ಗಣೇಶ ಮೆರವಣಿಗೆಯಲ್ಲಿ ಮಹಾರಾಷ್ಟ್ರ ಗೀತೆಗೆ ಕುಣಿತ : ಬೆಳಗಾವಿಯಲ್ಲಿ ವಿವಾದ

ಬೆಳಗಾವಿ, ಸೆ.8 : ನಗರದ ಪಾಟೀಲ ಗಲ್ಲಿಯಲ್ಲಿ ನಡೆದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಯ ವೇಳೆ ‘ಜೈ ಜೈ ಮಹಾರಾಷ್ಟ್ರ ಮಾಝಾ’ ಎಂಬ ಮಹಾರಾಷ್ಟ್ರದ ನಾಡಗೀತೆ ಡಿ.ಜೆ.ಯಲ್ಲಿ ಹಾಕಿ ಯುವಕರು ಕುಣಿದ ಘಟನೆ ಸ್ಥಳೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸಂಭ್ರಮಿಸುತ್ತಿದ್ದ ಯುವಕರು ಗೀತೆಗೆ ಹೆಜ್ಜೆ ಹಾಕಿದ ದೃಶ್ಯಾವಳಿ, ಅಲ್ಲಿದ್ದ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೆಳಗಾವಿಯ ಸಂವೇದನಾಶೀಲ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಹಾಡಿಗೆ ಯುವಕರು ಕುಣಿದಿರುವುದು ಸ್ಥಳೀಯ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ‘‘ಮೆರವಣಿಗೆ ಸಂದರ್ಭ ಮಹಾರಾಷ್ಟ್ರದ ಹಾಡುಗಳನ್ನು ಹಚ್ಚಿ ಕುಣಿದು ಉದ್ಧಟತನ ತೋರಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ಶಾಂತಿ ಭಂಗಗೊಳಿಸುವ ಪ್ರಯತ್ನ. ರಾಜಕೀಯ ಅಸ್ತಿತ್ವಕ್ಕಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ನಗರದಲ್ಲಿ ಅಶಾಂತಿ ಸೃಷ್ಟಿಸಲು ಬಯಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ಮಾಡಿದರೆ ಸಾಲದು. ಅವರನ್ನು ಗಡೀಪಾರು ಮಾಡಿ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’’ ಎಂದು ಒತ್ತಾಯಿಸಿದರು.