ಸರಕಾರಕ್ಕೆ 101.63 ಕೋಟಿ ರೂ.ವಾಪಸ್ | ಅಧಿಕಾರಿಗಳ ವಿರುದ್ಧ ಕ್ರಮದ ಅಗತ್ಯವಿಲ್ಲ: ಆಡಳಿತ ಸುಧಾರಣಾ ಇಲಾಖೆ
ಬೆಂಗಳೂರು, ಸೆ.14: ಮಹಿಳಾ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳಿಗೆ ಬಿಡುಗಡೆ ಮಾಡಿದ ಅನುದಾನದ ಪೈಕಿ ಖರ್ಚು ಮಾಡದೆ ಉಳಿಕೆಯಾಗಿದ್ದ 101.63 ಕೋಟಿ ರೂ.ಸರಕಾರಕ್ಕೆ ಹಿಂತಿರುಗಿಸಲು ಕ್ರಮ ವಹಿಸಿರುವುದರಿಂದ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅವಶ್ಯಕತೆಯಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸ್ಪಷ್ಟಪಡಿಸಿದೆ.
ರವಿವಾರ ಈ ಕುರಿತು ಸುತ್ತೋಲೆ ಹೊರಡಿಸಲಾಗಿದ್ದು, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಎಚ್.ಪುಷ್ಪಲತಾ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಮಾಡಿದ ಅಮಾನತು ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ತಳ್ಳಿ ಹಾಕಿದ್ದು, ಪುಷ್ಪಲತಾ ಯಾವುದೇ ಕರ್ತವ್ಯ ಲೋಪವೆಸಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಇನ್ನು, ಎಚ್.ಪುಷ್ಪಲತಾ ಅವರು ಸರಕಾರಕ್ಕೆ ನಿಯಮಗಳ ಪ್ರಕಾರ 101.63 ಕೋಟಿ ರೂ. ವಾಪಸ್ ಮಾಡಿದ್ದರೂ ಅವರ ವಿರುದ್ಧ ಹೊರಡಿಸಿದ್ದ ಅಮಾನತು ಆದೇಶದ ಹಿಂದೆ ಷಡ್ಯಂತ್ರಗಳು ಇದ್ದವು ಎಂಬ ಅನುಮಾನ ವ್ಯಕ್ತವಾಗಿದೆ.
ಸ್ಪಷ್ಟನೆ ಕೋರಿದ ಮಹಿಳಾ ಆಯೋಗ: ಎಚ್.ಪುಷ್ಪಲತಾ ನೀಡಿರುವ ದೂರಿನ ಮೇರೆಗೆ ರಾಜ್ಯ ಮಹಿಳಾ ಆಯೋಗವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದು, ದೂರುದಾರರು ಸಲ್ಲಿಸಿರುವ ದೂರುಗಳನ್ನು ನಿಯಮಾನುಸಾರ ಪರಿಶೀಲನೆ ನಡೆಸಬೇಕು. ಒಂದು ವೇಳೆ ಅಧಿಕಾರಿಗಳು ತಪ್ಪಿತಸ್ಥರಾಗಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಪತ್ರದ ಮೂಲಕ ತಿಳಿಸಿದೆ.