ಬೀದರ್ | ಸೆ.19 ರಿಂದ ಎಬಿವಿಪಿಯಿಂದ ರಾಣಿ ಚೆನ್ನಮ್ಮ, ಅಬ್ಬಕ್ಕರ ರಥಯಾತ್ರೆ : ಸಚಿನ್ ಕುಳಗೇರಿ

ಬೀದರ್: ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ 200 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಹಾಗೂ ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕ ಅವರ 500ನೇ ಜಯಂತಿ ಅಂಗವಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕರ್ನಾಟಕ ಉತ್ತರ ಪ್ರಾಂತದ ವತಿಯಿಂದ ಸೆ.19ರಿಂದ 25ರವರೆಗೆ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಥಯಾತ್ರೆಯು ರಥ–1 ಮತ್ತು ರಥ–2 ಎಂಬ ಎರಡು ಮಾರ್ಗಗಳಲ್ಲಿ ಸಂಚರಿಸಲಿದ್ದು, ಮೊದಲು ಸೆ.19ರಂದು ಬೀದರ್‌ನಲ್ಲಿ ಪ್ರಾರಂಭವಾಗಿ ಸೆ.25ರಂದು ಬೆಳಗಾವಿಗೆ ತಲುಪಲಿದೆ. ಎರಡನೇ ರಥವು ಅದೇ ದಿನ ಧಾರವಾಡದಲ್ಲಿ ಪ್ರಾರಂಭವಾಗಿ ಸೆ.25ರಂದು ಬೆಳಗಾವಿಗೆ ತಲುಪಲಿದೆ. ಈ ಯಾತ್ರೆಯ ಉದ್ದೇಶ, ವಿದ್ಯಾರ್ಥಿಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ವೀರರಾಣಿ ಅಬ್ಬಕ್ಕ ಅವರ ಜೀವನ ಮತ್ತು ಹೋರಾಟದ ಕುರಿತು ಜಾಗೃತಿ ಮೂಡಿಸುವುದಾಗಿದೆ ಎಂದು ಹೇಳಿದರು.
ಸ್ವಾಗತ ಸಮಿತಿ ಅಧ್ಯಕ್ಷ ಡಾ. ರಜನೀಶ್ ವಾಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿ ಹೋಸಳ್ಳಿ, ಉಪಾಧ್ಯಕ್ಷ ರೇವಣಸಿದ್ದಪ್ಪಾ ಜಲಾದೆ, ಸಂಚಾಲಕ ಗುರುನಾಥ್ ರಾಜಗೀರಾ, ಸಹಸಂಚಾಲಕ ವಿರೇಶ್ ಸ್ವಾಮಿ, ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಹೇಮಂತ್, ಸಂತೋಷ್ ಹಂಗರಗಿ, ಜಿಲ್ಲಾ ಸಂಚಾಲಕ ನಾಗರಾಜ್ ಹಾಗೂ ವಿದ್ಯಾರ್ಥಿನಿಯರಾದ ಸ್ನೇಹಾ ಮತ್ತು ಪ್ರಾರ್ಥನಾ ಉಪಸ್ಥಿತರಿದ್ದರು.