ಹೊಸಕೋಟೆ | ಇಬ್ಬರು ಮಕ್ಕಳನ್ನು ಬಕೆಟ್ ನಲ್ಲಿ ಮುಳುಗಿಸಿ ದಂಪತಿ ಆತ್ಮಹತ್ಯೆಗೆ ಯತ್ನ; ಪತಿ ಮೃತ್ಯು, ಪತ್ನಿ ಪಾರು

ಹೊಸಕೋಟೆ, ಸೆ.14: ಇಬ್ಬರು ಮಕ್ಕಳನ್ನು ನೀರು ತುಂಬಿದ ಬಕೆಟ್‌ಗಳಲ್ಲಿ ಮುಳುಗಿಸಿ ಕೊಂದು ಬಳಿಕ ದಂಪತಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಗೊಣಕನಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಘಟನೆಯಲ್ಲಿ ಪತಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಗೊಣಕನಹಳ್ಳಿ ಗ್ರಾಮದ ನಿವಾಸಿ ಶಿವು(32) ಹಾಗೂ ಮಕ್ಕಳಾದ ಚಂದ್ರಕಲಾ(11) ಪುತ್ರ ಉದಯ್ ಸೂರ್ಯ(7) ಎಂದು ಗುರುತಿಸಲಾಗಿದೆ.
ಪತ್ನಿ ಮಂಜುಳಾ(32) ಪ್ರಾಣಾ ಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ
ಮಂಜುಳಾ ಅವರನ್ನು ಹೊಸಕೋಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ವಿವರ: ಶಿವು ಮತ್ತು ಮಂಜುಳಾ ಪ್ರೀತಿಸಿ ಮದುವೆಯಾಗಿದ್ದರು. ಅನ್ಯಜಾತಿಯಾಗಿದ್ದ ಕಾರಣ ಪೋಷಕರ ವಿರೋಧದ ನಡುವೆ ಮದುವೆ ಮಾಡಿಕೊಂಡಿದ್ದರು. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಶಿವು ಕಾಲು ಮುರಿದುಕೊಂಡು ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು ಎನ್ನಲಾಗಿದೆ. ಮನೆ ನಿರ್ವಹಣೆಗೆ ಮಂಜುಳಾ ಕೆಲಸಕ್ಕೆ ಹೋಗುತ್ತಿದ್ದರು. ಸಾಲದ ಸಮಸ್ಯೆಯಿಂದ ಆತ್ಮಹತ್ಯೆಗೆ ನಿರ್ಧರಿಸಿದ್ದ ದಂಪತಿ ತಾವು ಸತ್ತರೆ ಮಕ್ಕಳು ತಬ್ಬಲಿಗಳಾಗುತ್ತಾರೆ ಎಂದು ಮಕ್ಕಳನ್ನು ಕೊಂದು ಮಕ್ಕಳಿಬ್ಬರ ಸಾವು ಖಚಿತ ಮಾಡಿಕೊಂಡು ಬಳಿಕ ಶಿವು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆೆ.
ಪತಿ ಮಕ್ಕಳ ಸಾವು ಕಂಡು ಪತ್ನಿ ಮಂಜುಳಾ ನೇಣುಬಿಗಿದು ಆತ್ಮಹತ್ಯೆಗೆ ಮುಂದಾಗಿದ್ದಾಗ ಸ್ಥಳಿಯರು ಆಕೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.