ಚಾಮರಾಜನಗರ | ಎಸಿಎಫ್ ಸಹಿತ 15 ಅರಣ್ಯ ಸಿಬ್ಬಂದಿಯ ವಿರುದ್ಧ ಎಫ್‌ಐಆರ್

ಚಾಮರಾಜನಗರ/ ಗುಂಡ್ಲುಪೇಟೆ, ಸೆ.14: ಬೊಮ್ಮಲಾಪುರ ಗ್ರಾಮಸ್ಥರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದಡಿ ಎಸಿಎಫ್ ಸಹಿತ 15 ಅರಣ್ಯ ಸಿಬ್ಬಂದಿಯ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರು ದೂರು ನೀಡಿರುವುದರಿಂದ ಎಫ್‌ಐಆರ್ ದಾಖಲಾಗಿರುವ ಬಗ್ಗೆ ರವಿವಾರ ವರದಿಯಾಗಿದೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಅರಣ್ಯ ಸಿಬ್ಬಂದಿಯನ್ನು ಗ್ರಾಮಸ್ಥರು ಹುಲಿ ಸೆರೆ ಹಿಡಿಯಲು ಅಳವಡಿಸಿದ್ದ ಬೋನ್‌ನಲ್ಲಿ ಬಂಧನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಮತ್ತು ಪ್ರಾಣ ಬೆದರಿಕೆ ಹಾಕಿದ ಐವರು ಗ್ರಾಮಸ್ಥರ ಮೇಲೆ ಅರಣ್ಯಾಧಿಕಾರಿಗಳು ಎಫ್‌ಐಆರ್ ದಾಖಲು ಮಾಡಿದ್ದರು. ಇದೀಗ ಗ್ರಾಮಸ್ಥರು ಎಸಿಎಫ್ ಸಹಿತ 15 ಮಂದಿ ಅರಣ್ಯ ಸಿಬ್ಬಂದಿಯ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಗುಂಡ್ಲುಪೇಟೆ ಉಪ ವಿಭಾಗದ ಡಿಆರ್‌ಎಫ್‌ಒ ಜ್ಞಾನ ಶೇಖರ (ಎ1), ಕಾರ್ತಿಕ್ ಯಾದವ್ (ಎ2), ಫಾರೆಸ್ಟ್ ಶಿವಣ್ಣ (ಎ3), ಸುಚಿತ್ರ (ಎ4) , ಸುಬ್ರಹ್ಮಣ್ಯ (ಎ5), ನಾಗೇಶ್ (ಎ6) ,ಸೋಮು(ಎ7), ಪ್ರವೀಣ್ (ಎ8) ಮಣಿಕಂಠ (ಎ9), ವಿನ್ ಕುಮಾರ್ (ಎ10), ಸಂತೋಷ್ (ಎ11), ರಾಜಪ್ಪ(ಎ12) ,ಬಸವೇಗೌಡ (ಎ13) ಸಹಾಯಕ ಅರಣ್ಯಾಧಿಕಾರಿ ಸುರೇಶ್ (ಎ14), ಡಿಆರ್‌ಎಫ್‌ಒ ಶಿವಕುಮಾರ್ (ಎ15) ಅರಣ್ಯ ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದರ ಬಗ್ಗೆ ಎಫ್‌ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.