ಅಗೆಯಲು ಬೇಕಾದ ಹಾರೆ, ಗುದ್ದಲಿಗಳಿಗಾಗಿ ಕೇಂದ್ರಕ್ಕೆ ಮನವಿ!

ಪೇದೆಯೊಬ್ಬ ಸಾಹೇಬರ ಕೋಣೆಗೆ ಇಣುಕಿ ‘‘ಸಾರ್ ದೂರು ಕೊಡಲು ಬಂದಿದ್ದಾರೆ...’’ ಎಂದ.
ಎಸ್‌ಪಿ ಸಾಹೇಬರು ಮುಂಜಾಗರೂಕತೆಗಾಗಿ ‘‘ಎಲ್ಲಿಂದ?’’ ಕೇಳಿದರು.
‘‘ಅದೇ ಸಾರ್...ಅಧರ್ಮಸ್ಥಳದಿಂದ ಯಾರೋ ಧೂಮ ಎನ್ನುವವರು ಬಂದಿದ್ದಾರೆ...’’
ಆ ಸ್ಥಳದ ಹೆಸರು ಕೇಳುತ್ತಿದ್ದಂತೆಯೇ ಎಸ್‌ಪಿ ಸಾಹೇಬರು ಎಸಿಯೊಳಗಿದ್ದೂ ಬೆವರತೊಡಗಿದರು. ‘‘ಏನ್ರೀ ಇದು...ಆ ಸ್ಥಳದಿಂದ ದೂರು ನೀಡಲು ಯಾರು ಬಂದರೂ ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಿ ಒಳಗೆ ಕಳುಹಿಸಬೇಕು ಎಂದು ನಿಮಗೆ ಆದೇಶ ನೀಡಿದ್ದೇನಲ್ಲ?’’
‘‘ಸಾರ್...ಅವರು ತಪ್ಪು ಒಪ್ಪಿಕೊಂಡು ಶರಣಾಗಲು ಬಂದಿದ್ದಾರೆ....’’ ಪೇದೆ ವಿವರಿಸಲು ಪ್ರಯತ್ನಿಸಿದ.
‘‘ಮೊದಲು ಆತನ ಬ್ರೈನ್‌ನೊಳಗೆ ಏನಿದೆ ಎನ್ನುವುದನ್ನು ಪತ್ತೆ ಮಾಡ್ರಿ. ಮಂಪರು ಪರೀಕ್ಷೆಯಲ್ಲಿ ಆತ ದೂರಿನಲ್ಲಿ ಏನು ಆರೋಪ ಮಾಡಲು ಹೊರಟಿದ್ದಾನೆ, ಯಾರ ವಿರುದ್ಧ ಆರೋಪ ಮಾಡಲು ಹೊರಟಿದ್ದಾನೆ ಎನ್ನುವುದೆಲ್ಲ ಗೊತ್ತಾದ ಮೇಲೆ ಆತನನ್ನು ನನ್ನ ಕಚೇರಿಗೆ ಬಿಡಿ. ಆ ಬಳಿಕ ದೂರು ತೆಗೆದುಕೊಳ್ಳಬೇಕೋ ಬೇಡವೋ ಎನ್ನುವುದನ್ನು ನೋಡೋಣ...’’
‘‘ಸಾರ್ ಕೇಸ್ ಸಿಂಪಲ್ ಸಾರ್. ನನಗೆ ಆದೇಶ ಕೊಟ್ಟರೆ ನಾನೇ ತನಿಖೆ ಮಾಡುತ್ತೇನೆ. ಅದೇನೋ 10 ವರ್ಷಗಳ ಹಿಂದೆ ಹಣ ಕದ್ದಿದ್ದಂತೆ ಸಾರ್...ಅದನ್ನು ಎಲ್ಲಿಟ್ಟಿದ್ದೇನೆ ಎನ್ನುವುದನ್ನು ಹೇಳಲು ಬಂದಿದ್ದಾನೆ...’’
