ಚಾಮರಾಜನಗರ | ಹುಲಿ ಬೋನ್ನಲ್ಲಿ ಅರಣ್ಯ ಸಿಬ್ಬಂದಿಗಳ ದಿಗ್ಬಂಧನ ಪ್ರಕರಣ; ಐವರ ವಿರುದ್ಧ ಎಫ್ಐಆರ್

ಹುಲಿಗೆ ಇಟ್ಟ ಬೋನಿನಲ್ಲಿ ಅರಣ್ಯ ಸಿಬ್ಬಂದಿಗಳನ್ನೇ ಬಂಧಿಸಿದ ಗ್ರಾಮಸ್ಥರು
ಚಾಮರಾಜನಗರ : ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಉಪಟಳ ನಿಯಂತ್ರಣ ಮಾಡಲು ಅರಣ್ಯ ಸಿಬ್ಬಂದಿಗಳು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ಹುಲಿ ಸೆರೆಗೆ ಇಟ್ಟಿದ್ದ ಬೋನ್ಗೆ ಅರಣ್ಯ ಸಿಬ್ಬಂದಿಗಳನ್ನು ದಿಗ್ಬಂಧನ ಮಾಡಿದ್ದಲ್ಲದೆ, ಪ್ರಾಣ ಬೆದರಿಕೆ ಹಾಕಿದ ಆರೋಪದ ಮೇಲೆ ಐವರು ಗ್ರಾಮಸ್ಥರ ಮೇಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಮಂಗಳವಾರ ಹುಲಿ ಸೆರೆಗೆ ಇರಿಸಿದ್ದ ಬೋನ್ ಗೆ ಗ್ರಾಮದ ಕೆಲವರು ಕಾಡುಪ್ರಾಣಿಗಳ ಕೂಂಬಿಂಗ್ ಕಾರ್ಯಾಚರಣೆಗೆ ವಿಶೇಷ ಹುಲಿ ಸಂರಕ್ಷಣಾ ದಳದ ಪ್ಲಟೂನ್-1ರ ಸಿಬ್ಬಂದಿಗಳಾದ ಉಪ ವಲಯ ಅರಣ್ಯಾಧಿಕಾರಿಗಳಾದ ಜ್ಞಾನಶೇಖರ್, ಕಾರ್ತಿಕ್ ಯಾದವ್, ವಿನಯ್, ಗಸ್ತು ಪಾಲಕರಾದ ಬಸವೇಗೌಡ ಹಾಗೂ ಸುಚಿತ್ರಾ ಅವರು ಇಲಾಖೆಯ ವಾಹನದಲ್ಲಿ ಹೋಗುವಾಗ ಅವರನ್ನು ಅಡ್ಡಗಟ್ಟಿದ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬಫರ್ ವಲಯದ ಸಿಬ್ಬಂದಿ ಸಂತೋಷ್, ಪ್ರವೀಣ್, ಸುಬ್ರಹ್ಮಣ್ಯ, ಮಣಿಕಂಠ, ಶಿವಣ್ಣ, ರಾಜಪ್ಪ, ಬಸವರಾಜು, ರಾಘವೇಂದ್ರ ಅವರನ್ನೂ ಬೋನಿನ ಒಳಗೆ ಕೂಡಿಹಾಕಿ ಸಜೀವವಾಗಿ ಸುಟ್ಟು ಹಾಕುವ ಬೆದರಿಕೆ ಹಾಕಿದ್ದಾರೆ ಎಂದು ಅರಣ್ಯಾಧಿಕಾರಿಗಳು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಡಿರುವ ದೂರಿನನ್ವಯ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಬೊಮ್ಮಲಾಪುರ ಗ್ರಾಮದ ರಘು, ಪ್ರಸಾದ್, ದೀಪು, ಗಂಗಾಧರಸ್ವಾಮಿ ಮತ್ತು ರೇವಣ್ಣ ಅವರ ಮೇಲೆ ಸರಕಾರಿ ಕೆಲಸಕ್ಕೆ ಅಡ್ಡಿ ಹಾಗೂ ಪ್ರಾಣ ಬೆದರಿಕೆ ಪ್ರಕರಣ ದಾಖಲಿಸಿ ಎಫ್ಐಆರ್ ದಾಖಲು ಮಾಡಲಾಗಿದೆ.
ಈ ನಡುವೆ ರೈತ ಮುಖಂಡ ಹೊನ್ನೂರು ಪ್ರಕಾಶ್ ಬಣದ ಕಾರ್ಯಕರ್ತರು ಬುಧವಾರ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ರೈತರ ಮೇಲೆ ದೂರು ನೀಡಿದ ಅರಣ್ಯಾಧಿಕಾರಿಗಳ ವಿರುದ್ದ ಪ್ರತಿ ದೂರು ದಾಖಲಿಸಿದ್ದಾರೆ.
ನಂತರ ರೈತ ಸಂಘದ ಮತ್ತೊಂದು ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್ ರವರು ಗುಂಡ್ಲುಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಮಂಗಳವಾರ ರೈತರು ಅರಣ್ಯ ಸಿಬ್ಬಂದಿಗಳನ್ನು ಹುಲಿ ಸೆರೆಗೆ ಇಟ್ಟಿದ್ದ ಬೋನ್ ನಲ್ಲಿ ಕೂಡಿ ಹಾಕಿದ್ದರ ಕಾರಣ ತಿಳಿಸಿದರು. ಕಳೆದ ಕೆಲ ದಿನಗಳ ಹಿಂದೆ 6 ತಿಂಗಳ ಕರುವನ್ನು ಹುಲಿ ಸೆರೆಗೆ ಇಟ್ಟಿದ್ದ ಬೋನ್ ನಲ್ಲಿ ಇರಿಸಿ, ಕರುವಿಗೆ ನೀರು ಆಹಾರ ನೀಡಿದೇ ತೊಂದರೆ ಕೊಟ್ಟಿದ್ದರು. ಇದರಿಂದ ಬೇಸತ್ತ ರೈತರು ಬೋನ್ ನೊಳಗೆ ಅರಣ್ಯ ಸಿಬ್ಬಂದಿಗಳನ್ನು ಇರಿಸಿ ಅಲ್ಲಿನ ವಾತಾವರಣ ನೋಡಲಿ ಎಂದು ಹಾಕಿದ್ದರೆ, ಹೊರತು ಉದ್ದೇಶ ಪೂರ್ವಕವಲ್ಲ ಎಂದು ಹೇಳಿದರು.
ಪೊಲೀಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ವಿನಾಕಾರಣ ರೈತರ ಮೇಲೆ ಸುಳ್ಳು ಪ್ರಕರಣವನ್ನು ದಾಖಲಿಸುತ್ತಿದೆ, ಪೊಲೀಸ್ ಇಲಾಖೆ ರೈತರ ಮೇಲೆ ಹೂಡಿರುವ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಬೇಕೆಂದು ಡಾ.ಗುರುಪ್ರಸಾದ್ ಒತ್ತಾಯಿಸಿದರು.