ಬೀದರ್ | ಮಕ್ಕಳಲ್ಲಿ ಜ್ಞಾನ ಹೆಚ್ಚಿಸಿ ಬೌದ್ಧಿಕವಾಗಿ ಬಲಗೊಳಿಸುವವನೇ ನಿಜವಾದ ಶಿಕ್ಷಕ : ಮಹಾಲಿಂಗ ದೇವರು

ಬೀದರ್ : ಮಕ್ಕಳಲ್ಲಿ ಜ್ಞಾನ ಹೆಚ್ಚಿಸಿ, ಬೌದ್ಧಿಕವಾಗಿ ಬಲಗೊಳಿಸುವವನೇ ನಿಜವಾದ ಶಿಕ್ಷಕ ಎಂದು ಭಾಲ್ಕಿಯ ಹಿರೇಮಠ ಸಂಸ್ಥಾನ ವಿದ್ಯಾಪೀಠದ ಕಾರ್ಯದರ್ಶಿ ಮಹಾಲಿಂಗ ದೇವರು ಅಭಿಪ್ರಾಯಪಟ್ಟರು.
ಭಾಲ್ಕಿ ತಾಲೂಕಿನ ತಳವಾಡ (ಕೆ) ಗ್ರಾಮದ ಅಲ್ಲಮಪ್ರಭು ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯ. ಜೀವನದ ಎಲ್ಲ ಹಂತಗಳಲ್ಲಿ ಶಿಕ್ಷಣದ ಅರಿವು ಮೂಡಿಸಿ ಜ್ಞಾನ ಹಂಚುವವರು ಶಿಕ್ಷಕರು. ಅವರು ಮಕ್ಕಳಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಿ, ಭವಿಷ್ಯದ ಸವಾಲುಗಳನ್ನು ಎದುರಿಸಲು ಪ್ರೇರಣೆ ನೀಡುವ ದೀಪಸ್ತಂಭಗಳಂತೆ ಕಾರ್ಯನಿರ್ವಹಿಸುತ್ತಾರೆ. ವಿದ್ಯಾರ್ಥಿಗಳ ಬೌದ್ಧಿಕ, ನೈತಿಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ ಎಂದರು.
ಮೋಹನ್ ರೆಡ್ಡಿ ಮಾತನಾಡಿ, ಶಿಕ್ಷಕ ವೃತ್ತಿಯು ಹೊಣೆಗಾರಿಕೆ ಹಾಗೂ ಜವಾಬ್ದಾರಿಯುತವಾದ ಹುದ್ದೆ. ಶಿಕ್ಷಕರು ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಬೇಕು. ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅಪಾರ ಎಂದರು.
ಪ್ರಾಂಶುಪಾಲ ಪಾಂಡುರಂಗ್ ಕುಂಬಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಭುಲಿಂಗ ದೇವರು, ಬಸವಲಿಂಗ ಗುರು, ಬಸವರಾಜ್ ಮೋಳಕೆರೆ, ಬಾಲಾಜಿ ವಲ್ಲೂರೆ, ಮಹೇಶ್, ಸಹನಾ, ಬಾಲಯ್ಯ ಸೇರಿದಂತೆ ಮಹಾವಿದ್ಯಾಲಯದ ಉಪನ್ಯಾಸಕರು, ಸಿಬ್ಬಂದಿ ವರ್ಗ ಮತ್ತು ಬಿ.ಇಡ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.