ಎಸ್‌ಪಿ ಸಾಹೇಬರಿಗೆ ಪೇದೆ ‘ಹಣ’ ಎಂದದ್ದು ‘ಹೆಣ’ ಎಂದು ಕೇಳಿ ಬೆಚ್ಚಿ ಒಮ್ಮೆಲೆ ಎದ್ದು ನಿಂತರು. ‘‘ಹೆಣಗಳನ್ನು ಎಲ್ಲಿ ಹೂತು ಹಾಕಿದ್ದಾನಂತೆ? ಅದನ್ನೆಲ್ಲ ನಮ್ಮತ್ರ ಬಂದು ಯಾಕೆ ಹೇಳಬೇಕು? ನಾವಿಲ್ಲಿ ಹೆಣ ಕಾಯೋಕೆ ಕೂತಿದ್ದೇವ... ಒದ್ದು ಗೇಟಿಂದ ಆಚೆ ಕಳುಹಿಸ್ರಿ...’’ ಎಂದರು.
‘‘ಸಾರ್...ಹೆಣ ಅಲ್ಲ, ಹಣ ... ಹಣ...’’ ಪೇದೆ ತಿದ್ದಿದ.
‘‘ಹೆಣನೋ...ಹಣನೋ... ಆ ಸ್ಥಳದಿಂದ ಅವನು ಬಂದಿದ್ದಾನೆ ಎಂದ ಮೇಲೆ ದೂರು ದಾಖಲಿಸಬೇಕಾದರೆ ಮೇಲಿನಿಂದ ಅನುಮತಿ ಬೇಕೇ ಬೇಕು. ಮೊದಲು ಬ್ರೈನ್‌ಮ್ಯಾಪ್, ಮಂಪರು ಪರೀಕ್ಷೆ ಮಾಡಿ,
ಆ ಮ್ಯಾಪಿನಲ್ಲಿ ಆತ ಹಣವನ್ನು ಎಲ್ಲಿ ಬಚ್ಚಿಟ್ಟಿದ್ದಾನೆ ಎನ್ನುವುದು ಪತ್ತೆಯಾದ ಬಳಿಕ ಆತನ ದೂರನ್ನು ದಾಖಲಿಸುತ್ತೇವೆ...’’
‘‘ಆದರೆ ಹಣ ಕದ್ದಿರೋದನ್ನು ಆತ ಒಪ್ಪಿಕೊಂಡಿದ್ದಾನೆ ಸಾರ್. ಬಚ್ಟಿಟ್ಟ ಜಾಗದ ವಿವರ ತಿಳಿಸುತ್ತಾನಂತೆ ಸಾರ್?’’ ಪೇದೆ ಮನವರಿಕೆ ಮಾಡಲು ಯತ್ನಿಸಿದ.
‘‘ಹಾಗೆಲ್ಲ ಒಪ್ಕೊಳ್ಳೋದು ಕಾನೂನು ಪ್ರಕಾರ ಅಪರಾಧ ಎಂದು ಹೇಳಿ ಅವನನ್ನು ಬೆದರಿಸಿ ಮನೆಗೆ ಕಳುಹಿಸಿ’’
‘‘ಸಾರ್ ಕದಿಯೋದು ಅಪರಾಧ. ಒಪ್ಕೊಳ್ಳೋದು ಅಪರಾಧ ಹೇಗಾಗುತ್ತೆ ಸಾರ್?’’
‘‘ನೋಡ್ರೀ...ಕದಿಯೋದು ಅಪರಾಧವಲ್ಲ, ಸಿಕ್ಕಿಬಿದ್ದರೆ ಅಪರಾಧ ಅಷ್ಟೇ. ಹೀಗೆಲ್ಲ ಒಪ್ಕೊಂಡು ಸಜ್ಜನರ ಮುಖಕ್ಕೆ ಮಸಿ ಬಳಿಯುವ ಉದ್ದೇಶ ಇರಬಹುದು...’’
‘‘ಸಾರ್ ಕದ್ದ ಹಣ ಎಲ್ಲಿ ಬಚ್ಚಿಟ್ಟಿದ್ದೇನೆ ಎನ್ನುವುದನ್ನು ಹೇಳುತ್ತೇನೆ ಎಂದಿದ್ದಾನೆ...’’
