ನೆಲಮಂಗಲ | ಯುವತಿಗೆ ಅಶ್ಲೀಲ ಮೆಸೇಜ್ ಆರೋಪ; ವಿವಸ್ತ್ರಗೊಳಿಸಿ ಯುವಕನಿಗೆ ಹಲ್ಲೆ: 8 ಮಂದಿಯ ಬಂಧನ

ಬೆಂಗಳೂರು : ಗುಂಪೊಂದು ಯುವಕನೊಬ್ಬನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಘಟನೆ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಘಟನೆ ಸಂಬಂಧ ಹೇಮಂತ್, ಯಶ್ವಂತ್, ಶಿವಶಂಕರ್, ಶಶಾಂಕ್ ಗೌಡ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ: ಹಲ್ಲೆಗೊಳಗಾದ ಯುವಕ ಎರಡು ವರ್ಷದಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ, ಆದರೆ ಯುವತಿ ಬೇರೊಬ್ಬನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಪ್ರೀತಿ ನಿರಾಕರಿಸಿದ್ದಳು ಎನ್ನಲಾಗಿದೆ. ಹೀಗಾಗಿ ಯುವಕ ಆಕೆಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ವಿಚಾರವನ್ನು ಯುವತಿ ತನ್ನ ಸ್ನೇಹಿತರಿಗೆ ತಿಳಿಸಿದ್ದಳು. ನಂತರ ಮಾತುಕತೆಗೆಂದು ಯುವಕನ್ನು ಕರೆಸಿಕೊಂಡ ಗುಂಪು, ಆತನನ್ನು ಅಪಹರಿಸಿ ಅಲೂರಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ ಹಲ್ಲೆಯ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಜತೆಗೆ, ವಿಡಿಯೊದಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಉಲ್ಲೇಖ ಮಾಡಲಾಗಿದೆ. ಇದಾದ ನಂತರ, ಯುವಕನಿಗೆ ಥಳಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಿರುವ ಸೋಲದೇವನಹಳ್ಳಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಘಟನೆ ಸಂಬಂಧ ಹಲ್ಲೆಗೊಳಗಾದ ಯುವಕನ ಪೋಷಕರು ಸೊಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು ಮಾಡಿದ್ದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕುರಿತು ಅಧ್ಯಯನ ಅಗತ್ಯ:ಡಾ.ಜಿ.ಪರಮೇಶ್ವರ್
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಮಾಜದ ಮೇಲೆ ಪ್ರೇರೆಪಣೆ ಯಾಗಿದೆಯೇ ಎಂಬ ಬಗ್ಗೆ ಮಾನಸಿಕ ಅಥವಾ ಸಾಮಾಜಿಕ ತಜ್ಞರು ಅಧ್ಯಯನ ನಡೆಸಬೇಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಬಳಿ ನಡೆದಿರುವ ಹಲ್ಲೆ ಪ್ರಕರಣದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆರೋಪಿಗಳು ಬಂಧನವಾಗಿರುವ ಬಗ್ಗೆ ತಿಳಿಸಲಾಗಿದೆ.ಹಲ್ಲೆ ನಡೆಸಿದ ಆರೋಪಿಗಳು ಚಿತ್ರದುರ್ಗದ ರೇಣುಕಾಸ್ವಾಮಿ ಮಾದರಿಯ ಪ್ರಕರಣ ಇದು ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ನಟ ದರ್ಶನ್ ಅವರು ಆರೋಪಿಯಾಗಿರುವ ಈ ಪ್ರಕರಣ ಪ್ರೇರೆಪಣೆಯಿಂದ ಈ ರೀತಿಯ ಇತರ ಘಟನೆಗಳು ವರದಿಯಾಗುತ್ತಿವೆ ಎಂಬ ಬಗ್ಗೆ ನಾನು ಹೇಳಲೂ ಸಾಧ್ಯವಿಲ್ಲ. ಆದರೆ, ದರ್ಶನ್ ಪ್ರಕರಣ ಸಮಾಜದ ಯುವಕರಲ್ಲಿ ಪರಿಣಾಮ ಬೀರಿದೆಯೇ ಎಂಬ ಬಗ್ಗೆ ಸಾಮಾಜಿಕ ಅಥವಾ ಮಾನಸಿಕ ತಜ್ಞರು ಅಧ್ಯಯನ ನಡೆಸಬೇಕು ಎಂದು ಉಲ್ಲೇಖಿಸಿದರು.