ಚಿಕ್ಕೋಡಿ | ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನಲೆಯಲ್ಲಿ ಹುಕ್ಕೇರಿ, ಅಂಕಲಕುಡಿ ಕ್ಷೇತ್ರದಲ್ಲಿ ಉದ್ವಿಗ್ನತೆ

ಚಿಕ್ಕೋಡಿ : ಡಿಸಿಸಿ ಬ್ಯಾಂಕ್ ಚುನಾವಣೆಯ ಹಿನ್ನಲೆಯಲ್ಲಿ ಹುಕ್ಕೇರಿ ತಾಲೂಕಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಗ್ರಾಮ ಮಟ್ಟದಲ್ಲಿ ಜಗಳಗಳು, ಕಲಹಗಳು ಹೆಚ್ಚಾಗಿದ್ದು, ಚುನಾವಣಾ ಪ್ರಕ್ರಿಯೆ ರಣರಂಗವಾಗಿ ಮಾರ್ಪಟ್ಟಿದೆ.
ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸರಕಾರ ಜೀವಂತವಾಗಿದೆಯೋ? ಸತ್ತಿದೆಯೋ? ಎಂಬುದೇ ಈಗ ಜನರ ಪ್ರಶ್ನೆ. ಎರಡು ದಿನಗಳಿಂದ ಉದ್ವಿಗ್ನತೆ ಬಗ್ಗೆ ಮಾಹಿತಿ ನೀಡಿದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ದಬ್ಬಾಳಿಕೆಯಿಂದ ಚುನಾವಣೆ ನಡೆಸುತ್ತಿದ್ದಾರೆ, ನಾವು ಸಹ ಅದೇ ದಾರಿ ಹಿಡಿಯಬೇಕಾಗುತ್ತದೆ. ಆಗ ಜಿಲ್ಲಾಡಳಿತ ಏನು ಮಾಡುತ್ತದೆ ನೋಡೋಣ” ಎಂದು ನಿಖಿಲ್ ಕತ್ತಿ ಎಚ್ಚರಿಕೆ ನೀಡಿದರು.
ಅಂಕಲಕುಡಿ ಕ್ಷೇತ್ರ ಗ್ರಾಮದಲ್ಲಿ ಸೋಮವಾರ ಜಾರಕಿಹೊಳಿ ಹಾಗೂ ಕತ್ತಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಕಲ್ಲು ತೂರಾಟ, ಬಡಿಗೆಗಳಿಂದ ಹೊಡೆದಾಟ ನಡೆದಿದ್ದು, ಪರಿಸರದಲ್ಲಿ ಉದ್ವಿಗ್ನತೆ ಆವರಿಸಿದೆ. ಪಿಕೆಪಿಎಸ್ ನಿರ್ಣಯ ಪಾಸ್ ಮಾಡುವ ವಿಚಾರಕ್ಕೆ ಸಂಬಂಧಿಸಿದ ಕಲಹ ತೀವ್ರಗೊಂಡಿದೆ.
ಗೋಕಾಕ್ ಹಾಗೂ ಬೆಳಗಾವಿಯಿಂದ ಆಗಮಿಸಿದ ಸತೀಶ್ ಜಾರಕಿಹೊಳಿ ಬೆಂಬಲಿಗರು ಹಾಗೂ ಹುಕ್ಕೇರಿಯಿಂದ ಬಂದ ರಮೇಶ್ ಕತ್ತಿ ಬೆಂಬಲಿಗರ ನಡುವೆ ಕೈ ಕೈ ಮಿಲಾಯಿಸುವುದು ನಡೆದಿರುವುದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಘಟನಾ ಸ್ಥಳದಲ್ಲಿದ್ದ ಪೊಲೀಸರು ತಡೆಯಲು ವಿಫಲರಾಗಿದ್ದು, ಜನರು ಬಡಿದಾಡಿಕೊಂಡರೂ ಪೊಲೀಸರ ಪ್ರತಿಕ್ರಿಯೆ ನಿಧಾನವಾಗಿತ್ತು ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.