್ಯತೆ ಇರುವ ‘ಇಂಟರ್ ನ್ಯಾಷನಲ್ ಜರ್ನಲ್ ಆಫ್ ಅಕಾಡೆಮಿಕ್ ಮೆಡಿಸಿನ್ ಆ್ಯಂಡ್ ಫಾರ್ಮಸಿ’ (JAMP) ನಿಯತಕಾಲಿಕದಲ್ಲಿ ಕಳೆದ ವರ್ಷ (2024) ಒಂದು ಸಂಶೋಧನಾ ಪ್ರಬಂಧ ಪ್ರಕಟವಾಗಿತ್ತು. ಅದು ನಿಜವಾಗಿ ತಮಿಳುನಾಡಿನ ಮಿಲಗನೂರು ಎಂಬ ಗ್ರಾಮದಲ್ಲಿ ಮದ್ಯವ್ಯಸನದ ಕುರಿತು ನಡೆಸಲಾದ ಅಧ್ಯಯನವೊಂದರ ವರದಿ. ಡಾಕ್ಟರ್ ಮುನೀಶ್ ನಿತ್ಯಾನಂದಮ್ ಅಧ್ಯಯನದ ಉಸ್ತುವಾರಿ ವಹಿಸಿದ್ದರು. ಅಧ್ಯಯನದ ಭಾಗವಾಗಿ, ಗ್ರಾಮದಲ್ಲಿದ್ದ 13 ವರ್ಷ ಮೀರಿದ್ದ ಎಲ್ಲ ಸದಸ್ಯರನ್ನೂ ಸಂಪರ್ಕಿಸಿ ಅವರನ್ನು ಮಾತನಾಡಿಸಲಾಗಿತ್ತು. ಹಲವು ತಜ್ಞರ ಸಹಭಾಗಿತ್ವದೊಂದಿಗೆ ನಡೆಸಲಾದ ಆ ಅಧ್ಯಯನದಿಂದ ಹೊರಬಂದ ಕೆಲವು ಮಹತ್ವದ ಮಾಹಿತಿಗಳು ಇಲ್ಲಿವೆ:
ಗ್ರಾಮದಲ್ಲಿದ್ದ ಮದ್ಯವ್ಯಸನಿಗಳ ಪೈಕಿ 37.7ಶೇ. ಮಂದಿ ಯಾವುದಾದರೂ ಬಗೆಯ ಅನಾರೋಗ್ಯದಿಂದ ಬಳಲುತ್ತಿದ್ದರು. 44.4ಶೇ. ಮಂದಿ ಮದ್ಯವ್ಯಸನಿಗಳು ಸಾಲದ ಹೊರೆಯಲ್ಲಿದ್ದರು. ಗ್ರಾಮದಲ್ಲಿನ ಮದ್ಯಪಾನಿಗಳ ಪೈಕಿ 50ಶೇ. ಮಂದಿ ಮದ್ಯ ಅವಲಂಬಿಗಳಾಗಿದ್ದರು. ಅವರಲ್ಲಿ 27.7ಶೇ. ಮಂದಿ ಒಮ್ಮೆಯಾದರೂ ಆಸ್ಪತ್ರೆಗೆ ದಾಖಲಾಗಿದ್ದರು. 33.3ಶೇ. ಮಂದಿಗೆ ಮಾನಸಿಕ ಕಾಯಿಲೆಗಳಿದ್ದವು. 38.8ಶೇ. ಮಂದಿ ಮದ್ಯವ್ಯಸನಿಗಳ ಮನೆಗಳಲ್ಲಿ ಕೌಟುಂಬಿಕ ಹಿಂಸೆಯ ಘಟನೆಗಳು ನಡೆದಿದ್ದವು.
ಇದಕ್ಕೆ ಹೋಲಿಸಿದರೆ, ಆ ಗ್ರಾಮದ ಮದ್ಯವ್ಯಸನಿಗಳಲ್ಲದವರ ಪೈಕಿ 16.6ಶೇ. ಮಂದಿಗೆ ಮಾತ್ರ ಆರೋಗ್ಯ ಸಮಸ್ಯೆಗಳಿದ್ದವು ಮತ್ತು 3.3ಶೇ. ಮಂದಿಗೆ ಮಾತ್ರ ಮಾನಸಿಕ ಸಮಸ್ಯೆಗಳಿದ್ದವು, 5ಶೇ. ಮಂದಿಯ ಕುಟುಂಬಗಳಲ್ಲಿ ಮಾತ್ರ ಕೌಟುಂಬಿಕ ಹಿಂಸೆಯ ಘಟನೆಗಳು ನಡೆದಿದ್ದವು.
