ಸಿದ್ದರಾಮಯ್ಯ ಕೇವಲ ವ್ಯಕ್ತಿ ಅಲ್ಲ, ಒಂದು ಸಿದ್ಧಾಂತ: ಕೆ.ವಿ.ಪ್ರಭಾಕರ್

ಬೆಳಗಾವಿ ಸೆ.14: ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ಒಂದು ಸಿದ್ಧಾಂತ. ಬೆವರಿನ ಸಂಸ್ಕೃತಿಗೆ ಮೌಲ್ಯ ಮತ್ತು ಘನತೆ ತಂದು ಕೊಡುವ ಸಿದ್ಧಾಂತ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಪತ್ರಕರ್ತನಾಗಿ ಎರಡು ಕಣ್ಣುಗಳಿಂದ ಸಮಾಜವನ್ನು ನೋಡುತ್ತಿದ್ದ ನನಗೆ, ಸಮಾಜದ ಲಕ್ಷಾಂತರ ಕಣ್ಣುಗಳು ನನ್ನೊಬ್ಬನನ್ನು ಗಮನಿಸುತ್ತಿರುತ್ತದೆ ಎನ್ನುವ ಸಾಮಾಜಿಕ ಎಚ್ಚರವನ್ನು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಲ್ಲಿ ಕಲಿತುಕೊಂಡೆ ಎಂದು ಹೇಳಿದರು.
ಒಂದು ಬಲಿಷ್ಠವಾದ ವ್ಯವಸ್ಥೆ ಏಕಲವ್ಯರ ಬೆರಳುಗಳನ್ನು, ಅವಕಾಶ ಮತ್ತು ಪ್ರತಿಭೆಗಳನ್ನು ಹೇಗೆ ಕಿತ್ತುಕೊಳ್ಳುತ್ತದೆ ಎನ್ನುವುದನ್ನು ನಾನು ಪತ್ರಕರ್ತನಾಗಿ ಕಲಿತಿದ್ದೆ. ಆದರೆ, ಏಕಲವ್ಯರ ಬೆರಳುಗಳಿಗೆ ಶಕ್ತಿ ತುಂಬಿ ಬೆವರಿನ ಸಂಸ್ಕೃತಿಗೆ ಘನತೆ ತರುವುದು ಹೇಗೆ ಎನ್ನುವುದನ್ನು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕಲಿತೆ. ನಾನು ಮಾನ್ಯ ಮುಖ್ಯಮಂತ್ರಿಯ ನೆರಳಿಗೆ ಬಂದು ಒಂದು ಡಜನ್ ವರ್ಷಗಳೇ ಕಳೆದವು. ಈ ಅವಧಿಯಲ್ಲಿ ನಾನು ಗ್ರಹಿಸಿದ್ದು ಏನೆಂದರೆ, "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಒಬ್ಬ ರಾಜಕೀಯ ನಾಯಕರಲ್ಲ. ಒಂದು ಸಿದ್ಧಾಂತ. ಈ ಸಿದ್ಧಾಂತಕ್ಕೆ ಒಂದು ಪರಂಪರೆ ಇದೆ. ಆ ಪರಂಪರೆ ಸೃಷ್ಟಿಸಿದ ಅವಕಾಶಗಳ ಕಾರಣಕ್ಕೇ ಇಂದು ಇಲ್ಲಿ ನಾನು ಸನ್ಮಾನಿತನಾಗುತ್ತಿದ್ದೇನೆ. ಆದ್ದರಿಂದ ಈ ಸನ್ಮಾನವನ್ನು ನಾನು ಸಿದ್ದರಾಮಯ್ಯರ ಪರಂಪರೆಗೆ ಅರ್ಪಿಸುತ್ತೇನೆ ಎಂದರು.
ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷರಾದ ದೀಪಕ್ ಕುರಂದವಾಡೆ, KUWJ ಬೆಳಗಾವಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ.ಭೀಮಶಿ ಎಲ್. ಜಾರಕಿಹೊಳಿ, ಸಂಘದ ಮುಖಂಡರಾದ ಮದನ್ ಗೌಡ ಸೇರಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಪದಾಧಿಕಾರಿಗಳು ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.