ವಿಶ್ವಕರ್ಮ ಸಮುದಾಯದ ಜನರು ಶ್ರಮದಲ್ಲಿ ನಂಬಿಕೆ ಇರುವವರು : ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ

ಬೀದರ್ : ವಿಶ್ವಕರ್ಮ ಸಮುದಾಯದವರು ಕಠಿಣ ಶ್ರಮಜೀವಿಗಳು. ಕಾಯಕವೇ ಕೈಲಾಸ ಎಂಬ ನಂಬಿಕೆ ಹೊಂದಿರುವ ಇವರು ದುಡಿಮೆಯ ಮೇಲೆ ಅಪಾರ ನಂಬಿಕೆ ಇಟ್ಟು ಬದುಕುತ್ತಿರುವವರು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ಹೇಳಿದರು.
ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ, ಜಿಲ್ಲಾಡಳಿತ, ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಲ್ಲಮಪ್ರಭು ಬಿಇಡ್ ಕಾಲೇಜಿನ ಉಪ ಪ್ರಾಂಶುಪಾಲ ಮಾಣಿಕರಾವ್ ಪಾಂಚಾಳ್ ಅತಿಥಿ ಉಪನ್ಯಾಸ ನೀಡಿ ಮಾತನಾಡಿ, ವಿಶ್ವಕರ್ಮರನ್ನು ಜಗತ್ತಿನ ಸೃಷ್ಟಿಕರ್ತ ಎಂದು ಕರೆಯಲಾಗಿದೆ. ವೇದ–ಪುರಾಣಗಳಲ್ಲಿ ಇವರ ಬಗ್ಗೆ ಉಲ್ಲೇಖವಿದೆ. ಜನರಿಗೆ ಬೇಕಾಗುವ ಕಿಟಕಿ, ಬಾಗಿಲು, ದೇವರ ಮೂರ್ತಿಗಳನ್ನು ಮಾಡುವ ಕಲೆ ಇವರಲ್ಲಿ ಇದೆ. ಇಂದಿನ ಶ್ರೀಮಂತ ನಾಗರಿಕತೆಗೆ ವಿಶ್ವಕರ್ಮ ಸಮುದಾಯದವರ ಕೊಡುಗೆ ಅಪಾರ ಎಂದು ಹೇಳಿದರು.
ಮೆರವಣಿಗೆಗೆ ಚಾಲನೆ :
ಕಾರ್ಯಕ್ರಮಕ್ಕೂ ಮುನ್ನ ಶಿವಾಜಿ ವೃತ್ತದ ಬಳಿ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಶ್ರೀ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಶಿಂಧೆ, ಶ್ರೀನಿವಾಸ್ ಮಹಾರಾಜ್, ಸಮಾಜದ ಮುಖಂಡರು ಮಹೇಶ್ ಪಾಂಚಾಳ್, ಭೀಮಶಾ ಪಾಂಚಾಳ್, ಪ್ರಭಾಕರ್ ಶಾಸ್ತ್ರಿ, ಶಾಮರಾವ್ ವಿಶ್ವಕರ್ಮ, ಶ್ರೀನಿವಾಸ್ ಪಾಂಚಾಳ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.