ಕಳೆದ ವರ್ಷ ಜೂನ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (WHO) ಪ್ರಕಟಿಸಿದ, ಮದ್ಯವ್ಯಸನದ ಪರಿಣಾಮಗಳ ಕುರಿತಾದ ಜಾಗತಿಕ ಮಟ್ಟದ ಒಂದು ವರದಿಯಲ್ಲಿರುವ ಕೆಲವು ಮಾಹಿತಿಗಳು ಇಲ್ಲಿವೆ:
2019 ರಲ್ಲಿ ಮದ್ಯಪಾನ ಸಂಬಂಧಿ ಕಾರಣಗಳಿಂದ 26 ಲಕ್ಷ ಸಾವುಗಳು ಸಂಭವಿಸಿದ್ದವು. ಆಪೈಕಿ ಪುರುಷರು 20 ಲಕ್ಷ ಮತ್ತು ಮಹಿಳೆಯರು 6 ಲಕ್ಷವಿದ್ದರು.
ಜಗತ್ತಿನಲ್ಲಿ ವಿಪರೀತ ಮದ್ಯಪಾನ ಮಾಡುವವರ ಸಂಖ್ಯೆ ಸುಮಾರು 40 ಕೋಟಿ, ಅಂದರೆ ಜಾಗತಿಕ ಜನಸಂಖ್ಯೆ ಸುಮಾರು 7ಶೇ. ಭಾಗ. ಆ ಪೈಕಿ ಸುಮಾರು 20.9 ಕೋಟಿ ಮಂದಿ ಮದ್ಯವಿಲ್ಲದೆ ಬದುಕಲಾಗದಷ್ಟು ಮದ್ಯಾವಲಂಬಿ ಸ್ಥಿತಿಯಲ್ಲಿದ್ದರು.
2019 ರಲ್ಲಿ ಮದ್ಯ ಸಂಬಂಧಿ ರಸ್ತೆ ಅಪಘಾತಗಳಲ್ಲಿ 2,98,000 ಜೀವಗಳು ಆಹುತಿಯಾಗಿದ್ದವು. ಆಪೈಕಿ 1,56,000 ಮಂದಿ ಸ್ವತಃ ಮದ್ಯಪಾನಿಗಳಲ್ಲ. ಮದ್ಯಪಾನಿ ವಾಹನ ಚಾಲಕರ ತಪ್ಪುಗಳಿಂದಾಗಿ ಆ ಅಮಾಯಕರು ತಮ್ಮ ಜೀವ ಕಳೆದುಕೊಂಡಿದ್ದರು.
ಕಳೆದ ಮಾರ್ಚ್‌ನಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರು, ಸದ್ಯ ನಮ್ಮ ರಾಜ್ಯವು ಅಬಕಾರಿ ತರಿಗೆಯ ಮೂಲಕ ವಾರ್ಷಿಕ 36,500 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು, ಮುಂದಿನ ವರ್ಷ 40,000 ಕೋಟಿ ರೂ. ಸಂಗ್ರಹಿಸುವ ಗುರಿ ಇದೆ ಎಂದು ಘೋಷಿದ್ದರು. ಅದನ್ನು, ಸಾಧಿಸುವುದು ತೆರಿಗೆ ಹೆಚ್ಚಿಸುವ ಮೂಲಕವೋ ಅಥವಾ ಕುಡುಕರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕವೋ ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ. ವಿಧಾನ ಸಭೆಯಲ್ಲಿ ಸರಕಾರದ ಧೋರಣೆಗಳ ಕುರಿತು ಚರ್ಚಿಸುತ್ತಾ ಜೆಡಿಎಸ್‌ನ ಹಿರಿಯ ಶಾಸಕ ಎಂ.ಟಿ.ಕೃಷ್ಣಪ್ಪನವರು, ಮಹಿಳೆಯರಿಗೆ ನೀವು ಮಾಸಿಕ ರೂ. 2,000 ನೀಡುತ್ತಿದ್ದೀರಿ. ಪುರುಷರಿಗೆ ವಾರದಲ್ಲಿ ಎರಡು ಬಾಟ್ಲಿ ಉಚಿತ ಮದ್ಯ ಒದಗಿಸಿ ಎಂಬೊಂದು ಅತ್ಯಮೂಲ್ಯ ಸಲಹೆ ನೀಡಿದರು. ಕೆಲವರು ಅವರ ಮಾತನ್ನು ಆಕ್ಷೇಪಿಸಿದಾಗ ಅವರು, ಅದರಲ್ಲಿ ತಪ್ಪೇನಿದೆ? ಸರಕಾರ ಮನಸ್ಸು ಮಾಡಿದರೆ ಸ್ಥಳೀಯ ಸಹಕಾರಿ ಸಂಸ್ಥೆಗಳ ಮೂಲಕ ಆ ಬಾಟಲಿಗಳನ್ನು ಸುಲಭವಾಗಿ ತಲುಪಿಸಬಹುದು ಎಂಬ ಮಾರ್ಗದರ್ಶನವನ್ನೂ ನೀಡಿದರು.
