ಬೆಳಗಾವಿ | ಆಸ್ತಿ ವಿಚಾರ ; ತಮ್ಮನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದ ವ್ಯಕ್ತಿ

ಗೀತಾ ಗವಳಿ/ ಆರೋಪಿ ಗಣೇಶ ಗವಳಿ
ಬೆಳಗಾವಿ : ತಮ್ಮನ ಪತ್ನಿಯನ್ನು ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಟಿಳಕವಾಡಿಯ ಮಂಗಳವಾರ ಪೇಟೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮೃತರನ್ನು ಗೀತಾ ಗವಳಿ (45) ಎಂದು ಗುರುತಿಸಲಾಗಿದೆ. ಆರೋಪಿ ಗಣೇಶ ಗವಳಿ, ಗೀತಾಳ ಮೇಲೆ ಸುಮಾರು 20 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು, ಗಂಭೀರವಾಗಿ ಗಾಯಗೊಳಿಸಿದ್ದಾನೆ.
ಗೀತಾ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಪತಿ ರಂಜಿತ್ ಗವಳಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದು, ಪತಿಗೆ ಸೇರಿದ ಜಾಗ ಸಂಬಂಧವಾಗಿ ಗೀತಾ ಮತ್ತು ಆರೋಪಿ ನಡುವೆ ದೀರ್ಘಕಾಲದಿಂದ ವಿವಾದವಿತ್ತು. ಇಂದು ನಡೆದ ಜಗಳವೇ ಹತ್ಯೆಗೆ ದಾರಿ ಮಾಡಿಕೊಟ್ಟಿದೆ ಎನ್ನಲಾಗಿದೆ.
ಕೊಲೆ ಬಳಿಕ ಆರೋಪಿ ಗಣೇಶ ಪರಾರಿಯಾಗಿದ್ದು, ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೌಡಿಶೀಟರ್ ಆಗಿರುವ ಗಣೇಶನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.