ಚಾಮರಾಜನಗರ: ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಾಲಕರ ಸಂಖ್ಯೆ 4ಕ್ಕೆ ಏರಿಕೆ

ಚಾಮರಾಜನಗರ: ಬೆಂಗಳೂರು ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿನ ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಾಲಕರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಚಾಮರಾಜನಗರದ ಸೋಮವಾರಪೇಟೆ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದ ಅಪಘಾತದಲ್ಲಿ ಟಿವಿಎಸ್ ಎಕ್ಸ್ ಎಲ್ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದರೆ, ಸಹಸವಾರರಾಗಿದ್ದ ಮೂವರು ಬಾಲಕರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಚಾಮರಾಜನಗರದ ಮೆಹರಾನ್ (13) ಎಂಬವರು ಸ್ಥಳದಲ್ಲೇ ಮೃತಪಟ್ಟರೆ, ಫೈಝಲ್(11), ಅದ್ನಾನ್ ಪಾಷಾ(9) ಹಾಗೂ ಸೈಯದ್ ರಯಾನ್(9) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವಿವರ: ಕರ್ನಾಟಕ ತಮಿಳುನಾಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಚಾಮರಾಜನಗರದ ಸೋಮವಾರಪೇಟೆ ಬೈಪಾಸ್ ನಲ್ಲಿ ಶನಿವಾರ ಕಾರು ಮತ್ತು ಲಾರಿ ವೇಗವಾಗಿ ಬಂದು ಢಿಕ್ಕಿ ಹೊಡೆಯುವ ವೇಳೆಯಲ್ಲಿ ದ್ವಿಚಕ್ರ ವಾಹನದಲ್ಲಿ ರಸ್ತೆ ದಾಟುತ್ತಿದ್ದ ಬಾಲಕರು ಕಾರು ಮತ್ತು ಲಾರಿ ನಡುವೆ ಸಿಲುಕಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ರಸ್ತೆ ಅಪಘಾತದಲ್ಲಿ ಕಾರು ಚಾಲಕ ವಿಜಯಪುರದ ಶ್ರೀಕಾಂತ್ ಮತ್ತು ಕಾರಿನಲ್ಲಿದ್ದ ಮಹಾರಾಷ್ಟ್ರ ಸೋಲಾಪುರದ ಕಿನಾಂತ್, ಮಣಿಕಾಂತ್ ದಂಡ್ಗೆ ಪೆಟ್ಟಾಗಿದೆ. ಲಾರಿ ಚಾಲಕ ತಮಿಳುನಾಡಿನ ಈರೋಡ್ ನ ಜ್ಞಾನಸುಂದರ್ ಎಂದು ತಿಳಿದುಬಂದಿದೆ.
ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.