ನಮ್ಮ ಆಡಳಿತಗಾರರು ಮದ್ಯವನ್ನು ಒಂದು ಪಿಡುಗಾಗಿ ಕಾಣುವ ಬದಲು ಪ್ರತಿವರ್ಷ ತಮಗೆ ಧಾರಾಳ ಆದಾಯ ತರುವ ಕಾಮಧೇನುವಾಗಿ ಕಾಣುತ್ತಾರೆ. ಈವಿಷಯದಲ್ಲಿ ಪಕ್ಷಬೇದ ಕೂಡಾ ಇಲ್ಲ. ಯಾರಾದರೂ ಮದ್ಯ ಉದ್ಯಮದ ವಿರುದ್ಧ ಮಾತನಾಡಿದಾಗಲೆಲ್ಲಾ ಆಡಳಿತಗಾರರು, ಅದು ಸುಮಾರು 2 ಕೋಟಿ ಮಂದಿಗೆ ಉದ್ಯೋಗ ಒದಗಿಸುತ್ತಿರುವ ಉದ್ಯಮ, ಅದನ್ನು ನಿಷೇಧಿಸುವುದು ಹೇಗೆ? ಎಂಬ ಸಬೂಬನ್ನು ಮುಂದಿಡುತ್ತಾರೆ ಮತ್ತು ಆ ಉದ್ಯಮದಿಂದ ಸರಕಾರಕ್ಕೆ ಬರುವ ಆದಾಯವನ್ನು ಪ್ರಸ್ತಾಪಿಸಿ, ಅದಕ್ಕೆ ಪರ್ಯಾಯವಾಗಿ ನಿಮ್ಮ ಬಳಿ ಏನಿದೆ? ಎಂದು ತರ್ಕಿಸುತ್ತಾರೆ. ಈರೀತಿ, ಜನತೆಯ ಅಭಿವೃದ್ಧಿಗೆ ಬೇಕಾದ ಮೊತ್ತವನ್ನೆಲ್ಲಾ, ಜನತೆಯಿಂದಲೇ ದೋಚಿ ಸಂಗ್ರಹಿಸುತ್ತೇವೆನ್ನುವ ನಿರ್ಲಜ್ಜ ಮದ್ಯಾಭಿಮಾನಿ ಮದಮತ್ತರೇ ಸರಕಾರಗಳನ್ನು ನಡೆಸುತ್ತಿರುವ ತನಕ, ನಮ್ಮ ಸಮಾಜಕ್ಕೆ ಮದ್ಯದಿಂದ ಮುಕ್ತಿ ಅಸಾಧ್ಯ. ಅಧಿಕೃತವಾಗಿ ಮದ್ಯ ನಿಷೇಧ ಜಾರಿಗೊಳಿಸಲಾದ ಸ್ಥಳಗಳಲ್ಲಿ ಅಧಿಕಾರಿಗಳ ಶ್ರೀರಕ್ಷೆಯಲ್ಲಿ ಅಕ್ರಮ ಮದ್ಯಮಾರುಕಟ್ಟೆ ಬೃಹತ್ತಾಗಿ ರಾಜಾರೋಷವಾಗಿ ಮೆರೆಯುವುದನ್ನು ಕಂಡವರು ಸಹಜವಾಗಿಯೇ ಹೆಚ್ಚು ನಿರಾಶಾವಾದಿಗಳಾಗಿ ಬಿಟ್ಟಿದ್ದಾರೆ.