‘‘ಬಚ್ಚಿಟ್ಟ ಹಣ ಪತ್ತೆಯಾದ ಬಳಿಕ ಆತ ತಲೆಮರೆಸಿಕೊಳ್ಳುವ ಅಪಾಯವಿದೆ ಎಂದು ಗುಪ್ತಚರ ಮೂಲಗಳು ಈಗಾಗಲೇ ನನಗೆ ತಿಳಿಸಿದ್ದಾರೆ. ಆದುದರಿಂದ ಅದನ್ನು ಪತ್ತೆ ಮಾಡುವುದು ಬೇಡ. ಬೇಕಾದರೆ ಆತನನ್ನೇ ಹಿಡಿದು ಎಲ್ಲಾದರೂ ಬಚ್ಚಿಡಿ...’’
ಅಷ್ಟರಲ್ಲಿ ಹೊರಗಡೆಯಿಂದ ‘‘ಸಾರ್...ಹಣ ಕದ್ದಿರುವುದು ನಾನೇ...ದಯವಿಟ್ಟು ನನ್ನನ್ನು ಬಂಧಿಸಿ...ಹಣ ಎಲ್ಲಿ ಬಚ್ಚಿಟ್ಟಿದ್ದೇನೆ ಎನ್ನುವುದನ್ನು ಹೇಳುತ್ತೇನೆ...ಯಾರೆಲ್ಲ ಹಣವನ್ನು ಹಂಚಿಕೊಂಡಿದ್ದಾರೆ ಎನ್ನುವುದನ್ನು ಹೇಳಲು ಸಿದ್ಧನಿದ್ದೇನೆ...ಪ್ಲೀಸ್ ಸಾರ್...ಆರೆಸ್ಟ್ ಮಾಡಿ ಸಾರ್...’’ ಅರಚಾಡುವುದು ಕೇಳಿ ಸಾಹೇಬರು ತಮ್ಮೆರಡು ಕಿವಿಗಳನ್ನು ಮುಚ್ಚಿಕೊಂಡರು.
**
ವಿಷಯ ಪತ್ರಕರ್ತ ಎಂಜಲು ಕಾಸಿಯನ್ನು ತಲುಪಿದ್ದೇ ಆತ ತನ್ನ ಜೋಳಿಗೆಯ ಸಹಿತ ರಾಜ್ಯದ ಓಂ ಮಿನಿಸ್ಟರ್‌ನ ಮುಂದೆ ನಿಂತ. ಓಂ ಮಿನಿಸ್ಟರ್ ಅದಾಗಲೇ ಲೋಕಕಲ್ಯಾಣಾರ್ಥ ಒಂದು ಯಾಗ ಮುಗಿಸಿ, ಶ್ರೀಗಳ ಆಶೀರ್ವಾದ ಪಡೆದು ಮಡಿಯಲ್ಲಿದ್ದರು.
‘‘ಸ್ವಲ್ಪ ದೂರ ನಿಲ್ಲಿ. ಈಗಷ್ಟೇ ಶ್ರೀಗಳನ್ನು ಭೇಟಿ ಮಾಡಿ ಬಂದಿದ್ದೇನೆ. ನಾನು ಮಡಿಯಲ್ಲಿದ್ದೇನೆ’’ ಎಂದು ಪತ್ರಕರ್ತರನ್ನು ದೂರ ತಳ್ಳಿ, ಓಂ ಮಿನಿಸ್ಟರ್ ಸಣ್ಣಗೆ ನಾಚುತ್ತಾ ಕಾಲಿನ ಹೆಬ್ಬೆರಳಲ್ಲಿ ಉಂಗುರ ಬರೆಯತೊಡಗಿದರು.
‘‘ಸಾರ್...ಆ..ಸ್ಥಳದಿಂದ ಧೂಮ ಎನ್ನುವವರು ಹತ್ತು ವರ್ಷದ ಹಿಂದೆ ಹಣ ಕದ್ದು ಬಚ್ಚಿಟ್ಟಿದ್ದೇನೆ ಎಂದು ದೂರು ಹೇಳಿಕೊಂಡು ಬಂದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿಲ್ಲ ಎನ್ನುವ ಆರೋಪ ಇದೆ. ನಿಮ್ಮ ಅಭಿಪ್ರಾಯ ಏನು?’’
