ಬೆಂಗಳೂರು | ಠೇವಣಿದಾರರಿಗೆ 100 ಕೋಟಿ ರೂ.ವಂಚನೆ ಆರೋಪ: ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್ ಮೇಲೆ ಈಡಿ ದಾಳಿ

ಬೆಂಗಳೂರು: ಅಧಿಕ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ 15,000ಕ್ಕೂ ಹೆಚ್ಚು ಠೇವಣಿದಾರರಿಗೆ 100 ಕೋಟಿ ರೂ. ವಂಚನೆ ಮಾಡಿದ ಆರೋಪದಡಿ ನಗರದ ಕೋ-ಆಪರೇಟಿವ್ ಸೊಸೈಟಿಯೊಂದರ ಮೇಲೆ ಜಾರಿ ನಿರ್ದೇಶಾನಾಲಯ(ಈ.ಡಿ.)ದ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿಯಲ್ಲಿ ಬೆಂಗಳೂರಿನ ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್‍ನ ಮುಖ್ಯ ಕಚೇರಿ ಹಾಗೂ ವಿಜಯನಗರ, ಜಾಲಹಳ್ಳಿ, ಆರ್‍ಪಿಸಿ ಲೇಔಟ್‍ನ ಶಾಖೆಗಳು ಸೇರಿ ಒಟ್ಟು 15 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ ಎಂದು ಈ.ಡಿ. ಮೂಲಗಳು ತಿಳಿಸಿವೆ.
ನಗರದ ವಿಲ್ಸನ್ ಗಾರ್ಡನ್‍ನಲ್ಲಿ ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್‍ನ ಪ್ರಧಾನ ಕಚೇರಿ ಇದ್ದು ವಂಚನೆಗೆ ಸಂಬಂಧಿಸಿದಂತೆ ಜಾಲಹಳ್ಳಿ, ವಿಲ್ಸನ್ ಗಾರ್ಡನ್, ಯಲಹಂಕ, ಪೀಣ್ಯ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಬ್ಯಾಂಕ್‍ನ ಮುಖ್ಯಸ್ಥರು ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಸಿಸಿಬಿಗೆ ವರ್ಗಾವಣೆಗೆ ಆಗುತ್ತಿದ್ದಂತೆ ಪ್ರಕರಣಕ್ಕೆ 2022ರಲ್ಲಿ ಸಂಬಂಧಿಸಿ ಐವರನ್ನು ಬಂಧಿಸಲಾಗಿತ್ತು. 2023ರಲ್ಲಿ ಆರ್‍ಬಿಐ ಈ ಕೋ-ಆಪರೇಟಿವ್ ಬ್ಯಾಂಕ್‍ನ ಪರವಾನಗಿ ರದ್ದು ಮಾಡಿತ್ತು.