ಬೆಂಗಳೂರು | ಪ್ರತಿಷ್ಠಿತ ವಾಚ್ ಕಂಪೆನಿಯಲ್ಲಿ ಕಳುವಾಗಿದ್ದ 70 ಕೈಗಡಿಯಾರಗಳ ಜಪ್ತಿ; ಮಾಜಿ ಉದ್ಯೋಗಿ ಸೆರೆ

ಬೆಂಗಳೂರು: ಪ್ರತಿಷ್ಠಿತ ವಾಚ್ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡು ಪ್ರತಿನಿತ್ಯ ಕೈಗಡಿಯಾರಗಳನ್ನು ಕಳವು ಮಾಡುತ್ತಿದ್ದ ಪ್ರಕರಣದಡಿ ಕಂಪೆನಿಯ ಮಾಜಿ ಉದ್ಯೋಗಿಯನ್ನು ಇಲ್ಲಿನ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿ 10ಲಕ್ಷ ರೂ.ಮೌಲ್ಯದ 70 ಕೈ ಗಡಿಯಾರಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಶೇಷಾದ್ರಿ ರೆಡ್ಡಿ(27) ಬಂಧಿತ ಆರೋಪಿ.
ಈತ ನಗರದ ಹೊಂಗಸಂದ್ರದಲ್ಲಿ ವಾಸಿಸುತ್ತಿದ್ದ. ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದಲ್ಲಿ ವಾಚ್ ಕಂಪೆನಿಯಿದ್ದು, ಈ ಕಂಪೆನಿಯಲ್ಲೇ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ. ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಹೋಗುವ ಸಮಯದಲ್ಲಿ ಇತರೆ ಉದ್ಯೋಗಿಗಳಿಗೆ ಗೊತ್ತಾಗದಂತೆ ಒಂದೊಂದು ಕೈ ಗಡಿಯಾರಗಳನ್ನು ಆಗಿಂದಾಗ್ಗೆ ಕಳವು ಮಾಡಿಕೊಂಡು ಹೋಗುತ್ತಿದ್ದ. ನಂತರ ದಿನಗಳಲ್ಲಿ ತಾನು ಸಿಕ್ಕಿಹಾಕಿಕೊಳ್ಳುವ ಭಯದಿಂದ ಕಂಪೆನಿಯಲ್ಲಿ ಕೆಲಸ ತೊರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಪೆನಿಯಲ್ಲಿ ಕೈ ಗಡಿಯಾರಗಳು ನಾಪತ್ತೆಯಾಗಿರುವ ಬಗ್ಗೆ ಡೆಪ್ಯೂಟಿ ಮ್ಯಾನೇಜರ್ ಗಮನಕ್ಕೆ ಬಂದ ತಕ್ಷಣ, ಅವರು ಡೆಲಿವರಿ ಬಾಯ್ ಮೇಲೆ ಅನುಮಾನಗೊಂಡು ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ವಾಚ್‍ಗಳನ್ನು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಬಳಿ ಇದ್ದ ಬ್ಯಾಗ್ ಪರಿಶೀಲಿಸಿ ಅದರಲ್ಲಿದ್ದ 10 ಲಕ್ಷ ರೂ. ಮೌಲ್ಯದ 70 ಕೈ ಗಡಿಯಾರಗಳನ್ನು ಇನ್‍ಸ್ಪೆಕ್ಟರ್ ಸತೀಶ್ ನೇತೃತ್ವದ ತಂಡವು ವಶಪಡಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಇನ್ನೂ ಹಲವು ಕೈ ಗಡಿಯಾರಗಳನ್ನು ವಶಕ್ಕೆ ಪಡೆಯಲು ಪೊಲೀಸರು ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.