ಬೆಳಗಾವಿ| ಗನ್ ತೋರಿಸಿ ಸಿನಿಮೀಯ ರೀತಿಯಲ್ಲಿ ದರೋಡೆ ಯತ್ನ: ಐವರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳು
ಬೆಳಗಾವಿ: ಅಥಣಿ ಪಟ್ಟಣದಲ್ಲಿ ಸಿನಿಮೀಯ ರೀತಿಯಲ್ಲಿ ಗನ್ ತೋರಿಸಿ ಜ್ಯುವೆಲರಿ ಅಂಗಡಿಯನ್ನು ದೋಚಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹೇಶ್ ಪೋತದಾರ ಅವರ ಜ್ಯುವೆಲರಿ ಅಂಗಡಿಗೆ ಆಗಸ್ಟ್ 26ರಂದು ಮಧ್ಯಾಹ್ನ ಇಬ್ಬರು ಹೆಲ್ಮೆಟ್ ಧರಿಸಿ ಪ್ರವೇಶಿಸಿದ್ದರು. ಅಂಗಡಿಗೆ ನುಗ್ಗಿದ ಕೂಡಲೇ ಗನ್ ತೋರಿಸಿ ಚಿನ್ನ ಕಳ್ಳತನಕ್ಕೆ ಯತ್ನಿಸಿದರು. ಆದರೆ ಅಂಗಡಿ ಮಾಲಕ ಜೋರಾಗಿ ಕಿರುಚಿದ ಪರಿಣಾಮ ಸುತ್ತಮುತ್ತಲಿನ ಜನ ಸೇರುತ್ತಾರೆಂಬ ಭಯದಿಂದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಘಟನೆಯ ವಿಡಿಯೋ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಆರೋಪಿಗಳ ಬಂಧನಕ್ಕೆ ಜಿಲ್ಲಾ ಪೊಲೀಸರು ವ್ಯಾಪಕ ಶೋಧಕಾರ್ಯ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ವಿಜಯ್ ಜಾವೀದ್, ಯಶ್ವಂತ್ ಓಂಕಾರ್, ಹಣಮಂತ ವಾಂಡರೆ, ಸೂರಜ್ ನಾನಸೋ ಬೂದಾವಲೆ ಹಾಗೂ ಭರತ ಚಂದ್ರಕಾಂತ ಕಾಟಕರ್ ಬಂಧಿತ ಆರೋಪಿಗಳು.
ಬಂಧಿತರಿಂದ ಎರಡು ಕಂಟ್ರಿ ಪಿಸ್ತೂಲ್, ಏಳು ಜೀವಂತ ಗುಂಡುಗಳು, ಕೃತ್ಯಕ್ಕೆ ಬಳಸಿದ ಕಾರು ಹಾಗೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧನ ಸಂದರ್ಭದಲ್ಲಿ ವಿಜಯ್ ಬಳಿ ಎರಡು ಬಂದೂಕುಗಳು ಹಾಗೂ ಏಳು ಗುಂಡುಗಳು ಪತ್ತೆಯಾಗಿವೆ. ವಿಜಯ್ ವಿರುದ್ಧ ಈಗಾಗಲೇ ಹನ್ನೊಂದು ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮಾಹಿತಿ ನೀಡಿದರು.