ಬೆಂಗಳೂರು | ಅಪಘಾತದಲ್ಲಿ ಗಾಯಗೊಂಡ ಶ್ವಾನವನ್ನು ರಕ್ಷಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ಶ್ವಾನವನ್ನು ರಕ್ಷಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಸೆಪ್ಟಂಬರ್ 7ರಂದು ರಾತ್ರಿ 11.50ಗಂಟೆ ಸುಮಾರಿಗೆ ಜಕ್ಕೂರು ರಸ್ತೆಯಲ್ಲಿ ಘಟನೆ ನಡೆದಿದ್ದು, ಸಂತ್ರಸ್ತ ಯುವತಿ ನೀಡಿದ ದೂರಿನನ್ವಯ ಆರೋಪಿ ಮಂಜುನಾಥ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದ ವಿವರ:
ಸ್ನೇಹಿತನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಯುವತಿ ಜಕ್ಕೂರು ಮುಖ್ಯರಸ್ತೆಯಲ್ಲಿ ಅಪಘಾತಕ್ಕೊಳಗಾಗಿ ನರಳುತ್ತಿದ್ದ ಶ್ವಾನವನ್ನು ರಕ್ಷಿಸಲು ವಾಹನ ನಿಲ್ಲಿಸಿದ್ದರು. ಶ್ವಾನ ಎತ್ತಿಕೊಂಡು ರಸ್ತೆ ದಾಟುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಯು ಯುವತಿಯ ಖಾಸಗಿ ಅಂಗವನ್ನು ಸ್ಪರ್ಶಿಸಿದ್ದ. ತಕ್ಷಣ ಯುವತಿ ಕಿರುಚಿಕೊಂಡಾಗ ದ್ವಿಚಕ್ರ ವಾಹನದಲ್ಲಿ ಮುಂದೆ ಸಾಗಿದ್ದ. ನಂತರ ಸಮೀಪದ ಪೆಟ್ರೊಲ್ ಬಂಕ್ ಬಳಿ ಕೈತೊಳೆದುಕೊಂಡು ನಿಂತಿದ್ದ ಯುವತಿಯ ಬಳಿ ಮತ್ತೆ ಬಂದಿದ್ದ ಆರೋಪಿ, ಎರಡನೇ ಬಾರಿ ಮತ್ತದೇ ದುಷ್ಕೃತ್ಯ ಎಸಗಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೂಡಲೇ ಯುವತಿ ಹಾಗೂ ಆಕೆಯ ಸ್ನೇಹಿತ ಆರೋಪಿಯನ್ನು ಹಿಂಬಾಲಿಸಿದಾಗ ತಪ್ಪಿಸಿಕೊಳ್ಳುವ ಭರದಲ್ಲಿ ವಾಹನ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದಿದ್ದಾನೆ. ಆರೋಪಿಯನ್ನು ಹಿಡಿದಿದ್ದ ಯುವತಿ ಮತ್ತು ಆಕೆಯ ಸ್ನೇಹಿತ ಪೊಲೀಸರಿಗೆ ಕರೆ ಮಾಡಿದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಂಜುನಾಥ್ನನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದಾರೆ.