ಕಲ್ಯಾಣ ಕರ್ನಾಟಕ ಉತ್ಸವದ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು : ಶಾಸಕ ಪ್ರಭು ಚೌವ್ಹಾಣ್

ಬೀದರ್: ಹೈದರಾಬಾದ್ ನಿಜಾಮರ ಆಳ್ವಿಕೆಯಿಂದ ವಿಮೋಚನೆಗಾಗಿ ಅನೇಕ ಹೋರಾಟಗಾರರು ತ್ಯಾಗ-ಬಲಿದಾನಗಳನ್ನು ಮಾಡಿದ್ದಾರೆ. ಅವರ ಸ್ಮರಣೆಯೊಂದಿಗೆ ಕಲ್ಯಾಣ ಕರ್ನಾಟಕ ಉತ್ಸವದ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಶಾಸಕ ಪ್ರಭು ಚೌವ್ಹಾಣ್ ಹೇಳಿದರು.
ಔರಾದ್ (ಬಿ) ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, 1947ರಲ್ಲಿ ದೇಶ ಸ್ವಾತಂತ್ರ್ಯ ಪಡೆದಾಗಲೂ ಕಲ್ಯಾಣ ಕರ್ನಾಟಕ ಮಾತ್ರ ನಿಜಾಮರ ದೌರ್ಜನ್ಯಕ್ಕೆ ಒಳಗಾಗಿತ್ತು. ಮಹಿಳೆ-ಮಕ್ಕಳು, ಹಿರಿಯರು ಯಾರೂ ಬಿಡಿಸಿಕೊಳ್ಳಲಿಲ್ಲ. ಬೀದರ್ ಜಿಲ್ಲೆಯ 170ಕ್ಕೂ ಹೆಚ್ಚು ಗ್ರಾಮಗಳಲ್ಲಿ ರಜಾಕಾರರ ದೌರ್ಜನ್ಯ ಹೆಚ್ಚಿತ್ತು ಎಂದು ಹೇಳಿದರು.
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ನೇತೃತ್ವದ ಪೊಲೀಸ್ ಕಾರ್ಯಾಚರಣೆಯಿಂದ ನಿಜಾಮರ ಆಳ್ವಿಕೆಯಿಂದ ವಿಮುಕ್ತಿ ಸಾಧ್ಯವಾಯಿತು. ಕಲ್ಯಾಣ ಕರ್ನಾಟಕ ಉತ್ಸವ ಸ್ವಾತಂತ್ರ್ಯ ದಿನಾಚರಣೆಯಷ್ಟೇ ಮಹತ್ವದ್ದು ಎಂದರು.
ಕಾರ್ಯಕ್ರಮದಲ್ಲಿ ಮಾರುತಿ ಗಾದಗೆ ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕರು ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಪಾಸ್‌ಬುಕ್‌ಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹೇಶ್ ಪಾಟೀಲ್, ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರಬಾಯಿ ಘೂಳೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ರಂಗೇಶ್, ವೃತ್ತ ನಿರೀಕ್ಷಕ ರಘುವೀರಸಿಂಗ್ ಠಾಕೂರ್, ತಾ.ಆರೋಗ್ಯಾಧಿಕಾರಿ ಡಾ. ಗಾಯತ್ರಿ, ಶಿಶು ಅಭಿವೃದ್ಧಿ ಅಧಿಕಾರಿ ಇಮಲಪ್ಪ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.