ಓಂ ಮಿನಿಸ್ಟರಿಗೆ ಸಿಟ್ಟು ಒತ್ತರಿಸಿ ಬಂತು. ಶ್ರೀಗಳನ್ನು ಭೇಟಿ ಮಾಡಿ ಬಂದ ಮಹತ್ತರ ವಿಷಯ ತಿಳಿಸಿದರೂ ಇವರು ಬೇರೇನೋ ಕೇಳುತ್ತಿದ್ದಾರಲ್ಲ ಎಂದು ಕಿಡಿಯಾದರು. ‘‘ನೋಡ್ರಿ...ಆತ ಬಚ್ಚಿಟ್ಟದ್ದನ್ನು ಈಗ ಹೊರಗೆ ತೆಗೆಯುತ್ತಿರುವುದೇ ಕಾನೂನು ಪ್ರಕಾರ ಅಪರಾಧ. ಎಲ್ಲರೂ ಸೇರಿ ಜೊತೆಯಾಗಿ ಕದ್ದು ಅದನ್ನು ಹಂಚಿಕೊಂಡಿದ್ದಾರೆ. ಇದೀಗ ಅವರಿಗೆಲ್ಲ ವಂಚಿಸಿ ಇವನು ತಪ್ಪು ಒಪ್ಪಿಕೊಳ್ಳುವುದರ ಮೂಲಕ ಆ ‘ಸ್ಥಳ’ಕ್ಕೆ ಮಸಿ ಬಳಿಯಲು ಹೊರಟಿದ್ದಾನೆ. ಮೊದಲು ಅವನ ಬ್ರೈನ್‌ಮ್ಯಾಪಿಂಗ್ ಮಾಡಬೇಕಾಗಿದೆ. ಅದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ 10 ಬ್ರೈನ್‌ಮ್ಯಾಪಿಂಗ್ ಘಟಕಗಳನ್ನು ಮಂಜೂರು ಮಾಡಲಿದ್ದೇನೆ...’’
‘‘ಸಾರ್...ಈ ಧೂಮನ ಸಾಕ್ಷಿಯ ಪ್ರಕಾರ ತನಿಖೆ...’’
‘‘ಆತನನ್ನು ತನಿಖೆ ನಡೆಸಬೇಕಾದರೆ ಮೊದಲು ಆ ಸ್ಥಳದಲ್ಲಿ ಒಂದು ಬ್ರೈನ್ ಮ್ಯಾಪಿಂಗ್ ಘಟಕ ಸ್ಥಾಪನೆಯಾಗಬೇಕು. ಇದಾದ ಬಳಿಕ ಆತ ಬಚ್ಚಿಟ್ಟ ಜಾಗವನ್ನು ಅಗೆಯಲು ಬೇಕಾಗುವ ಹಾರೆ, ಗುದ್ದಲಿ ಇತ್ಯಾದಿಗಳಿಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಿದ್ದೇವೆ. ಕೇಂದ್ರ ಇದಕ್ಕೆ ಬೇಕಾಗುವ ಹಣದ ಸಹಾಯ ಮಾಡಿದ ಕೂಡಲೇ ಅಗೆಯುವ ಕೆಲಸ ಆರಂಭವಾಗುತ್ತದೆ...ನೀವು ಒಳಗೆ ಬನ್ನಿ...ನಿಮಗೆ ಶ್ರೀಗಳ ಪ್ರಸಾದ ಕೊಡುತ್ತೇನೆ’’ ಎಂದು ಪತ್ರಕರ್ತರನ್ನು ಕರೆದುಕೊಂಡು ಒಳ ಹೋದರು.
‘ಪ್ರಸಾದ’ ಎಂಬ ಪದ ಕೇಳಿದ್ದೇ ಎಂಜಲು ಕಾಸಿ ಒಳಗೊಳಗೆ ರೋಮಾಂಚನಗೊಂಡು, ಪ್ರಶ್ನೆಗಳನ್ನೆಲ್ಲ ಮರೆತು ಓಂ ಮಿನಿಸ್ಟರನ್ನು ಹಿಂಬಾಲಿಸಿದ.