ಬೆಂಗಳೂರು | ಲೀಸ್ ಗೆ ಮನೆ ಕೊಡಿಸುವ ಆಮಿಷವೊಡ್ಡಿ ಕೋಟ್ಯಾಂತರ ರೂ. ವಂಚನೆ ಆರೋಪ : ಪ್ರಕರಣ ದಾಖಲು

ಬೆಂಗಳೂರು (ಎಲೆಕ್ಟ್ರಾನಿಕ್ ಸಿಟಿ): ಮನೆ ಲೀಸ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಡೆದು ನೂರಾರು ಜನರಿಗೆ ವಂಚನೆ ಮಾಡಿದ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ವಿವೇಕ್ ಕೇಶವನ್ ಎಂಬಾತನಿಗೆ ಸೇರಿದ ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಮುಖಾಂತರ ಈ ವಂಚನೆ ನಡೆದಿರುವುದು ಹೊರಬಂದಿದೆ.
ವೆಬ್‌ಸೈಟ್ ಮುಖಾಂತರ ಲೀಸ್ಗೆ ಮನೆ ಬೇಕು ಎಂಬವರಿಗೆ ಗಾಳ ಹಾಕಿ, ಲಕ್ಷಾಂತರ ರೂ. ಪಡೆದು, ಕೆಲ ತಿಂಗಳು ಬಾಡಿಗೆ ಕಟ್ಟಿದ ನಂತರ ಅಚಾನಕ್ ಕಂಪನಿಯನ್ನು ಖಾಲಿ ಮಾಡಿ ಪರಾರಿಯಾದ ಆರೋಪ ಇದೆ.
ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸೇರಿ ಹಲವೆಡೆ ಇದೇ ರೀತಿಯ ಮೋಸ ನಡೆದಿದ್ದು, ಒಟ್ಟಾರೆ 60 ಕೋಟಿ ರೂ. ಗೂ ಅಧಿಕ ವಂಚನೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
ಹಣ ಕೊಟ್ಟು ಮನೆಯನ್ನು ಲೀಸ್ ಪಡೆದ ನೂರಾರು ಕುಟುಂಬಗಳು ಇದೀಗ ಮನೆ ಇಲ್ಲದೆ, ಹಣವಿಲ್ಲದೆ ಬೀದಿಗೆ ಬಿದ್ದಿದ್ದು, ಪೊಲೀಸರ ಬಳಿ ಕಣ್ಣೀರು ಹಾಕುತ್ತಿದ್ದಾರೆ.
ಪ್ರಕರಣದ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ವಿವೇಕ್ ಕೇಶವನ್ ವಿರುದ್ಧ ಕಾನೂನು ಕ್ರಮಕ್ಕೆ ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.