ಬೀದರ್ | ಸ್ಥಳೀಯ ಕಲಾವಿದರು ಸಂಸ್ಕೃತಿ ಪರಂಪರೆಯ ಜೀವಂತ ಕೊಂಡಿ: ಡಿಸಿ ಶಿಲ್ಪಾ ಶರ್ಮಾ

ಬೀದರ್ : ಸ್ಥಳೀಯ ಕಲಾವಿದರು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸದ ಜೀವಂತ ಕೊಂಡಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಶ್ವವಿದ್ಯಾಲಯ ಹಾಗೂ ಪಶುವೈದ್ಯಕೀಯ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಸ್ಥಳೀಯ ಕಲಾವಿದರು ತಮ್ಮ ವಿಶಿಷ್ಟ ವೇಷಭೂಷಣ, ಕಲೆ ಪ್ರದರ್ಶನ ಹಾಗೂ ಜನಮನ ಸೆಳೆಯುವ ಸಾಮರ್ಥ್ಯದಿಂದ ಗುರುತಿಸಿಕೊಳ್ಳುತ್ತಾರೆ. ಅವರ ಕಲೆಯು ಸಮಾಜಕ್ಕೆ ಚೈತನ್ಯ, ಮನರಂಜನೆ ಹಾಗೂ ಸಂಸ್ಕಾರ ನೀಡುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಕನ್ನಡವು ಸಾವಿರಾರು ವರ್ಷಗಳ ಐತಿಹಾಸಿಕ ಪರಂಪರೆ ಹೊಂದಿದೆ. ಪಂಪ, ರನ್ನ, ಕುವೆಂಪು ಸೇರಿದಂತೆ ಅನೇಕ ವಿದ್ವಾಂಸರು ಕನ್ನಡವನ್ನು ವಿಶ್ವಮಟ್ಟಕ್ಕೆ ತಲುಪಿಸಿದ್ದಾರೆ. ಆ ಪರಂಪರೆಯನ್ನು ಮುಂದುವರಿಸುವ ಹೊಣೆಗಾರಿಕೆ ನಮ್ಮದಾಗಿದೆ ಎಂದರು.
ಪಶು ವೈದ್ಯಕೀಯ ವಿಶ್ವವಿದ್ಯಾನಿಲಯದ ಆಡಳಿತ ಸದಸ್ಯ ಬಸರಾಜ ಪಿ.ಭತಮುರ್ಗೆ ಅವರು, “ಕನ್ನಡವನ್ನು ಕೇವಲ ಮಾತಿನ ಮಟ್ಟದಲ್ಲಿ ಉಳಿಸದೆ, ದೈನಂದಿನ ಜೀವನ, ಅಧ್ಯಯನ ಹಾಗೂ ಆಡಳಿತದಲ್ಲೂ ಬಳಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಂದಲೇ ಕನ್ನಡ ಸಂಘವನ್ನು ಕಟ್ಟಿರುವುದು ಹೆಮ್ಮೆ” ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ, ಬೀದರ್ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ, ಜಂಟಿ ನಿರ್ದೇಶಕ ಬಸವರಾಜ್ ಹೂಗಾರ್, ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಎಂ.ಕೆ.ತಾಂಡ್ಲೆ, ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ ಸೇರಿದಂತೆ ಹಲವು ಗಣ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಕಲಾವಿದರು ಉಪಸ್ಥಿತರಿದ್ದರು.