ಬೆಂಗಳೂರು ಉತ್ತರ ವಿ.ವಿ. ಕಾಮಗಾರಿಗಳಲ್ಲಿ ಅಕ್ರಮ: ಸಿಂಡಿಕೇಟ್ ಸದಸ್ಯನಿಂದ ರಾಜ್ಯಪಾಲರಿಗೆ ದೂರು

ಬೆಂಗಳೂರು, ಆ.1: ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಕಾಮಗಾರಿ, ಸರಕು ಸಂಗ್ರಹಣೆ, ಖರೀದಿಯಲ್ಲಿ ಅಕ್ರಮಗಳಾಗಿವೆ
ಮತ್ತು ವಿವಿಯ ಬೊಕ್ಕಸದಿಂದ ಕೋಟ್ಯಂತರ ರೂ. ಅನಗತ್ಯವಾಗಿ ವೆಚ್ಚ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಈ ಸಂಬಂಧ ವಿವಿಯ ಸಿಂಡಿಕೇಟ್ ಸದಸ್ಯ ರವೀಶ್ ಎಂಬವರು ರಾಜ್ಯಪಾಲರಿಗೆ ಲಿಖಿತ ದೂರು ನೀಡಿದ್ದಾರೆ. ಈ ದೂರಿನ ಪ್ರತಿಯು "the-file.in"ಗೆ ಲಭ್ಯವಾಗಿದೆ.
ಬೆಂಗಳೂರು ಉತ್ತರ ವಿವಿಯಲ್ಲಿ ಶ್ರೀಧರ್ ಸಿ ಎನ್ ಎಂಬವರು ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಹಲವು ಅಕ್ರಮಗಳು ನಡೆದಿವೆ. ಈ ಕೃತ್ಯದಲ್ಲಿ ಕುಲಪತಿ ನಿರಂಜನ್ ವಾನಳ್ಳಿಯವರೂ ಭಾಗಿಯಾಗಿದ್ದಾರೆ ಎಂದು ದೂರಲಾಗಿದೆ. ಈ ಅಕ್ರಮಗಳ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ರವೀಶ್ ದೂರಿನಲ್ಲಿ ಕೋರಿರುವುದು ತಿಳಿದು ಬಂದಿದೆ.
ಬೆಂಗಳೂರು ಉತ್ತರ ವಿವಿಯ ಆಡಳಿತ ಕಚೇರಿ, ಸ್ನಾತಕೋತ್ತರ ಕೇಂದ್ರ ಮಂಗಸಂಸದ್ರ ಘಟಕ ಕಾಲೇಜು ಲಿಂಗರಾಜಪುರ ಹಾಗೂ ವಿಶ್ವವಿದ್ಯಾನಿಲಯದ ಶಿಕ್ಷಣ ಕಾಲೇಜು ಚಿಕ್ಕಬಳ್ಳಾಪುರ ಸಂಸ್ಥೆಗಳಿಗೆ ಪೀಠೋಪಕರಣ ಖರೀದಿಯಲ್ಲಿಯೂ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರು ಉತ್ತರ ವಿವಿಯ ಸ್ನಾತಕೋತ್ತರ ಕೇಂದ್ರ ಮಂಗಸಂದ್ರದ ಗ್ರಂಥಾಲಯದಲ್ಲಿ ಕೇವಲ 28,000 ಪುಸ್ತಕಗಳಿವೆ. ಲೈಬ್ರೆರಿ ಅಟೊಮೇಷನ್ ಸಾಫ್ಟ್‌ವೇರ್ ಅಳವಡಿಸಲು 1.5 ಕೋಟಿ ರೂ. ಲೆಕ್ಕ ತೋರಿಸಿದ್ದಾರೆ ಎಂದು ರವೀಶ್ ದೂರಿರುವುದು ತಿಳಿದು ಬಂದಿದೆ.
ವಿವಿಯ ಸ್ನಾತಕೋತ್ತರ ಕೇಂದ್ರ ಮಂಗಸಂದ್ರ ಆವರಣದಲ್ಲಿ ವೈಫೈ ಸಂಪರ್ಕ ಕಲ್ಪಿಸಲು 2.5 ಕೋಟಿ ರೂ. ನೀಡಿರುವುದಾಗಿ ಸಿಂಡಿಕೇಟ್ ಸಭೆಗೆ ಮಾಹಿತಿ ನೀಡಿದ್ದಾರೆ. ಮಂಗಸಂದ್ರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಒಂದು ಮೆಗಾವ್ಯಾಟ್ ಸೋಲಾರ್ ಪ್ಯಾನಲ್ ಅಳವಡಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರು. ಆದರೆ, ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಅದನ್ನು ಕೇವಲ 400 ಕಿ.ವ್ಯಾಟ್‌ಗೆ ಇಳಿಸಿ ಅದಕ್ಕೆ 4.5 ಕೋಟಿ ರೂ. ವೆಚ್ಚವಾಗಲಿದೆ ಎಂದು ತೋರಿಸಿದ್ದಾರೆ ಎಂದು ರವೀಶ್ ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಮಂಗಸಂದ್ರ ಸ್ನಾತಕೋತ್ತರ ಕೇಂದ್ರಕ್ಕೆ ಕೇವಲ 8 ತಿಂಗಳ ಹಿಂದೆ 80 ಲಕ್ಷ ರೂ. ವೆಚ್ಚದಲ್ಲಿ ಪೀಠೋಪಕರಣಗಳನ್ನು ಖರೀದಿಸಿದ್ದರು. ಈಗ ಹಣ ಮಾಡುವ ಒಂದೇ ಕಾರಣಕ್ಕಾಗಿ ಮತ್ತೆ 2 ಕೋಟಿ ರೂ. ವೆಚ್ಚದಲ್ಲಿ ಪೀಠೋಪಕರಣಗಳನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.
ರಸಾಯನ ಶಾಸ್ತ್ರ, ಭೌತಶಾಸ್ತ್ರ ಮತ್ತು ಸಸ್ಯ ಶಾಸ್ತ್ರ ವಿಭಾಗಗಳಲ್ಲಿ ಈಗಾಗಲೇ ಎಲ್ಲ ರೀತಿಯ ಗಾಜಿನ ವಸ್ತುಗಳು ಮತ್ತು ಇತರ ಸಾಮಗ್ರಿಗಳಿವೆ. ಹಣ ಮಾಡುವ ಕಾರಣಕ್ಕಾಗಿ ಮತ್ತೆ 75 ಲಕ್ಷ ರೂ. ವೆಚ್ಚದಲ್ಲಿ ಖರೀದಿಗೆ ಮುಂದಾಗಿದ್ದಾರೆ ಎಂದು ದೂರಿರುವುದು ಗೊತ್ತಾಗಿದೆ.
ವಿವಿಯ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ 363 ಲ್ಯಾಪ್‌ಟಾಪ್ ನೀಡಿದ್ದು, ಅಧಿಕ ಮೊತ್ತ ನಮೂದಿಸಿ ಕಳಪೆ ಗುಣಮಟ್ಟದ ಲ್ಯಾಪ್‌ಟಾಪ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ವಿವಿಯ ಬಳಿ ಎಲ್ಲ ರೀತಿಯ ಉಪಕರಣಗಳು ಇವೆ. ಆದರೂ ಅಧಿಕ ಮೊತ್ತ ನಮೂದಿಸಿ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಐಸಿಟಿ ಉಪಕರಣಗಳನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ಆಪಾದಿಸಿರುವುದು ತಿಳಿದು ಬಂದಿದೆ.
ಈಗಾಗಲೇ ವಿವಿಯ ಮಂಗಸಂದ್ರದಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ಎಲ್ಲ ಕಚೇರಿಗಳು, ಗ್ರಂಥಾಲಯ, ತರಗತಿ ಕೋಣೆ ಮತ್ತು ಲ್ಯಾಬ್‌ಗಳಲ್ಲಿ ಯುಪಿಎಸ್‌ಗಳಿವೆ. ನಾಲ್ಕು ತಿಂಗಳ ಹಿಂದೆಯೇ 21 ಲಕ್ಷ ರೂ. ವೆಚ್ಚದಲ್ಲಿ ಜನರೇಟರ್ ಖರೀದಿಸಲಾಗಿದೆ. ಜೊತೆಗೆ 400 ಕಿ.ವ್ಯಾಟ್ ಸೋಲಾರ್ ಪ್ಯಾನಲ್ ಅಳವಡಿಸಲಾಗುತ್ತಿದೆ. ಆದರೂ ಮತ್ತೆ ಹೆಚ್ಚುವರಿಯಾಗಿ ಒಂದು ಕೋಟಿ ರೂ. ವೆಚ್ಚದಲ್ಲಿ ಯುಪಿಎಸ್ ಖರೀದಿಸುವ ಅವಶ್ಯಕತೆ ಏನಿದೆ? ಎಂದು ರವೀಶ್ ಅವರು ದೂರಿನಲ್ಲಿ ಪ್ರಶ್ನಿಸಿದ್ದಾರೆ.